Wednesday 11 March 2015

ಕೃಷ್ಣರಾಜಪೇಟೆ. ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ವೈದ್ಯರು ನಗುಮೊಗದಿಂದ ಉತ್ತಮವಾದ ಸೇವೆಯನ್ನು ನೀಡಬೇಕು ಎಂದು ಶಾಸಕ ನಾರಾಯಣಗೌಡ ಮನವಿ ಮಾಡಿದರು.
ಅವರು ಇಂದು ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಮ್ಮಲ್ಲಿ ಹಣವಿಲ್ಲದ ಬಡ ಜನರು ರೋಗ ರುಜಿನಗಳಿಂದ ಮುಕ್ತರಾಗಿ ಒಳ್ಳೆಯ ಗುಣಮಟ್ಟದ ಚಿಕಿತ್ಸೆಯನ್ನು ಪಡೆಯುವ ಸಲುವಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಾರೆ. ಇಂತಹ ಸಂದರ್ಭದಲ್ಲಿ ವೈದ್ಯರು ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ ಇರುವುದರಲ್ಲಿ ಉತ್ತಮವಾದ ಸೇವೆಯನ್ನು ದೊರಕಿಸಿಕೊಡಲು ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡಿ ಬಡ ಜನರಸೇವೆಯಲ್ಲಿ ಭಗವಂತನನ್ನು ಕಾಣಲು ಪ್ರಯತ್ನಿಸಬೇಕು ಎಂದು ಕಿವಿ ಮಾತು ಹೇಳಿದರು.
ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಇರುವುದರಲ್ಲಿ ಉತ್ತಮವಾದ ಸೇವೆಯು ಸಿಗುತ್ತಿರುವ ಬಗ್ಗೆ ನನಗೆ ಮಾಹಿತಿ ಬರುತ್ತಿದೆ. ಆದರೆ ವೈದ್ಯರುಗಳ ನಡುವೆ ಹೊಂದಾಣಿಕೆಯ ಕೊರತೆಯಿರುವುದು ಎದ್ದು ಕಾಣುತ್ತಿದೆ. ಅನಾರೋಗ್ಯದಿಂದ ನೊಂದು ಬಳಲುತ್ತಿರುವ ರೋಗಿಯು ಗುಣಮುಖನಾಗಿ ವೈದ್ಯರನ್ನು ಹರಸುವಾಗ ಸಿಗುವ ಆನಂದವು ಕೋಟಿ ರೂಪಾಯಿ ಹಣಕೊಟ್ಟರೂ ದೊರೆಯುವುದಿಲ್ಲ ಎಂಬ ಸತ್ಯವನ್ನು ವೈದ್ಯರು ಕೇವಲ ಹಣಕ್ಕಾಗಿ ಚಿಕಿತ್ಸೆಯನ್ನು ನೀಡದೇ ಮಾವನತೆ ಹಾಗೂ ಹೃದಯ ವೈಶಾಲ್ಯತೆಯನ್ನು ಅಳವಡಿಸಿಕೊಂಡು ಉತ್ತಮವಾದ ಸೇವೆಯನ್ನು ನೀಡಲು ಪ್ರಯತ್ನಿಸಬೇಕು ಎಂದು ಮನವಿ ಮಾಡಿದ ಶಾಸಕರು ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಯು ನೂರು ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿದ ಮೇಲೆ ಹೈಟೆಕ್ ಯಂತ್ರೋಪಕರಣಗಳು ನಮ್ಮ ಆಸ್ಪತ್ರೆಗೆ ಬಂದಿಗೆ ಬ್ಲಡ್ ಅನಲೈಸರ್ ಯಂತ್ರ, ಇಸಿಜಿ, ಹೈಟೆಕ್ ಎಕ್ಸರೇ ಯಂತ್ರ ಸೇರಿದಂತೆ ಎಲ್ಲಾ ಬಗೆಯ ಯಂತ್ರೋಫಕರಣಗಳು ನಮ್ಮಲ್ಲಿಯೇ ಇರುವುದರಿಂದ ಖಾಸಗೀ ಆಸ್ಪತ್ರೆಗಳಲ್ಲಿ ದೊರೆಯುವಂತಹ ಹೈಟೆಕ್ ಚಿಕಿತ್ಸೆಯು ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವಂತೆ ಮಾಡಿ ಜನಮೆಚ್ಚಿದ ವೈದ್ಯರಾಗಬೇಕು ಎಂದು ಶಾಸಕರು ಮನವಿ ಮಾಡಿದರು.
ಸಭೆಯಲ್ಲಿ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಡಾ.ಜಯಶೇಖರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕೆಂಚಪ್ಪ, ಪಟ್ಟಣ ಪೋಲಿಸ್ ಠಾಣೆಯ ಎಎಸ್‍ಐ ಶಿವಣ್ಣ, ಪುರಸಭೆಯ ಮುಖ್ಯಾಧಿಕಾರಿ ಬಿ.ಎಸ್.ಕೆಂಪೇಗೌಡ, ಸಮಿತಿಯ ಸದಸ್ಯರಾದ ಕೆ.ಯೂನಸ್‍ಖಾನ್, ರಾಮದಾಸ್, ವೆಂಕಟರಮಣಶೆಟ್ಟಿ, ಶೇಷಾಧ್ರೀ, ಲಕ್ಷ್ಮೀಪುರ ಜಗಧೀಶ್, ಡಾ,ರವೀಂದ್ರ, ಡಾ.ಅಖಿಲಾ, ಡಾ.ರವಿ ಮತ್ತಿತರರು ಭಾಗವಹಿಸಿದ್ದರು. ನೇತ್ರ ಪರೀಕ್ಷಕರಾದ ಲತೇಶ್‍ಕುಮಾರ್ ಸ್ವಾಗತಿಸಿದರು, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಜಯಶೇಖರ್ ವಂದಿಸಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಮು ಕಾರ್ಯಕ್ರಮ ನಿರೂಪಿಸಿದರು.

