Thursday, 23 October 2014

ವರದಿ:ಆರ್.ಶ್ರೀನಿವಾಸ್,ಕೆ.ಆರ್.ಪೇಟೆ.
ಕೆ.ಆರ್.ಪೇಟೆ.ಅ.23- ರೈತರು ಕಷ್ಟಪಟ್ಟು ಬೆಳೆದ ಕೃಷಿ ಉತ್ಪನ್ನಗಳಿಗೆ ತಾವೇ ಬೆಲೆ ನಿಗಧಿಪಡಿಸುವಂತಾಗಬೇಕು. ಕೈಗಾರಿಕೋದ್ಯಮಿಗಳು ತಮ್ಮ ಉತ್ಪನ್ನಗಳಿಗೆ ತಮ್ಮ ಆದಾಯ ಸೇರಿಸಿ ಹೇಗೆ ಬೆಲೆ ನಿಗಧಿ ಮಾಡಿ ಮಾರುಕಟ್ಟೆಗೆ ಕಳುಹಿಸುತ್ತಾರೆ ಅದೇ ಮಾದರಿಯಲ್ಲಿ ರೈತರೂ ಬೆಲೆ ನಿಗಧಿ ಮಾಡುವ ಅವಕಾಶವನ್ನು ಸರ್ಕಾರ ಕಲ್ಪಿಸಿಕೊಡಬೇಕು ಆದರೆ ಇಂದು ದಳ್ಳಾಳಿಗಳು ಬೆಲೆ ನಿಗಧಿ ಮಾಡಿ ರೈತರನ್ನು ಶೋಷಣೆ ಮಾಡುತ್ತಿದ್ದಾರೆ ಇದು ರೈತ ಸಮುದಾಯಕ್ಕೆ ನಾವು ಮಾಡುತ್ತಿರುವ ಅನ್ಯಾಯವಾಗಿದೆ ಎಂದು ರೈತ ನಾಯಕ ಹಾಗೂ ಪಾಂಡವಪುರ ಕ್ಷೇತ್ರದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದರು.
ಅವರು ತಾಲೂಕಿನ ಅಟ್ಟುಪ್ಪೆ ಗ್ರಾಮದಲ್ಲಿ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕೆ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ  ಭಾಗವಹಿಸಿ ಪ್ರಸ್ತುತ ರೈತರ ಸಮಸ್ಯೆಗಳನ್ನು ಕುರಿತು ಪ್ರಧಾನ ಉಪನ್ಯಾಸ ನೀಡಿದರು.
ಮಹಾತ್ಮಾ ಗಾಂಧೀಜಿಯವರು ಹಳ್ಳಿಗಳು ಅಭಿವೃದ್ಧಿಯಾಗಬೇಕು. ರೈತನ ಅಭಿವೃದ್ಧಿಯಾಗಬೇಕು ಆಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದ್ದರು. ಇದು ಈಡೇರಬೇಕಾದರೆ ಎನ್.ಎಸ್.ಎಸ್. ಯೋಜನೆಯ ಮೂಲಕ ದೇಶದಲ್ಲಿನ ಕೊಟ್ಯಾಂತರ ಯುವಶಕ್ತಿಯ ಬಳಕೆಯಾಗಬೇಕು. ದೇಶದಲ್ಲಿ ರೈತನ ಬದುಕು ಹಸನಾಗದ ಹೊರತು ದೇಶದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ರೈತ ಬೆಳೆದ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗಧಿಯಾಗಬೇಕು ಎಂದು ಆಶಯ ಹೊಂದಿದ್ದರು.
ರೈತರು  ತಮ್ಮ ಜಮೀನಿಗೆ ಯಥೇಚ್ಚವಾಗಿ ರಸಗೊಬ್ಬರ ಬಳಕೆ ಮಾಡುತ್ತಿದ್ದಾರೆ ಇದರಿಂದ ಭೂಮಿಯು ತನ್ನ ಸಾರವನ್ನು ಕಳೆದುಕೊಂಡು ಬಂಜರು ಭೂಮಿಯಾಗಿ ಮಾರ್ಪಡುತ್ತಿದೆ. ಇದರಿಂದಾಗಿ ರೈತನಿಗೆ ಇಳುವರಿ ಕಡಿಮೆಯಾಗಿ ದೇಶದಲ್ಲಿ ಆಹಾರದ ಉತ್ಪಾದನೆ  ದಿನದಿಂದ ದಿನಕ್ಕೆ ಕುಸಿಯುತ್ತಿದೆ.   ಇದೇ ರೀತಿ ರಸಗೊಬ್ಬರ ಬಳಕೆ ಮುಂದುವರೆದರೆ ಯಾವುದೇ ಭೂಮಿಯಲ್ಲಿ ಯಾವುದೇ ಬೆಳೆಯನ್ನು ಸಾಧ್ಯವಾಗುವುದಿಲ್ಲ. ಪರಿಣಾಮ ದೇಶದಲ್ಲಿ ಆಹಾರದ ಕೊರತೆ ಗಂಭೀರ ಕಾಡಲಿದೆ. ಆದ್ದರಿಂದ ದೇಶದ ರೈತರು ಸಾವಯವ ಗೊಬ್ಬರ ಬಳಕೆಯನ್ನು ಮಾಡಬೇಕು  ಈ ಮೂಲಕ ಭೂಮಿಯು ಬಂಜರಾಗುವುದನ್ನು ತಪ್ಪಿಸಬೇಕು ಎಂದು ಪುಟ್ಟಣ್ಣಯ್ಯ ರೈತ ಬಾಂಧವರಲ್ಲಿ ಮನವಿ ಮಾಡಿದರು.
