Saturday 11 July 2015

ಜು. 12 ರಂದು ಮುಖ್ಯಮಂತ್ರಿಗಳಿಂದ ವಿ.ವಿ.ಶತಮಾನೋತ್ಸವ ಗೀತೆ ಲೋಕಾರ್ಪಣೆ

ಜು. 12 ರಂದು ಮುಖ್ಯಮಂತ್ರಿಗಳಿಂದ ವಿ.ವಿ.ಶತಮಾನೋತ್ಸವ ಗೀತೆ ಲೋಕಾರ್ಪಣೆ
ಮೈಸೂರು,ಜು.11- ಮೈಸೂರು ವಿಶ್ವ ವಿದ್ಯಾನಿಲಯ ಸ್ಥಾಪನೆಯಾಗಿ ಜುಲೈ 27ಕ್ಕೆ ನೂರನೇ ವರ್ಷಕ್ಕೆ ಕಾಲಿಡಲಿದೆ,  ಈ ಶುಭ ಸಂದರ್ಭವನ್ನು ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿಯವರು ಉದ್ಘಾಟಿಸಿ, ವರ್ಷಪೂರ್ತಿ ನಡೆಯಲಿರುವ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಉಪಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ತಿಳಿಸಿದರು.
  ಅವರು ತಮ್ಮ ಕಚೇರಿಯಲ್ಲಿ ಕರೆದಿದ್ದ ಸುದ್ಧಿಗೋಷ್ಠಿ ಮಾತನಾಡುತ್ತಾ ಮೈ. ವಿ.ವಿ.ಯ ಶತಮಾನೋತ್ಸವದ ಅಂಗವಾಗಿ ಅಂಶಲೇಖರವರು ಬರೆದು, ಗೀತೆ  ರಚಿಸಿ, ಸಂಗೀತ ನೀಡಿರುವ ವಿ.ವಿ. ಶತಮಾನೋತ್ಸವ ಗೀತೆಯನ್ನು ಇದೇ 12ರಂದು  ಸಂಜೆ 6 ಗಂಟೆಗೆ ಮೈಸೂರು ಮಾನಸಗಂಗೋಂತ್ರಿಯ ಬಯಲು ರಂಗಮಂದಿರದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಹೇಳಿದರು.
  ಈ ಗೀತೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯವು  ಪ್ರಾರಂಭವಾದಾಗಿನಿಂದ ಇಲ್ಲಿಯ ವರೆಗೆ ನೂರು ವರ್ಷಗಳಲ್ಲಿ ಸಾಧಿಸಿರುವ  ಸಾಧನೆಗಳ ಕುರಿತು ಗೀತೆಯ ರೂಪದಲ್ಲಿ ರಚಿಸಲಾಗಿದೆ. ಈ ಗೀತೆ ಇತರೆ  ವಿಶ್ವ ವಿದ್ಯಾನಿಲಯಗಳಿಗೆ ಮಾದರಿಯಾಗಿದ್ದು, ಮೈಸೂರಿನ ಮತ್ತು ಮೈವಿವಿಯ ಘನತೆಯನ್ನು ಹೆಚ್ಚಿಸಲಿದೆ, ಇಂತಹ ಸುಮಧುರವಾದ ಗೀತೆಯನ್ನು ಕನ್ನಡನಾಡಿನ ದೊರೆ  ಸಿದ್ದರಾಮಯ್ಯ ಬಿಡುಗಡೆ ಮಾಡುತ್ತಿರುವುದು ಹೆಮ್ಮೆಯ ವಿಷಯವೆಂದರು.
  ಮೈವಿವಿಯ ಶತಮಾನೋತ್ಸವದ ಅಂಗವಾಗಿ ವರ್ಷವಿಡೀ ಹಲವಾರು ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ಎಲ್ಲಾ ಕಾರ್ಯಕ್ರಮಗಳಿಗೆ ಜುಲೈ 27 ರಂದು ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ರಾಷ್ಟ್ರಪತಿಗಳು ಚಾಲನೆ ನೀಡಲಿದ್ದಾರೆ ಎಂದು ರಂಗಪ್ಪ ತಿಳಿಸಿದರು.
