Thursday 19 March 2015

 ಮಾರ್ಚ್ 20 ರಂದು ಪಿ.ಸಿ ಹಾಗೂ ಪಿ.ಎನ್.ಡಿ.ಟಿ ಕಾಯ್ದೆ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರ
ಮಂಡ್ಯ ಮಾ.19. ಪಂಚಯತ್,ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಇವರ ಸಂಯುಕ್ತಶ್ರಯದಲ್ಲಿ ಮಾರ್ಚ್ 20 ರಂದು ಅಪರಾಹ್ನ 1.30 ಗಂಟೆಗೆ ಮಂಡ್ಯದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಪಿ.ಸಿ ಹಾಗೂ ಪಿ.ಎನ್.ಡಿ.ಟಿ ಕಾಯ್ದೆ ಉಲ್ಲಘಿಸಿದವರ ಮಾಹಿತಿ ನೀಡಿದವರಿಗೆ ಬಹುಮಾನ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸುವ ಬಗ್ಗೆ ಜಿಲ್ಲಾ ಮಟ್ಟದ ಕಾರ್ಯಗಾರವನ್ನು ಏರ್ಪಡಿಸಲಾಗಿದೆ.
ಕಾರ್ಯಗಾರವನ್ನು ಮಂಡ್ಯದ ಸಿವಿಲ್ ನ್ಯಾಯಾಧೀಶರಾದ ಸದಾನಂದ ಎಂ ದೊಡ್ಡಮನಿ ಅವರು ಉದ್ಘಾಟಿಸುವರು. ಜಿಲ್ಲಾಧಿಕಾರಿಗಳಾದ ಡಾ. ಅಜಯ್ ನಾಗಭೂಷಣ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಹೆಚ್.ಪಿ. ಮಂಚೇಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಲೆಗಳಿಗೆ ಪೂರೈಕೆ ಆಗುವ ಆಹಾರ ಧಾನ್ಯಗಳನ್ನು ಸಮರ್ಪಕವಾಗಿ ಸ್ವೀಕರಿಸಲು ಸೂಚನೆ


ಅಕ್ಷರ ದಾಸೋಹ ಯೋಜನೆಯಡಿ ಶಾಲೆಗಳಿಗೆ ಪೂರೈಕೆ ಆಗುವ ಆಹಾರ ಧಾನ್ಯಗಳನ್ನು ಸ್ವೀಕರಿಸುವ ಸಂದರ್ಭದಲ್ಲಿ ಛಾಯಾಚಿತ್ರ ತೆಗೆದು, ಪರಿಮಾಣವನ್ನು ದೃಢೀಕರಿಸಿಕೊಳ್ಳಬೇಕು. ಒಂದು ವೇಳೆ ವ್ಯತ್ಯಾಸ ಕಂಡುಬಂದಲ್ಲಿ ಶಿಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಪಂ ಸಿಇಓ ರೋಹಿಣಿ ಸಿಂಧೂರಿ ತಿಳಿಸಿದರು.
   ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಅಕ್ಷರ ದಾಸೋಹ ಅನುಷ್ಟಾನ ಕುರಿತ ಚಾಲನಾ ಮತ್ತು ಪರಾಮರ್ಶನ ಮೇಲ್ವಿಚಾರಣೆ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
    ಸಾಗಾಣಿಕೆ ಗುತ್ತಿಗೆದಾರರಿಂದ ಆಹಾರ ಧಾನ್ಯಗಳನ್ನು ಸ್ವೀಕರಿಸುತ್ತಿರುವ ಛಾಯಾಚಿತ್ರ ಹಾಗೂ ಪರಿಮಾಣದ ದೃಢೀಕೃತ ಪತ್ರಿಯನ್ನು ಶಾಲಾ ಮುಖ್ಯ ಶಿಕ್ಷಕರು ಕಡ್ಡಾಯವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಬೇಕು ಎಂದರು.
   ಅಲ್ಲದೆ, ಸಾಗಾಣಿಕೆದಾರರು ಆಹಾರ ಧಾನ್ಯಗಳನ್ನು ತೂಕದಲ್ಲಿ ವ್ಯತ್ಯಾಸವಾಗದಂತೆ ಸಮರ್ಪಕವಾಗಿ ಪೂರೈಕೆ ಮಾಡುತ್ತಿದ್ದಾರೆಯೇ, ಇಲ್ಲವೋ ಎಂಬುವುದನ್ನು ಖಚಿತ ಪಡಿಸಿಕೊಳ್ಳಲು ನಿಯಮಿತವಾಗಿ ತಪಾಸಣೆ ಮಾಡುವಂತೆಯೂ ಸೂಚಿಸಿದರು.
    ಅಡುಗೆ ಅನಿಲ: ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಾಸವಾಗಿ ಅಕ್ಷರ ದಾಸೋಹಕ್ಕೆ ತೊಂದರೆ ಆಗುತ್ತಿದೆಯೇ ಎಂಬ ಸಿಇಓ ರೋಹಿಣಿ ಸಿಂಧೂರಿ ಪ್ರಶ್ನೆಗೆ, ಮಕ್ಕಳ ಅಂಕಿಅಂಶದಂತೆ ಅಡುಗೆ ಅನಿಲ ಬೇಡಿಕೆಯ ವಾರ್ಷಿಕ ಕ್ರಿಯಾ ಯೋಜನೆಯನ್ನು ತಾಲ್ಲೂಕುವಾರು ಸಿದ್ಧಪಡಿಸಿ ಸಂಬಂಧಿಸಿದ ಗ್ಯಾಸ್ ವಿತರಕರಿಗೆ ನೀಡಲಾಗಿದೆ. ಸಿಲಿಂಡರ್‍ಗಳ ಹಣವನ್ನು ಶಾಲೆಗಳ ಅಕ್ಷರ ದಾಸೋಹ ಕಾರ್ಯಕ್ರಮದ ಖಾತೆಗೆ ಜಮಾ ಮಾಡಲಾಗುತ್ತಿದೆ. ಇದರಿಂದ ಅಡುಗೆ ಅನಿಲದ ಸಮಸ್ಯೆ ಕಡಿಮೆಯಾಗಿದೆ. ಶಾಲೆಗಳಲ್ಲಿ ಹೆಚ್ಚುವರಿ ಇರುವ ಸಿಲಿಂಡರ್‍ಗಳನ್ನು ಕೊರತೆ ಇರುವ ಅಡುಗೆ ಕೇಂದ್ರಗಳಿಗೆ ಸರಿದೂಗಿಸಲು ಕ್ರಮ ವಹಿಸಲಾಗಿದೆ ಎಂದು ಶಿಕ್ಷಣಾಧಿಕಾರಿ (ಅಕ್ಷರ ದಾಸೋಹ) ಎಚ್.ಜಿ. ಭಾಗ್ಯ ಪ್ರತಿಕ್ರಿಯಿಸಿದರು.
    ಒಂದು ವೇಳೆ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಾಸವಾಗಿ ಅಕ್ಷರ ದಾಸೋಹಕ್ಕೆ ತೊಂದರೆ ಆದರೆ, ಆಯಾಯ ತಾಲ್ಲೂಕಿನ  ಅಕ್ಷರ ದಾಸೋಹ ಸಹಾಯಕ ನಿರ್ದೇಶಕರನ್ನೇ ಜವಾಬ್ದಾರಿ ಮಾಡಲಾಗುವುದು ಎಂದು ಅವರು ಹೇಳಿದರು.
   ಗೋಧಿ ಬಳಸಿ: ನಾಗಮಂಗಲ, ಕೃಷ್ಣರಾಜಪೇಟೆ ಹಾಗೂ ಪಾಂಡವಪುರ ತಾಲ್ಲೂಕುಗಳಿಗೆ ಗೋಧಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಆಗುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಬಗೆಯ ಆಹಾರ ಸಿದ್ಧಪಡಿಸಿ ಮಕ್ಕಳಿಗೆ ಬಡಿಸುವಂತೆ ಅವರು ಸೂಚಿಸಿದರು.
     ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ಕುಮುದಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಿವಮಾದಪ್ಪ ಸೇರಿದಂತೆ ಎಲ್ಲಾ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಹಾಯಕ ನಿರ್ದೇಶಕರು (ಅಕ್ಷರ ದಾಸೋಹ) ಹಾಜರಿದ್ದರು.
