Wednesday, 30 July 2014

ಮಂಡ್ಯ-4ನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಎಸ್.ಕೃಷ್ಣಸ್ವರ್ಣಸಂದ್ರ ಆಯ್ಕೆ

4ನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಎಸ್.ಕೃಷ್ಣಸ್ವರ್ಣಸಂದ್ರ ಆಯ್ಕೆ
ಮಂಡ್ಯ: ಇದೇ ಆಗಸ್ಟ್ 5ರಂದು ನಗರದ ಕಲಾಮಂದಿರದಲ್ಲಿ ಜರುಗಲಿರುವ 4ನೇ ಮಂಡ್ಯ ಜಿಲ್ಲಾ ಚುಟುಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಖ್ಯಾತ ಸಾಹಿತಿ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೃಷ್ಣಸ್ವರ್ಣಸಂದ್ರ ಆಯ್ಕೆಯಾಗಿದ್ದಾರೆ.
ಮಂಗಳವಾರ ಸಂಜೆ ನಗರದ ಬಾಲಭವನದಲ್ಲಿ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಜಿ.ವಿ.ನಾಗರಾಜು, ಕೃಷ್ಣಸ್ವರ್ಣಸಂದ್ರ ಅವರನ್ನು ಅಭಿನಂದಿಸುವ ಮೂಲಕ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಿರುವುದಾಗಿ ಘೋಷಿಸಿ, ಸಮ್ಮೇಳನಕ್ಕೆ ಅವರನ್ನು ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿ.ವಿ.ನಾಗರಾಜು, ಎಸ್.ಕೃಷ್ಣಸ್ವರ್ಣಸಂದ್ರ ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರನ್ನು 4ನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪರಿಷತ್‍ನ ಉಪಾಧ್ಯಕ್ಷ ಹಾಗೂ ನಗರಸಭಾ ಸದಸ್ಯ ಎಸ್.ಕೆ.ಶಿವಪ್ರಕಾಶ್‍ಬಾಬು, ಪ್ರಧಾನ ಕಾರ್ಯದರ್ಶಿ ಮಂಡ್ಯ ಸತ್ಯನ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಕೆ.ಪ್ರಹ್ಲಾದ್‍ರಾವ್, ಎಂ.ವಿ.ಧರಣೇಂದ್ರಯ್ಯ, ಗಾಯಕರಾದ ಡೇವಿಡ್, ಶ್ರೀಧರ್, ಮುಖಂಡರಾದ ಸುರೇಶ್, ರಮೇಶ್, ಪುರುಷೋತ್ತಮ್, ಅವಿನಾಶ್ ನಾಗಣ್ಣ, ಸ್ವಾಮಿ, ಶಿವಣ್ಣ ಇತರರು ಉಪಸ್ಥಿತರಿದ್ದರು.
ಸಮ್ಮೇಳನಾಧ್ಯಕ್ಷರ ಪರಿಚಯ: ಎಸ್.ಕೃಷ್ಣಸ್ವರ್ಣಸಂದ್ರ ಅವರು ಸಾಹಿತ್ಯ, ಸಂಘಟನೆ, ಪತ್ರಿಕೋದ್ಯಮ, ಸಾಂಸ್ಕøತಿಕ ಕಾರ್ಯಕ್ರಮಗಳ ಆಯೋಜನೆ, ಹೀಗೆ ಬಹುಮುಖ ಪ್ರತಿಭೆಗೆ ಹೆಸರಾಗಿದ್ದಾರೆ. ಹರೆಯ ಕಿರಿಯದಾದರೂ ಉತ್ಸಾಹ ಹಿರಿದಾಗಿದೆ. ಕಾಯಕಜೀವಿಯಾಗಿ  ಹೊಸ ನಿರೀಕ್ಷೆಗಳನ್ನು ಮೂಡಿಸುತ್ತಿರುವ ಕೃಷ್ಣಸ್ವರ್ಣಸಂದ್ರ ರವರು ಒಬ್ಬ ಅದ್ವಿತೀಯ ಸಾಹಿತ್ಯಿಕ, ಸಾಂಸ್ಕøತಿಕ ಯುವ ಮುಂದಾಳು, ಸಹೃದಯತೆ ಸ್ನೇಹಜೀವಿ.
