Sunday, 19 October 2014

ವರದಿ: ಆರ್.ಶ್ರೀನಿವಾಸ್, ಕೆ.ಆರ್.ಪೇಟೆ. ಕೆ.ಆರ್.ಪೇಟೆ,ಅ.19- ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ತಾಲೂಕಿನ ಬೂಕನಕೆರೆ ಹೋಬಳಿಯ ಬಣ್ಣನಕೆರೆ ಗ್ರಾಮದಲ್ಲಿ ಮನೆಯೊಂದರ ಗೋಡೆಯು ಕುಸಿದು ಬಿದ್ದು ಮನೆಗೆ ಭಾಗಶಃ ಹಾನಿಯಾಗಿದೆ. ಗ್ರಾಮದ ದಲಿತ ಕೋಮಿನ ಚಿಕ್ಕಯ್ಯ(50) ಎಂಬುವವರಿಗೆ ಸೇರಿದ ವಾಸದ ಮನೆಯ ಗೋಡೆಯು ಮಳೆಯ ಅಬ್ಬರಕ್ಕೆ ಸಿಲುಕಿ ಕುಸಿದು ಬಿದ್ದು ಮಳೆಯ ನೀರು ಮನೆಯೊಳಗೆ ನುಗ್ಗಿ ಮನೆಯಲ್ಲಿನ ದಿನಬಳಕೆಯ ವಸ್ತುಗಳು ಹಾಳಾಗಿದ್ದು ಮನೆಯಲ್ಲಿ ವಾಸಿಸುತ್ತಿದ್ದ ಕುಟುಂಬ ಈಗ ತೊಂದರೆಗೆ ಸಿಲುಕಿದೆ. ಚಿಕ್ಕಯ್ಯ ಅವರು ವಾಸಿಸುವ ಮನೆಯು ಅರ್ಧ ಗುಡಿಸಲಾಗಿದ್ದರೆ, ಮತ್ತರ್ಧ ಭಾಗ ಹಳೆಯ ಶಿಥಿಲಗೊಂಡ ಗೋಡೆಯಿಂದ ಕೂಡಿದ ಹೆಂಚಿನ ಮನೆಯಾಗಿದೆ. ಈ ಹಿಂದೆ ಐಚನಹಳ್ಳಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಅಂಬೇಡ್ಕರ್ ಯೋಜನೆಯಡಿಯಲ್ಲಿ ಆಶ್ರಯ ಮನೆಯನ್ನು ಮಂಜೂರು ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈಗ ಮನೆಯ ಗೋಡೆ ಕುಸಿದು ಬಿದ್ದು ಹೋಗಿರುವುದರಿಂದ ಮುಂದಾದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ತಕ್ಷಣ ಆಶ್ರಯ ಯೋಜನೆಯಡಿಯಲ್ಲಿ ಮನೆ ಮಂಜೂರು ಮಾಡಿಕೊಡುವ ಮೂಲಕ ಸ್ವಂತ ಸೂರು ಕಲ್ಪಿಸಿಕೊಳ್ಳಲು ಅವಕಾಶ ಒದಗಿಸಬೇಕು ಎಂದು ಗೋಡೆ ಕುಸಿತದಿಂದ ಮನೆ ಕಳೆದುಕೊಂಡಿರುವ ದಲಿತ ವ್ಯಕ್ತಿ ಚಿಕ್ಕಯ್ಯ ಅವರು ಗ್ರಾ.ಪಂ.ಅಧಿಕಾರಿಗಳನ್ನು ಮತ್ತು ಜನಪ್ರತಿನಿಧಿಗಳನ್ನು ಒತ್ತಾಯ ಮಾಡಿದ್ದಾರೆ. ============================================ ಕೆ.ಆರ್.ಪೇಟೆ,ಅ.19- ಹರ್ಯಾಣ ಮತ್ತು ಮಹಾರಾಷ್ಟ್ರ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯು(ಬಿಜೆಪಿ) ಭರ್ಜರಿ ಜಯಸಾಧಿಸಿರುವ ಹಿನ್ನೆಲೆಯಲ್ಲಿ ತಾಲೂಕು ಬಿಜೆಪಿ ಕಾರ್ಯಕರ್ತರು ಪಟ್ಟಣ ಕುವೆಂಪು ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಣೆ ಮಾಡಿ ವಿಜಯೋತ್ಸವ ಆಚರಣೆ ಮಾಡಿದರು. ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕೆ.ಎನ್.ಕುಮಾರಸ್ವಾಮಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬ್ಯಾಂಕ್ ಪರಮೇಶ್, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಸಾರಂಗಿ ಲಿಂಗರಾಜು, ಹೆಚ್.ಆರ್.ವಿಶ್ವನಾಥ್, ಶೀಳನೆರೆ ಭರತ್, ಮೊಬೈಲ್ ಪರಮೇಶ್, ನಾಟನಹಳ್ಳಿ ಲೋಕೇಶ್, ಯುವ ಮೋರ್ಚಾ ಅಧ್ಯಕ್ಷ ಜಗದೀಶ್, ನಮೋ ಅಭಿಮಾನಿ ಬಳಗದ ಅಧ್ಯಕ್ಷ ಆಟೋ ವಾಸು, ಕೂಡಲಕುಪ್ಪೆ ಸುರೇಶ್, ವಸಂತಪುರ ರಾಜು ಮತ್ತಿತರರ ನೇತೃತ್ವದಲ್ಲಿ ವಿಜಯೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕ್ ಪರಮೇಶ್ ಅವರು ಪ್ರಧಾನಮಂತ್ರಿಗಳಾದ ನರೇಂದ್ರಮೋದಿ ಅವರ ಆಡಳಿತಕ್ಕೆ ಮನ್ನಣೆ ನೀಡಿರುವ ಮತದಾರರು ಹರ್ಯಾಣದಲ್ಲಿ ಸ್ಪಷ್ಟ ಬಹುಮತ ನೀಡಿದ್ದಾರೆ. ಹಾಗೆಯೇ ಮಹಾರಾಷ್ಟ್ರದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಸರಳ ಬಹುಮತದ ಅಂಚಿಗೆ ತೆಗೆದುಕೊಂಡು ಹೋಗುವ ಮೂಲಕ ಪಕ್ಷಕ್ಕೆ ಆನೆ ಬಲವನ್ನು ತಂದು ಕೊಟ್ಟಿದ್ದಾರೆ. ಇದು ಪ್ರಧಾನಿಯವರ ಅವರ ಕೈಬಲ ಪಡಿಸಿದೆ. ಮತ್ತಷ್ಟು ಜನಪರವಾಗಿ ಆಡಳಿತ ನಡೆಸಲು ಜನರು ಬೆಂಬಲ ನೀಡಿದ್ದಾರೆ. ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವು ದೂಳಿಪಟವಾಗಿ ಪ್ರಾದೇಶಿಕ ಪಕ್ಷಕ್ಕಿಂತಲೂ ಕಡಿಮೆ ಸ್ಥಾನಗಳನ್ನು ಗಳಿಸುವ ಮೂಲಕ ತೀವ್ರ ಹಿನ್ನೆಡೆ ಪಡೆದಿದೆ. ಇದು ಮೋದಿಯವರ ನಾಯಕತ್ವಕ್ಕೆ ಸಂದ ಗೌರವವಾಗಿದೆ. ಆದ್ದರಿಂದ ರಾಜ್ಯದಲ್ಲಿಯೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಆದ್ದರಿಂದ ತಾಲೂಕಿನಲ್ಲಿಯೂ ಪಕ್ಷ ಸಂಘಟನೆಗೆ ಕಾರ್ಯಕರ್ತರು ಕ್ರಿಯಾಶೀಲವಾಗಬೇಕು. ಮುಂಬರುವ ಗ್ರಾಮ ಪಂಚಾಯಿತಿ ಮತ್ತು ಜಿ.ಪಂ.ತಾ.ಪಂ.ಚುನಾವಣೆಯಲ್ಲಿ ಪಕ್ಷವನ್ನು ಬೇರು ಮಟ್ಟದಿಂದ ಕಟ್ಟುವ ಮೂಲಕ ಪಕ್ಷವನ್ನು ಬಲಪಡಿಸಬೇಕು ಎಂದು ಪರಮೇಶ್ ಕಾರ್ಯಕರ್ತರಿಗೆ ಕರೆ ನೀಡಿದರು. ಚಿತ್ರಶೀರ್ಷಿಕೆ:19ಞಡಿಠಿ2 : ಹರ್ಯಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವಿನಿಂದ ಹರ್ಷಗೊಂಡ ಕೆ.ಆರ್.ಪೇಟೆ ತಾಲೂಕು ಬಿಜೆಪಿ ಕಾರ್ಯಕರ್ತರು ಪಟ್ಟಣದ ಕುವೆಂಪು ವೃತ್ತದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬ್ಯಾಂಕ್ ಪರಮೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಸಾರಂಗಿ ಲಿಂಗರಾಜು, ಭರತ್, ಯುವ ಮೋರ್ಚಾ ಅಧ್ಯಕ್ಷ ಜಗದೀಶ್, ಪರಮೇಶ್, ಆಟೋ ವಾಸು, ಲೋಕೇಶ್ ಮತ್ತಿತರರ ನೇತೃತ್ವದಲ್ಲಿ ವಿಜಯೋತ್ಸವ ಆಚರಣೆ ಮಾಡಿದರು. ======================================= ಕೆ.ಆರ್.ಪೇಟೆ,ಅ.19- ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರÀರು ಮತ್ತು ಅಧಿಕಾರಿಗಳನ್ನು ರಕ್ಷಿಸುವುದು ಸಾರ್ವಜನಿಕರ ಆದ್ಯ ಕರ್ತವ್ಯವಾಗಿದೆ ಎಂದು ಆಸರೆ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಎಚ್.ಬಿ.ಮಂಜುನಾಥ್ ಮನವಿ ಮಾಡಿದರು. ಭ್ರಷ್ಠಾಚಾರವನ್ನು ಬಯಲಿಗೆಳೆದ ಅಧಿಕಾರಿ ವಿ.ರಶ್ಮಿಮಹೇಶ್ ಅವರಿಗೆ ಒಂದು ಸಾವಿರ ಪತ್ರಗಳನ್ನು ಬೆಂಬಲ ಸೂಚಿಸಿ ಬರೆದು ಪೋಸ್ಟ್‍ಮಾಡಿ ಮಾತನಾಡಿದರು. ದೇಶದಲ್ಲಿ-ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮಾಣಿಕ ಅಧಿಕಾರಿಗಳಿಗೆ ಸರ್ಕಾರ ವಿನಾಕಾರಣ ವರ್ಗಾವಣೆ ಮಾಡುವುದು ಮತ್ತು ಕಡ್ಡಾಯ ರಜೆಯಮೇಲೆ ಕಳುಹಿಸುವುದನ್ನು ಗಮನಿಸಿದರೆ ಸರ್ಕಾರಕ್ಕೆ ದಕ್ಷ, ಪ್ರಾಮಾಣಿಕ ಅಧಿಕಾರಿಗಳ ಸೇವೆ ಬೇಕಾಗಿಲ್ಲ, ಕೇವಲÀ ರಾಜಕಾರಣಿಗಳ ಗುಲಾಮರಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮಾತ್ರ ಆಯಕಟ್ಟಿನ ಸ್ಥಳಗಳಲ್ಲಿ ಕಾರ್ಯನಿರ್ವಹಿಸಬೇಕು ಎಂಬುದು ಚುನಾಯಿತ ಜನಪ್ರತಿನಿಧಿಗಳ ಉದ್ಧೇಶವಾಗಿದೆ ಎಂದರೆ ತಪ್ಪಾಗಲಾರದು. ಆದರೆ ಸಾರ್ವಜನಿಕರ ಕೆಲಸಕಾರ್ಯಗಳನ್ನು ನಿಗಧಿತ ಸಮಯಕ್ಕೆ ಮಾಡಿಕೊಡುವ, ದೇಶದ ಬಗ್ಗೆ ಅಪಾರ ಗೌರವ, ಬಡವರು ಅಭಿವೃದ್ಧಿಯ ಪರವಾಗಿ ಕಾರ್ಯನಿರ್ವಹಿಸುವ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳು ಸಮಾಜಕ್ಕೆ ಅತ್ಯವಶ್ಯವಾಗಿದೆ. ಹೀಗಾಗಿ ನಾವುಗಳು ಸಮಾಜ ದ್ರೋಹಿ ಮತ್ತು