`ಮಂಡ್ಯ ಸ್ಟಾರ್' ಚಲನಚಿತ್ರದ ಚಿತ್ರೀಕರಣದ
ಪಾಂಡವಪುರ ರೈಲ್ವೆ ನಿಲ್ದಾಣ ಮೇಲ್ಸೇತುವೆ ಬಳಿ ನಡೆದ `ಮಂಡ್ಯ ಸ್ಟಾರ್' ಚಲನಚಿತ್ರದ ಚಿತ್ರೀಕರಣದ ದೃಶ್ಯವೊಂದಕ್ಕೆ ಶಾಸಕ, ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ನೇತೃತ್ವದಲ್ಲಿ ಚಳವಳಿ ನಡೆಯುತ್ತಿದ್ದಾಗ ಪೊಲೀಸ್ ಅಧಿಕಾರಿ ಜೈಜಗದೀಶ್ ನೇತೃತ್ವದಲ್ಲಿ ಪೊಲೀಸರು ಲಾಠಿ ಛಾರ್ಜ್ ಮಾಡಿದ ದೃಶ್ಯ.
ಪಾಂಡವಪುರ : ರೈತಸಂಘಟನೆಗಳ ಒಕ್ಕೂಟಗಳ ರಾಷ್ಟ್ರೀಯ ಸಂಚಾಲಕ, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರು ಪೋಷಕ ನಟರಾಗಿ (ನಾಯಕ ನಟನ ತಂದೆಯಾಗಿ) ನಟನೆ ಮಾಡುತ್ತಿರುವ `ಮಂಡ್ಯ ಸ್ಟಾರ್' ಚಲನಚಿತ್ರದ ಚಿತ್ರೀಕರಣವು ರೈಲ್ವೆನಿಲ್ದಾಣದ ಮೇಲ್ಸೇತುವೆ ಬಳಿ ಪಿಎಸ್‍ಎಸ್‍ಕೆ ಎದುರು ಭರದಿಂದ ನಡೆಯಿತು.
ಈವರೆಗೆ ನಿಜ ಜೀವನದಲ್ಲಿ ರೈತನಾಯಕನಾಗಿ ಹೋರಾಟ ನಡೆಸುತ್ತಿದ್ದ ರೈತನಾಯಕ, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರು ರೀಲು ಲೈಫ್‍ನಲ್ಲೂ ರೈತನಾಯಕನಾಗಿ ಚಳವಳಿ ನಡೆಸಿದ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳಲಾಯಿತು.
ಕಬ್ಬಿಗೆ ಬೆಲೆ ನಿಗದಿ ಮಾಡುವಂತೆ ಪುಟ್ಟಣ್ಣಯ್ಯ ಸಿನಿಮಾದ ಚಿತ್ರೀಕರಣದಲ್ಲಿ ಚಳವಳಿ ನಡೆಸಿದರು. ಈ ಸಂದರ್ಭದಲ್ಲಿ ನಿಜವಾಗಿ ಪ್ರತಿಭಟನೆ ನಡೆಯುವ ಮಾದರಿಯಲ್ಲಿಯೇ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಘೋಷಣೆಗಳನ್ನು ಮೊಳಗಿಸಲಾಯಿತು.
ಈ ವೇಳೆ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಆಗಿ ನಟಿಸಿದ ನಟ ಜೈಜಗದೀಶ್, ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡುತ್ತಿದ್ದ, ಹಾಗೂ ರೈತರ ಮೇಲೆ ಲಾಠಿಛಾರ್ಜ್ ಮಾಡಿದ ದೃಶ್ಯಾವಳಿಗಳನ್ನು ಚಿತ್ರೀಕರಿಸಿಕೊಳ್ಳಲಾಯಿತು.
ಮೈಸೂರಿನ ಪರ್ವ ಅವರು ನಿರ್ದೇಶಿಸುತ್ತಿರುವ ಈ `ಮಂಡ್ಯ ಸ್ಟಾರ್' ಎಂಬ ಹೆಸರಿನ ಚಲನಚಿತ್ರಕ್ಕೆ ಶಂಕರ್‍ಶಿವ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರಕಥೆಯನ್ನು ಆರ್.ವೈ.ವಿಕ್ರಮ್ ಬರೆದಿದ್ದು, ಸಂಭಾಷಣೆಯನ್ನು ಚಿತ್ರದ ನಾಯಕ ಲೋಕೇಶ್ ಅವರೇ ಸ್ವತಃ ಬರೆದಿದ್ದಾರೆ. ಛಾಯಾಗ್ರಾಹಕ ರಾಜರತ್ನಂ, ಸಂಕಲನ ಮತ್ತು ಸಂಗೀತ ಮನೋಜ್ ಶ್ರೀಲಂಕಾ ಮಾಡಿದ್ದಾರೆ. ಚಲನಚಿತ್ರದ ತಾರಾಬಳಗದಲ್ಲಿ ಲೋಕೇಶ್, ಅರ್ಚನಾ, ಜೈಜಗದೀಶ್, ಪದ್ಮಜರಾವ್, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಇದ್ದಾರೆ.
No comments:
Post a Comment