ಕೆಂಪೇಗೌಡ ಸಿದ್ದಲಿಂಗಯ್ಯ ಹಾಗೂ ಕೆಂಪಮ್ಮ ದಂಪತಿಗಳ ಪುತ್ರರಾಗಿ ಮಂಡ್ಯದ ಸ್ವರ್ಣಸಂದ್ರದಲ್ಲಿ 21-11-1968ರಲ್ಲಿ ಜನ್ಮ ತಾಳಿದ ಅವರು, ಗುತ್ತಲುವಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಆರಂಭಿಸಿ, ಮೈಷುಗರ್ ಶಾಲೆಯಲ್ಲಿ  ಪ್ರೌಢ ಶಿಕ್ಷಣ ಪಡೆದು, ಪಿಇಎಸ್ ಕಾಲೇಜಿನಲ್ಲಿ ಪದವಿಗಳಿಸಿ, ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಜಾನಪದ ಎಂಎ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಪ್ರಸ್ತುತ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೃಷ್ಣ ಅವರು ಕನ್ನಂಬಾಡಿ ದಿನಪತ್ರಿಕೆ ಸಂಪಾದಕರಾಗಿದ್ದು, ಮಂಡ್ಯದ ಪ್ರತಿಷ್ಟಿತ ಪಿಇಎಸ್ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಜಾನಪದ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಓದಿನ ದಿನಗಳಲ್ಲೇ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿ ವಿದ್ಯಾರ್ಥಿಗಳ ಸಮಸ್ಯೆ ಹಾಗೂ ಕಾವೇರಿ ಸಮಸ್ಯೆ ವಿರುದ್ಧ ಹೋರಾಟ ನಡೆಸಿದವರು. ಎಂ.ಎ. ಪದವಿ ಗಳಿಸುವಾಗ ಕ್ಯಾಂಪಸ್ ಕಣ್ಣು ಎಂಬ ಪತ್ರಿಕೆಯ ಸಂಪಾದಕರಾಗಿ ದುಡಿದವರು. ನಂತರ ಡಾ.ಜೀ.ಶಂ.ಪ ಸಾಹಿತ್ಯ ವೇದಿಕೆಯನ್ನು 1997ರಲ್ಲಿ ಸಂಸ್ಥಾಪಿಸಿ, ಅಧ್ಯಕ್ಷರಾಗಿ ಪ್ರತಿವರ್ಷ ಜಾನಪದ, ಭಾವಗೀತಾ ಸ್ಪರ್ಧೆ, ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ, ಕವಿಕಾವ್ಯ ಮೇಳ ಆಯೋಜನೆ, ಉದಯೋನ್ಮುಖ ಕವಿಗಳ ಪುಸ್ತಕ ಮುದ್ರಣ ಇವರ ಸಾಧನೆಗೆ ಸಾಕ್ಷಿಯಾಗಿದೆ. ಮೂರು ಅವಧಿಗೆ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಿ ಇವರು ಮಾಡಿದ ಸಾಧನೆ ಅನನ್ಯ.
ಸಾಹಿತ್ಯ ಕೃಷಿ: ಇದುವೇ ಭಾರತ (ಕವನ ಸಂಕಲನ), ಹನಿಕೇಕ್ (ಚುಟುಕು ಸಂಕಲನ), ಧರ್ಮದ್ವಜ (ನಾಟಕ), ಪರ್ವ ಕಾಲ (ಕಾದಂಬರಿ), ಗುಡ್ಡೆಬಾಡು (ಸಮಗ್ರ ಸಾಹಿತ್ಯ), ಮರ್ಯಾದಾ ಹತ್ಯೆ( ಕಥಾ ಸಂಕಲನ), ಬದುಕು ಸಪ್ತಬಣ್ಣ(ಕವನ ಸಂಕಲನ), ವಿಶ್ವರೂಪ(ಲೇಖನ ಸಂಗ್ರಹ) ಹಾಗೂ ಪುಣ್ಯಕೋಟಿ (ಪರಿಷ್ಕøತ ಸಮಗ್ರ ಸಾಹಿತ್ಯ) ಸೇರಿದಂತೆ ಹತ್ತು ಸ್ವತಂತ್ರ ಕೃತಿ ರಚಿಸಿ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ.