ಭ್ರಷ್ಟಾಚಾರಿಗಳಿಂದ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳನ್ನು ರಕ್ಷಿಸಬೇಕಾಗಿದೆ. ದಕ್ಷ ಅಧಿಕಾರಿ ರಶ್ಮಿರವರು ತಾವು ಸೇವೆ ಸಲ್ಲಿಸಿದ ಇಲಾಖೆಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಭ್ರಷ್ಠಾಚಾರಿಗಳಿಗೆ ಸಿಂಹಸ್ವಪ್ನವಾಗಿದ್ದಾರೆ. ಇಂತಹವರಿಗೆ ಸರ್ಕಾರದಿಂದ ವರ್ಗಾವಣೆ ಶಿಕ್ಷೆ ಒಂದು ಕಡೆಯಾದರೆ, ಭ್ರಷ್ಠಾಚಾರಿಗಳು ಚಪ್ಪಲಿಯಿಂದ ಹಲ್ಲೆ ನಡೆಸಿ ಅವಮಾನ ಮಾಡಿದ್ದಾರೆ ಎಂದರೆ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ನೆನಪಿಸಿಕೊಂಡರೆ ಭಯವಾಗುತ್ತದೆ. ಸಂಘ ಸಂಸ್ಥೆಗಳು ಸಣ್ಣ-ಪುಟ್ಟ ವಿಚಾರಗಳಿಗೆ ರಸ್ತೆಗಳಿದು ಹೋರಾಟಮಾಡುತ್ತಿವೆ. ರಾಜ್ಯದ ಆರ್ಥಿಕ ಮತ್ತು ಸಾಮಾಜಿಕ ಒಳತಿಗಾಗಿ ಹೋರಾಟ ನಡೆಸುತ್ತಿರುವ ಅಧಿಕಾರಿಗೆ ಹಲ್ಲೆ ನಡೆಸಿದ್ದರೂ ಯಾವುದೇ ಸಂಘಟನೆಗಳು ಪ್ರತಿಕ್ರಿಯೇ ನೀಡದಿರುವುದು ವಿಷಾದನೀಯ. ಮುಂದಿನ ದಿನಗಳಲ್ಲಾದರೂ ಸರ್ಕಾರ ಬೆರಳೆಣಿಕೆಯಷ್ಠಿರುವ ಪ್ರಾಮಾಣಿಕ ಅಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆ ನೀಡದೆ ಅವ ರ ರಕ್ಷಣೆಗೆ ನಿಲ್ಲಬೇಕು. ರಶ್ಮಿರವರಿಗೆ ಬೆಂಬಲ ವ್ಯಕ್ತ ಪಡಿಸಲು ಇಚ್ಚಿಸುವವರು ಅವರಿಗೆ ಪತ್ರ ಬರೆದು ಬೆಂಬಲ ವ್ಯಕ್ತ ಪಡಿಸುವಂತೆ ಮನವಿ ಮಾಡಿದರು. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಡಾ ಎಸ್.ಕೃಷ್ಣಮೂರ್ತಿ, ಹಿರಿಯ ವಕೀಲರಾದ ಅನಂತರಾಮಯ್ಯ, ಕೆ.ಟಿ.ನಟರಾಜ್, ರಾಜೇಶ್, ಮುರುಗೇಶ್, ಹೋನ್ನೆನಹಳ್ಳಿಮಂಜು, ಮುನಾವರ್‍ಖಾನ್, ಪೇಂಟರ್‍ಶಿವು, ಮಾಧು, ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜು ಮತ್ತು ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ವರ್ತಕರು ಮತ್ತು ಆಟೋಚಾಲಕರು ಸೇರಿ ಈವರೆಗೆ ಒಟ್ಟು 1000 ಕ್ಕೂ ಹೆಚ್ಚು ಮಂದಿ ಪತ್ರ ಬರೆದು ರಶ್ಮಿರವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಚಿತ್ರಶೀರ್ಷಿಕೆ:19ಞಡಿಠಿ3 : ಕೆ.ಆರ್.ಪೇಟೆ ದಕ್ಷ ಐ.ಎ.ಎಸ್ ಅಧಿಕಾರಿ ವಿ.