Saturday 4 July 2015

ಉದ್ಯೋಗ ಖಾತ್ರಿ ಯೋಜನೆಯಡಿ ಅಭಿವೃದ್ಧಿಗೆ ಬಹಳಷ್ಟು ಅವಕಾಶ: ಧ್ರುವನಾರಾಯಣ
ಮೈಸೂರು, ಜುಲೈ 4 . ಮಹತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಬಹಳಷ್ಟು ಅಭಿವೃದ್ಧಿ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲು ಅವಕಾಶವಿದ್ದು, ಸಂಬಂಧಪಟ್ಟ ಎಲ್ಲಾ ಇಲಾಖಾ ಅಧಿಕಾರಿಗಳು ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮುಂದಾಗಬೇಕು ಎಂದು ಚಾಮರಾಜನಗರ ಲೋಕಸಭಾ ಸದಸ್ಯರಾದ ಆರ್.ಧ್ರುವನಾರಾಯಣ ತಿಳಿಸಿದರು.
 ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೇಂದ್ರ ಪುರಸ್ಕøತ ಯೋಜನೆಗಳ ಪ್ರಗತಿ ಪರಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 ತಾಲ್ಲೂಕು ಪಂಚಾಯತ್‍ಗಳಿಗೆ ಅತೀ ಹೆಚ್ಚು ಅನುದಾನವು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಲಭ್ಯವಿದ್ದು, ಗ್ರಾಮೀಣ ಪ್ರದೇಶದಲ್ಲಿ ಆಟದ ಮೈದಾನ, ದನದ ಕೊಟ್ಟಿಗೆ, ಸ್ಮಶಾನ ಅಭಿವೃದ್ಧಿ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಅವಕಾಶವಿದೆ. ಗ್ರಾಮೀಣ ಭಾಗದಲ್ಲಿ ಬಹಳಷ್ಟು ಜನರು ಅಭಿವೃದ್ಧಿ ಕಾರ್ಯಕ್ಕೆಂದು ಸಂಸದರ ನಿಧಿಯನ್ನು ಅವಲಂಬಿಸುತ್ತಾರೆ. ಕೇಂದ್ರ ಸರ್ಕಾರ ಪ್ರಸಕ್ತ ಸಾಲಿಗೆ 30,000 ಕೋಟಿ ರೂ. ಅನುದಾನವನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗಳಿಗೆ ಮೀಸಲಿರಿಸಿದ್ದು, ಅನುದಾನವು ಸಮರ್ಪಕವಾಗಿ ಬಳಕೆಯಾಗಬೇಕು ಎಂದು ಹೇಳಿದರು.
  ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಮೈಸೂರು ಜಿಲ್ಲೆಯಲ್ಲಿ 12,419 ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.  ಅದರಲ್ಲಿ 1511 ಕಾಮಗಾರಿಗಳು ಪ್ರಗತಿಯಲ್ಲಿದ್ದು, ಕೇವಲ 163 ಕಾಮಗಾರಿ ಪೂರ್ಣಗೊಂಡಿದೆ ಹಾಗೂ 10,745 ಕಾಮಗಾರಿಗಳು ಇನ್ನೂ ಪ್ರಾರಂಭಗೊಳ್ಳಬೇಕಿದೆ. ಈ ಯೋಜನೆಯಡಿ ನಿಗಧಿಪಡಿಸಿರುವ ಕಾಮಗಾರಿಗಳ ಗುರಿಯನ್ನು ಸಕಾಲದಲ್ಲಿ ಪೂರ್ಣಗೊಳಿಸುವ ಜೊತೆಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಹೊಸದಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯತ್ ಸದಸ್ಯಗಳಿಗೆ ಈ ಯೋಜನೆ ಬಗ್ಗೆ ಮಾಹಿತಿ ಹಾಗೂ ಜಾಗೃತಗೊಳಿಸಲು ಪ್ರತ್ಯೇಕ ತರಬೇತಿ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
   ಇಂದಿರಾ ಆವಾಸ್ ಯೋಜನೆಯಡಿ ಆಯ್ಕೆಯಾಗುವ ಫಲಾನುಭವಿಗಳು ಅರ್ಹರಿರಬೇಕು. ಗ್ರಾಮ ಸಭೆಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ನಡೆಯುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಸವಲತ್ತ್ತನ್ನು ಪಡೆದವರೇ ಪಡೆಯದಂತೆ ಎಚ್ಚರವಹಿಸಬೇಕು. ದೇಶಕ್ಕೆ ನುರಿತ ಯುವ ಶಕ್ತಿಯ ಅಗತ್ಯತೆ ಹೆಚ್ಚಿದೆ. ರಾಜೀವ್ ಗಾಂಧಿ ಚೈತನ್ಯ ಯೋಜನೆಯಡಿ ತರಬೇತಿಯನ್ನು ಪಡೆಯುವ ಗ್ರಾಮೀಣ ಪ್ರದೇಶದ ಯುವಕ ಯುವತಿಯರಿಗೆ ಉದ್ಯೋಗ ಅವಕಾಶಬೇಕು ಹಾಗೂ ಉದ್ಯೋಗ ಅವಕಾಶವಿರುವ ತರಬೇತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಇದಕ್ಕೆ ಪೂರಕವಾಗಿ ತರಬೇತಿಯ ನಂತರ ಒಳ್ಳೆಯ ಸಂಸ್ಥೆಗಳನ್ನು ಆಹ್ವಾನಿಸಿ ಉದ್ಯೋಗ ಮೇಳಗಳನ್ನು ಹಮ್ಮಿಕೊಳ್ಳಬೇಕು ಎಂದು ಧ್ರುವನಾರಾಯಣ ಹೇಳಿದರು.
