Saturday 26 July 2014

ಸಮರ್ಪಕ ವಿದ್ಯುತ್ ಪೂರೈಸುವಂತೆ ಅಧಿಕಾರಿಗಳಿಗೆ ಸಂಸದ ಸಿ.ಎಸ್.ಪುಟ್ಟರಾಜು-ಸೂಚನೆ.

ಮಂಡ್ಯ: ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂದೆ  ಸಮರ್ಪಕ ವಿದ್ಯುತ್ ಪೂರೈಸುವಂತೆ ಅಧಿಕಾರಿಗಳಿಗೆ ಸಂಸದ ಸಿ.ಎಸ್.ಪುಟ್ಟರಾಜು ಸೂಚಿಸಿದರು.
ನಗರದ ಸೆಸ್ಕಾಂ  ಅಧೀಕ್ಷಕ ಅಭಿಯಂತರರ ಕಚೇರಿಯಲ್ಲಿಂದು ಸೆಸ್ಕಾಂ, ಜಲಮಂಡಳಿ ಹಾಗೂ ನಗರಸಭೆ ಆಡಳಿತಗಳ ಹಿರಿಯ ಅಧಿಕಾರಿಗಳೊಂದಿಗೆ ಜರುಗಿದ ಸಭೆಯಲ್ಲಿ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಪ್ರಮುಖ ಇಲಾಖೆಗಳ ಮುಖ್ಯಸ್ಥರು ಹೊಣೆಗಾರಿಕೆಯಿಂದ ನುಣುಚಿಕೊಳ್ಳದೇ ಜವಾಬ್ದಾರಿ ಹೊರಬೇಕು.  ಪ್ರತಿಷ್ಠೆ ಮೆರೆಯುವುದು ಬೇಡ. ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ಕಾರ್ಯ ನಿರ್ವಹಿಸಲು ಮುಂದಾಗಬೇಕೆಂದು ಸಂಸದ ಸಿ.ಎಸ್.ಪುಟ್ಟರಾಜು ಸೆಸ್ಕ್ ಇಲಾಖೆಯ ಮುಖ್ಯಸ್ಥರ ಸಭೆಯಲ್ಲಿ ತಾಕೀತು ಮಾಡಿದರು.
ಹಲವಾರು ಗ್ರಾಮಾಂತರ ಪ್ರದೇಶಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಒಂದೊಂದು ಗ್ರಾಮಗಳಲ್ಲಿ ಒಂದೊಂದು ಸಮಸ್ಯೆ ಉದ್ಭವವಾಗಿದೆ. ಅರ್ಧ ಊರಿಗೆ ವಿದ್ಯುತ್ ಸಂಪರ್ಕವಿದ್ದರೆ ಇನ್ನರ್ಧ ಗ್ರಾಮಕ್ಕೆ ವಿದ್ಯುತ್ ಇಲ್ಲದೇ ಗ್ರಾಮಸ್ಥರು ಪರಿತಪಿಸುತ್ತಿದ್ದಾರೆ. ರಾತ್ರಿ ಹತ್ತು ಗಂಟೆ ವೇಳೆಯಲ್ಲಿ ಮಹಿಳೆಯರು ಫೋನಾಯಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡಚಣೆಯಾಗುತ್ತಿರುವ ಬಗ್ಗೆ ನಿವೇದಿಸುತ್ತಿದ್ದಾರೆ. ಜನಪ್ರತಿನಿಧಿಗಳ ಕಾಳಜಿ ಅರ್ಥ ಮಾಡಿಕೊಂಡು ಸೂಕ್ತ ಕಾರ್ಯ ನಿರ್ವಹಣೆಗೆ ಮುಂದಾಗಬೇಕೆಂದರು.
ಈ ಸಂದರ್ಭದಲ್ಲಿ ಮಾತನಾಡಿದ ಪಾಂಡವಪುರ ಕಾರ್ಯಪಾಲಕ ಅಭಿಯಂತರ ರಂಗಸ್ವಾಮಿ ಹಗಲಿನ ವೇಳೆಯಲ್ಲಿ ನಾಲ್ಕುಗಂಟೆ, ರಾತ್ರಿ ವೇಳೆಯಲ್ಲಿ ಮೂರು ಗಂಟೆಗಳ ಕಾಲ ಕೃಷಿ ಪಂಪ್‍ಸೆಟ್‍ಗಳಿಗೆ ತ್ರಿಪೇಸ್ ವಿದ್ಯುತ್ ನೀಡಲಾಗುತ್ತಿದೆ. ಇತರೆ ಅವಧಿಯ ಸಿಂಗಲ್ ಪೇಸ್ ವಿದ್ಯುತ್ ಪೂರೈಕೆಯಲ್ಲಿ ಕೃಷಿ ಪಂಪ್‍ಸೆಟ್ ಬಳಕೆಗೆ ಮುಂದಾಗದಂತೆ ಸರ್ಕಾರ ಕಡಿವಾಣ ಹಾಕಲು ಸೂಚಿಸಿದೆ. ಈ ಹಿನ್ನಲೆಯಲ್ಲಿ ಅಲ್ಪ ಮಟ್ಟಿನ ತೊಂದರೆಯಾಗಿದ್ದು, ನಿವಾರಿಸಲು ಮುಂದಾಗುವ ಭರವಸೆ ವ್ಯಕ್ತಪಡಿಸಿದರು.
ಮಂಡ್ಯ ನಗರದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಜರುಗಿದ ಚರ್ಚೆಯಲ್ಲಿ ಎ ಬಿ ಕೇಬಲ್ ಅಳವಡಿಕೆಗೆ ಸುಮಾರು 20 ಲಕ್ಷ ಖರ್ಚಾಗಲಿದ್ದು, ಸದರಿ ಹಣ ಬರಿಸಿದರೆ ಪ್ರತ್ಯೇಕ ಕೇಬಲ್ ಅಳವಡಿಕೆ ಮಾರ್ಗದಿಂದ ಗುಣಮಟ್ಟದ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸೆಸ್ಕಾಂ ಅಧಿಕಾರಿಗಳು ತಿಳಿಸಿದರು.