 ಈ ಶತಮಾನೋತ್ಸವದ ಅಂಗವಾಗಿ ಹಲವಾರು ಗಣ್ಯರಿಗೆ, ವಿದ್ವಾಂಸರಿಗೆ, ಸೈಂಟಿಸ್ಟ್ ಗಳಿಗೆ  ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಬೆಳವಣಿಗೆಗೆ ಕಾರಣರಾದ ಕೆಲವರನ್ನು ಗುರುತಿಸಿ ಅವರುಗಳನ್ನು ಸನ್ಮಾನಿಸಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ, ಸರ್.ಸಿ.ವಿ ರಾಮನ್, ವಿಶ್ವೇಶ್ವರಯ್ಯ, ಹಾಗೂ ಸಿ.ಎನ್. ರಾವ್ ಪ್ರಶಸ್ತಿಗಳನ್ನು ಆಯ್ದ ಗಣ್ಯರಿಗೆ ನೀಡಿ ಗೌರವಿಸಲಾಗುತ್ತದೆ ಎಂದು ನುಡಿದರು.
  ಮುಂದಿನ ನೂರು ವರ್ಷಗಳಲ್ಲಿ ಮೈವಿವಿಯನ್ನು ಮತ್ತಷ್ಟು ಬಲವರ್ಧನೆಗೊಳಿಸಿ, ತಾಂತ್ರಿಕವಾಗಿ, ವೈಜ್ಞಾನಿಕವಾಗಿ, ಅಭಿವೃದ್ದಿಪಡಿಸಲು ಯೋಜನೆಗಳನ್ನು ಸಿದ್ದಪಡಿಸಿಕೊಂಡಿದೆ,  ಅದರಂತೆ ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೊಳಪಡುವ ಎಲ್ಲಾ ಕಾಲೇಜುಗಳಲ್ಲಿ ತಂತ್ರಜ್ಞಾನ ಆಳವಡಿಸಿ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಅವರುಗಳಿಂದಲೇ ದೇಶದ ಪ್ರಗತಿಗೆ ತಯಾರಿಪಡಿಸು ಪ್ರಯತ್ನ ನಮ್ಮದಾಗಿರುತ್ತದೆ, ಎಂದ ಅವರು ವಿದ್ಯಾಥಿಗಳಿಗೆ ಅದರಲ್ಲೂ ಹಾಸ್ಟಲ್‍ಗಳಲ್ಲಿ ತಂಗಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೂಲಭೂತ ಕೊರತೆಗಳು ಎದ್ದು ಕಾಣುತ್ತಿವೆ ಇವುಗಳನ್ನು ಸರಿಪಡಿಸಿ ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ವಿವಿ ಕೆಲಸ ಮಾಡಲಿದೆ ಎಂದರು.
  ಚಾಮುಂಡಿ ಬೆಟ್ಟದ ತಪ್ಪಲಲ್ಲಿ 20 ಎಕರೆ ಪ್ರದೇಶದಲ್ಲಿ ವಿವಿಯ ಕ್ಯಾಂಪಸ್ ರಚನೆ ಮಾಡಲಿದೆ, ಚಾಮರಾಜನಗರದಲ್ಲಿರುವ ಸ್ಯಾಟ್‍ಲೈಟ್ ಕೇಂದ್ರವನ್ನು ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರವನ್ನಾಗಿ ಪರಿವತಿಸಲಾಗುತ್ತದೆ ಎಂದು ಹೇಳಿದರಲ್ಲದೆ ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಈ ಶತಮಾನೋತ್ಸವದಲ್ಲಿ ಹಮ್ಮಿಕೊಳ್ಳಲಾಗಿದೆ, ಈ ಕಾರ್ಯಕ್ರಮಕ್ಕಾಗಿ ಕರ್ನಾಟಕ ಸರ್ಕಾರದಿಂದ 50 ಕೋಟಿ ಅನುದಾನ ಬರಲಿದೆ ಎಂದು ಹೇಳಿದರು.
