Saturday 4 July 2015

ಶಾಸಕ ಕೆ.ಸಿ.ನಾರಾಯಣಗೌಡರಿಂದ ರೈತ ಕುಟುಂಬಗಳಿಗೆ ಸಾಂತ್ವನ.

ಕೃಷ್ಣರಾಜಪೇಟೆ. ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾದ ಹಿರಿಕಳಲೆಯ ಶಂಕರೇಗೌಡ(42), ದೊಡ್ಡತಾರಹಳ್ಳಿಯ ಪ್ರದೀಪ(40) ಮತ್ತು ಮೂಡನಹಳ್ಳಿಯ ಲೋಕೇಶ(43) ಅವರ ಮನೆಗೆ ಶಾಸಕ ನಾರಾಯಣಗೌಡ ಇಂದು ಅಧಿಕಾರಿಗಳ ತಂಡದೊಂದಿಗೆ ಭೇಟಿ ಮಾಡಿ ರೈತ ಕುಟುಂಬಗಳಿಗೆ ಸಾಂತ್ವನ ಹೇಳಿದರು.
ರೈತರ ನೋವು ನಲಿವುಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ನಿಮ್ಮ ಸಂಕಷ್ಠಕ್ಕೆ ನೆರವಾಗಲು ನಾವಿದ್ದೇವೆ. ನಿಮ್ಮ ಸಂಕಷ್ಠಗಳನ್ನು ನಮ್ಮ ಬಳಿ ಹೇಳಿಕೊಳ್ಳಿ ನಿಮ್ಮ ಸಮಸ್ಯೆಗೆ ನಾವು ಪರಿಹಾರವನ್ನು ಕಂಡುಹಿಡಿಯುತ್ತೇವೆ. ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಕೆಟ್ಟ ನಿರ್ಧಾರಕ್ಕೆ ಬರಬೇಡಿ ಎಂದು ಅನ್ನದಾತರಲ್ಲಿ ಶಾಸಕ ನಾರಾಯಣಗೌಡ ಕೈಮುಗಿದು ಮನವಿ ಮಾಡಿದರು. ಸಾಲದ ಬಾಧೆಯಿಂದ ಮೃತರಾದ ರೈತ ಕುಟುಂಬಗಳಿಗೆ ರಾಜ್ಯ ಸರ್ಕಾರವು ಪರಿಹಾರದ ಹಣವನ್ನು ಎಷ್ಟು ನೀಡಬೇಕೆಂದು ಇನ್ನೂ ನಿರ್ಧಾರಕ್ಕೆ ಬಂದಿಲ್ಲ. ಸಾಲದ ಬಾಧೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತ ಕುಟುಂಬಗಳ ಪರವಾಗಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರ ಸದನದ ಒಳಗೆ ಮತ್ತು ಹೊರಗೆ ನಿರಂತರವಾದ ಹೋರಾಟವನ್ನು ಮಾಡುತ್ತಿದ್ದಾರಲ್ಲದೇ ಕಾಲ್ನಡಿಯ ಜಾಥವನ್ನು ನಡೆಸಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಕಬ್ಬು ಬೆಳೆಗಾರರ ಸಂಕಷ್ಠಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸುವಂತೆ ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರದಿಂದ ದೊರೆಯಬಹುದಾದ ಎಲ್ಲಾ ಬಗೆಯ ಸೌಲಭ್ಯಗಳು ಮತ್ತು ಸಹಾಯ ಧನವನ್ನು ಕೊಡಿಸಿಕೊಡಲು ಕ್ಷೇತ್ರದ ಶಾಸಕನಾದ ನಾನು ಬದ್ಧನಾಗಿದ್ದೇನೆ. ದಯಮಾಡಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಪ್ಲೀಸ್ ಎಂದು ಮನವಿ ಮಾಡಿದ ಶಾಸಕರು ನಾನು ವಯಕ್ತಿಕವಾಗಿ ಪ್ರತೀ ಕುಟುಂಬಕ್ಕೆ ತಲಾ 10ಸಾವಿರ ರೂಪಾಯಿ ಹಣದ ಅಲ್ಪ ಕಾಣಿಕೆ ನೀಡುತ್ತಿದ್ದೇನೆ. ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಭರಿಸುತ್ತೇನೆ ಧೈರ್ಯವಾಗಿರಿ ಎಂದು ಮಾನಸಿಕವಾಗಿ ಆತ್ಮಸ್ಥೈರ್ಯವನ್ನು ಶಾಸಕ ನಾರಾಯಣಗೌಡ ತುಂಬಿದರು.
