Tuesday, 7 October 2014

ಪೌಲ್ಟ್ರಿ ಫಾರಂಗೆ ನುಗ್ಗಿದ ಮಳೆ ನೀರು
ಸಾವಿರಾರು ಕೋಳಿಗಳ ಮಾರಣಹೋಮ
ಮದ್ದೂರು, ಅ.7: ಸೋಮವಾರ ಸುರಿದ ಭಾರಿ ಮಳೆಗೆ ತಾಲೂಕಿನ ಹಲವಾರು ಕಡೆ ಭಾರಿ ಹಾನಿ ಮಾಡಿದ್ದು, ಪೌಲ್ಟ್ರಿ ಫಾರಂಗೆ (ಕೋಳಿ ಸಾಕಾಣಿಕೆ ಮನೆ) ನೀರು ನುಗ್ಗಿ ಸಾವಿರಾರು ಕೋಳಿಗಳು ಸಾವನ್ನಪ್ಪಿವೆ. ಭತ್ತದ ಪೈರುಗಳು ಕೊಚ್ಚಿ ಹೋಗಿದ್ದರೆ, ಅನೇಕ ಮರಗಳು ನೆಲಕಚ್ಚಿವೆ.
ತಾಲೂಕಿನ ಮರಳಿಗ ಗ್ರಾಮದ ಪುಟ್ಟಸ್ವಾಮಿ ಎಂಬುವರಿಗೆ ಸೇರಿದ ಗ್ರಾಮದ ಹೊರವಲಯದ ಫೌಲ್ಟ್ರಿ ಫಾರಂಗೆ ಮಳೆನೀರು ಹರಿದು ಸುಮಾರು 2,500 ಕೋಳಿಗಳು ಸಾವನ್ನಪ್ಪಿವೆ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಸೋಮವಾರ ಮಧ್ಯಾಹ್ನದಿಂದ ಸಂಜೆವರೆಗೆ ಎಡೆಬಿಡದೆ ಸುರಿದ ಮಳೆಯಿಂದಾಗಿ ಗ್ರಾಮದ ಹಳ್ಳಕೊಳ್ಳಗಳು ತುಂಬಿ ಹೊಲದಲ್ಲಿದ್ದ ಪೌಲ್ಟ್ರಿ ಫಾರಂಗೆ ನುಗ್ಗಿದ್ದರಿಂದ ಮೂರು ದಿನಗಳ 2000 ಕೋಳಿಮರಿ ಸಾವನ್ನಪ್ಪಿದವು.
ಫಾರಂವ ಮತ್ತೊಂದು ಭಾಗದಲ್ಲಿ ಸುಮಾರು 32 ದಿನಗಳ ವಯೋಮಾನದ 1,500 ಕೋಳಿಗಳಿದ್ದು, ಆ ಭಾಗಕ್ಕೂ ನೀರು ನುಗ್ಗಿದ್ದರಿಂದ ಸುಮಾರು 500 ಕೋಳಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿವೆ. ಈ ಪೈಕಿ 1000 ಕೋಳಿಗಳನ್ನೇ ರಕ್ಷಿಸಿಕೊಳ್ಳಲು ಸಾಧ್ಯವಾಯಿತು.
ಮಳೆ ಸುರಿಯುತ್ತಿದ್ದ ಕಾಲಕ್ಕೆ ವಿದ್ಯುತ್ ಕೈಕೊಟ್ಟ ಕಾರಣ ಕತ್ತಲೆಯಲ್ಲಿ ಮರಿಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೂರು ದಿನಗಳ ಹಿಂದೆಯಷ್ಟೇ ತಂದಿದ್ದ 2000 ಮರಿಗಳೂ ಕ್ಷಣಾರ್ಧದಲ್ಲಿ ಸಾವನ್ನಪ್ಪಿದವು ಎಂದು ಪೌಲ್ಟ್ರಿ ಫಾರಂ ಮಾಲೀಕ ಪುಟ್ಟಸ್ವಾಮಿ ತಿಳಿಸಿದರು.
ಫಾರಂ ಪಕ್ಕದ ರಸ್ತೆಯ ಇಕ್ಕೆಲಗಳ ಕಾಲುವೆಗಳು (ಡ್ರೈನೇಜ್) ಮಣ್ಣು, ಕಸಕಡ್ಡಿಗಳಿಂದ ತುಂಬಿಕೊಂಡಿದ್ದರಿಂದ ಮಳೆ ನೀರು ಸರಾಗವಾಗಿ ಹರಿದುಹೋಗಲು ಸಾಧ್ಯವಾಗದೆ ಫೌಲ್ಟ್ರಿ ಫಾರಂಗೆ ರಭಸವಾಗಿ ನುಗ್ಗಿತು ಎಂದು ಅವರು ಹೇಳಿದರು.
ಎಡೆಬಿಡದೆ ಸುರಿಯುತ್ತಿದ್ದ ಮಳೆಯ ನಡುವೆಯೇ ಫೌಲ್ಟ್ರಿ ಫಾರಂಗೆ ನುಗ್ಗುತ್ತಿದ್ದ ನೀರನ್ನು ತಡೆದು ಕೋಳಿಗಳನ್ನು ರಕ್ಷಿಸಲು ಗ್ರಾಮಸ್ಥರೂ ಸಹಕರಿಸದರಾದರೂ ಪ್ರಯೋಜನವಾಗಲಿಲ್ಲ. ಕೇವಲ 1,500 ಕೋಳಿಗಳನ್ನು ಮಾತ್ರ ಉಳಿಸಿಕೊಂಡೆವೆ ಎಂದು ಪುಟ್ಟಸ್ವಾಮಿ ತಮ್ಮ ಅಳಲು ತೋಡಿಕೊಂಡರು.
ಫಾರಂನಲ್ಲೇ ಕೋಳಿಗಳಿಗೆ ನೀಡುವ ಆಹಾರದ ಚೀಲಗಳನ್ನೂ ಜೋಡಿಸಲಾಗಿತ್ತು. ಈ ಚೀಲಗಳನ್ನು ಮಾತ್ರ ಎತ್ತರದ ಪ್ರದೇಶಕ್ಕೆ ಸಾಗಿಸಿ ರಕ್ಷಿಸಲಾಯಿತು. ಆದರೂ, 4 ಚೀಲಗಳು ಮಳೆನೀರಿನಿಂದ ಹಾನಿಯಾದವು ಎಂದು ಅವರು ತಿಳಿಸಿದರು.
ಕೃಷಿ ಜತೆ ಉಪ ಕಸುಬಾಗಿ ಕೋಳಿ ಸಾಕಾಣಿಕೆಯನ್ನು ಮಾಡಿಕೊಂಡು ಸಂಸಾರ ತೂಗಿಸಿಕೊಂಡು ಬರುತ್ತಿದ್ದೇನೆ. ಯಾವುದೇ ಕೋಳಿ ಕಂಪನಿಗಳ ಜತೆ ಹೊಂದಾಣಿಕೆ ಮಾಡಿಕೊಳ್ಳದೆ ಸ್ವಂತ ಖರ್ಚಿನಿಂದ ಸಾಕಾಣಿಕೆ ನಡೆಸುತ್ತಿದ್ದೇನೆ ಎಂದು ಅವರು ವಿವರಿಸಿದರು.
ಫೌಲ್ಟ್ರಿ ಫಾರಂಗೆ ಮಳೆನೀರು ನೀರು ನುಗ್ಗಿ ಯಾವುದೇ ಹಾನಿಯಾಗದಿದ್ದರೆ ಸುಮಾರು 3 ಲಕ್ಷ ರೂ.ಗಳ ಸಂಪಾದನೆಯಾಗುತ್ತಿತ್ತು. ಈಗ ಹಾಕಿದ ಬಂಡವಾಳವೂ ನೀರಿನಲ್ಲಿ ಹೋಮವಾಗಿದೆ. ಸಂಬಂಧಿಸಿದವರು ಪರಿಹಾರ ದೊರಕಿಸಿಕೊಡಬೇಕೆಂದು ಅವರು ಮನವಿ ಮಾಡಿದರು.

No comments:

Post a Comment