ಸಂಪಾದಕತ್ವ: ದರಿದ್ರರ ಮಾಕ್ಸ್‍ಕಾರ್ಡ್ ಸಾಹಿತ್ಯ, ನೆಲದ ನಗು, ಕಣಜ, ಹೊನ್ನೇರು, ನೆಲದ ನುಡಿ, ಸುಗ್ಗಿ, ಮುಂಗಾರು, ಕನ್ನಂಬಾಡಿ, ಪಾಂಚಜನ್ಯ, ಬೇವು-ಬೆಲ್ಲ, ಕಬ್ಬಿನ ಜಲ್ಲೆ, ತೂಗುವ ಗೊನೆಮಾವು,  ಕವನ ಸಂಕಲನಗಳನ್ನು ಹಾಗೂ ಕಾಚಕ್ಕಿ, ತವರು ಸ್ಮರಣ ಸಂಚಿಕೆಯನ್ನು ಸಂಪಾದಿಸಿ ಹೊರ ತಂದಿದ್ದಾರೆ. ರಾಜ್ಯದ ಉದಯೋನ್ಮಖ ಕವಿಗಳನ್ನು ಪ್ರೋತ್ಸಹಿಸಿದ್ದಾರೆ.
ಪ್ರಶಸ್ತಿ ಗೌರವ : ಇವರ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಸಾಧನೆಗಾಗಿ ಸಚಿವ ಎಸ್.ಡಿ.ಜಯರಾಂ ಅವರ ಸಾಹಿತ್ಯ ಮತ್ತು ಪತ್ರಿಕೋದ್ಯಮ ಪ್ರಶಸ್ತಿ, ಕರವೇಯಿಂದ ಕಾಯಕ ಯೋಗಿ ಪ್ರಶಸ್ತಿ, ಚುಟುಕು ಸಾಹಿತ್ಯ ಪರಿಷತ್‍ನಿಂದ ಕಾಯಕ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಮುಡಾದಲ್ಲಿ ಭ್ರಷ್ಟಾಚಾರ ಸ್ಫೋಟ ತನಿಖಾ ವರದಿಗಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿ, ಜಿಲ್ಲಾಡಳಿತದಿಂದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಪ್ರತಿನಿಧಿಯ ಗೌರವ. ಆದಿಚುಂಚನಗಿರಿಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಹತ್ತು ಹಲವು ಪ್ರಶಸ್ತಿ ನೀಡಿ ಗೌರವಿಸಿದೆ. ವಿಜಾಪುರದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯ ಕವಿಗೋಷ್ಟಿಯಲ್ಲಿ ಕವನ ವಾಚನ ಮಾಡಿದ ಹೆಗ್ಗಳಿಕೆ ಕೃಷ್ಣ ಅವರದ್ದಾಗಿದ್ದು, ಇವರ ಗುಡ್ಡೆಬಾಡು ಕಥೆಗೆ ಕರವೇ ನಲ್ನುಡಿ ಪತ್ರಿಕೆ ಆಯೋಗಿಸಿದ್ದ ರಾಜ್ಯೋತ್ಸವ ಕಥಾ ಸ್ಪರ್ದೆಯಲ್ಲಿ ತೃತೀಯ ಬಹುಮಾನ ಲಭಿಸಿದ್ದು, ಪ್ರಶಂಸೆಗೆ ಪಾತ್ರವಾಗಿದೆ. ಇವರ ಧರ್ಮಧ್ವಜ ನಾಟಕ ದ್ವಿತೀಯ ಮುದ್ರಣವನ್ನು ಕಂಡು, ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ವಿಮರ್ಶೆಗೊಂಡಿದೆ. ಅಲ್ಲದೇ ರಂಗ ಪ್ರಯೋಗವಾಗಿದೆ. ಪುಷ್ಪ ಇವರ ಬಾಳಿನ ಬೆಳಕು. ಎಂ.ಕೆ.ಮೋಹನ್‍ರಾಜ್ ಮತ್ತು ಮದನ್‍ಗೌಡ ಇವರ ಬಾಳಿನ ಎರಡು ಕಣ್ಣುಗಳು. ಇವರ ಸಾಹಿತ್ಯ, ಸಂಘಟನೆ ಹಾಗೂ ಪತ್ರಿಕೋದ್ಯಮದ ಅಪಾರ ಸಾಧನೆಯನ್ನು ಮನಗಂಡು ಇದೇ ಆಗಸ್ಟ್ 5ರಂದು ಮಂಡ್ಯ ನಗರದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಿರುವ ನಾಲ್ಕನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

No comments:

Post a Comment