Tuesday, 28 October 2014

ಕೆ.ಆರ್.ಪೇಟೆ-ಪಾಂಡವಪುರ ಸುದ್ದಿಗಳು.

ಕೃಷ್ಣರಾಜಪೇಟೆ. ಇದೇ ತಿಂಗಳ 31ರಂದು ಮಧ್ಯಾಹ್ನ 3ಗಂಟೆಗೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಹೋಬಳಿ ಮಟ್ಟದ ಕಂದಾಯ ಅದಾಲತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ರಾಜ್ಯದ ಕಂದಾಯ ಸಚಿವರಾದ ವಿ.ಶ್ರೀನಿವಾಸಪ್ರಸಾದ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಶಾಸಕ ಕೆ.ಸಿ.ನಾರಾಯಣಗೌಡ ತಿಳಿಸಿದರು.
ಅವರು ಇಂದು ಪಟ್ಟಣದ ಮಿನಿ ವಿಧಾನಸೌಧದಲ್ಲಿ ಕನಕ ಜಯಂತಿ ಆಚರಣೆಯ ಸಂಬಂಧವಾಗಿ ತಾಲೂಕು ಆಡಳಿತವು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಮುಖಂಡರ ಸಭೆಯಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಬೂಕನಕೆರೆ ಹೋಬಳಿಯ 16 ಕಂದಾಯ ವೃತ್ತಗಳ ವ್ಯಾಪ್ತಿಯ 2ಸಾವಿರ ಫಲಾನುಭವಿಗಳ ಪಹಣಿ ತಿದ್ದುಡಿಯನ್ನು ಯಶಸ್ವಿಯಾಗಿ ಮಾಡಲಾಗಿದ್ದು ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಈ ತಿದ್ದುಪಡಿಯಾಗಿರುವ ಪಹಣಿಗಳು ಹಾಗೂ ವಿವಿಧ ಸೌಲಭ್ಯಗಳನ್ನು ರೈತ ಬಂಧುಗಳಿಗೆ ಕಂದಾಯ ಸಚಿವರು ವಿತರಿಸುವ ಈ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್, ಮೈಸೂರು ವಿಭಾಗಾಧಿಕಾರಿ ವಿ.ರಶ್ಮೀ ಜಿಲ್ಲಾಧಿಕಾರಿ ಡಾ.ಅಜಯ್‍ನಾಗಭೂಷಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೋಹಿಣಿಸಿಂಧೂರಿ, ಪಾಂಡವಪುರ ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ. ರೈತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಶಾಸಕ ನಾರಾಯಣಗೌಡ ಮನವಿ ಮಾಡಿದರು.
ಕನಕಜಯಂತಿ ಸಾಧಕರಿಗೆ ಸನ್ಮಾನ: ನವೆಂಬರ್ 8ರಂದು ತಾಲೂಕು ಆಡಳಿತದ ನೇತೃತ್ವದಲ್ಲಿ ನಡೆಯಲಿರುವ ಕನಕ ಜಯಂತಿ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿರುವ ಐವರು ಸಾಧಕರನ್ನು ಸನ್ಮಾನಿಸುವುದು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಲಂಕೃತ ವಾಹನದಲ್ಲಿ ದಾಸಶ್ರೇಷ್ಠರಾದ ಭಕ್ತ ಕನಕದಾಸರ ಭಾವಚಿತ್ರವನ್ನು ಜಾನಪದ ಕಲಾ ತಂಡಗಳ ಅದ್ದೂರಿ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಗುವುದು. ವಿದ್ವಾಂಸರಿಂದ ಕನಕದಾಸರನ್ನು ಕುರಿತು ವಿಶೇಷ ಉಪನ್ಯಾಸವನ್ನು ಕೊಡಿಸಲಾಗುವುದು. ಪಕ್ಷಾತೀತವಾಗಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗಳಿಸಿಕೊಡಬೇಕು ಎಂದು ಶಾಸಕ ನಾರಾಯಣಗೌಡ ಮನವಿ ಮಾಡಿದರು. ತಹಶೀಲ್ದಾರ್ ಹೆಚ್.ಎಲ್.ಶಿವರಾಮ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಜಿ.ಪಂ ಸದಸ್ಯ ವಿ.ಮಂಜೇಗೌಡ, ಪುರಸಭೆ ಸದಸ್ಯರಾದ ಕೆ.ವಿನೋದ್‍ಕುಮಾರ್, ಡಿ.ಪ್ರೇಮಕುಮಾರ್, ಆಟೋಕುಮಾರ್, ಕೆ.ಬಿ.ನಂದೀಶ್,  ನಂಜುಂಡಯ್ಯ, ಕೆ.ಕೆ.ಪುರುಷೋತ್ತಮ್, ಮುಖಂಡರಾದ ಎಲ್.ಪಿ.ನಂಜಪ್ಪ, ಕೆ.ಶ್ರೀನಿವಾಸ್, ಸಂತೇಬಾಚಹಳ್ಳಿ ಮರೀಗೌಡ, ಮಾದಾಪುರ ಚಂದ್ರಶೇಖರ್, ಮಲ್ಲೇನಹಳ್ಳೀ ಮೋಹನ್, ಗ್ರಾಮಾಂತರ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಟಿ.ಎಂ.ಪುನೀತ್, ತಾಲೂಕು ಸಮಾಜಕಲ್ಯಾಣಾಧಿಕಾರಿ ಸುಧಾಮಣಿ, ಬಿಸಿಎಂ ಅಧಿಕಾರಿ ನಂದಕುಮಾರ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಕಛೇರಿಯ ಸುತ್ತಮುತ್ತಲಿನ ಪರಿಸರವನ್ನೂ  ಚೊಕ್ಕಟವಾಗಿಟ್ಟುಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜು ಕರೆ ನೀಡಿದರು.