ಮದ್ಯ ವ್ಯಸನಿಗಳಿಂದ ದೂರ ಇರಲಿ ಯುವಜನತೆಗೆ ಕರೆ
   ಮದ್ಯ ಹಾಗೂ ಮಾದಕ ವಸ್ತುಗಳ ವ್ಯಸನಕ್ಕೆ ದಾಸರಾದವರ ಸಹವಾಸದಿಂದ ಈ ದುಶ್ಚಟ ಯುವಜನರನ್ನು ಬಲಿ ತೆಗೆದುಕೊಳ್ಳುತ್ತಿದ್ದು, ಯುವಜನರು ಇಂತಹವರಿಂದ ದೂರ ಇರಬೇಕು ಎಂದು ನಾಗಮಂಗಲ ತಾಲ್ಲೂಕು ಘಟಕದ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಸಿ.ಎನ್. ಮಂಜೇಶ್ ಅವರು ಹೇಳಿದರು.
  ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಾಗಮಂಗಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದಲ್ಲಿ ಗುರುವಾರ ನಾಗಮಂಗಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮದ್ಯಪಾನ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
 ಯುವಕ ಹಾಗೂ ಯುವತಿಯರು ಜಾನಪದ ಕಲೆಗಳಂತಹ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡರೆ, ಮನಸ್ಸಿಗೆ ಉಲ್ಲಾಸ ಹಾಗೂ ಉತ್ಸಾಹ ಹೆಚ್ಚಾಗುತ್ತದೆ. ಇದರಿಂದ ದುಶ್ಚಟಗಳ ಬಗ್ಗೆ ಮನಸ್ಸು ಹೋಗುವುದಿಲ್ಲ ಎಂದು ಅವರು ಹೇಳಿದರು.
 ಉಪನ್ಯಾಸ ನೀಡಿದ ಸಮಾಜ ಸೇವಕರಾದ ಶ್ರೀನಿವಾಸ್ ಅವರು ಮಾತನಾಡಿ, ಸಮಾಜದಲ್ಲಿ ಮದ್ಯ ಹಾಗೂ ಮಾದಕ ವಸ್ತುಗಳ ಯತೇಚ್ಛ ಸೇವನೆಯಿಂದ ಯುವಶಕ್ತಿ ಬಲಿಯಾಗುತ್ತಿದೆ. ಅವಿಭಕ್ತ ಕುಟುಂಬದಲ್ಲಿ ಇರುವವರು ಇಂತಹ ಸೇವನೆಗಳಿಗೆ ಮಾರು ಹೋಗುವುದಿಲ್ಲ. ವಿಘಟನೆಯಾದ ಕುಟುಂಬಗಳಲ್ಲಿ ಈ ವ್ಯಸನ ಹೆಚ್ಚು ಎಂದು ಹೇಳಿದರು.
 ಯುವಕರು ಮಾದಕ ದ್ರವ್ಯಗಳಿಗೆ ಬಲಿಯಾಗುತ್ತಿರುವುದರಿಂದ ಸಮಾಜ ಅಧೋಃಗತಿಗೆ ತಲುಪಿದೆ. ವಿದ್ಯಾರ್ಥಿಗಳು ಹಾಗೂ ಯುವ ಜನರು ಈಗ ಎಚ್ಚೆತ್ತುಕೊಳ್ಳುವುದು ಅನಿವಾರ್ಯ ಎಂದು ಹೇಳಿದರು.
ಪ್ರಾಂಶುಪಾಲರಾದ ನಂಜೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಾಗಮಂಗಲ ತಾಲ್ಲೂಕು ಯುವ ಪರಿಷತ್‍ನ ಅಧ್ಯಕ್ಷರಾದ ಕೆ.ಕೆ.ಧನಂಜಯ್, ಎನ್.ಎಸ್.ಎಸ್. ಸಂಚಾಲಕರಾದ ಧ್ಯಾನೇಗೌಡ, ಗ್ರಂಥಪಾಲಕರಾದ ಟಿ. ಸಿದ್ದರಾಮ, ಪ್ರಾಧ್ಯಾಪಕರಾದ ಸುರೇಶ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

No comments:

Post a Comment