Tuesday 7 July 2015

ಮಂಡ್ಯ: ಕೃಷಿ ನೀತಿ ಜಾರಿಗೆ ತರುವ ಮೂಲಕ ರೈತರ ಆತ್ಮಹತ್ಯೆ ತಡೆಯಲು ಸಾಧ್ಯ ಎಂದು ರೈತಪರ ಹೋರಾಟಗಾರ ಬಯ್ಯಾರೆಡ್ಡಿ ಅಭಿಪ್ರಾಯಪಟ್ಟರು.
ನಗರದ ಗಾಂಧಿಭವನದಲ್ಲಿ ಜನಪರ ಕ್ರಿಯಾ ವೇದಿಕೆ ಆಯೋಜಿಸಲಾಗಿದ್ದ `ರೈತರ ಸರಣಿ ಆತ್ಮಹತ್ಯೆ : ಕಾರಣ, ಪರಿಹಾರಗಳು ಎಂಬ ವಿಚಾರ ಸಂಕಿರಣವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಕೃಷಿ ನೀತಿಯನ್ನು ಜಾರಿಗೆ ತರಬೇಕು. ಆಗ ಮಾತ್ರ ದೇಶದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದರು.
ರೈತರಿಗೆ ರಸಗೊಬ್ಬರ, ಕೀಟನಾಶಕ, ಬಿತ್ತನೆ ಬೀಜಗಳನ್ನು ಖಾಸಗಿಯವರಿಗೆ ಕೊಡದೆ ಕಡಿಮೆ ಬೆಲೆಗೆ ಸರ್ಕಾರವೇ ವಿತರಿಸಬೇಕು. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗಧಿ ಮಾಡಬೇಕು. ಬ್ಯಾಂಕ್‍ಗಳು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಬೇಕು. ಬಂಡವಾಳಗಾರರು ವಶಪಡಿಸಿಕೊಂಡಿರುವ ಸಾವಿರಾರು ಎಕರೆ ಕೃಷಿ ಭೂಮಿಯನ್ನು ದುಡಿಯವ ರೈತರಿಗೆ ಗ್ರಾಮೀಣ ಪ್ರದೇಶದಲ್ಲಿರುವ ಭೂ ರಹಿತ ರೈತರಿಗೆ ನೀಡಬೇಕು ಹಾಗೂ ರೈತಪರ ಸರ್ಕಾರ ಜಾರಿಗೆ ಬರಬೇಕು. ಇವುಗಳನ್ನು ಜಾರಿಗೆ ಬಂದಲ್ಲಿ ರೈತರ ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜಾಗತೀಕರಣದಿಂದ ದೇಶಕ್ಕೆ ಅನ್ನ ನೀಡುವ ಅನ್ನದಾತ ದೊಡ್ಡ ಸಮಸ್ಯೆಗಳಿಂದ ನರಳುತ್ತಿದ್ದಾನೆ. ಕೃಷಿ ಬಿಕ್ಕಟ್ಟು ಬಿಗಡಾಯಿಸಿದೆ. ಬದುಕಲು ಪರ್ಯಾಯ ವ್ಯವಸ್ಥೆ ಇಲ್ಲದೆ, ಹಲವಾರು ಸಮಸ್ಯೆಗಳಿಂದ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾನೆ ಎಂದರು.
