Tuesday 3 March 2015

ಮೈಸೂರು
ಕಳೆದ ಒಂದೂವರೆ ತಿಂಗಳಿಂದ ಸ್ಥಗಿತಗೊಂಡಿರುವ ಫಾಲ್ಕಾನ್ ಟೈರ್ಸ್ ಕಾರ್ಖಾನೆಯನ್ನು ವಶಕ್ಕೆ ಪಡೆದು ಪುನಾರಂಭಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಫಾಲ್ಕಾನ್ ಟೈರ್ಸ್ ಎಂಪ್ಲಾಯೀಸ್ ಯೂನಿಯನ್ ಸದಸ್ಯರು ಮಂಗಳವಾರ ನಗರದಲ್ಲಿ ಬೈಕ್ ರ್ಯಾಲಿ ಹಾಗೂ ಕಾಲ್ನಡಿಗೆ ನಡೆಸಿದರು.
ನಗರದ ರಾಮಸ್ವಾಮಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿದ ಸದಸ್ಯರು, ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು.
ಮೈಸೂರಿನ ಪ್ರತಿಷ್ಠಿತ ಕಾರ್ಖಾನೆ ಎಂಬ ಹೆಗ್ಗಳಿಕೆ ಪಡೆದಿದ್ದ ಫಾಲ್ಕಾನ್ ಟೈರ್ಸ್ ಇತ್ತೀಚಿನ ದಿನಗಳಲ್ಲಿ ಮುಳುಗುವ ಹಂತ ತಲುಪಿರುವುದು ದುರದೃಷ್ಟಕರ. ಕಂಪನಿಯನ್ನು ವಹಿಸಿಕೊಂಡು ಕಾರ್ಖಾನೆಯನನು ವಿಸ್ತರಿಸುವ ನಾಟಕವಾಡಿದ ಮಾಲೀಕರು, ವಿವಿಧ ಬ್ಯಾಂಕ್‍ಗಳಿಂದ ಅಗತ್ಯಕ್ಕಿಂತ ಹೆಚ್ಚು ಹಣ ಸಾಲ ಪಡೆದು ಅದರ ಹೊರೆಯನ್ನು ಕಾರ್ಖಾನೆ ಮೇಲೆ ವಹಿಸಿದ್ದಾರೆ. ಕಂಪೆನಿಯ ಮೂಲ ಬಂಡವಾಳ, ಆದಾಯ ಮತ್ತು ಬ್ಯಾಂಕ್ ಸಾಲಗಳಿಂದ ಪಡೆದ ಹಣವನ್ನು ಅನ್ಯ ಕಾರಣಕ್ಕೆ ಬಳಕೆ ಮಾಡಿದ್ದರಿಂದ ಕಾರ್ಖಾನೆ ಸ್ಥಗಿತಗೊಂಡಿದೆ ಎಂದು ಆರೋಪಿಸಿದರು.
ಕಳೆದ 40 ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಕಾರ್ಖಾನೆಯಲ್ಲಿ ನಿತ್ಯ 34, 000 ಟೈರುಗಳು, 18,000 ಟ್ಯೂಬುಗಳನ್ನು ತಯಾರಿಸುತ್ತಿತ್ತು. ತಿಂಗಳಿಗೆ 1,200 ಕೋಟಿ ವಹಿವಾಟು ನಡೆಯುತ್ತಿತ್ತು. 70 ರಿಂದ 100 ಕೋಟಿ ಆದಾಯ ತರುವ ಕಂಪೆನಿ ಇದಾಗಿತ್ತು. ಎಲ್ಲಕ್ಕೂ ಮಿಗಿಲಾಗಿ ಕಾರ್ಖಾನೆಯ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಇದೆ. ಹೀಗಿದ್ದರೂ ಒಂದೂವರೆ ವರ್ಷದಿಂದ ಹಂತ ಹಂತವಾಗಿ ಉತ್ಪನ್ನವನ್ನು ಉದ್ದೇಶಪೂರ್ವಕವಾಗಿ ಕ್ರಮೇಣ ಕಡಿಮೆಗೊಳಿಸಲಾಗಿದೆ. ಧನದಾಹಿ ಮಾಲೀಕರು ಕಂಪೆನಿ ವಿಸ್ತಾರಕ್ಕೆ ಪಡೆದ ಸಾಲ, ಕಂಪೆನಿ ಆದಾಯವನ್ನು ರಿಯಲ್ ಎಸ್ಟೇಟ್‍ಗೆ ಬಳಕೆ ಮಾಡಿದ್ದರಿಂದ ಕಳೆದ ಒಂದೂವರೆ ತಿಂಗಳಿನಿಂದ ಕಾರ್ಖಾನೆ ಮುಚ್ಚಲಾಗಿದೆ. ಇದರಿಂದ 2500 ಖಾಯಂ ಕಾರ್ಮಿಕರು ಹಾಗೂ ಅವರನ್ನು ಅವಲಂಬಿಸಿರುವ ಕುಟುಂಬ ಬೀದಿಗೆ ಬೀಳುವಂತಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ ಕಂಪೆನಿಯನ್ನು ನಡೆಸುವುದಲ್ಲದೆ, ಬಾಕಿ ವೇತನ, ಕಾರ್ಮಿಕರಿಗೆ ನೀಡಬೇಕಾದ ಇತರ ಸೌಲಭ್ಯಗಳನ್ನು ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಯೂನಿಯನ್ ಅಧ್ಯಕ್ಷ ಡಿ.ವಿ. ದೇವರಾಜು, ಸಂಘದ ಪದಾಧಿಕಾರಿಗಳಾದ ಬಿ. ರವೀಂದ್ರ, ವಿ. ಕುಮಾರ್, ಲಕ್ಷ್ಮೀನಾರಾಯಣ, ನಂಜುಂಡಸ್ವಾಮಿ ಸೇರಿದಂತೆ ನೂರಾರು ಮಂದಿ ಭಾಗಹಿಸಿದ್ದರು.
--------------------------------


No comments:

Post a Comment