  ಇದೇ ವೇಳೆ ಮಾತನಾಡಿದ ಮೈಸೂರು-ಕೊಡಗು ಲೋಕ ಸಭಾ ಸದಸ್ಯರಾದ ಪ್ರತಾಪ್ ಸಿಂಹ ಅವರು ತಾಲ್ಲೂಕುಗಳಲ್ಲಿ ತಜ್ಞ ವೈದ್ಯರಿಲ್ಲದ ಕಾರಣ ಅಂಗವಿಕಲತೆ ಪ್ರಮಾಣ ಪತ್ರ ಪಡೆಯಲು ಬಹಳಷ್ಟು ಜನರು ಜಿಲ್ಲಾ ಕೇಂದ್ರಕ್ಕೆ ಆಗಮಿಸುತ್ತಾರೆ. ಅಂಗವಿಕಲರಿಗೆ ಸ್ಥಳೀಯವಾಗಿ ಸೌಲಭ್ಯ ಸಿಗುವಂತಾಗಬೇಕು. ಈ ಸಂಬಂಧ ತಜ್ಞ ವೈದ್ಯರನ್ನು ತಾಲ್ಲೂಕುಗಳಲ್ಲಿ ನೇಮಿಸುವುದರ ಜೊತೆಯಲ್ಲಿ ವೈದ್ಯರ ಲಭ್ಯತೆ ಕುರಿತು ಜನರಲ್ಲಿ ಅರಿವು ಮೂಡಿಸಲು ಹೋಬಳಿ ಹಂತದಲ್ಲಿ ಶಿಬಿರಗಳನ್ನು ಹಮ್ಮಿಕೊಳ್ಳಬೇಕು ಎಂದರು.
  ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲು ಸರ್ಕಾರ ಸಾಕಷ್ಟು ಅನುದಾನವನ್ನು ಮೀಸಲಿರಿಸಿದೆ. ಮಕ್ಕಳ ಆರೋಗ್ಯ ಕುಡಿಯುವ ನೀರಿನ ಮೇಲೆ ಅವಲಂಬಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷ ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆಯಾಗಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಸಹಕಾರದೊಂದಿಗೆ ಅಗತ್ಯ ಕ್ರಮವಹಿಸಬೇಕು ಎಂದು ಚಾಮರಾಜನಗರ ಲೋಕಸಭಾ ಸದಸ್ಯರು ಹೇಳಿದರು.
