Saturday 14 March 2015

ರಾಜ್ಯಪಾಲರಿಂದ ವೈದ್ಯಕೀಯ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿಗೆ ಪದಕ ಪ್ರದಾನ
ಮಂಡ್ಯ, ಮಾ. 13_ ಘನತೆವೆತ್ತ ರಾಜ್ಯಪಾಲರಾದ ಶ್ರೀ ವಜುಭಾಯಿ ಆರ್. ವಾಲಾ ಅವರು ಶುಕ್ರವಾರ ನಾಗಮಂಗಲ ತಾಲ್ಲೂಕು ಬಿ.ಜಿ.ಎಸ್. ನಗರದಲ್ಲಿರುವ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ(ಏಮ್ಸ್) ವತಿಯಿಂದ ಆಯೋಜಿಸಿದ್ದ 21ನೇ ಗ್ಯಾಜುಯೇಷನ್ ದಿನಾಚರಣೆ ಕಾರ್ಯಕ್ರಮದಲ್ಲಿ ಎಂ.ಬಿ.ಬಿ.ಎಸ್. ಶಿಕ್ಷಣ ಪೂರ್ಣಗೊಳಿಸಿದ ವೈದ್ಯ ವಿದ್ಯಾರ್ಥಿಗಳಿಗೆ ಪದಕ ಹಾಗೂ ಪ್ರಮಾಣ ಪತ್ರ ವಿತರಿಸಿ ಶುಭ ಹಾರೈಸಿದರು.
ಅನಾಟೊಮಿ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಡಾ. ಸಿ. ಚೈತ್ರ, ಮೈಕ್ರೋಬಯಾಲಜಿ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಡಾ. ನಸ್ರೀನ್ ಕಾಜಾ, ಆಪ್ತಾಲ್‍ಮೊಲಜಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಡಾ. ಬಿ.ಎಂ. ಪುನೀತ್ ಕುಮಾರ್, ಡಾ. ಸುಚಿತ್ರಾ ಶ್ರೀಧರ್ ಅವರಿಗೆ ರಾಜ್ಯಪಾಲರು ಪದಕ ಹಾಗೂ ಪ್ರಮಾಣಪತ್ರ ವಿತರಿಸಿದರು. 
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಅವರು, ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯಸೇವೆಯನ್ನು ಒದಗಿಸುವುದು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಕನಸಾಗಿತ್ತು. ಅದಕ್ಕಾಗಿ ಅವರು ಇಲ್ಲಿ ವೈದ್ಯಕೀಯ ಮಹಾವಿದ್ಯಾಲಯವನ್ನು ಸ್ಥಾಪಿಸಿದರು ಎಂದು ಹೇಳಿದರು.
ಜನಸಾಮಾನ್ಯರಿಗೆ ಸೇವೆ ಮಾಡುವಂತಹ ಪವಿತ್ರವಾದ ಅವಕಾಶ ವೈದ್ಯರಿಗೆ ಸಿಕ್ಕಿದೆ. ಸೇವಾ ಮನೋಭಾವದಿಂದ ಈ ವೃತ್ತಿಯನ್ನು ಕೈಗೊಳ್ಳಬೇಕು. ಎಂ.ಬಿ.ಬಿ.ಎಸ್. ಪೂರ್ಣಗೊಳಿಸಿದ್ದೇ ಅಂತಿಮವಲ್ಲ. ಹೆಚ್ಚಿನ ವಿದ್ಯಾಭ್ಯಾಸ, ಸಂಶೋಧನೆ ಮಾಡಬಹುದು ಎಂದು ಹೇಳಿದರು.
ಪೋಷಕರು ಇಲ್ಲಿ ವರೆಗೂ ನಿಮ್ಮ ಬೆಂಬಲಕ್ಕೆ ನಿಂತು ಸಹಕರಿಸಿದ್ದಾರೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಇನ್ನೂ ಪೋಷಕರನ್ನು ಅವಲಂಬಿಸಬೇಡಿ. ನಿಮ್ಮ ಸ್ವಂತ ಶಕ್ತಿಯ ಮೇಲೆ ಶಿಕ್ಷಣ ಮುಂದುವರಿಸಿ, ಪೋಷಕರನ್ನು ಪ್ರೀತಿಯಿಂದ ಕಾಣಿರಿ ಎಂದು ಹೇಳಿದರು.
ಭಾರತವು ವೈದ್ಯಕೀಯಶಾಸ್ತ್ರ, ವಿಜ್ಞಾನ, ಮುಂತಾದ ವಿಷಯಗಳ ಮಾತೃಭೂಮಿ ಎಂದು ಅಮೆರಿಕದ ಇತಿಹಾಸಕಾರರೊಬ್ಬರು ಹೇಳಿದ್ದಾರೆ. ಇಂಥ ನೆಲದಲ್ಲಿ ಜನಿಸಿರುವುದು ನಮ್ಮ ಪುಣ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸದರಾದ ಸಿ.ಎಸ್.ಪುಟ್ಟರಾಜು, ಬಿ.ಜಿ.ಎಸ್. ಗ್ಲೋಬಲ್ ಆಸ್ಪತ್ರೆಯ ಉಪಾಧ್ಯಕ್ಷ ಡಾ. ಎನ್.ಕೆ. ವೆಂಕಟರಮಣ, ಏಮ್ಸ್‍ನ ಸಲಹೆಗಾರ ಡಾ. ಸುನೀಲ್ ಬಾಬು ಮಲ್ಲೇಶ್, ಟ್ರಸ್ಟಿಗಳಾದ ಡಿ. ದೇವರಾಜ್, ಡಾ. ಎನ್.ಎಸ್. ರಾಮೇಗೌಡ, ಜಿಲ್ಲಾಧಿಕಾರಿ ಡಾ. ಅಜಯ್ ನಾಗಭೂಷಣ್, ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ಮತ್ತಿತರರು ಉಪಸ್ಥಿತರಿದ್ದರು.
*****

No comments:

Post a Comment