Friday 25 July 2014

ಜನಸಾಮಾನ್ಯರಲ್ಲಿ ಪರಿಸರ ಪ್ರಜ್ಞೆ ಕಡಿಮೆ ಇರುವುದರಿಂದ ಹಲವು ಸಮಸ್ಯೆಗಳನ್ನು -ಕೆ.ಟಿ.ಶ್ರೀಕಂಠೇಗೌಡ

ಮಂಡ್ಯ: ಜನಸಾಮಾನ್ಯರಲ್ಲಿ ಪರಿಸರ ಪ್ರಜ್ಞೆ ಕಡಿಮೆ ಇರುವುದರಿಂದ ಈಗಾಗಲೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹೇಳಿದರು.
ಲಯನ್ಸ್ ಕ್ಲಬ್ ಆಫ್ ಮಂಡ್ಯ ಮಧುರ ಹಾಗೂ ಕೌಶಲ್ಯ ಯುವತಿ ಮತ್ತು ಮಹಿಳಾ ಮಂಡಳಿ ವತಿಯಿಂದ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಕಾರ್ಯಕ್ರಮ, ಪರಿಸರ ಸಂರಕ್ಷಣಾ ಕಾರ್ಯಕ್ರಮದ ಅಂಗವಾಗಿ ಕೈಚೀಲ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಆಹಾರ ಉತ್ಪಾದನೆ, ನೀರು ಸೇರಿದಂತೆ ಇನ್ನಿತರೆ ಜೀವನಾವಶ್ಯಕ ವಸ್ತುಗಳಿಗೆ ನೀಡುವ ಆದ್ಯತೆಯನ್ನು ಪರಿಸರ ಉಳಿವಿಗೆ ನೀಡುತ್ತಿಲ್ಲ. ಇದರಿಂದಾಗಿ ಪರಿಸರ ಸಾಕಷ್ಟು ಕಲುಷಿತಗೊಂಡಿದ್ದು, ಇನ್ನಾದರೂ ಗಿಡಮರಗಳನ್ನು ನೆಟ್ಟು ಪೆÇೀಷಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಮುಂದಿನ 20 ವರ್ಷಗಳಲ್ಲಿ ನೀರಿಗಾಗಿ ಯುದ್ಧ ನಡೆಯಲಿದೆ ಎಂದು ವಿಶ್ವಸಂಸ್ಥೆ ಅಂಕಿಅಂಶಗಳ ಮೂಲಕ ವರದಿ ಮಾಡಿದೆ. ಹಿಂದೆ ಎಂಟತ್ತು ಅಡಿಗಳ ಅಂತರದಲ್ಲಿ ಬಾವಿಗಳಲ್ಲಿ ನೀರು ದೊರಕುತ್ತಿತ್ತು. ನಂತರ 80ರಿಂದ 100 ಅಡಿ ಬೋರ್‍ವೆಲ್‍ಗಳಲ್ಲಿ ನೀರು ತೆಗೆಯಲು ಆರಂಭಿಸಿ, ಇದೀಗ ಸಾವಿರಾರು ಅಡಿ ಕೊರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೋಲಾರದಲ್ಲಿ ಮೂರ್ನಾಲ್ಕು ಮೋಟಾರ್‍ಗಳನ್ನು ಒಂದೇ ಬೋರ್‍ವೆಲ್‍ಗೆ ಅಳವಡಿಸಿ ನೀರು ತೆಗೆಯಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ಪೀಳಿಗೆ ಸಾಕಷ್ಟು ತೊಂದರೆಗೆ ಸಿಲುಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುನಾಮಿ, ಭೂಕಂಪ ಸೇರಿದಂತೆ ಪ್ರಾಕೃತಿಕ ಪಲ್ಲವನ್ನು ಕಂಡಿದ್ದೇವೆ. ಪರಿಸರದ ಮೇಲಿನ ಅತ್ಯಾಚಾರ, ಅಮಾನವೀಯ ಕ್ರೌರ್ಯ ನಿಲ್ಲಿಸದಿದ್ದರೆ ಮಾನವ ಸಮುದಾಯದ ಉಳಿವಿಗೆ ಕಂಟಕವಾಗಲಿದೆ. ನೀರಿನ ಮೂಲ ಮಳೆ ಒಂದೇ ಆಗಿರುವುದರಿಂದ ಭೂಮಿಗೆ ಬಿದ್ದ ಮಳೆಯನ್ನು ಇಂಗಿಸಿ, ಅಂತರ್ಜಲ ವೃದ್ಧಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕಳೆದ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ಕೆ.ಅವಿನಾಶ್, ಡಿ.ಎನ್.ಕಳಸೇಗೌಡ, ಎಂ.ಪಿ.ರಾಜಮ್ಮಣ್ಣಿ, ಶಕೀಲಾಭಾನು, ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ಅರ್ಜುನ್ ಎಸ್.ಎಚ್.ಪಂಡಿತ್, ಕೆ.ಎಸ್.ಶ್ರೇಯಾಂಕ್‍ಗೌಡ, ಎಚ್.ಎಸ್.ಶ್ರಾವ್ಯ, ಎಸ್.ಟಿ.ಧನುಷ್, ಜಿ.ಎನ್.ವಿಶಾಲ್‍ಗೌಡ, ಬಿ.ಎಂ.ಪವನ್, ಪಿ.ತೇಜಸ್‍ಗೌಡ, ಎಂ.ಎಲ್.ಪ್ರಶಾಂತ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪರಿಸರ ಸಂರಕ್ಷಣೆ ಕಾರ್ಯಕ್ರಮದ ಅಂಗವಾಗಿ ಕೈಚೀಲ ವಿತರಿಸಲಾಯಿತು.
ಲಯನ್ಸ್ ಕ್ಲಬ್ ಆಫ್ ಮಂಡ್ಯ ಮಧುರ ಸಂಸ್ಥೆ ಅಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಕಾರ್ಯದರ್ಶಿ ಎಂ.ಆರ್.ಮಂಜು, ಖಜಾಂಚಿ ಸಿದ್ದರಾಮೇಗೌಡ, ಲಯನ್ಸ್ ಎಂಜೆಎಫ್ ಜಿ.ಸಿ.ದಿವಾಕರ್, ಪ್ರಾಂತೀಯ ಅಧ್ಯಕ್ಷ ನಾರಾಯಣಸ್ವಾಮಿ, ವಲಯ ಅಧ್ಯಕ್ಷ ಆನಂದ್, ಪರಿಸರ ಸಂಸ್ಥೆ ಗೌರವಾಧ್ಯಕ್ಷ ಕೆ.ಟಿ.ಹನುಮಂತು, ಕೌಶಲ್ಯ ಯುವತಿ ಮತ್ತು ಮಹಿಳಾ ಮಂಡಳಿ ಅಧ್ಯಕ್ಷೆ ವಿಜಯಕುಮಾರಿ ಇತರರು ಭಾಗವಹಿಸಿದ್ದರು.

No comments:

Post a Comment