Monday, 20 October 2014

ಪಟಾಕಿಯಿಂದ ದೂರವಿದ್ದು ಸರಳವಾಗಿ ದೀಪಾವಳಿ ಆಚರಿಸಿ: ಡಾ.ಶಕುಂತಲಾಬಾಯಿ

ಪಟಾಕಿಯಿಂದ ದೂರವಿದ್ದು ಸರಳವಾಗಿ ದೀಪಾವಳಿ ಆಚರಿಸಿ: ಡಾ.ಶಕುಂತಲಾಬಾಯಿ
ಮಂಡ್ಯ: ಬೆಳಕಿನ ಹಬ್ಬ ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದರಿಂದ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಕ್ಕಳು ಪಟಾಕಿ ಸಿಡಿಸುವುದರಿಂದ ದೂರ ಉಳಿದು, ಬೆಳಕಿನ ಹಬ್ಬವನ್ನು ಸರಳವಾಗಿ ಸಂಭ್ರಮದಿಂದ ಆಚರಿಸುವಂತೆ ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಡಾ.ಶಕುಂತಲಾ ಬಾಯಿ ಸಲಹೆ ನೀಡಿದರು.
ಪರಿಸರ ರೂರಲ್ ಡೆವಲಪ್‍ಮೆಂಟ್ ಸೊಸೈಟಿ ಹಾಗೂ ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ 'ಪಟಾಕಿ ಬೇಡ- ಬೆಳಕು ಬೇಕು' ಘೋಷಣೆಯೊಂದಿಗೆ ನಗರದ ಡ್ಯಾಪೆÇೀಡಿಲ್ಸ್ ಶಾಲೆಯಲ್ಲಿ ಆಯೋಜಿಸಿದ್ದ ಬೀದಿ ನಾಟಕ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷ ಪಟಾಕಿ ಹಚ್ಚುವುದರಿಂದ ನೂರಾರು ಮಂದಿ ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. 2011ನೇ ಸಾಲಿನಲ್ಲಿ ಬೆಂಗಳೂರು ನಗರವೊಂದರಲ್ಲೇ 140 ಮಂದಿ ಪಟಾಕಿ ಸಿಡಿಸುವುದರಿಂದ ಗಾಯಗೊಂಡಿದ್ದರು. ಕಳೆದ ದಶಕದಲ್ಲಿ ಬೆಂಗಳೂರು ನಗರದಲ್ಲಿ ಸುಮಾರು 1200 ಮಂದಿ ಗಾಯಗೊಂಡಿದ್ದು, ಶೇ.70ರಷ್ಟು ಕಣ್ಣಿನ ತೊಂದರೆಗೆ ಒಳಗಾಗಿದ್ದಾರೆ ಎಂದು ವಿವರಿಸಿದರು.
ಲಯನ್ಸ್ ವಲಯಾಧ್ಯಕ್ಷ, ಪರಿಸರ ಸಂಸ್ಥೆ ಗೌರವಾಧ್ಯಕ್ಷ ಕೆ.ಟಿ.ಹನುಮಂತು ಮಾತನಾಡಿ, ಪಟಾಕಿ ತಯಾರಿಸುವ ಘಟಕಗಳನ್ನು ಹೊಂದಿರುವ ಶಿವಕಾಶಿಯಲ್ಲಿ ಕಳೆದ 12 ವರ್ಷಗಳಲ್ಲಿ ಪಟಾಕಿ ಅವಘಡಗಳಲ್ಲಿ ಸುಮಾರು 237 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಬ್ಬದ ಸಂದರ್ಭದಲ್ಲಿ ವಾಯು ಹಾಗೂ ಶಬ್ದ ಮಾಲಿನ್ಯದಿಂದ ಶೇ.10ರಿಂದ 15ರಷ್ಟು ಪರಿಸರ ಮಾಲಿನ್ಯ ಉಂಟಾಗುತ್ತಿದೆ ಎಂದರು.
ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು. ಹಬ್ಬದಲ್ಲಿ ಬೆಳಕು ಪ್ರಧಾನವಾಗಬೇಕು. ಪಟಾಕಿಗಳನ್ನು ಖರೀದಿಸುವ ಮುನ್ನ ಲೇಬಲ್ ಪರಿಶೀಲಿಸಿ, ಗುಣಮಟ್ಟದ ಬಗ್ಗೆ ಖಾತಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ. ಯೋಗೇಶ್ ಮಾತನಾಡಿ, ಪಟಾಕಿಗಳು ಹೊರಸೂಸುವ ವಿಷಯುಕ್ತ ಅನಿಲ ಆರೋಗ್ಯ ಸಂಬಂಧಿತ ಕಾಯಿಲೆ ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಪಟಾಕಿ ಸಿಡಿಸಿದ ನಂತರ ಉಂಟಾಗುವ ಘನ ತ್ಯಾಜ್ಯದ ಹೆಚ್ಚಳದಿಂದ ನಗರದಲ್ಲಿ ಶುಚಿತ್ವದ ಸಮಸ್ಯೆ ಉಲ್ಬಣವಾಗುತ್ತಿದೆ. ಆದ್ದರಿಂದ ಸಾಧ್ಯವಾದಷ್ಟು ಪಟಾಕಿ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು.
ಶಬ್ದ ಮತ್ತು ಮಾಯು ಮಾಲಿನ್ಯಗಳಲ್ಲಿ ವೈಪರಿತ್ಯ ಉಂಟಾಗುತ್ತದೆ. ಶಾಶ್ವತ ಕುರುಡು ಅಥವಾ ಕಿವುಡು ಉಂಟಾಗುತ್ತದೆ. ಅಸ್ವಸ್ಥರು, ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರ ಆರೋಗ್ಯದಲ್ಲಿ ಏರುಪೇರಾಗಲಿದೆ. ಗಿಡ- ಮರ, ಪ್ರಾಣಿ- ಪಕ್ಷಿಗಳಿಗೆ ಸಂಚಕಾರವಾಗಲಿದೆ. ಬೆಂಕಿಯ ಅವಘಡಗಳಿಗೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು.
ಕ್ಯಾತುಂಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ರೀಧರ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಶಿಕ್ಷಕಿ ನಳಿನಾ, ಸಹಾಯಕ ಪರಿಸರ ಅಧಿಕಾರಿ ಪಲ್ಲವಿ ಇತರರು ಭಾಗವಹಿಸಿದ್ದರು.

No comments:

Post a Comment