ಈ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ  ಮಾತನಾಡಿದ ಸಂಸದರು ಸಮಸ್ಯೆ ಬಗೆ ಹರಿಸಲು ಪ್ರಯತ್ನಿಸಬೇಕೆಂದರು.
ಮಂಡ್ಯ ನಗರಸಭೆ ವಿದ್ಯುತ್ ಬಿಲ್ ಅನುದಾನ ಶ್ರೀರಂಗಪಟ್ಟಣ ಪುರಸಭೆ ಖಾತೆಗೆ ಜಮೆಯಾಗಿರುವ ಬಗ್ಗೆ ಅಧಿಕಾರಿಗಳು ಸಂಸದರ ಗಮನಕ್ಕೆ ತಂದಾಗ ಇಲಾಖಾವಾರು ಹಣ ಹಂಚಿಕೆಯ ವ್ಯತ್ಯಾಸಗಳನ್ನು ಸರಿಪಡಿಸಲು ಒಂದು ವಾರದೊಳಗೆ ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ, ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ ಹಾಗೂ ವಸತಿ ಸಚಿವ ಅಂಬರೀಷ್ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಭೆ ನಡೆಸಿ ಸಮಸ್ಯೆ ಬಗೆ ಹರಿಸುವ ವಿಶ್ವಾಸ ವ್ಯಕ್ತಪಡಿಸಿದರು.
ನಗರಸಭೆಯಿಂದ ವಿದ್ಯುತ್ ಇಲಾಖೆಗೆ 17.61.36984 ರೂ.ಗಳು ಬಾಕಿ ಇದ್ದು, ಸದರಿ ಹಣ ಪಾವತಿಸಿದರೂ ಸೆಸ್ಕ್ ಇಲಾಖೆ ನೂತನ ಕೇಬಲ್ ಅಳವಡಿಸಿ ಸಮರ್ಪಕ ವಿದ್ಯುತ್ ಇಂಗಿತ ವ್ಯಕ್ತಪಡಿಸಿತು.
ಮಂಡ್ಯ ನಗರದ ನೀರು ಪೂರೈಸುವ ಜಲ ಸಂಗ್ರಹಗಾರಕ್ಕೆ  ಅಳವಡಿಸಿರುವ ಎಕ್ಸ್‍ಪ್ರೆಸ್ ಫೀಡರ್ ಲೈನ್‍ನಿಂದ ವೆಲ್ಲೆಸ್ಲಿ ಸೇತುವೆ ಬಳಿಯ ಬಡಾವಣೆಗಳಿಗೆ, ದರಿಯಾ ದೌಲತ್‍ಗೆ ಹಾಗೂ ಕೈಗಾರಿಕೆ ಕೇಂದ್ರಕ್ಕೆ ವಿದ್ಯುತ್ ಸಂಪರ್ಕ ನೀಡಿದ್ದು, ಪದೇ ಪದೇ ವಿದ್ಯುತ್ ವ್ಯತ್ಯಯ ಉಂಟಾಗಲು ಕಾರಣವಾಗಿದೆ ಎಂದು ಜಲ ಮಂಡಳಿ ಅಧಿಕಾರಿಗಳು ದೂರಿದರು.
ಇದನ್ನು ಅಲ್ಲಗೆಳೆದ ಸೆಸ್ಕ್ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ತೆರಳಿದರೆ, ಸ್ಥಳದಲ್ಲೇ ಸಮಸ್ಯೆ ಬಗೆ ಹರಿಸಲು ಮುಂದಾಗುವ ವಿಶ್ವಾಸ ವ್ಯಕ್ತಪಡಿಸಿದರು.
ಈ ಹಿನ್ನಲೆಯಲ್ಲಿ ನಗರಸಭೆ ಆಯುಕ್ತರು, ಜಲ ಮಂಡಳಿ, ಅಧಿಕಾರಿಗಳು ಹಾಗೂ ಸಭೆಯಲ್ಲಿ ಹಾಜರಿದ್ದ ನಗರಸಭಾ ಸದಸ್ಯರೊಟ್ಟಿಗೆ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಸದರು ಸೂಚಿಸಿದರು.
ಸಭೆಯಲ್ಲಿ ಸೆಸ್ಕ್ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಲೋಕೇಶ್, ರಂಗಸ್ವಾಮಿ, ಪರಶಿವಮೂರ್ತಿ, ನಾಗಭೂಷಣಪ್ಪ, ಪೌರಾಯುಕ್ತ ಶಶಿಕುಮಾರ್, ಜಲಮಂಡಳಿ ಕಾರ್ಯಪಾಲಕ ಅಭಿಯಂತರ ಸುಬ್ಬೇಗೌಡ, ನಗರಸಭಾ ಸದಸ್ಯರಾದ ಕೆ.ಸಿ.ರವೀಂದ್ರ, ಸೋಮಶೇಖರ್, ಶಶಿಧರ್ ಉಪಸ್ಥಿತರಿದ್ದರು.

No comments:

Post a Comment