Tuesday 3 November 2015

ಕೃಷ್ಣರಾಜಪೇಟೆ. ತಮ್ಮನ್ನೇ ದೇವರೆಂದು ನಂಬಿ ಬರುವ ರೋಗಿಗಳಿಗೆ ವೈದ್ಯರು ನಗುಮೊಗದೊಂದಿಗೆ ಉತ್ತಮವಾದ ಚಿಕಿತ್ಸೆಯನ್ನು ನೀಡುವ ಮೂಲಕ ವೈದ್ಯೋ ನಾರಾಯಣೋಹರಿ ಎಂಬ ಮಾತನ್ನು ನಿಜವಾಗಿಸಬೇಕು. ವ್ಲತ್ತಿಯಲ್ಲಿ ಬದ್ಧತೆ, ಕರ್ತವ್ಯ ದಕ್ಷತೆ ಹಾಗೂ ಸೇವಾ ಮನೋಭಾವನೆ ಜೀವನದ ಉಸಿರಾಗಬೇಕು ಎಂದು ಶಾಸಕ ನಾರಾಯಣಗೌಡ ಮನವಿ ಮಾಡಿದರು.
ಅವರು ಇಂದು ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ತಾಲೂಕಿನ ವಿವಿಧ ಆಸ್ಪತ್ರೆಗಳ ವೈದ್ಯರು, ಶುಶ್ರೂಷಕಿಯರು, ಆರೋಗ್ಯ ಕಾರ್ಯಕರ್ತರು ಹಾಗೂ ಆರೋಗ್ಯ ಸಿಬ್ಬಂಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಡ ರೋಗಿಗಳ ಜೀವನದೊಂದಿದೆ ಚೆಕ್ಕಾಟವಾಡಿ ಚಿಕಿತ್ಸೆ ನೀಡಲು ಹಣಕ್ಕಾಗಿ ಒತ್ತಾಯಿಸುವ ವೈದ್ಯರು ನನ್ನ ಕ್ಷೇತ್ರದಲ್ಲಿ ಕೆಲಸ ಮಾಡುವುದು ಬೇಕಾಗಿಲ್ಲ. ಸೇವಾಬದ್ಧತೆ ಹಾಗೂ ಕರ್ತವ್ಯ ದಕ್ಷತೆಯಿಂದ ಕೆಲಸ ಮಾಡಿ ಜನಮೆಚ್ಚುಗೆ ಪಡೆಯುವ ವೈದ್ಯರ ಅವಶ್ಯಕತೆ ನಮ್ಮ ತಾಲೂಕಿಗೆ ಅಗತ್ಯವಾಗಿದೆ. ವೈದ್ಯರನ್ನು ನಮ್ಮ ಗ್ರಾಮೀಣ ಪ್ರದೇಶದ ಜನರು ಸಾಕ್ಷಾತ್ ದೇವರೆಂದೇ ಗೌರವಿಸಿ ನಮಸ್ಕಾರ ಮಾಡುತ್ತಾರೆ. ಬಡ ರೋಗಿಗಳು ವೈದ್ಯರನ್ನು ಹರಸಿ ಆಶೀರ್ವದಿಸುವಾಗ ಸಿಗುವ ಆನಂದವು ಕೋಟಿ ರೂಪಾಯಿ ಹಣ ನೀಡಿದರೂ ದೊರೆಯವುದಿಲ್ಲ. ಆದ್ದರಿಂದ ಇಂದಿನ ದಿನಮಾನದಲ್ಲಿ ಸೇವೆ ಎಂಬ ಪದವು ಅರ್ಥ ಕಳೆದುಕೊಳ್ಳುತ್ತಿದ್ದರೂ ಕೆಲವೇ ಮಂದಿ ವೈದ್ಯರು ಸಲ್ಲಿಸುವ ಪ್ರಾಮಾಣಿಕವಾದ ಸೇವೆಯಿಂದಾಗಿ ಇಂದಿಗೂ ಮಾನವೀಯ ಮೌಲ್ಯಗಳು ಹಾಗೂ ಸೇವಾ ಮನೋಭಾವನೆಯು ಜೀವಂತವಾಗಿದೆ ಎಂದು ಅಭಿಮಾನದಿಂದ ನುಡಿದ ಶಾಸಕ ನಾರಾಯಣಗೌಡರು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯು ಜಾರಿಗೆ ಬಂದ ಮೇಲೆ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಗುಣಮಟ್ಟದ ಸೇವೆಯು ಉಚಿತವಾಗಿ ದೊರೆಯುತ್ತಿದೆ. ಆದ್ದರಿಂದ ಗ್ರಾಮೀಣ ಜನರು ಸಾಲಸೋಲ ಮಾಡಿ ಖಾಸಗೀ ನರ್ಸಿಂಗ್ ಹೋಂಗಳಿಗೆ ಹೋಗಿ ಚಿಕಿತ್ಸೆ ಪಡೆದು ಸಾಲಗಾರರಾಗಿ ನೆಮ್ಮದಿಯನ್ನು ಹಾಳು ಮಾಡಿಕೊಳ್ಳದೇ ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯುವ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಉಚಿತವಾಗಿ ಪಡೆದುಕೊಂಡು ಗ್ರಾಮೀಣ ಪ್ರದೇಶದ ಜನರು ನೆಮ್ಮದಿಯ ಜೀವನ ನಡೆಸಬೇಕು ಎಂದು ಶಾಸಕ ನಾರಾಯಣಗೌಡ ಕರೆ ನೀಡಿದರು.
