Friday 6 March 2015



ಮಂಡ್ಯದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯ ‘ಜಿಲ್ಲಾ ಮಟ್ಟದ ಶಿಶು ಮರಣ ವಿಚಾರಣಾ ಸಮನ್ವಯ ಸಮಿತಿ ಸಭೆ’ ನಡೆಯಿತು. ಜಿಪಂ ಸಿಇಒ ರೋಹಿಣಿ ಸಿಂಧೂರಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಪಿ. ಮಂಜೇಗೌಡ, ಮಿಮ್ಸ್ ಅಧೀಕ್ಷಕ ಡಾ.ಕೆ.ಎಂ. ಶಿವಕುಮಾರ್, ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿ ಡಾ. ಮೋಹನ್ ಇದ್ದಾರೆ.

2015ರ ‘ಫೆಬ್ರುವರಿ’ ತಿಂಗಳಲ್ಲಿ ತಾಲ್ಲೂಕುವಾರು ಮೃತಪಟ್ಟ ಮಕ್ಕಳ ಸಂಖ್ಯೆ
ತಾಲ್ಲೂಕು ಗಂಡು ಹೆಣ್ಣು ಒಟ್ಟು
ಸರ್ಕಾರಿ ಆಸ್ಪತ್ರೆ ಮಂಡ್ಯ 08 05 13
ಮಂಡ್ಯ 01 02 03
ಮದ್ದೂರು 03 02 05
ಮಳವಳ್ಳಿ 03 00 03
ಪಾಂಡವಪುರ 00 05 05
ಶ್ರೀರಂಗಪಟ್ಟಣ 01 01 02
ಕೃಷ್ಣರಾಜಪೇಟೆ 03 00 03
ನಾಗಮಂಗಲ 00 01 01
ನರ್ಸಿಂಗ್ ಹೋಂ 01 00 01
ಒಟ್ಟು 20 16 36

ಮಂಡ್ಯ: ಜಿಲ್ಲೆಯಲ್ಲಿ ನವಜಾತ ಶಿಶುಗಳು ಮೃತಪಟ್ಟ ಸಂದರ್ಭಗಳಲ್ಲಿ ಪೋಷಕರು ಕಡ್ಡಾಯವಾಗಿ ಆರೋಗ್ಯ ಇಲಾಖೆ ಗಮನಕ್ಕೆ ಈ ವಿಷಯವನ್ನು ತರಬೇಕು. ಇಲ್ಲದಿದ್ದರೆ, ಪೋಷಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ರೋಹಿಣಿ ಸಿಂಧೂರಿ ಎಚ್ಚರಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಜರುಗಿದ ‘ಜಿಲ್ಲಾ ಮಟ್ಟದ ಶಿಶು ಮರಣ ವಿಚರಣಾ ಸಮನ್ವಯ ಸಮಿತಿ’ ಸಭೆಯಲ್ಲಿ ಈ ವಿಷಯವನ್ನು ತಿಳಿಸಿದರು.
ನವಜಾತ ಶಿಶುಗಳು ಮೃತಪಟ್ಟ ತಕ್ಷಣ ಆಶಾ ಮತ್ತು ಎ.ಎನ್.ಎಂ. ಕಾರ್ಯಕರ್ತೆಯರ ಗಮನಕ್ಕೆ ಪೋಷಕರು ತರಬೇಕು. ಇದು, ಪೋಷಕರ ಕರ್ತವ್ಯ ಕೂಡ. ಹಾಗೇ, ಈ ಬಗ್ಗೆ ಆಸ್ಪತ್ರೆಗೆ ಮಗುವನ್ನು ತರುವಂತೆ ಪೋಷಕರಿಗೆ ತಿಳಿವಳಿಕೆಯನ್ನು ಆಶಾ ಮತ್ತು ಎಎನ್‍ಎಂ ಕಾರ್ಯಕರ್ತೆಯರು ಮಾಡಬೇಕು ಎಂದರು.
ಇತ್ತೀಚೆಗೆ ಜಿಲ್ಲೆಯಲ್ಲಿ ಎರಡು ಪ್ರಕರಣಗಳು ನಡೆದಿದ್ದು, ಅದು ವರದಿಯಾಗಿರಲಿಲ್ಲ. ಇವು ಸಭೆಯ ಸಂದರ್ಭದಲ್ಲಿ ಚರ್ಚೆಗೆ ಬಂದವು. ಇಂತಹ ಪ್ರಕರಣಗಳು ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವೈದ್ಯಾಧಿಕಾರಿಗಳಿಗೆ ಸಲಹೆ ನೀಡಿದರು.
ಕಳೆದ ಒಂಬತ್ತು ತಿಂಗಳಿನಿಂದಲೂ ಈ ಬಗ್ಗೆ ಮಾಹಿತಿ ನೀಡುತ್ತಾ ಬಂದಿದ್ದರೂ, ಎರಡು ಪ್ರಕರಣಗಳು ವರದಿಯಾಗಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಕಲಿ ವೈದ್ಯರ ವಿರುದ್ಧ ಕ್ರಮ: ಸೂಕ್ತ ಪ್ರಮಾಣಪತ್ರ ಇಲ್ಲದೆ ವೈದ್ಯಕೀಯ ಸೇವೆ ನೀಡುತ್ತಿದ್ದ ನಾಲ್ವರ ವಿರುದ್ಧ ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಸ್ಮೆಂಟ್ ಆಕ್ಟ್ (ಕೆ.ಪಿ.ಎಂ.ಇ)-2007 ಪ್ರಕಾರ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಹಾಗೇ, ಇದೇ ರೀತಿಯ ಸುಮಾರು 13 ಪ್ರಕರಣಗಳು ನ್ಯಾಯಾಲಯದಲ್ಲಿದ್ದು, ಈ ಕ್ಲಿನಿಕ್‍ಗಳನ್ನು ಮುಚ್ಚಿಸಲಾಗಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು.
ನಕಲಿ ವೈದ್ಯರನ್ನು ಪತ್ತೆಹಚ್ಚಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆರೋಗ್ಯ ಮತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿಗಳಿಗೆ ಸಿಇಒ ರೋಹಿಣಿ ಸಿಂಧೂರಿ ಎಚ್ಚರಿಕೆ ನೀಡಿದರು.
ಜಿಲ್ಲಾ ವೈದ್ಯಾಧಿಕಾರಿ ಡಾ.ಎಚ್.ಪಿ. ಮಂಚೇಗೌಡ, ಮಿಮ್ಸ್ ಅಧೀಕ್ಷಕ ಡಾ.ಕೆ.ಎಂ. ಶಿವಕುಮಾರ್, ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿ ಡಾ. ಮೋಹನ್, ಡಾ.ಕೀರ್ತಿ ಬಿ.ಜೆ. ಜಿಲ್ಲಾ ಆಯುಷ್ ಅಧಿಕಾರಿ ಸೀತಾಲಕ್ಷ್ಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಪಿ.ಮಾರುತಿ ಸೇರಿದಂತೆ ಹಲವರು ಹಾಜರಿದ್ದರು.

ಮಂಡ್ಯ: ರಾಜ್ಯದಾದ್ಯಂತ ಎಚ್1ಎನ್1 ರೋಗ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಓ ರೋಹಿಣಿ ಸಿಂಧೂರಿ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ‘ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ’ ಸಭೆಯಲ್ಲಿ ವೈದ್ಯಾಧಿಕಾರಿಗಳಿಗೆ ಈ ಸೂಚನೆ ನೀಡಿದರು. 
ಜಿಲ್ಲೆಯಲ್ಲಿ ಈವರೆವಿಗೂ ಒಟ್ಟು 10 ಎಚ್1ಎನ್1 ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಸದ್ಯ, ಸೋಂಕು ಪೀಡಿತ ಎಂಟು ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ. ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಪಿ. ಮಾರುತಿ ವಿವರಿಸಿದರು.
ಜನಸಂದಣಿ ಸ್ಥಳಗಳು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಮನೆಮನೆಗಳಿಗೆ ಕರಪತ್ರ ಹಂಚಿ ಎಚ್1ಎನ್1 ಸೋಂಕಿನ ಬಗೆಗೆ ಅರಿವು ಮೂಡಿಸಲಾಗುತ್ತಿದೆ. ಔಷಧ ಅಗತ್ಯ ಪ್ರಮಾಣದಲ್ಲಿ ದಾಸ್ತಾನಿದೆ.  ಸಾರ್ವಜನಿಕರು ಸಹಾ ಈ ಬಗ್ಗೆ ಎಚ್ಚರದಿಂದ ಇರಬೇಕು. ಶೀತ, ಜ್ವರ ಬಂದರೆ ಉದಾಸೀನ ಮಾಡದೇ ತಕ್ಷಣವೇ ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕು ಎಂದು ಡಾ. ಪಿ. ಮಾರುತಿ ಮನವಿ ಮಾಡಿದರು.




No comments:

Post a Comment