ಕೃಷ್ಣರಾಜಪೇಟೆ. ಪಟ್ಟಣದ ಬ್ರಾಹ್ಮಣ ಸಮಾಜದ ಮುಖಂಡರು ಹಾಗೂ ಸಮಾಜ ಸೇವಕಿಯಾಗಿದ್ದಂತಹ ನಾಡಿಗ್ ವಿಜಯಲಕ್ಷ್ಮೀ(75) ಅವರು ಇಂದು ಅನಾರೋಗ್ಯದಿಂದ ಮೃತರಾದರು. ಒಬ್ಬ ಪುತ್ರ ರಘುರಾಮನಾಡಿಗ್ ಹಾಗೂ ಗಾಯಕಿಯರಾದ ನಾಡಿಗ್ ಸಹೋದರಿಯರು ಸೇರಿದಂತೆ ನೂರಾರು ಜನ ಕುಟುಂಬದ ಸದಸ್ಯರನ್ನು ಅಗಲಿದ್ದಾರೆ.
ತಾಲೂಕಿನಲ್ಲಿ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿ ಸಾಮಾಜಿಕ ಪಿಡುಗುಗಳು ಹಾಗೂ ಮೌಢ್ಯಗಳ ವಿರುದ್ಧ ಹೋರಾಟ ನಡೆಸಿದ್ದ ವಿಜಯಲಕ್ಷ್ಮೀನಾಡಿಗ್ ಅವರ ಅಕಾಲಿಕ ನಿಧನಕ್ಕೆ ಶಾಸಕ ನಾರಾಯಣಗೌಡ, ಮಾಜಿಶಾಸಕ ಕೆ.ಬಿ.ಚಂದ್ರಶೇಖರ್, ಮಾಜಿಸ್ಪೀಕರ್ ಕೃಷ್ಣ, ಮಾಜಿಶಾಸಕರಾದ ಬಿ.ಪ್ರಕಾಶ್, ಎಂ.ಪುಟ್ಟಸ್ವಾಮಿಗೌಡ, ಪುರಸಭೆ ಅಧ್ಯಕ್ಷ ಕೆ.ಗೌಸ್‍ಖಾನ್, ಸದಸ್ಯರಾದ ಕೆ.ಎಸ್.ಸಂತೋಷ್, ಕೆ.ಎನ್.ಕೃಷ್ಣೇಗೌಡ, ಹಿರಿಯ ನಾಗರಿಕರಾದ ಕೆ.ಯೂನಸ್‍ಖಾನ್, ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರಶಿವಾಚಾರ್ಯ ಸ್ವಾಮೀಜಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

No comments:

Post a Comment