ರಶ್ಮಿಮಹೇಶ್ ರವರನ್ನು ಬೆಂಬಲಿಸಿ ಆಸರೆ ಸಮಾಜ ಸೇವಾ ಟ್ರಸ್ಟ್ ಪದಾಧಿಕಾರಿಗಳು ಪತ್ರಬರೆದು ಪೋಸ್ಟ್ ಮಾಡುತ್ತಿರುವುದು. ===================================== ಕೆ.ಆರ್.ಪೇಟೆ,ಅ.19- ತಾಲೂಕಿನ ದೊದ್ದನಕಟ್ಟೆ ಗ್ರಾಮದ ಎಲ್ಲಾ ಕುಟುಂಬಗಳು ಶೌಚಾಗೃಹವನ್ನು ನಿರ್ಮಿಸಿಕೊಳ್ಳುವ ಮೂಲಕ ಬಯಲು ಶೌಚಮುಕ್ತ ಗ್ರಾಮವಾಗಿ ಮಾಡಿರುವುದು ಶ್ಲಾಘನೀಯ. ಗ್ರಾಮೀಣ ಜನರಲ್ಲಿ ಶೌಚಾಲಯದ ಬಗ್ಗೆ ಅಸಹ್ಯ ಭಾವನೆ ಇತ್ತು ಇದು ದೂರವಾಗಿ ಪ್ರತಿಯೊಬ್ಬರೂ ಶೌಚಾಲಯ ನಿರ್ಮಿಸಿಕೊಳ್ಳಲು ಆಸಕ್ತಿ ಮೂಡಿಸುವಲ್ಲಿ ಎನ್.ಎಸ್.ಎಸ್. ಶಿಬಿರ ಪ್ರಧಾನ ಪಾತ್ರ ವಹಿಸಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಹೆಚ್.ಟಿ.ಹರೀಶ್ ಹೇಳಿದರು. ಅವರು ತಾಲೂಕಿನ ದೊದ್ದನಕಟ್ಟೆ ಗ್ರಾಮದಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿಗಳ ಶ್ರಮದಾನದ ನೆರವಿನೊಂದಿಗೆ ಗ್ರಾಮಸ್ಥರು ಆಸಕ್ತಿಯಿಂದ ನಿರ್ಮಿಸಿಕೊಂಡಿರುವ ಶೌಚಾಲಯಗಳನ್ನು ವೀಕ್ಷಣೆ ಮಾಡಿ ಮಾತನಾಡಿದ ಅವರು ಶೌಚಾಲಯ ನಿರ್ಮಾಣದಿಂದ ಗ್ರಾಮದಲ್ಲಿನ ಜನರ ಆರೋಗ್ಯ ಸುಧಾರಣೆಯಾಗುತ್ತದೆ. ಬಯಲು ಮಲವಿಸರ್ಜನೆಯಿಂದ ಬರುತ್ತಿದ್ದ ಹತ್ತಾರು ಸಾಂಕ್ರಾಮಿಕ ರೋಗಗಳು ಗ್ರಾಮದ ಕಡೆ ಸುಳಿದು ಕೂಡ ನೋಡುವುದಿಲ್ಲ ಎಂದು ಹೇಳಿದರು. ದೇಶದ ಪ್ರಧಾನ ಮಂತ್ರಿ ನರೇಂದ್ರಮೋದಿ ಸ್ವಚ್ಚ ಭಾರತ್ ನಿರ್ಮಾಣಕ್ಕೆ ಸ್ವತಃ ಪೊರಕೆ ಹಿಡಿದು ಕಸಗುಡಿಸುವ ಮೂಲಕ ಆರೋಗ್ಯವಂತ ಭಾರತ ನಿರ್ಮಾಣಕ್ಕೆ ನಾಂದಿಯಾಗಿದೆ. ಇದು ದೇಶದ ಜನರಲ್ಲಿ ಹೆಚ್ಚು ಪ್ರೇರಣೆಯನ್ನು ನೀಡಿದೆ. ಮಂಡ್ಯ ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಯಲು ಶೌಚ ಮುಕ್ತ ಗ್ರಾಮ ಹೆಗ್ಗಳಿಕೆ ಗ್ರಾಮ ಭಾಜನವಾಗುತ್ತಿರುವುದು ತಾಲೂಕಿಗೆ ಹೆಮ್ಮೆಯಾಗಿದೆ. ಗ್ರಾಮದ ಪ್ರತಿ ಕುಟುಂಬವೂ ಉತ್ತಮವಾಗಿ ಶೌಚಾಲಯ ನಿರ್ಮಾಣ ಮಾಡಿಕೊಂಡಿರುವುದು ಪ್ರಧಾನಿಯವರ ಕರೆಗೆ ಸ್ಪಂಧಿಸಿದಂತಾಗಿದೆ ಇದೇ ರೀತಿ ಇಡೀ ತಾಲೂಕಿನ ಎಲ್ಲಾ ಗ್ರಾಮಗಳ ಕುಟುಂಬಗಳು ಅನುಸರಣೆ ಮಾಡಿ ತಾವೂ ಸಹ ಸರ್ಕಾರವು ನೀಡುವ ಪ್ರೋತ್ಸಾಹಧನವನ್ನು ಬಳಕೆ ಮಾಡಿಕೊಂಡು ಶೌಚಾಲಯಗಳ ನಿರ್ಮಿಸಿಕೊಳ್ಳಬೇಕು ಹಾಗೂ ಸರಿಯಾದ ನಿರ್ವಹಣೆಯೊಂದಿಗೆ ಬಳಕೆ ಮಾಡಬೇಕು. ಈ ಮೂಲಕ ರೋಗಮುಕ್ತ ಸಮಾಜಕ್ಕೆ ಮುಂದಾಗಬೇಕು. ಜೊತೆಗೆ ಮನೆಯ ಒಳ ಮತ್ತು ಹೊರ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಡಾ.ಹರೀಶ್ ಅವರು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಗ್ರಾಮದ ಎಲ್ಲ ಜನರು ಆರೋಗ್ಯ ತಪಾಸಣೆಗೆ ಒಳಗಾದರು. ವೈದ್ಯರಾದ ಡಾ.ನವೀನ್, ಡಾ.ಪಲ್ಲವಿ, ಡಾ.ಶಶಿಕಾಂತ್, ಡಾ.ಗುರುಪ್ರಸಾದ್, ಡಾ.ಲಕ್ಷ್ಮೀ, ಮುಖಂಡರಾದ ಕಿರಣ್ ರೋಗಿಗಳನ್ನು ತಪಾಸಣೆ ಮಾಡಿ ಉಚಿತ ಔಷದೋಪಚಾರ ನೀಡಿದರು. ...........ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲು ತೀರ್ಮಾನ................... ಮೈಸೂರು,ಅ.18.ಮೈಸೂರು ನಗರದಲ್ಲಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಸಡಗರ ಹಾಗೂ ವೈಭವದಿಂದ ಆಚರಿಸಲು ಜಿಲ್ಲಾಧಿಕಾರಿ ಹಾಗೂ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷೆ ಸಿ.ಶಿಖಾ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿದ ಸಭೆಯು ತೀರ್ಮಾನಿಸಿತು. ರಾಜ್ಯೋತ್ಸವದ ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ರಾಷ್ಟ್ರಧ್ವಜ, ಕನ್ನಡ ಧ್ವಜಾರೋಹಣ ಹಾಗೂ ನಾಡದೇವಿ ತಾಯಿ ಭುವನೇಶ್ವರಿ ಭಾವಚಿತ್ರದ ಪೂಜೆಯನ್ನು ಬೆಳಿಗ್ಗೆ 9 ಗಂಟೆಗೆ ನೆರವೇರಿಸಲು ಸಭೆ ನಿರ್ಣಯ ಕೈಗೊಂಡಿತು. ನಂತರ ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ಮಂದಿರದಿಂದ ನಾಡದೇವಿ ತಾಯಿ ಭುವನೇಶ್ವರಿ ಭಾವಚಿತ್ರದ ಬೃಹತ್ ಮೆರವಣಿಗೆಯನ್ನು ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಮೆರವಣಿಗೆಯಲ್ಲಿ ಬೆಮೆಲ್, ಸಾರಿಗೆ ಸಂಸ್ಥೆ, ವಿವಿಧ ಕನ್ನಡ ಸಂಘ ಸಂಸ್ಥೆಗಳ ಹಾಗೂ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ಸ್ತಬ್ಧಚಿತ್ರಗಳು, ವಿವಿಧ ಸಾಂಸ್ಕøತಿಕ ಕಲಾತಂಡಗಳು, ಶಾಲಾಕಾಲೇಜು