Wednesday 22 July 2015

ಆಕಸ್ಮಿಕ ಬೆಂಕಿ : 1 ಎಕರೆ ಕಬ್ಬು ಭಸ್ಮ
ಶ್ರೀರಂಗಪಟ್ಟಣ : ಆಕಸ್ಮಿಕ ಬೆಂಕಿ ಸಂಭವಿಸಿ 1 ಎಕರೆ ಜಮೀನಿನಲ್ಲಿದ್ದ ಕಬ್ಬು ಸಂಪೂರ್ಣ ಭಸ್ಮವಾಗಿರುವ ಘಟನೆ ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ಜರುಗಿದೆ.
ಚಿನ್ನೇನಹಳ್ಳಿ ಗ್ರಾಮದ ಶಿವನಂಜಯ್ಯರವರ ಮಗ ಕುಮಾರಸ್ವಾಮಿ ಎಂಬುವರಿಗೆ ಸೇರಿದ 1 ಎಕರೆ ಜಮೀನಿನಲ್ಲಿದ್ದ ಕಬ್ಬಿನ ಬೆಳೆ ಸಂಪೂರ್ಣ ಸುಟ್ಟು ಕರಕಲಾಗಿದೆ.
ಹಲವು ದಿನಗಳಿಂದ ನಾಲೆಯಲ್ಲಿ ನೀರು ಬಿಡದ ಕಾರಣ ಕಬ್ಬು ಒಣಗಿತ್ತು. ನಿನ್ನೆ ಸಂಭವಿಸಿದ ಆಕಸ್ಮಿಕ ಬೆಂಕಿಗೆ ಗದ್ದೆಯಲ್ಲಿದ್ದ ಬಹುತೇಕ ಕಬ್ಬು ಸುಟ್ಟು ಭಸ್ಮವಾಗಿದೆ. 13 ತಿಂಗಳು ತುಂಬಿದ್ದ ಕಬ್ಬನ್ನು ಕೆಲವೇ ದಿನಗಳಲ್ಲಿ ಕಟಾವು ಮಾಡಬೇಕಿತ್ತು. ಸದರಿ ಘಟನೆಯಿಂದ ಸುಮಾರು 60 ಟನ್ ಕಬ್ಬು ನಾಶವಾಗಿದೆ ಎಂದು ಅಂದಾಜಿಸಲಾಗಿದೆ.
ಪ್ರಕರಣವನ್ನು ಶ್ರೀರಂಗಪಟ್ಟಣ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ವಿಜೃಂಭಣೆಯಿಂದ ಜರುಗಿದ ಮೂಗಮಾರಮ್ಮನ ಹಬ್ಬ
ಪಾಂಡವಪುರ : ತಾಲ್ಲೂಕಿನ ಸಿಂಡಬೋಗನಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಮೂಗಮಾರಮ್ಮ(ಡಿಂಕದಮ್ಮ)ನ ಹಬ್ಬ ವಿಜೃಂಭಣೆಯಿಂದ ಜರುಗಿತು.
ನಿನ್ನೆ ಬೆಳಿಗ್ಗೆ ಗ್ರಾಮದ ಯಜಮಾನರುಗಳ ಸಮ್ಮುಖದಲ್ಲಿ ಹೋಮನಡೆಯಿತು. ನಂತರ ಕಳಸಹೊತ್ತ ಮಹಿಳೆಯರು ಕೆರೆತೊಣ್ಣೂರು ಕೆರೆಗೆ ಬಂದು ಕಳಸ ಪೂಜೆ, ಗಂಗಾಪೂಜೆ ನೆರವೇರಿಸಲಾಯಿತು.
ಪೂಜೆ ಬಳಿಕ ಬಲ್ಲೇನಹಳ್ಳಿ, ಅಗಸನಹಳ್ಳಿ ಮಾರ್ಗವಾಗಿ ಗ್ರಾಮಕ್ಕೆ ಕಾಲ್ನಡಿಗೆ ಮೂಲಕ ಬರಲಾಯಿತು. ಗ್ರಾಮದ ಬೀದಿಗಳಲ್ಲಿ ಸಂಚರಿಸಿ ದೇವಿಗೆ ಪ್ರತಿಮನೆಯಲ್ಲೂ ಪೂಜೆಸಲ್ಲಿಸಲಾಯಿತು.
ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಸಾದ ವಿನಿಯೋಗ ಹಾಗೂ ಆವರಣದಲ್ಲಿ ಪೂಜಾ ಕುಣಿತ ಸೇರಿದಂತೆ ಹಲವು ಧಾರ್ಮಿಕ ಕೈಂಕರ್ಯಗಳು ನಡೆದವು.
ಗ್ರಾಮದ ಎಲ್ಲಾ ಬೀದಿಗಳಿಗೂ ವಿದ್ಯುತ್ ದೀಪಲಂಕಾರ ಮಾಡಲಾಗಿತ್ತು. ಪ್ರತಿಮೆನೆಯ ಮುಂಭಾಗ ರಂಗೋಲಿ ಬಿಡಿಸಿ, ಹಸಿರು ತೋರಣ ಕಟ್ಟಲಾಗಿತ್ತು.
ಪ್ರತಿವರ್ಷವೂ ನಡೆಯುತ್ತಿದ್ದು ಈ ಹಬ್ಬ, ಕಳೆದ 6 ವರ್ಷಗಳಿಂದ ಕೆಲವು ಕಾರಣಗಳಿಂದ ಆಚರಣೆಯಾಗಿರಲಿಲ್ಲ. ಈ ಭಾರಿ ವಿಜೃಂಭಣೆಯಿಂದ ಆಚರಿಸಲಾಯಿತು. ಗ್ರಾಮದ ಮುಖಂಡರಾದ ಪಟೇಲ್ ಹೆಚ್.ಮಾದೇಗೌಡ, ನಾಗಣ್ಣ, ನರಸಿಂಹೇಗೌಡ, ಸಣ್ಣೇಗೌಡ, ಮರಂಕೇಗೌಡ, ಎಳವಪ್ಪ ನೇತೃತ್ವದಲ್ಲಿ ಹಬ್ಬ ಜರುಗಿತು.

No comments:

Post a Comment