ಪಾಂಡವಪುರ, ಅ. 28 : ಆಯಾಯಾ ಸರ್ಕಾರಿ ಇಲಾಖೆಯ ಅಧಿಕಾರಿ ವರ್ಗ ಹಾಗೂ ನೌಕರರ ವರ್ಗ ತಮ್ಮ ಇಲಾಖೆಯನ್ನು ಸ್ವಚ್ಛಗೊಳಿಸುವ ಮೂಲಕ ಕಸ ಮುಕ್ತವನ್ನಾಗಿ ಮಾಡುವ ಜತೆಗೆ ತಮ್ಮ ಸುತ್ತಮುತ್ತಲಿನ ಪರಿಸರವನ್ನೂ ಬಹಳ ಚೊಕ್ಕಟವಾಗಿಟ್ಟುಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜು ಕರೆ ನೀಡಿದರು.
ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಕಂದಾಯ ಇಲಾಖೆ ಹಾಗೂ ಸ್ಥಳೀಯ ಪಟ್ಟಣ ಪಂಚಾಯಿತಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ `ಸ್ವಚ್ಛತಾ ಆಂದೋಲನಾ ಅಭಿಯಾನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯಾರೇ ಆಗಲೀ ತಮ್ಮ ಭೌತಿಕ ಪರಿಸರವನ್ನು ಮೊದಲು ಸ್ವಚ್ಛವಾಗಿಟ್ಟುಕೊಳ್ಳಬೇಕು. ಗ್ರಾಮಗಳನ್ನು ಸ್ವಚ್ಛಗೊಳಿಸುವ ಮೊದಲು ಸರ್ಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರ ವರ್ಗ ತಮ್ಮ ಇಲಾಖೆಯಲ್ಲಿ ಕಸ ಬೀಳದಂತೆ ಎಚ್ಚರ ವಹಿಸಬೇಕು. ಕಿಟಕಿಗಳನ್ನು ಒರೆಸುವುದು, ಟೇಬಲ್‍ಗಳನ್ನು ಸ್ವಚ್ಛಗೊಳಿಸುವುದು, ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ಬೇರೆಡೆಗೆ ವಿಲೇವಾರಿ ಮಾಡುವುದು, ಗೋಡೆಗಳ ಮೇಲೆ ತುಂಬಿಕೊಂಡಿರುವ ಜೇಡವನ್ನು ತೆಗೆಯುವುದು, ಜತೆಗೆ ಮೇಲ್ಛಾವಣಿಯಲ್ಲಿ ಕಟ್ಟಿಕೊಂಡಿರುವಂತಹ ಧೂಳುಗಳನ್ನು ತೆಗೆಯುವ ಮೂಲಕ ಕಾಲ ಕಾಲಕ್ಕೆ ತಮ್ಮ ಇಲಾಖೆಗಳನ್ನು ಶುಚಿಗೊಳಿಸಬೇಕು ಎಂದು ಸಲಹೆ ನೀಡಿದರು.
ಇಡೀ ತಾಲೂಕಿನಲ್ಲಿ ಪ್ರಪ್ರಥಮವಾಗಿ ಕಂದಾಯ ಇಲಾಖೆಯಿಂದಲೇ ಸ್ವಚ್ಛತೆಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲು ಮುಂದಾಗಿದ್ದು, ಪ್ರತಿ 15 ದಿನಗಳಿಗೊಮ್ಮೆ ಕಂದಾಯ ನೌಕರರು ಇಲಾಖೆಯನ್ನು ಸ್ವಚ್ಛಗೊಳಿಸುವಂತೆ ಸೂಚಿಸಲಾಗಿದೆ. ಜತೆಗೆ ಕಾಫಿ, ಟೀ, ತಿಂಡಿ ಇತರೆ ಪದಾರ್ಥಗಳನ್ನು ಕಂದಾಯ ಇಲಾಖೆಯ ನೌಕರರು ಒಳಗಡೆಗೆ ತರುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಯಾರಾದರೂ ಕಾಫಿ, ಟೀ, ತಿಂಡಿಯನ್ನು ಕಚೇರಿ ಒಳಗೆ ತೆಗೆದುಕೊಂಡು ಬಂದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಮಹಾತ್ಮಾಗಾಂಧೀಜಿ ಅವರ `ಗ್ರಾಮ ಸ್ವರಾಜ್ಯ’ ಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರಮೋದಿ ಅವರು `ಸ್ವಚ್ಛ ಗ್ರಾಮ, ಸ್ವಚ್ಛ ಭಾರತ’ ಅಭಿಯಾನ ಯೋಜನೆಗೆ ಚಾಲನೆ ನೀಡಿದ್ದಾರೆ. ಹೀಗಾಗಿ ಪ್ರತಿಯೊಬ್ಬ ನಾಗರಿಕರು ತಮ್ಮ ಮನೆಯ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಪರಿಸರ ಪ್ರೇಮವನ್ನು ಮೆರೆಯಬೇಕು. ಪರಿಸರ ಚೆನ್ನಾಗಿದ್ದರೆ ನಮ್ಮ ಆರೋಗ್ಯ, ಸಮುದಾಯದ ಆರೋಗ್ಯವು ಉತ್ತಮವಾಗಿರುತ್ತದೆ ಎಂದರು.
ಕಡತಗಳ ಯಜ್ಞಕ್ಕೆ ಶೀಘ್ರ ಚಾಲನೆ:
ಕಂದಾಯ ಇಲಾಖೆಯಲ್ಲಿನ ಕಡತಗಳನ್ನು ಬಹಳ ಅಚ್ಚುಕಟ್ಟಾಗಿ ಜೋಡಿಸಲು ಅನುಕೂಲವಾಗುವಂತೆ ಅತಿ ಶೀಘ್ರದಲ್ಲಿಯೇ `ಕಡತಗಳ ಯಜ್ಞ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜು ಇದೇ ಸಂದರ್ಭದಲ್ಲಿ ತಿಳಿಸಿದರು.
ತಹಶೀಲ್ದಾರ್ ಡಿ.ಎಸ್.ಶಿವಕುಮಾರಸ್ವಾಮಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಉಪ ತಹಶೀಲ್ದಾರ್ ಸುಧಾಕರ್, ಶಿರಸ್ತೇದಾರ್ ಕೀರ್ತನಾ, ರೆವಿನ್ಯೂ ಇನ್ಸ್‍ಪೆಕ್ಟರ್‍ಗಳಾದ ಪ್ರಸನ್ನ, ಲಕ್ಷ್ಮೀಕಾಂತ್, ದಿನೇಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಚ್.ಬಿ.ನಾಗರಾಜಯ್ಯ, ಮೇಲ್ವಿಚಾರಕ ಕಾಳಯ್ಯ, ಇಂಜಿನಿಯರ್ ಚೌಡಪ್ಪ, ಸಮುದಾಯ ಸಂಘಟನಾಧಿಕಾರಿ ಪುಟ್ಟಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಳಿಕ ಮಿನಿ ವಿಧಾನಸೌಧ ಆವರಣದಲ್ಲಿದ್ದ ಕಸವನ್ನು ಬೇರೆಡೆಗೆ ವಿಲೇವಾರಿ ಮಾಡುವ ಮೂಲಕ ಸ್ವಚ್ಛಗೊಳಿಸಲಾಯಿತು. ಜತೆಗೆ ಮಿನಿ ವಿಧಾನಸೌಧದ ಪರಿಸರಕ್ಕೆ ಅಡಚಣೆಯಾಗಿದ್ದ ಮರದ ರಂಬೆ-ಕೊಂಬೆಗಳನ್ನು ಕಡಿದು ಇಡೀ ಮಿನಿ ವಿಧಾನಸೌಧವನ್ನೇ ಶುಚಿಗೊಳಿಸಲಾಯಿತು.