  -------------------------------------------------

ದಲಿತ ಎಂಬ ಕಾರಣಕ್ಕೆ ಸಿ.ಎಫ್.ಟಿ.ಆರ್.ಐ ನಿರ್ದೇಶಕರ ವಿರುದ್ಧ ಕಿಡಿ
ಮೈಸೂರು,ಜು.11- ಕೇಂದ್ರ ಸರ್ಕಾರದ ಸ್ವಾಮ್ಯಕ್ಕೊಳಪಡುವ ಮೈಸೂರು ನಗರದ ಸಿ.ಎಫ್.ಟಿ.ಆರ್.ಐ (ಆಹಾರ ಸಂಶೋದನೆ ಮತ್ತು ತಯಾರಿಕಾ ತರಬೇತಿ ಕೇಂದ್ರ) ನಿರ್ದೇಶಕ ಪ್ರೊ. ರಾಮ ರಾಜ ಶೇಖರನ್ ರವರು ಒಬ್ಬ ದಲಿತ ಎಂಬ ಕಾರಣಕ್ಕಾಗಿ ಅವರ ಏಳಿಗೆಯನ್ನು ಸಹಿಸದ ಕೆಲವು ಕಿಡಿಗೇಡಿಗಳು ಕನ್ನಡ ಪರ ಸಂಘಟನೆಗಳನ್ನು ಎತ್ತಿಕಟ್ಟಿ ಅವರ ವರುದ್ಧ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
 ಪ್ರೊ. ರಾಮರಾಜಶೇಖರನ್‍ರವರು ಮೂಲತಃ ತಮಿಳುನಾಡಿನವರಾಗಿದ್ದು,  ಇವರು ದಲಿತ  ಆದಿದ್ರಾವಿಡ ವರ್ಗಕ್ಕೆ  ಸೇರಿದವರಾಗಿರುತ್ತಾರೆ, ಇವರು ನವದೆಹಲಿಯ ಡಿಎಫ್.ಆರ್.ಎಲ್ ನ ಆಹಾರ ಸಂಶೋಧನೆ ಇಲಾಖೆಯಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದು, ಕಳೆದೆರಡು ವರ್ಷಗಳ ಹಿಂದೆಯಷ್ಟೇ ಮೈಸೂರಿನ ಸಿ.ಎಫ್.ಟಿ.ಆರ್.ಐ ನಿರ್ದೇಶಕರಾಗಿ ಇಲ್ಲಿಗೆ ಬಂದು  ಸೇವೆ ಸಲ್ಲಿಸುತಿದ್ದಾರೆ, ಇವರು ಅಧಿಕಾರ ವಹಿಸಿಕೊಂಡಾಗಿನಿಂದ ಈ ಸಂಸ್ಥೆಯ ಅಭಿವೃದ್ಧಿಗಾಗಿ ಕೆಲವು ನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತಾರೆ,
 ನಮ್ಮ ಪತ್ರಿಕೆಯ ಪ್ರತಿನಿಧಿ ಅಲ್ಲಿನ ನೌಕರರನ್ನು ಸಂದರ್ಶಿಸಿ ನಿರ್ದೇಶಕರ ನಡಾವಳಿ ಬಗ್ಗೆ ವಿಚಾರಿಸಿದಾಗ 90 ಭಾಗ ನೌಕರರು ಇವರ ವಿರುದ್ಧ ಯಾವುದೆ ಮಾತನಾಡಿಲ್ಲ, ಬದಲಾಗಿ  ರಾಮರಾಜನ್ ಸಾರ್ ತುಂಬಾ ಒಳ್ಳೆಯವರು, ಅವರು ಬಂದಮೇಲೆ  ಸಂಸ್ಥೆಯಲ್ಲಿ ಉತ್ತಮ ಚಟುವಟಿಕೆಗಳು ನಡೆಯುತ್ತಿವೆ, ಅವರಿಂದ  ಕನ್ನಡಕ್ಕಾಗಲೀ, ಇಲ್ಲಿನ ನೌಕರರಿಗಾಗಲೀ ಯಾವುದೇ ತೊಂದರೆ ಆಗಿಲ್ಲ ಎಂಬ ಮಾತುಗಳು ಕೇಳಿಬಂದವು.
 ನಿರ್ದೇಶಕರು ಎಲ್ಲಾ ಭಾಷೆಗಳನ್ನು ಪ್ರೀತಿಸುತ್ತಾ ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ   ಕನ್ನಡದ ಕಲೆ ಮತ್ತು ಸಂಸ್ಖøತಿ ಕಾರ್ಯಕ್ರಮಗಳಿಗೆ  ಹೆಚ್ಚು ಒತ್ತು ನೀಡುತ್ತಿದ್ದಾರೆ ಇವರಿಂದ ಕನ್ನಡಕ್ಕೆ ಯಾವುದೇ ರೀತಿಯ ಧಕ್ಕೆ ಆಗಿಲ್ಲ ಇದನ್ನರಿಯದ ಕೆಲವು ಕನ್ನಡ ಪರ ಸಂಘಗಳ ಕಾರ್ಯಕರ್ತರು, ಕೂಲಂಕುಶವಾಗಿ ಪರಿಶಿಲಿಸದೇ ಯಾರೋ ಹೇಳಿದ ಚಾಡಿ ಮಾತುಗಳನ್ನು ಕೇಳಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ನೌಕರರು ಹೇಳುತ್ತಾರೆ.