  ಸರ್ಕಾರ ಗಿರಿಜನರ ಸಮಗ್ರ ಅಭಿವೃದ್ಧಿಗಾಗಿ ಹೆಚ್ಚು ಒತ್ತು ನೀಡುವ ಮೂಲಕ ಅನುದಾನವನ್ನು ಬಿಡುಗಡೆಗೊಳಿಸಿದೆ. ಪ್ರತಿ ಮನೆ ನಿರ್ಮಾಣಕ್ಕೆ 1.75 ಲಕ್ಷ ರೂ. ನಿಗಧಿ ಪಡಿಸಿದೆ. ಜಿಲ್ಲೆಯಲ್ಲಿ ಗಿರಿಜನರಿಗೆ 3553 ಮನೆಗಳ ನಿರ್ಮಾಣದ ಗುರಿಯನ್ನು ಹೊಂದಿದ್ದು, 2284 ಮನೆಗಳ ಕಾಮಗಾರಿಯು ಪೂರ್ಣಗೊಂಡಿದೆ ಹಾಗೂ 1269 ಮನೆಗಳ ಕಾಮಗಾರಿಯು ಪ್ರಗತಿಯಲ್ಲಿದೆ. ಸಮಾಜದ ಕಟ್ಟ ಕಡೆಯ ಜನರಾಗಿರುವ ಗಿರಿಜನರಿಗೆ ಸರ್ಕಾರವು ನೀಡಿರುವ ಎಲ್ಲಾ ಸೌಲಭ್ಯಗಳು ನಿಗಧಿತ ಅವಧಿಯಲ್ಲಿ ಲಭಿಸುವಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದರು.
  ದೇಶ ಹಾಗೂ ರಾಜ್ಯದ ಸರಾಸರಿಗೆ ಹೋಲಿಸದಾಗ ಮೈಸೂರು ಜಿಲ್ಲೆಯ ಸಾಕ್ಷರತೆ ಹಿಂದೆ ಉಳಿದಿದೆ. ದೇಶದ ಸಾಕ್ಷರತೆ ಶೇ.74 ಹಾಗೂ ರಾಜ್ಯದ ಸಾಕ್ಷರತೆ ಶೇ.75 ಸರಾಸರಿಯಾಗಿದ್ದರೆ, ಮೈಸೂರು ಜಿಲ್ಲೆ ಶೇ.72 ಸರಾಸರಿ ಹೊಂದುವ ಮೂಲಕ ಸಾಕ್ಷರತಾ ಪ್ರಮಾಣದಲ್ಲಿ ರಾಜ್ಯದಲ್ಲಿ 16ನೇ ಸ್ಥಾನದಲ್ಲಿದೆ. ತಾಲ್ಲೂಕು ಪಂಚಾಯತ್‍ಗಳ ಕಾರ್ಯನಿರ್ವಾಹಕ ಅಧಿಕಾರಿಗಳು ವೈಯಷ್ಕರ ಶಿಕ್ಷಣ ಇಲಾಖೆಯೊಂದಿಗೆ ಜಿಲ್ಲೆಯ ಸಾಕ್ಷರತಾ ಪ್ರಮಾಣವನ್ನು ಹೆಚ್ಚಿಸಲು ಅಗತ್ಯ ಕ್ರಮವಹಿಸಬೇಕು. ಮೈಸೂರು ನಗರ ಸೇರಿದಂತೆ ತಾಲ್ಲೂಕಿನ ಸಾಕ್ಷರತಾ ಪ್ರಮಾಣ ಶೇ.82 ಸರಾಸರಿ ಹೊಂದಿದ್ದು, ಜಿಲ್ಲೆಯ ಇತರೆ ತಾಲ್ಕಕಿಗೆ ಹೋಲಿಸಿದಾಗ ಪ್ರಥಮ ಸ್ಥಾನದಲ್ಲಿದೆ ಎಂದು ಧ್ರುವನಾರಾಯಣ ತಿಳಿಸಿದರು.
  ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸರ್ಕಾರದ ಅನುದಾನವನ್ನು ಅವಲಂಬಿಸದೇ, ಖಾಸಗಿ ಕೈಗಾರಿಕೆಗಳ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿಯಿಂದ ಅಭಿವೃದ್ಧಿ ಹೊಂದಬಹುದು. ಕಡ್ಡಾಯವಾಗಿ ಎಲ್ಲಾ ಖಾಸಗಿ ಕೈಗಾರಿಕೆಗಳು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿಯಡಿ ಶೇ.2 ಹಣವನ್ನು ಸರ್ಕಾರಕ್ಕೆ ನೀಡÀಬೇಕು. ಅಲ್ಲದೇ ಖಾಸಗಿ ಸಂಸ್ಥೆಗಳ ಪ್ರಯೋಜಿತದಿಂದ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಬಹುದು ಎಂದು ತಿಳಿಸಿದರು.
 ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ. ಬಿ.ಪುಷ್ಪ ಅಮರನಾಥ್, ಉಪಾಧ್ಯಕ್ಷರಾದ ಎಲ್.ಮಾದಪ್ಪ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಗೋಪಾಲ್, ಅಪರ ಜಿಲ್ಲಾಧಿಕಾರಿ ಅರ್ಚನಾ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.     

No comments:

Post a Comment