Friday 25 July 2014

ಇಸ್ರೇಲ್ ಮತ್ತು ಪ್ಯಾಲೆಸ್ತೈನ್ ನಡುವಿನ ಯುದ್ಧ ನಿಲ್ಲಿಸಲು ವಿಶ್ವಸಂಸ್ಥೆ ಮುಂದಾಗಲಿ.ಹರ್ಷಕುಮಾರ್.

ಇಸ್ರೇಲ್ ಮತ್ತು ಪ್ಯಾಲೆಸ್ತೈನ್ ನಡುವಿನ ಯುದ್ಧ ನಿಲ್ಲಿಸಲು ವಿಶ್ವಸಂಸ್ಥೆ ಮುಂದಾಗಲಿ.
ಇಸ್ರೇಲ್ ಮತ್ತು ಪ್ಯಾಲೆಸ್ತೈನ್ ನಡುವಿನ ಸಂಘರ್ಷ ಕೊನೆಗೊಂಡು ಎರೆಡು ರಾಷ್ಟ್ರಗಳು ಪರಸ್ಪರ ಗೌರವ ಭಾವನೆ ಹೊಂದುವಂತೆ ಮಾಡಲು ವಿಶ್ವಸಂಸ್ಥೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ಪತ್ರಕರ್ತರಾದ ಹರ್ಷಕುಮಾರ್ ಕುಗ್ವೆ ಒತ್ತಾಯಿಸಿದರು.
ನಗರದ ಪುಸ್ತಕಮನೆಯ ವಾರದ ಓದುವಿನಲ್ಲಿ ನಡೆದ ಇಸ್ರೇಲ್ ಮತ್ತು ಪ್ಯಾಲೆಸ್ತೈನ್ ನಡುವಿನ ಸಂಘರ್ಷ: ವಾಸ್ತವ ಏನು? ಎಂಬ ವಿಷಯದ ಕುರಿತು ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ಯಾಲೆಸ್ತೈನ್ ಮೇಲೆ ಇಸ್ರೇಲ್ ಪ್ರತಿನಿತ್ಯ ಉದ್ದೇಶಪೂರ್ವಕ ಯೋಜನಬದ್ಧ ಅಮಾನವೀಯ ದಾಳಿ ನಡೆಸುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು.
ಈ ಸಂಘರ್ಷ ಕೇವಲ ಇಸ್ರೇಲ್ ಜಿಯೋನಿಷ್ಟ್‍ಗಳು ಮತ್ತು ಪ್ಯಾಲೆಸ್ತೈನ್‍ನ ಭಯೋತ್ಪಾದಕರ ನಡುವಿನ ಯುದ್ಧವಾಗಿಲ್ಲದೇ ಇದರ ಹಿಂದೆ ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಅರೇಬಿಯಾದ ತೈಲದ ಮೇಲೆ ಕಣ್ಣಿಟ್ಟಿರುವ ಹಲವು ರಾಷ್ಟ್ರಗಳ ಹಿತಾಸಕ್ತಿ ಅಡಗಿದ್ದು ಈ ರಾಷ್ಟ್ರಗಳ ಪರವೇ ವಿಶ್ವಸಂಸ್ಥೆ ಕೆಲಸ ಮಾಡುತ್ತಿರುವುದು ದುರಂತ ಎಂದರು.