ಖಾಸಗೀಕರಣ, ಉದಾರೀಕರಣ ಹಾಗೂ ಜಾಗತೀಕರಣದಿಂದ ದೇಶದಲ್ಲಿ ಬಂಡವಾಳಶಾಹಿಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ರೈತರ ಕೃಷಿ ಭೂಮಿಗಳು ಬಂಡವಾಳಶಾಹಿಗಳ ಕೈವಶವಾಗುತ್ತಿವೆ. ದೇಶಕ್ಕೆ ಬಂಡವಾಳ ಹೂಡಿಕೆಯಾಗುತ್ತದೆ ಎಂಬ ಉದ್ದೇಶದಿಂದ 1991ರಲ್ಲಿ ಜಾಗತೀಕರಣದ ಹೆಸರಿನಲ್ಲಿ ಕೇಂದ್ರ ಸರ್ಕಾರ ಜಾಗತೀಕರಣ ನೀತಿಗಳನ್ನು ಜಾರಿಗೆ ತಂದರು. ಇದರಿಂದ ಕೃಷಿ ಮೇಲೆ ಹೂಡಿಕೆಯಾಗಿ ಕೃಷಿ ಅಭಿವೃದ್ಧಿಯಾಗುತ್ತದೆ ಎಂಬ ಉದ್ದೇಶದಿಂದ ಬುದ್ದಿಜೀವಿಗಳು ಸಹ ಬೆಂಬಲ ವ್ಯಕ್ತಪಡಿಸಿದರು. ಆದರೆ ಈ ಜಾಗತೀಕರಣದಿಂದ ಕೃಷಿಯ ಚಟುವಟಿಕೆ ಮೇಲೆ ಬಿಕ್ಕಟ್ಟು ಎದುರಾಗಿ ಮತ್ತಷ್ಟು ಬಿಗಡಾಯಿಸಿ, ಶೇ.70ರಷ್ಟು ರೈತರ ಮೇಲೆ ಪರಿಣಾಮ ಬೀರಿ ಮಾರಣ ಹೋಮ ಸೃಷ್ಟಿಯಾಯಿತು. ಪ್ರಸ್ತುತ ದಿನಗಳಲ್ಲಿ ಅದೇ ಮುಂದುವರೆಯುತ್ತಿದೆ. ಇದರ ವಿರುದ್ಧ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಜಾಗತೀಕರಣದ ನೀತಿಯಿಂದ ಕೃಷಿ ಬಿಕ್ಕಟ್ಟಿನಿಂದ ದೇಶದಲ್ಲಿ ಸುಮಾರು 3.61 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಪ್ರಸ್ತುತ ದಿನಗಳಲ್ಲಿ ಅತಿ ವೇಗವಾಗಿ ರೈತರ ಆತ್ಮಹತ್ಯೆ ಸರಣಿಗಳು ಹೆಚ್ಚಾಗುತ್ತಿವೆ. ಖಾಸಗಿ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಾಕಿ ನೀಡದೇ ನೀಡುತ್ತಿರುವ ಕಿರುಕುಳ, ಸಾಲಬಾಧೆ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಸಿಗದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಶೇ.65ರಷ್ಟು ರೇಷ್ಮೆ ಬೆಳೆ ಉತ್ಪಾದನೆಯಾಗುತ್ತಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಕೃಷಿ ಚಟುವಟಿಕೆ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿದೆ. ಅಂತಹ ಜಿಲ್ಲೆಯಲ್ಲಿ ಸರಣಿ ಆತ್ಮಹತ್ಯೆಗಳು ನಡೆಯುತ್ತಿರುವುದು ಶೋಚನೀಯವಾಗಿದೆ ಎಂದರು.
ರೇಷ್ಮೆಗೆ ವೈಜ್ಞಾನಿಕ ಬೆಲೆ ಇಲ್ಲದೆ 350 ರಿಂದ 400 ರೂ. ಇದ್ದ ಬೆಲೆ 100-150 ರೂ.ಗಳಿಗೆ ಇಳಿಕೆಯಾಗುವುದರಿಂದ ರೇಷ್ಮೆ ಬೆಳೆಗಾರರು ಮುಂದಿನ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಆದ್ದರಿಂದ ಕೇಂದ್ರ ಸರ್ಕಾರ ರೇಷ್ಮೆ ಆಮದಿನ ಮೇಲೆ ಶುಲ್ಕವನ್ನು ಹೆಚ್ಚಿಸಬೇಕು. ಇದಕ್ಕೆ ದೇಶದ ಎಲ್ಲಾ ರೈತರು ಪರಿಣಾಮಕಾರಿಯಾದ ಹೋರಾಟ, ಚಳುವಳಿ ನಡೆಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಪರಿಣಾಮಕಾರಿಯಾದ ಚಳುವಳಿಗಳು ನಡೆಯುತ್ತಿಲ್ಲ ಎಂದರು.