 ಸಿ.ಎಫ್.ಟಿ.ಆರ್. ನಡೆದಿದ್ದಾರೂ ಏನು? ಅಲ್ಲಿ ಕೆಲಸಮಾಡುತ್ತಿರುವ  ಕೆಲವೇ ಬೆರಳೆಣಿಕೆಯ ನೌಕರರು ನಿರ್ದೇಶಕರ ಆದೇಶದಂತೆ ಕೆಲಸ ಮಾಡದೇ ಕಾಲಹರಣ ಮಾಡುವುದು, ಹಾಜರಾತಿ ಪುಸ್ತಕಕ್ಕೆ  ಸಹಿಹಾಕಿ ಎಲ್ಲಿಯೋ ಹೋಗಿ ಸುತ್ತಾಡಿಕೊಂಡು  ಬರುವುದು, ಕೆಲಸ ಮಾಡದೇ ಹೋತ್ಲಾ ಹೊಡೆದು, ಕಾಲಕಳೆದು ತಿಂಗಳ ಕೊನೆಯಲ್ಲಿ ಸಂಬಳ ಪಡೆಯುವುದು, ರೌಡಿಗಳಂತೆ ವರ್ತಿಸುವುದು, ಇತರೆ ನೌಕರರಿಗೆ ಕಿರುಕುಳ ನೀಡುವುದು ಮುಂತಾದವುಗಳನ್ನು ಮಾಡುತ್ತಿದ್ದರು, ಈ ವಷಯ ನಿರ್ದೇಶಕರ ಗಮನಕ್ಕೆ  ಬಂದು ಅವರುಗಳಿಗೆ ಹಿಂದೊಮ್ಮೆ ಎಚ್ಚರಿಕೆ ನೀಡಿದ್ದರು, ಆದರೂ ಇದನ್ನೇ ಮುಂದುವರಿಸಿದ್ದರಿಂದ, ನಿರ್ದೇಶಕರು ಈ ನೌಕರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದಾರೆ, ಇದರಿಂದಾಗಿ ಈ ನೌಕರರು ಒಬ್ಬ ದಲಿತ ವಿಜ್ಞಾನಿ ಹಾಗೂ ನಿರ್ದೇಶಕರ ಏಳೀಗೆ ಸಹಿಸಿಕೊಳ್ಳದೆ, ಸಿ.ಎಫ್.ಟಿ.ಆರ್.ಐ ನಿರ್ದೇಶಕರು ಕನ್ನಡ ವಿರೋಧಿ ಧೋರಣೆ  ಅನುಸರಿಸುತ್ತಿದ್ದಾರೆ ಎಂದು ಕನ್ನಡ ಪರ ಸಂಘಟನೆಗಳನ್ನು ಎತ್ತಿಕಟ್ಟಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
  ಸಿಎಫ್‍ಟಿಆರ್‍ಐ ನಿರ್ದೇಶಕರಿಗೆ ಬೆಂಬಲ
 ಸಿ.ಎಫ್.ಟಿ.ಆರ್.ಐ ನಿದೇರ್ಶಕರ ಪರವಾಗಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ದಲಿತ ಪರ ಸಂಘಟನೆಗಳು ನಿಂತ್ತಿದ್ದು, ರಾಮರಾಜ ಶೇಖರನ್‍ಗೆ ಬೆಂಬಲ ಸೂಚಿಸುವುದಾಗಿಯೂ, ಇಂತಹ ಢೋಂಗಿ ಪ್ರತಿಭಟನೆಗಳಿಗೆ  ಜನತೆ ಮನ್ನಣೆ ನೀಡಬಾರದೆಂದು ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವೇದಿಕೆಯ ಉಪಾಧ್ಯಕ್ಷ ಸೋಮಯ್ಯ ಮಲೆಯೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment