Thursday 5 November 2015

ಮಂಡ್ಯ  : ತಾಲೂಕಿನ ಮಂಗಲ ಗ್ರಾಮದಲ್ಲಿ ಪರಿಸರ ರೂರಲ್ ಡೆವೆಲಪ್‍ಮೆಂಟ್ ಸೊಸೈಟಿ ವತಿಯಿಂದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ  ಕನ್ನಡ ರಾಜ್ಯೋತ್ಸವ ಅಂಗವಾಗಿ ನೂರಾರು ವಿವಿಧ ಗಿಡ ನೆಡುವ ಕಾರ್ಯಕ್ರಮ ನಡೆಯಿತು.
ಜೈವಿಕ ಇಂಧನ ಗಿಡಗಳಾದ ಹಿಪ್ಪೆ, ನೇರಳೆ, ಹೊಂಗೆ, ಬೇವು, ಮಾಗನಿ ಇತ್ಯಾದಿ ಗಿಡಗಳನ್ನು ನಡಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ. ಶಶಿಧರ್ ಬಸವರಾಜು ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಸ್ಯ ಸಂರಕ್ಷಣೆಯು ನಿತ್ಯ ಕಾಯಕವಾಗಬೇಕು. ಮರ-ಗಿಡ ಬೆಳೆಸುವ ಕಾಯಕವನ್ನು ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ತೊಡಗಿಸಿಕೊಳ್ಳಬೇಕಾಗಿದೆ. ನಿಸರ್ಗ ಸೇವೆಯ ಕಾಯಕವನ್ನು ನಿಷ್ಠೆಯಿಂದ ನೆರವೇರಿಸಿದರೆ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದು ಎಂದು ತಿಳಿಸಿದರು.
ಪ್ರಕೃತಿ ಮನುಷ್ಯನ ಅವಶ್ಯಕತೆಗಳನ್ನು ಪೂರೈಸಬಲ್ಲದು. ಆದರೆ ದುರಾಸೆಗಳನ್ನಲ್ಲ ಎಂಬ ಮಾತಿನಂತೆ ಗ್ರಾಮದ ಸ್ವಾಭಾವಿಕ ಸಂಪನ್ಮೂಲಗಳ ಕೆರೆ-ಕಟ್ಟೆ, ಗೋಮಾಳ ಇತ್ಯಾದಿ ಸ್ಥಳಗಳಲ್ಲಿ ಜೀವ ಸಂಕುಲಗಳ ಉಳಿವಿಗೆ ಒಂದಾಗಬೇಕಿದೆ ಎಂದರು.
ತಾಲೂಕಿನ 30 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರಿಸರ ಸಂಸ್ಥೆ ಸಹಯೋಗದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಪ್ರಸಕ್ತ ವರ್ಷ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಪರಿಸರ ರೂರಲ್ ಡೆವೆಲಪ್‍ಮೆಂಟ್ ಸಂಸ್ಥೆಯ ಗೌರವಾಧ್ಯಕ್ಷ ಕೆ.ಟಿ. ಹನುಮಂತು ಮಾತನಾಡಿ, ಶೇ. 35ರಷ್ಟು ಕಾಡು ಅವಶ್ಯಕತೆ ಇದೆ. ಮನುಷ್ಯನ ದೈನಂದಿನ ಬದುಕಿಗೆ ಉಸಿರಾಡುವ ಗಾಳಿ ಅತ್ಯಂತ ಹೆಚ್ಚು ಅವಶ್ಯಕತೆ ಇದ್ದು, ಇಂದು ಮಾಲಿನ್ಯಗೊಳ್ಳುತ್ತಿರುವ ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿಯು ಪ್ರಸ್ತುತ ಯುವಜನಾಂಗದ ಮೇಲಿದೆ ಎಂದು ತಿಳಿಸಿದರು.

No comments:

Post a Comment