ಗ್ರಾಮದಲ್ಲಿ ಹೆಣ್ಣು ಮಕ್ಕಳು ಶ್ರಮದಾನ ಕೈಗೊಂಡು ಗ್ರಾಮದ ಅಭಿವೃದ್ಧಿ ದುಡಿಯುತ್ತಿದ್ದಾರೆ ಇದನ್ನು ಗ್ರಾಮಸ್ಥರಯ ನೋಡಿಕೊಂಡು ಕುಳಿತುಕೊಳ್ಳದೇ ಅವರಿಗೆ ಹೀಗೆ ಹಾಗೆ ಮಾಡಿ ಎಂದು ಸಲಹೆ ನೀಡದೇ ಅವರೊಂದಿಗೆ ನೀವು ಸಹ ಶ್ರಮದಾನ ಮಾಡಿ ತಮ್ಮ ಗ್ರಾಮದ ಸ್ವಚ್ಚತೆಗೆ ಮುಂದಾಗಬೇಕು ಎಂದು ಹೇಳಿದರು. ಸಾರ್ವಜನರಿಕರು ಎಲ್ಲದಕ್ಕೂ ಸರ್ಕಾರವನ್ನೇ ಅವಲಂಭಿಸುವುದು ಸರಿಯಲ್ಲ. ನಮ್ಮ ಗ್ರಾಮದ ಅಭಿವೃದ್ಧಿ ನೀವೇ  ದುಡಿಯಬೇಕು. ಚರಂಡಿಯನ್ನು  ಸ್ವಚ್ಚಗೊಳಿಸಬೇಕು. ಶೌಚಾಲಯವನ್ನು ಪ್ರತಿಯೊಬ್ಬರೂ ನಿರ್ಮಿಸಿಕೊಳ್ಳಬೇಕು. ತಮ್ಮೂರಿನ ಶಾಲೆಯ ಅಭಿವೃದ್ಧಿಗೆ ಮುಂದಾಗಬೇಕು.  ಆರೋಗ್ಯ ನಮ್ಮ ಕೈಯಲ್ಲಿದೆ. ನಾಣ್ಣೂಡಿಯನ್ನು ಅರ್ಥಮಾಡಿಕೊಂಡು ನಮ್ಮ ಸುತ್ತಮುತ್ತಲ ಪರಿಸರವನ್ನು ನಾವು ಶುಚಿಯಾಗಿಟ್ಟುಕೊಂಡರೆ ರೋಗ ರುಜಿನಗಳಿಂದ ದೂರವಿರಬಹುದು ಎಂದು ಪುಟ್ಟಣ್ಣಯ್ಯ ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಹೆಚ್.ಟಿ.ಹರೀಶ್ ಆರೋಗ್ಯ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಕುರಿತು ಮಾಹಿತಿ ನೀಡಿದರು. ಜಿಲ್ಲಾ ರೈತ ಸಂಘದ ಅಧ್ಯಕ್ಷ ಎಂ.ವಿ.ರಾಜೇಗೌಡ, ತೆಂಡೇಕೆರೆ ಪಶುವೈದ್ಯಾಧಿಕಾರಿ ಡಾ.ಸಿ.ಜೆ.ಕೃಷ್ಣೇಗೌಡ, ಶಿಕ್ಷಕರಾದ ಎನ್.ಎಸ್.ಮಹೇಶ್, ಕೆ.ಪಿ.ಬೋರೇಗೌಡ, ಉಪನ್ಯಾಸಕ ರಾಮಕೃಷ್ಣೇಗೌಡ, ಎನ್‍ಎಸ್‍ಎಸ್ ಅಧಿಕಾರಿ ಡಿ.ಟಿ.ಪುಲಿಗೇರಯ್ಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಸ್ವಾಮಿಗೌಡ, ಗ್ರಾ.ಪಂ.ಮಾಜಿ ಸದಸ್ಯರಾದ ಎ.ಬಿ.ಶಂಕರೇಗೌಡ, ಕೆಂಚೇಗೌಡ, ನಾಗೇಶ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಭಾಗ್ಯಮ್ಮರಂಗಸ್ವಾಮಿ  ಮತ್ತಿತರರು ಮುಖ್ಯ ಅತಿಥಿಗಳಾಗಿದ್ದರು. ಇದೇ ಸಂದರ್ಭದಲ್ಲಿ ತೆಂಡೇಕೆರೆ ಪಶುವೈದ್ಯಾಧಿಕಾರಿ ಡಾ.ಸಿ.ಜೆ.ಕೃಷ್ಣೇಗೌಡ ಅವರ ನೇತೃತ್ವದಲ್ಲಿ ಗ್ರಾಮದ ಬರಡು ರಾಸುಗಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆಯನ್ನು ನೀಡಲಾಯಿತು.
====================================

No comments:

Post a Comment