ಕೆ.ಆರ್.ಪೇಟೆ ಸಾರ್ವಜನಿಕ ಆಸ್ಪತ್ರೆಯು 100ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದೆ. ಅಲ್ಟ್ರಾಸ್ಕ್ಯಾನಿಂಗ್ ಸೇರಿದಂತೆ ಡಯಾಲಿಸೀಸ್ ಯಂತ್ರ, ಅತ್ಯಾಧುನಿಕ ಎಕ್ಸರೇ ಯಂತ್ರವೂ ಸ್ಭೆರಿದಂತೆ ಖಾಸಗೀ ನರ್ಸಿಂಗ್ ಹೋಂಗಳಲ್ಲಿಯೂ ಸಿಗದ ಅತ್ಯಾಧುನಿಕ ಹೈಟೆಕ್ ವಿಶೇಷ ಸೌಲಭ್ಯಗಳು  ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿಯೇ ದೊರೆಯಲಿವೆ. ಸರ್ಕಾರಿ ಆಸ್ಪತ್ರೆಯ ವೈದ್ಯರು ವೃತ್ತಿ ಬದುಕಿನಲ್ಲಿ ಶಿಸ್ತು, ಕಾರ್ಯದಕ್ಷತೆ ಹಾಗೂ ಸಮಯ ಪಾಲನೆ ಮಾಡಿ ಒಳ್ಳೆಯ ವ್ಶೆದ್ಯರೆಂಬ ಹೆಗ್ಗಳಿಕೆಗೆ ಪಾತ್ರರಾಗಬೇಕು. ಈ ದಿಕ್ಕಿನಲ್ಲಿ ಆಸ್ಪತ್ರೆಗಳಿಗೆ ಬೇಕಾದ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಆರೋಗ್ಯ ಸಚಿವರಾದ ಯು.ಟಿ.ಖಾದರ್ ಅವರಲ್ಲಿ ಕಾಡಿ ಬೇಡಿಯಾದರೂ ದೊರಕಿಸಿಕೊಡುವುದಾಗಿ ನಾರಾಯಣಗೌಡ ಭರವಸೆ ನೀಡಿದರು. ನೀವು ಈ ಹಿಂದೆ ಕೆಲಸ ಮಾಡಿದ ಬಗ್ಗೆ ಪ್ರಶ್ನೆ ಮಾಡಲು ಹೋಗುವುದಿಲ್ಲ, ಇನ್ನು ಮುಂದೆ ನೀವು ರೋಗಿಗಳಿಗೆ ನೀಡುವ ಸೇವೆ ಉತ್ತಮವಾಗಿರಬೇಕು. ಬಡ ರೋಗಿಗಳ ಜೊತೆಯಲ್ಲಿ ಸೌಜನ್ಯಯುತವಾಗಿ ನಡೆದುಕೊಳ್ಳಬೇಕು. ನಗುಮೊಗದ ಸೇವೆಯಿಂದ ಬಡರೋಗಿಯ ಖಾಯಿಲೆಯು ಕ್ಷಣ ಮಾತ್ರದಲ್ಲಿ ದೂರಾಗಬೇಕು ಎಂದು ಶಾಸಕರು ವೈದ್ಯರು ಹಾಗೂ ಸಿಬ್ಬಂಧಿಗಳನ್ನು ಕೈಮುಗಿದು ಪ್ರಾರ್ಥಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮಾಧಿಕಾರಿಗಳು ಹಾಗೂ ತಾಲೂಕಿನ ನೋಡೆಲ್ ವೈದ್ಯಾಧಿಕಾರಿಗಳಾದ ಡಾ.ಕೆ.ಮೋಹನ್ ಅವರು ಮಾತನಾಡಿ ಸಿಬ್ಬಂದಿಗಳು ಹಾಗೂ ವೈದ್ಯರ ಕೊರತೆಯ ನಡುವೆಯೂ ಬಡ ರೋಗಿಗಳಿಗೆ ಉತ್ತಮವಾದ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ನಮ್ಮ ತಾಲೂಕಿನ ವೈದ್ಯರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಾಸಕರ ಮನವಿಯ ಮೇರೆಗೆ ಇನ್ನೂ ಹೆಚ್ಚಿನ ಕಾರ್ಯದಕ್ಷತೆಯನ್ನು ಮೈಗೂಡಿಸಿಕೊಂಡು ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗೌರಮ್ಮಶ್ರೀನಿವಾಸ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ವಿ.