               ಅನಾರೋಗ್ಯದ ಭಿತ್ತುವ ಆಸ್ಪತ್ರೆ : ಎಸಿ ಬೇಸರ


ಪಾಂಡವಪುರ : ಪಾಂಡವಪುರ ಪಟ್ಟಣದಲ್ಲಿರುವ ಉಪ ವಿಭಾಗೀಯ ಆಸ್ಪತ್ರೆಯು ಆರೋಗ್ಯ ತಪಾಸಣೆ ಮಾಡುವ ಕೇಂದ್ರದ ಬದಲಿಗೆ ಅನಾರೋಗ್ಯ ಭಿತ್ತುವ ಕೇಂದ್ರವಾಗಿ ಪರಿಣಮಿಸಿದೆ ಎಂದು ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜು ಬೇಸರ ವ್ಯಕ್ತಪಡಿಸಿದರು.
ಮಿನಿ ವಿಧಾನಸೌಧದಲ್ಲಿ ಆಯೋಜಿಸಿದ್ದ ಸ್ವಚ್ಛತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿ ಮಾತನಾಡಿದ ಅವರು, ಆಸ್ಪತ್ರೆಯ ಹೊರ ಆವರಣದಲ್ಲಿ ಪಾರ್ಥೇನಿಯಂ ಗಿಡಗಳು ಯಥೇಚ್ಚವಾಗಿ ಬೆಳೆದಿದ್ದು, ರೋಗಿಗಳು ತಪಾಸಣೆ ಹೋಗಲೇಬಾರದು ಎನ್ನುವ ಮಟ್ಟಿಗೆ ಆಸ್ಪತ್ರೆಯ ಪರಿಸರ ಸಂಪೂರ್ಣ ಕಲುಷಿತಗೊಂಡಿದೆ. ಇನ್ನು ಆಸ್ಪತ್ರೆಯ ಹೊರ ಆವರಣಕ್ಕೆ ಹೊಂದಿಕೊಂಡಂತಿರುವ ಮಹಿಳಾ ವೈದ್ಯರ ವಸತಿ ಗೃಹದ ಆವರಣದಲ್ಲಿ ಸ್ವಲ್ಪವೂ ಅಚ್ಚಕಟ್ಟು ಎನ್ನುವ ಮಾತೇ ಇಲ್ಲ. ವಸತಿ ಕೇಂದ್ರದ ಕಾಂಪೌಂಡ್ ಸುತ್ತಲೂ ಗಿಡ-ಗಂಟೆಗಳು ಬೆಳೆದುನಿಂತಿವೆ. ಇಷ್ಟಾದರೂ ಆಸ್ಪತ್ರೆಯ ಮುಖ್ಯ ಆಡಳಿತಾ ವೈದ್ಯಾಧಿಕಾರಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ನಾಗರಾಜು ಅವರು, ತಾವು ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸೇರಿದಂತೆ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಿಕೊಡುತ್ತೇನೆ. ತಕ್ಷಣವೇ ಆಸ್ಪತ್ರೆಯ ಸ್ವಚ್ಛತೆಗೆ ಮುಂದಾಗುವಂತೆ ಪ.ಪಂ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.




No comments:

Post a Comment