Thursday 23 July 2015



ಜುಲೈ 27ರಂದು ‘ಕೃಷಿಯಿಂದ ಖುಷಿ ಕಂಡವರು - ರೈತರಿಗೆ ರೈತರೇ ಮಾದರಿ’ ಸಂವಾದ
ಮಂಡ್ಯ ಜುಲೈ 23 (ಕರ್ನಾಟಕ ವಾರ್ತೆ):- ಕೃಷಿ ಹಾಗೂ ಕೃಷಿಗೆ ಪೂರಕವಾದ ಚಟುವಟಿಕೆಗಳಲ್ಲಿ ಉತ್ತಮ ಹವ್ಯಾಸಗಳುಳ್ಳ ರೈತರು ಹಾಗೂ ಇತರ ರೈತರ ನಡುವೆ ವಿಚಾರ ವಿನಿಮಯ ಆಗುವಂತೆ ‘ಕೃಷಿಯಿಂದ ಖುಷಿ ಕಂಡವರು-ರೈತರಿಗೆ ರೈತರೇ ಮಾದರಿ’ ಎಂಬ ಸಂವಾದ ಕಾರ್ಯಕ್ರಮವನ್ನು ಜುಲೈ 27 ರಂದು ಮಂಡ್ಯದ ರೈತ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಮಂಡ್ಯ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ವಿಕಸನ ಸಂಸ್ಥೆ ಹಾಗೂ ವಿವಿಧ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಬುಧವಾರ ಜಿಲ್ಲಾ ಪಂಚಾಯಿತಿಯಲ್ಲಿ ಸಭೆ ನಡೆಸಿದರು.
ಸಮಗ್ರ ಕೃಷಿ ಪದ್ಧತಿ ಪ್ರೋತ್ಸಾಹಿಸಲು ಹಾಗೂ ರೈತರಲ್ಲಿ ಆತ್ಮವಿಶ್ವಾಸ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ರೈತರೇ ರೈತರ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ. ರೈತರೇ ಸಮಗ್ರ ಕೃಷಿ ಪದ್ಧತಿ ಬಗ್ಗೆ ಮಾತನಾಡುತ್ತಾರೆ ಎಂದು ಅವರು ಹೇಳಿದರು.
ರೈತರು ಏಕ ರೀತಿಯ ಬೆಳೆಗಳ ಮೇಲೆ ಹೆಚ್ಚು ಹೆಚ್ಚು ಅವಲಂಬಿತರಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಹವಾಮಾನ ಹಾಗೂ ಮಾರುಕಟ್ಟೆ ಏರುಪೇರುಗಳಿಂದ ಸಂಕಷ್ಟಗಳಿಗೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಅವರಲ್ಲಿ ಆತ್ಮಸ್ಥೈರ್ಯ ತುಂಬಲು ಹಾಗೂ ಕೃಷಿಯನ್ನು ಸುಸ್ಥಿತರಗೊಳಿಸಲು ಇರುವ ಅವಕಾಶಗಳನ್ನು, ಅಂತಹ ವಿಧಾನಗಳನ್ನು ಅಳವಡಿಸಿಕೊಂಡ ರೈತರ ಬಗ್ಗೆ ಇತರರಿಗೆ ಮನವರಿಕೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಅವರು ಹೇಳಿದರು.
ಗಣ್ಯರು ಹಾಗೂ ಅಧಿಕಾರಿಗಳು ಕೇವಲ ಅನುವುಗಾರರಾಗಿ ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಇದು ಸಂಪೂರ್ಣ ಕೃಷಿಕರ ಕಾರ್ಯಕ್ರಮ. ಹೆಚ್ಚಿನ ಸಂಖ್ಯೆಯಲ್ಲಿ ರೈತ ಕುಟುಂಬಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಸಭೆಯಲ್ಲಿ ನಬಾರ್ಡ್‍ನ  ಸಹಾಯಕ ಮಹಾ ಪ್ರಬಂಧಕರಾದ ಬಿಂದುಮಾಧವ ವಡವಿ, ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ರವಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಲಿಂಗೇಗೌಡ, ಕೃಷಿ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್, ಪಶು ಸಂಗೋಪನೆ ಉಪ ನಿರ್ದೇಶಕ ಡಾ. ಪ್ರಸಾದ್ ಮೂರ್ತಿ, ತೋಟಗಾರಿಕೆ ಉಪ ನಿರ್ದೇಶಕ ಕೆ. ರುದ್ರೇಶ್, ವಾರ್ತಾಧಿಕಾರಿ ಆರ್. ರಾಜು, ಕೃಷಿ ಇಲಾಖೆ ಸಲಹೆಗಾರ ರವೀಂದ್ರ, ವಿಕಸನ ಸಂಸ್ಥೆ ನಿರ್ದೇಶಕ ಮಹೇಶ್ಚಂದ್ರಗುರು ಮತ್ತಿತರರು ಉಪಸ್ಥಿತರಿದ್ದರು.

No comments:

Post a Comment