ಪ್ರವಾಸಿ ಕೇಂದ್ರವಾಗಿ ಹೇಮಗಿರಿ ಅಭಿವೃದ್ಧಿ: ತಾಲೂಕಿನ ಪುರಾಣ ಪ್ರಸಿದ್ಧ ಸ್ಥಳವಾದ ಹೇಮಗಿರಿಯನ್ನು ಪ್ರವಾಸಿಕೇಂದ್ರವನ್ನಾಗಿ ಅಭಿವೃದ್ಧಿಪಡಿಸಿ ಪ್ರವಾಸಿಗರಿಗೆ ಕನಿಷ್ಠಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ರಾಜ್ಯ ಸರ್ಕಾರವು 2ಕೋಟಿ 50ಲಕ್ಷರೂ ವೆಚ್ಚದಲ್ಲಿ ಕ್ರಿಯಾಯೋಜನೆಯನ್ನು ರೂಪಿಸಿ ಸಧ್ಯ 50 ಲಕ್ಷರೂ ಹಣವನ್ನು ಬಿಡುಗಡೆ ಮಾಡಿದೆ. ಯಾತ್ರಿನಿವಾಸದ ನಿರ್ಮಾಣ, ಹೇಮಗಿರಿ ಫಾಲ್ಸ್‍ಗೆ ಫ್ಲಢ್ ಲೈಟ್ ವ್ಯವಸ್ಥೆ, ಸೋಪಾನಕಟ್ಟೆ, ಸ್ನಾನ ಮತ್ತು ಶೌಚಗೃಹಗಳ ನಿರ್ಮಾಣ, ಕುಡಿಯುವ ನೀರು, ಹೇಮಗಿರಿ ಅಣೆಕಟ್ಟೆಗೆ ಫೆನ್ಸಿಂಗ್ ಮತ್ತು ರೈಲಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು. ಪ್ರವಾಸಿ ಕೇಂದ್ರವಾಗಿ ಹೇಮಗಿರಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯು ಹೆಚ್ಚಾಗಲಿದ್ದು ಈ ಭಾಗದ ವಾಣಿಜ್ಯ ವ್ಯವಹಾರಗಳು ದ್ವಿಗುಣಗೊಂಡು ರೈತರ ಭಾಗ್ಯದ ಬಾಗಿಲು ತೆರೆಯಲಿದೆ. ಆದ್ದರಿಂದ ಪ್ರವಾಸಿಗರು ಉಳಿದುಕೊಳ್ಳಲು ಸ್ಟೇಹೋಂಗಳ ನಿರ್ಮಾಣ, ನದಿದಂಡೆಯಲ್ಲಿ ರೆಸಾರ್ಟ ನಿರ್ಮಾಣಕ್ಕೆ ರೈತರು ಮುಂದೆ ಬಂದರೆ ಶೇ.50ರಷ್ಟು ರಿಯಾಯಿತಿಯನ್ನು ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಕೊಡಿಸಿಕೊಡುವುದಾಗಿ ಶಾಸಕ ನಾರಾಯಣಗೌಡ ಭರವಸೆ ನೀಡಿದರು.
 ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಮ್ಮಶ್ರೀನಿವಾಸ್, ತಾ.ಪಂ ಮಾಜಿಅಧ್ಯಕ್ಷೆ ರೂಪಕೃಷ್ಣ, ಮುಖಂಡರಾದ ಚೋಳೇನಹಳ್ಳಿ ಪುಟ್ಟಸ್ವಾಮಿಗೌಡ, ಅಘಲಯ ಜಾನಕೀರಾಂ, ಕರ್ತೇನಹಳ್ಳಿಸುರೇಶ್, ದಾನಶೇಖರ, ಬೋಳಮಾರನಹಳ್ಳಿ ಮಂಜುನಾಥ್, ಬಂಡಿಹೊಳೆ ಅಶೋಕ್, ಬಿ.ಎಲ್.ರಂಗನಾಥೇಗೌಡ, ರಾಮೇಗೌಡ, ಕಾಯಿಮಂಜುನಾಥ್, ಶೇಷಾಧ್ರೀ, ಹಿರಿಕಳಲೆ ಸತೀಶ್, ಆನೆಗೊಳರಾಮೇಗೌಡ, ಮಂಡ್ಯನಾಗೇಶ್, ನಾಟನಹಳ್ಳಿ ಗಂಗಾಧರ್, ಕೆ.ಆರ್.ನೀಲಕಂಠ, ತಾಲೂಕು ಸಹಾಯಕ ಕೃಷಿನಿರ್ದೇಶಕ ಶಿವರಾಜ್, ಕೃಷಿ ಅಧಿಕಾರಿ ಶಂಭೂಗೌಡ, ರಾಜಶ್ವನಿರೀಕ್ಷಕ ಮಂಜುನಾಥಸ್ವಾಮಿ, ಗ್ರಾಮ ಲೆಕ್ಕಾಧಿಕಾರಿಗಳಾದ ಹರೀಶ್, ಹನೀಫ್ ಮತ್ತಿತರರು ಉಪಸ್ಥಿತರಿದ್ದರು.

No comments:

Post a Comment