Wednesday, 29 October 2014

ಸಾರ್ವಜನಿಕರು ಜಾಗೃತರಾಗಿ ಲೋಕಾಯುಕ್ತಕ್ಕೆ ದೂರು ನೀಡುವ ಧೈರ್ಯವನ್ನು ಪ್ರದರ್ಶಿಸಬೇಕು .

 ಕೃಷ್ಣರಾಜಪೇಟೆ. ಸರ್ಕಾರಿ ನೌಕರರು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಿಗಧಿತ ಅವಧಿಯೊಳಗೆ ಮಾಡಿಕೊಡುವ ಮೂಲಕ ಜನಮೆಚ್ಚಿದ ಅಧಿಕಾರಿಗಳಾಗಬೇಕು. ಸರ್ಕಾರದ ಕೆಲಸವನ್ನು ಮಾಡಿಕೊಟ್ಟು ಸೌಲಭ್ಯವನ್ನು ವಿತರಿಸಲು ಲಂಚದ ಹಣಕ್ಕಾಗಿ ಒತ್ತಾಯಿಸುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಜಾಗೃತರಾಗಿ ಲೋಕಾಯುಕ್ತಕ್ಕೆ ದೂರು ನೀಡುವ ಧೈರ್ಯವನ್ನು ಪ್ರದರ್ಶಿಸಬೇಕು ಎಂದು ಮಂಡ್ಯದ ಲೋಕಾಯುಕ್ತ ಇನ್ಸ್‍ಪೆಕ್ಟರ್ ಬಿ.ಎಸ್.ದಿನೇಶ್‍ಕುಮಾರ್ ಮನವಿ ಮಾಡಿದರು.
ಅವರು ಇಂದು ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆಯನ್ನು ನಡೆಸಿ ಅಹವಾಲುಗಳನ್ನು ಸ್ವೀಕರಿಸಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ನಡೆಸಿ ಮಾತನಾಡಿದರು.
ಸರ್ಕಾರದ ಕೆಲಸವು ದೇವರ ಕೆಲಸವಾಗಿದೆ. ಸರ್ಕಾರದ ಸವಲತ್ತುಗಳನ್ನು ಪಡೆಯಲು ಕಛೇರಿಗೆ ಬರುವ ಬಡ ಜನರನ್ನು ವಿನಾಕಾರಣ ಅಲೆದಾಡಿಸಿ ಗೋಳುಹೊಯ್ದುಕೊಂಡು ಲಂಚದ ಹಣಕ್ಕಾಗಿ ಒತ್ತಾಯಿಸದೇ ನಿಗಧಿತ ಅವಧಿಯೊಳಗೆ ಜನಸಾಮಾನ್ಯರ ಕೆಲಸಗಳನ್ನು ಮಾಡಿಕೊಡುವ ಇಚ್ಛಾಶಕ್ತಿ ಹಾಗೂ ಬದ್ಧತೆಯನ್ನು ಅಧಿಕಾರಿಗಳು ಪ್ರದರ್ಶನ ಮಾಡಿ ತಾವು ಪಡೆಯುವ ಸರ್ಕಾರದ ಸಂಬಳದ ಹಣಕ್ಕೆ ಮೌಲ್ಯವನ್ನು ತಂದುಕೊಡಬೇಕು. ಸಾಮಾಜಿಕವಾಗಿ ಅಧಃಪಥನದತ್ತ ಸಾಗುತ್ತಿರುವ ಮೌಲ್ಯಗಳ ಉಳಿವಿಗೆ ಅಧಿಕಾರಿಗಳು ಬದ್ಧರಾಗಿ ವೃತ್ತಿಯಲ್ಲಿ ದಕ್ಷತೆ ಮತ್ತು ಕಾರ್ಯತತ್ಪರತೆಯನ್ನು ಮೈಗೂಡಿಸಿಕೊಂಡು ಬದ್ಧತೆಯಿಂದ ಕೆಲಸ ಮಾಡಬೇಕು. ನಾನಿಲ್ಲಿ ಕಾಟಾಚಾರಕ್ಕೆ ಹಾಗೂ ಪ್ರಚಾರಕ್ಕೆ ಸಭೆ ನಡೆಸಲು ಇಲ್ಲಿಗೆ ಬಂದಿಲ್ಲ ಎಂದು ಪುರಸಭೆಯ ಮುಖ್ಯಾಧಿಕಾರಿ, ಸಮಾಜಕಲ್ಯಾಣ ಇಲಾಖೆಯ ಅಧಿಕಾರಿ ಹಾಗೂ ಬಿಸಿಎಂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಹೇಮಾವತಿ ಬಡಾವಣೆ, ಟಿ.ಬಿ ಬಡಾವಣೆಯಲ್ಲಿ ನಿವೇಶನಗಳ ಅವ್ಯವಹಾರ ಕುರಿತು ಲೋಕಾಯುಕ್ತ ತನಿಖೆಯು ಸಂಪೂರ್ಣಗೊಂಡಿದ್ದು ಸಂಬಂಧಪಟ್ಟ ಕಡತಗಳು ಹಾಗೂ ದಾಖಲೆಗಳು ಸರ್ಕಾರದ ನಗರಾಭಿವೃಧ್ಧಿ ಇಲಾಖೆಯಲ್ಲಿವೆ. ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳು ಹಾಗೂ ಅಕ್ರಮ ನಿವೇಶನಗಳಿಗೆ ದಂಡವನ್ನು ನಿಗಧಿಪಡಿಸಿ ಸಕ್ರಮಗೊಳಿಸಿ ಅರ್ಹರಿಗೆ ವಿತರಣೆ ಮಾಡುವ ಇಲ್ಲವೇ ಸರ್ಕಾರವೇ ಮತ್ತೆ ವಶಕ್ಕೆ ಪಡೆಯುವ ಬಗ್ಗೆ ಸರ್ಕಾರವೇ ನಿರ್ಧರಿಸಬೇಕು ಇದರಲ್ಲಿ ಲೋಕಾಯುಕ್ತ ಸಂಸ್ಥೆಯ ಪಾತ್ರವೇನಿಲ್ಲ ಎಂದು ಸ್ಪಷ್ಠಪಡಿಸಿದ ಲೋಕಾಯುಕ್ತ ಇನ್ಸ್‍ಪೆಕ್ಟರ್ ದಿನೇಶ್ ಉಪನೊಂದಣಾಧಿಕಾರಿಗಳ ಕಛೇರಿ, ಕಂದಾಯ ಇಲಾಖೆ, ಪುರಸಭೆ, ಬಿಸಿಎಂ ಹಾಗೂ ಸಮಾಜಕಲ್ಯಾಣ ಇಲಾಖೆಯಲ್ಲಿ ಜನಸಾಮಾನ್ಯರ ಕೆಲಸಗಳು ನಿಗಧಿತ ಅವಧಿಯಲ್ಲಿ ಆಗುತ್ತಿಲ್ಲ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಪಡಿತರ ಚೀಟಿಗಳನ್ನು ಅರ್ಹ ಫಲಾನುಭವಿಗಳಿಗೆ ನೀಡುತ್ತಿಲ್ಲ ಎಂದು ವ್ಯಾಪಕವಾದ ದೂರುಗಳಿವೆ. ಈ ಬಗ್ಗೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಿ ಬಡವರಿಗೆ ಸಾಮಾಜಿಕ ನ್ಯಾಯವನ್ನು ನೀಡುವ ಮೂಲಕ ಪ್ರಜಾಫ್ರಭುತ್ವದ ಮೌಲ್ಯಗಳನ್ನು ಉಳಿಸಲು ಮುಂದಾಗಬೇಕು. ಮುಂದಿನ ತಿಂಗಳ ಅಂತ್ಯದಲ್ಲಿ ನಡೆಯುವ ಜನಸಂಪರ್ಕ ಸಭೆಯಲ್ಲಿ ಅಗತ್ಯವಾದ ಮಾಹಿತಿ ಹಾಗೂ ಕೈಗೊಂಡಿರುವ ಕ್ರಮದ ಬಗ್ಗೆ ವರದಿ ನೀಡಬೇಕು ಎಂದು ನಿರ್ದೇಶನ ನೀಡಿದರು.