ಮಂಜೇಗೌಡ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಭುವನೇಶ್ವರಿಮೋಹನ್, ಉಪಾಧ್ಯಕ್ಷೆ ನಾಗರತ್ನಮ್ಮ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಜಯರಾಮು, ತಾಲೂಕು ಆಡಳಿತ ವೈದ್ಯಾಧಿಕಾರಿ ಚಿಕ್ಕಾಡೆ ಅರವಿಂದ್, ಮುಖಂಡರಾದ ಅಕ್ಕಿಹೆಬ್ಬಾಳು ಶ್ರೀನಿವಾಸ್, ತಾಲೂಕು ಪಂಚಾಯಿತಿ ಸದಸ್ಯ ಎಂ.ಸಿ.ರಾಮೇಗೌಡ, ಎಪಿಎಂಸಿ ಮಾಜಿಅಧ್ಯಕ್ಷ ಎಂ.ಸಿ.ಸಣ್ಣಯ್ಯ, ಪುರಸಭೆ ಸದಸ್ಯ ಕೆ.ಎಸ್.ಸಂತೋಷ್, ಸಾರ್ವಜನಿಕ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ.ಎಂ.ಜಯಶೇಖರ್ ಮತ್ತಿತರರು ಉಪಸ್ಥಿತರಿದ್ದು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಜಯರಾಮು ಸ್ವಾಗತಿಸಿದರು, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಚಿಕ್ಕಾಡೆ ಅರವಿಂದ್ ವಂದಿಸಿದರು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್.ವೆಂಕಟಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಮಹಿಳಾ ಶುಶ್ರೂಷಕಿ ಜಯರತ್ನ ಪ್ರಾರ್ಥಿಸಿದರು. ಕೆ.ಆರ್.ಪೇಟೆ ತಾಲೂಕಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ವೈದ್ಯರು, ಶುಶ್ರೂಷಕಿಯರು ಹಾಗೂ ಸಿಬ್ಬಂಧಿಗಳು ಸಭೆಯಲ್ಲಿ ಹಾಜರಿದ್ದರು.
ಚಿತ್ರಶೀರ್ಷಿಕೆ: 03-ಏಖPಇಖಿಇ-04  ಕೆ.ಆರ್.ಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ತಾಲೂಕಿನ ವಿವಿಧ ಆಸ್ಪತ್ರೆಗಳ ವೈದ್ಯರು, ಶುಶ್ರೂಷಕಿಯರು, ಆರೋಗ್ಯ ಕಾರ್ಯಕರ್ತರು ಹಾಗೂ ಆರೋಗ್ಯ ಸಿಬ್ಬಂಧಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ನಾರಾಯಣಗೌಡ ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮಾಧಿಕಾರಿ ಡಾ.ಕೆ.ಮೋಹನ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗೌರಮ್ಮಶ್ರೀನಿವಾಸ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ವಿ.ಮಂಜೇಗೌಡ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಭುವನೇಶ್ವರಿಮೋಹನ್, ಉಪಾಧ್ಯಕ್ಷೆ ನಾಗರತ್ನಮ್ಮ ಮತ್ತಿತರರು ಚಿತ್ರದಲ್ಲಿದ್ದಾರೆ.

No comments:

Post a Comment