1948ರಲ್ಲಿ ಉದಯವಾದ ಇಸ್ರೇಲ್ ಪ್ಯಾಲೆಸ್ತೈನ್ ಮೇಲೆ ಮೃಗೀಯ ದಾಳಿ ನಡೆಸುತ್ತಿದ್ದು ಇದುವರೆಗೂ 80ಲಕ್ಷಕ್ಕೂ ಹೆಚ್ಚು ಪ್ಯಾಲೆಸ್ತೈನಿಯರನ್ನು ತಮ್ಮ ಮೂಲ ನೆಲೆಗಳಿಂದ ಹೊರದಬ್ಬುತ್ತಾ ನಿರಾಶ್ರಿತರನ್ನಾಗಿ ಮಾಡಿದೆ. ಈ ಕುರಿತು ವಿಶ್ವಸಂಸ್ಥೆ ಇದುವರೆಗೂ 72 ಒಪ್ಪಂದಗಳನ್ನು ಇಸ್ರೇಲ್ ಮೇಲೆ ಹೇರಿದ್ದರೂ ಸಹ ಆ ಎಲ್ಲಾ ಒಪ್ಪಂದಗಳನ್ನು ಇಸ್ರೇಲ್ ಯಾವುದೇ ಬೆಲೆ ನೀಡದೆ ಮುರಿದಿದೆ. ಆದರೂ ವಿಶ್ವಸಂಸ್ಥೆ ಅದರ ಮೇಲೆ ಕ್ರಮ ಕೈಗೊಳ್ಳದೆ ಪಕ್ಷಪಾತತನ ಅನುಸರಿಸುತ್ತಿದೆ ಎಂದು ದೂರಿದರು.
ಈ ವರ್ಷವೂ ಇಸ್ರೇಲ್‍ನ ಕ್ರೂರ ದಾಳಿಗೆ 680 ಪ್ಯಾಲೆಸ್ತೇನಿಯರು ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ಅರ್ದಕ್ಕೂ ಹೆಚ್ಚು ಜನ ಮಕ್ಕಳಾಗಿರುವುದು ದುರ್ದೈವ ಎಂದರು.
ಇಸ್ರೇಲ್‍ನ ದಾಳಿಗೆ ಪ್ಯಾಲೇಸ್ತೈನ್‍ನಿಂದ ಕೆಲ ಭಯೋತ್ಪಾದಕರು ಪ್ರತಿ ದಾಳಿ ಮಾಡುತ್ತಿರುವುದು ಕೂಡ ಸಮರ್ಥನೀಯವಲ್ಲ. ಏಕೆಂದರೆ ಈ ಸಮಸ್ಯೆಗೆ ಯುದ್ಧ ಪರಿಹಾರವಲ್ಲ. ಎರೆಡೂ ರಾಷ್ಟ್ರಗಳ ಅಸ್ತಿತ್ವವನ್ನು ಘೋಷಿಸಿ ಇಸ್ರೇಲ್ ಮತ್ತು ಪ್ಯಾಲೆಸ್ತೈನ್ ಪರಸ್ಪರರ ಸ್ವಯಂ ಆಡಳಿತವನ್ನು ಗೌರವಿಸುತ್ತಾ ಇರುವ ಪರಿಸ್ಥಿತಿಯನ್ನು ವಿಶ್ವಸಂಸ್ಥೆ ಮಾಡಬೇಕು, ಮತ್ತು ಇದರಲ್ಲಿ ಪಕ್ಷಪಾತತನ ಮಾಡಬಾರುದು ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಲಕ್ಷ್ಮಣ್ ಚೀರನಹಳ್ಳಿಯವರು, ಈ ಸಮಸ್ಯೆಯಿಂದ ಲಾಭ ಮಾಡಿಕೊಳ್ಳುತ್ತಿರುವ ಅಮೆರಿಕ ಮತ್ತು ಇಂಗ್ಲೆಂಡ್ ತಮ್ಮ ಧನದಾಯಿತನದ ನೀತಿಯನ್ನು ಕೈಬಿಡಬೇಕು ಮತ್ತು ಪ್ರತಿ ರಾಷ್ಟ್ರವೂ ಸಹ ಈ ವಿಚಾರದಲ್ಲಿ ತಮ್ಮ ನಿಲುವನ್ನು ಬಹಿರಂಗವಾಗಿ ವ್ಯಕ್ತಪಡಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು ಅಂದರು.

No comments:

Post a Comment