ರಾಜ್ಯ ಸರ್ಕಾರ ರೈತರ ಆತ್ಮಹತ್ಯೆ ತಡೆಯಲು ಮುಂದಾಗುತ್ತಿಲ್ಲ. ಮಂತ್ರಿಗಳು ಹಾಗೂ ಶಾಸಕರ ವೇತನವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಆದರೆ ರೈತರ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿಲ್ಲ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣ ಪಾವತಿ ಮಾಡದ ಕಾರ್ಖಾನೆ ಮಾಲೀಕರನ್ನು ಜೈಲಿಗೆ ಹಾಕುವ ದೃಢ ನಿರ್ಧಾರ ಕೈಗೊಳ್ಳುತ್ತಿಲ್ಲ. ರೈತರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಬಗೆಹರಿಸುವಲ್ಲಿ ವಿಫಲವಾಗಿದೆ. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯೇ ಇಲ್ಲ. ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ. ಇದರಿಂದ ರೈತರಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಪರ ನಿಂತು ಹೋರಾಡುವ ರೈತ ಸಂಘಗಳು ಕೇವಲ ನಾಮಾಕಾವಸ್ಥೆ ಮಾತ್ರ ಇವೆ. ಯಾವ ಸಂಘಟನೆಗಳು ಕೂಡ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಬ್ಯಾಂಕ್‍ಗಳು, ಖಾಸಗೀ ಲೇವಾದೇವಿದಾರರು ನೀಡುವ ಕಿರುಕುಳದ ವಿರುದ್ಧ ಹೋರಾಡಿ ರೈತರಿಗೆ ಧೈರ್ಯ ತುಂಬುವ ಕೆಲಸ ಆಗುತ್ತಿಲ್ಲ ಎಂದರು.
ಕೃಷಿಗೆ ಬೇಕಾದ ಉಪಕರಣಗಳು, ರಸಗೊಬ್ಬರ, ಕೂಲಿ, ಬಿತ್ತನೆ ಬೀಜಗಳ ಬೆಲೆ ಹೆಚ್ಚಾಗುತ್ತಿದೆ. ಆದರೆ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಮಾತ್ರ ಸಿಗುತ್ತಿಲ್ಲ. ರಾಜ್ಯದಲ್ಲಿ ಶೇ.80ರಷ್ಟು ಸಣ್ಣ ಹಾಗೂ ಅತಿಸಣ್ಣ ರೈತರಿದ್ದಾರೆ. ಅದರಲ್ಲಿ ಶೇ.35ರಷ್ಟು ರೈತರಿಗೆ ಮಾತ್ರ ಬ್ಯಾಂಕ್‍ಗಳಲ್ಲಿ ಸಾಲ ಸಿಗುತ್ತಿದೆ. ಇನ್ನುಳಿದ ಶೇ.65ರಷ್ಟು ರೈತರು ಖಾಸಗಿ ಲೇವಾದೇವಿದಾರರಲ್ಲಿ ಹೆಚ್ಚಿನ ಹಣ ಪಡೆದು ಅವರ ಕಿರುಕುಳದಿಂದ ನರಳುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಇಂತಹವರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಸರ್ಕಾರಗಳು ರೈತಪರವಾದ ಕೃಷಿ ನೀತಿಯನ್ನು ಜಾರಿಗೆ ತಂದು ದೇಶದ ಬೆನ್ನುಲುಬಾದ ರೈತರ ಹಿತಕಾಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಪ್ರೊ.ಕೆ.ಸಿ.ಬಸವರಾಜು, ಲಕ್ಷ್ಮಣ್‍ಚೀರನಹಳ್ಳಿ, ಎಂ.ಕೃಷ್ಣಮೂರ್ತಿ, ಪ್ರೊ.ಹೆಚ್.ಎಲ್.ಕೇಶವಮೂರ್ತಿ, ಪ್ರೊ.ಜಿ.ಟಿ.ವೀರಪ್ಪ, ಜಯರಾಂ, ವೆಂಕಟಗಿರಿಯಯ್ಯ, ಬೋರೇಗೌಡ, ನಂದಿನಿಜಯರಾಂ, ಎಲ್.ಸಂದೇಶ್, ಯಶವಂತ್ ಸೇರಿದಂತೆ ಇನ್ನಿತರರು ಹಾಜರಿದ್ದರು.

No comments:

Post a Comment