ನಿವೇಶನ ನೀಡಲು ಕ್ರಮಕೈಗೊಳ್ಳಿ: ಪುರಸಭೆಯು ಕಳೆದ 15 ವರ್ಷಗಳಿಂದ ಪಟ್ಟಣ ವ್ಯಾಪ್ತಿಯ ಮಧ್ಯಮ ವರ್ಗಧ ಜನರು ಹಾಗೂ ಕಡು ಬಡವರಿಗೆ ನಿವೇಶನಗಳನ್ನು ವಿತರಿಸಲು ಯಾವುದೇ ಕ್ರಮಕೈಗೊಂಡಿಲ್ಲ, ಬಡ ಜನರಿಗೆ ನಿವೇಶನ ನೀಡುವಂತೆ ಪುರಸಭೆಗೆ ನಿರ್ದೇಶನ ನೀಡಬೇಕು ಎಂದು ನೂರಾರು ಬಡ ಜನರು ನೀಡಿದ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಲೋಕಾಯುಕ್ತ ದಿನೇಶ್ ಪುರಸಭೆಯ ವ್ಯಾಪ್ತಿಯಲ್ಲಿ ಕಡು ಬಡವರಿಗಾಗಿ ವಿತರಣೆ ಮಾಡಲು ಮೀಸಲಾಗಿಟ್ಟಿರುವ ನಿವೇಶನಗಳು ಖಾಲಿ ಬಿದ್ದಿವೆ. ರಾಜಕೀಯ ಪುಡಾರಿಗಳು ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ಈ ನಿವೇಶನಗಳಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿರುವ ಬಗ್ಗೆ ಸಾಕಷ್ಟು ದೂರುಗಳಿವೆ. ಆದ್ದರಿಂದ ನಿವೇಶನರಹಿತ ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಸ್ವೀಕರಿಸಿ ನಿವೇಶನ ವಿತರಣೆಗೆ ಪುರಸಭೆಯ ಆಡಳಿತ ಮಂಡಳಿಯು ಮುಂದಾಗಬೇಕು. ಹೇಮಾವತಿ ಬಡಾವಣೆ ಹಾಗೂ ಟಿಬಿ ಬಡಾವಣೆಯ ನಿವೇಶನಗಳಿಗೆ ಸಂಬಂಧಿಸಿದ ಕಡತಗಳೊಂದಿಗೆ ತಮ್ಮ ಕಛೇರಿಗೆ ನವೆಂಬರ್ 3ರಂದು ಹಾಜರಾಗಬೇಕು ಎಂದು ದಿನೇಶ್ ನಿರ್ದೇಶನ ನೀಡಿದರು.
ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ರಂಗನಾಥ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೆಂಚಪ್ಪ, ನೀರಾವರಿ ಇಲಾಖೆಯ ಸುರೇಶ್, ಜಿ.ಪಂ ಕುಡಿಯುವ ನೀರು ವಿಭಾಗದ ಎಇಇ ರಮೇಶ್, ಸೆಸ್ಕ್ ಎಇಇ ಗಣೇಶನ್, ರಾಜಶೇಖರ್, ಸಿಡಿಪಿಓ ದೇವಕುಮಾರ್, ತೋಟಗಾರಿಕೆ ಇಲಾಖೆಯ ಪುಷ್ಪಲತ, ಅಬ್ಕಾರಿ ಇನ್ಸ್‍ಪೆಕ್ಟರ್ ಪ್ರಶಾಂತಿ, ಕಾರ್ಮಿಕ ನಿರೀಕ್ಷಕಿ ವನಜಾಕ್ಷಿ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು.


No comments:

Post a Comment