ಮಕ್ಕಳು, ಅಧಿಕಾರಿಗಳು ಈ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಕನ್ನಡ ರಾಜೋತ್ಸವದ ಅದ್ದೂರಿ ಆಚರಣೆಗೆ ಅಧಿಕಾರಿಗಳು ಈಗಿನಿಂದಲೇ ಅಗತ್ಯ ಸಿದ್ಧತೆ ಕೆಲಸಗಳನ್ನು ಆರಂಭಿಸಬೇಕು. ಬೆಳಗಿನ ಧ್ವಜಾರೋಹಣ ಕಾರ್ಯಕ್ರಮವು ಶಿಷ್ಠಾಚಾರವಾಗಿ ನಡೆಯಲು ಅನುವಾಗುವಂತೆ ಕ್ರಮ ತೆಗೆದುಕೊಳ್ಳಬೇಕೆಂದ ಅವರು ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಯಾವುದೇ ಲೋಪದೋಷ ಉಂಟಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಸಮಾರಂಭ ಏರ್ಪಡಿಸಬೇಕು. ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿ ಕನ್ನಡ ಭಾಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು. ರಾಜ್ಯೋತ್ಸವದ ಬೆಳಗಿನ ಹಾಗೂ ಸಂಜೆಯ ಕಾರ್ಯಕ್ರಮಗಳಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳ ಹಾಜರಾತಿ ಕಡ್ಡಾಯವಾಗಿರುತ್ತದೆ. ಇದಲ್ಲದೆ ಶಾಲಾ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಜ್ಯೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. ರಾಜೋತ್ಸವ ದಿನವನ್ನು ಹಬ್ಬದಂತೆ ಆಚರಿಸಬೇಕು. ಅಂದು ನಗರವನ್ನು ತಳಿರು ತೋರಣಗಳಿಂದ ಅಲಂಕರಿಸಬೇಕು. ಪ್ರಮುಖ ವೃತ್ತ, ಬೀದಿಗಳಲ್ಲಿ ವಿಶೇಷ ದೀಪಾಲಂಕಾರ ಮಾಡಬೇಕು. ನಗರದ ಆಯ್ದ ಚಿತ್ರಮಂದಿರಗಳಲ್ಲಿ ಕಡ್ಡಾಯವಾಗಿ ಕನ್ನಡ ಚಿತ್ರಗಳನ್ನು ಒಂದು ವಾರದ ಮಟ್ಟಿಗೆ ಪ್ರದರ್ಶಿಸಲು ಜಿಲ್ಲಾಡಳಿತ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಯವರಲ್ಲಿ ಸಂಘ ಸಂಸ್ಥೆಗಳ ಮುಖಂಡರು ಮನವಿ ಮಾಡಿದರು. ಶಾಸಕ ಸೋಮಶೇಖರ್, ಮುಡಾ ಆಯುಕ್ತ ಪಾಲಯ್ಯ, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಬೆಟಸೂರಮಠ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಕನ್ನಡ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಪದಾಧಿಕಾರಿಗಳು ಸಭೆಯ ಭಾಗವÀಹಿಸಿದರು.

No comments:

Post a Comment