Friday 25 July 2014

ಕಾನೂನು ಬಾಹಿರ ಕೃತ್ಯಕ್ಕೆ ಕ್ಷಮೆ ಬೇಡ: ಡಾ. ಅಜಯ್ ನಾಗಭೂಷಣ್

ಕಾನೂನು ಬಾಹಿರ ಕೃತ್ಯಕ್ಕೆ ಕ್ಷಮೆ ಬೇಡ: ಡಾ. ಅಜಯ್ ನಾಗಭೂಷಣ್
        ಮಂಡ್ಯ, ಜುಲೈ 25. ಮಕ್ಕಳ ರಕ್ಷಣೆ ವಿಚಾರದಲ್ಲಿ ಯಾವುದೇ ರಾಜಿಗೆ ಒಳಗಾಗದೆ ಕಾನೂನು ಬಾಹಿರ ಕೃತ್ಯ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಎಂ.ಎನ್. ಅಜಯ್ ನಾಗಭೂಷಣ್ ಅವರು ಹೇಳಿದರು.
    ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಬಾಲ್ಯ ವಿವಾಹ ಕಾನೂನಿನ ಪ್ರಕಾರ ಅಪರಾಧ. ಅಪ್ರಾಪ್ತ ವಯಸ್ಸಿನಲ್ಲಿ ವಿವಾಹ ಬಂಧನಕ್ಕೆ ಒಳಗಾದವರು ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಪ್ರಕರಣಗಳು ಜರುಗಿದಾಗ ಸೂಕ್ತ ಕ್ರಮ ಕೈಗೊಳ್ಳಬೇಕು. ಸಾಮೂಹಿಕ ವಿವಾಹ ಏರ್ಪಡಿಸುವವರು ವಧು ವರರ ವಯಸ್ಸನ್ನು ಸಾಕಷ್ಟು ಮುಂಚಿತವಾಗಿ ದೃಢಪಡಿಸಿಕೊಳ್ಳಬೇಕು ಎಂದು ಹೇಳಿದರು.
    ಬಾಲಕಿಯರ ಹಾಗೂ ಬಾಲಕರ ಬಾಲ ಮಂದಿರದಿಂದ ಬಿಡುಗಡೆಯಾದ ಮಕ್ಕಳು ಪೋಷಕರ ಜೊತೆ ಸೇರಿದ ನಂತರ ಸಹಜವಾಗಿ ಬೆಳವಣಿಗೆ ಆಗುತ್ತಿದ್ದಾರೆ ಎಂಬುದನ್ನು ಪದೇ ಪದೇ ಪರಿಶೀಲಸಬೇಕು. ಬಾಲಕಿಯ ಪೋಷಕರ ಬಳಿಗೆ ಆಗಾಗ ಮಹಿಳಾ ಅಧಿಕಾರಿಗಳನ್ನು ಕಳುಹಿಸುವ ವ್ಯವಸ್ಥೆ ಮಾಡುವಂತೆ ಜಿಲ್ಲಾ ಮಕ್ಕಳ ರಕ್ಷಣ ಸಮಿತಿ ಅಧಿಕಾರಿಗಳಿಗೆ ಸೂಚಿಸಿದರು.
    ಮಕ್ಕಳನ್ನು ದತ್ತು ಪಡೆದುಕೊಂಡವರು ದತ್ತು ಮಕ್ಕಳ ಮೇಲೆ ದೌರ್ಜನ್ಯ ನಡೆಸದಂತೆ ಕ್ರಮ ವಹಿಸಬೇಕು. ವಿದೇಶದಲ್ಲಿರುವವರು ದತ್ತು ಕೇಳಲು ಬಂದಾಗ ಸಾಧ್ಯವಾದಷ್ಟು ನಿರಾಕರಿಸುವುದು ಸೂಕ್ತ ಎಂದು ಹೇಳಿದರು.
    ಪ್ರೇಮ ಪ್ರಕರಣಗಳಲ್ಲಿ ಓಡಿ ಹೋಗುವ ಅಪ್ರಾಪ್ತ ಹೆಣ್ಣು ಮಕ್ಕಳು ಮುಂದೆ ಹಲವಾರು ತೊಂದರೆಗಳಿಗೆ ಸಿಲುಕುತ್ತಾರೆ. ಈ ಬಗ್ಗೆ ಸಾಕ್ಷ್ಯಚಿತ್ರಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
    ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಡಾ. ಎಸ್.ದಿವಾಕರ್ ಅವರು ಮಾತನಾಡಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕವು 2013-14 ಸಾಲಿನಿಂದ ಈ ವರೆಗೆ ವಿವಿಧ ಸಮಸ್ಯೆಗಳಿಗೆ ಒಳಗಾದ 117 ಮಕ್ಕಳನ್ನು ರಕ್ಷಣೆ ಮಾಡಿದೆ. ಈ ಪೈಕಿ 39 ಬಾಲ್ಯ ವಿವಾಹ ಪ್ರಕರಣಗಳು, 8 ನಿರ್ಗತಿಕ ಹಾಗೂ ಪರಿತ್ಯಕ್ತ ಮಕ್ಕಳು, 5 ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳು ಪ್ರೇಮ ಪ್ರಕರಣಗಳಿಗೆ ಒಳಗಾದ 8 ಮಕ್ಕಳು 7 ಬಾಲ ಕಾರ್ಮಿಕರು, ಭಿಕ್ಷಾಟನೆಯಲ್ಲಿ ತೊಡಗಿದ್ದ 10 ಮಕ್ಕಳ ಪ್ರಕರಣಗಳು ಸೇರಿವೆ ಎಂದು ತಿಳಿಸಿದರು.
    ಬಾಲಕರ ಹಾಗೂ ಬಾಲಕಿಯರ ಬಾಲ ಮಂದಿರಕ್ಕೆ 2013-14 ನೇ ಸಾಲಿನಲ್ಲಿ 245 ಹಾಗೂ 2014-15 ನೇ ಸಾಲಿನಲ್ಲಿ ಈ ವರೆಗೆ 44 ಮಕ್ಕಳು ದಾಖಲಾಗಿ ಸೌಲಭ್ಯ ಪಡೆದಿದ್ದಾರೆ ಎಂದು ತಿಳಿಸಿದರು.
    ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಚಂದ್ರಶೇಖರಯ್ಯ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಮುಜೀಬ್ ಉನ್ನೀನ, ವಿಕಸನ ಸಂಸ್ಥೆ ನಿರ್ದೇಶಕ ಮಹೇಶ್‍ಚಂದ್ರಗುರು, ಬಡ್ರ್ಸ್ ಸಂಸ್ಥೆ ಮುಖ್ಯಸ್ಥರಾದ ಮಿಕ್ಕೆರೆ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

No comments:

Post a Comment