Wednesday 3 December 2014

ಕನ್ನಡ ಉಳಿವಿಗಾಗಿ ಕನ್ನಡಪರ ಸಂಘಟನೆಗಳು ಒಗ್ಗೂಡಲಿ-ಶಾಸಕ ನಾರಾಯಣಗೌಡ.



                  ಕನ್ನಡ ಉಳಿವಿಗಾಗಿ ಕನ್ನಡಪರ ಸಂಘಟನೆಗಳು ಒಗ್ಗೂಡಲಿ
          * ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಶಾಸಕ ನಾರಾಯಣಗೌಡ
ಕೆ.ಆರ್.ಪೇಟೆ: ಕನ್ನಡದ ಸಮಸ್ಯೆಗಳ ಪರಿಹಾರದ ಹೋರಾಟಕ್ಕೆ ರಾಜ್ಯದ ಎಲ್ಲ ಕನ್ನಡಪರ ಸಂಘಟನೆಗಳು ಒಗ್ಗೂಡಬೇಕೆಂದು ಶಾಸಕ ಕೆ.ಸಿ.ನಾರಾಯಣಗೌಡ ಕರೆ ನೀಡಿದರು.
ಪಟ್ಟಣದ ಬಸವೇಶ್ವರನಗರದ ಹೊಸ ಕಿಕ್ಕೇರಿ ರಸ್ತೆಯ ಮೈದಾನದಲ್ಲಿ ಜಯ ಕನಾಟಕ ಸಂಘಟನೆಯ ತಾಲೂಕು ಘಟಕ ಬುಧವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಒಂದು ಕುಟುಂಬದಲ್ಲಿನ ಅಣ್ಣತಮ್ಮಂದಿರು ಬೇರೆಯಾದರೂ ಸಂದರ್ಭ ಬಂದಾಗ ಎಲ್ಲರೂ ಒಗ್ಗೂಡುತ್ತಾರೆ. ಹಾಗೆಯೇ ರಾಜ್ಯದಲ್ಲಿ ರಕ್ಷಣಾ ವೇದಿಕೆ, ಕದಂಬ ಸೇನೆ, ಜಯ ಕರ್ನಾಟಕ ಮುಂತಾದ ಹತ್ತು ಹಲವು ಕನ್ನಡಪರ ಸಂಘಟನೆಗಳಿದ್ದರೂ ಅವು ನಾಡಿನ ನೆಲ, ಜಲದ ಪ್ರಶ್ನೆ ಬಂದಾಗ ಒಗ್ಗೂಡಿ ಹೋರಾಟ ನಡೆಸಬೇಕು. ಇದರಿಂದ ರಾಜ್ಯದಲ್ಲಿ ಕನ್ನಡ ಪರ ಹೋರಟದ ಶಕ್ತಿ ವೃದ್ಧಿಸುತ್ತದೆಂದು ಸಲಹೆ ನೀಡಿದರು.
ವಲಸಿಗರ ಸಮಸ್ಯೆ ರಾಜ್ಯದ ಬಹುದೊಡ್ಡ ಸಮಸ್ಯೆಯಾಗಿದೆ. ಹೊಟ್ಟೆಪಾಡಿಗಾಗಿ ಕರ್ನಾಟಕಕ್ಕೆ ಬಂದವರು ಇಲ್ಲಿನ ಭಾಷಿಕ ಸಂಸ್ಕøತಿಯಲ್ಲಿ ಮಿಳಿತವಾಗುತ್ತಿಲ್ಲ. ಅನ್ಯ ಭಾಷಿಕರಿಗೆ ಕನ್ನಡ ಕಲಿಯುವ ಅನಿವಾರ್ಯತೆಯನ್ನು ಕನ್ನಡಿಗರು ನಿರ್ಮಿಸದಿದ್ದರೆ ನಮ್ಮ ನೆಲದಲ್ಲಿ ನಾವು ಪರಕೀಯರಾಗುತ್ತೇವೆಂದು ಎಚ್ಚರಿಸಿದರು.
ಮುಂಬೈ ನಗರದಲ್ಲಿ 22 ಲಕ್ಷಕ್ಕೂ ಹೆಚ್ಚು ಕನ್ನಡಿಗರಿದ್ದೇವೆ. ಒಕ್ಕಲಿಗರು, ಬಂಟ್ಸ್, ಶೆಟ್ಟಿಗಳು ಸೇರಿದಂತೆ ಹಲವು ಸಮಾಜದ ಪ್ರತ್ಯೇಕ ಕನ್ನಡಿಗರ ಸಂಘಟನೆಗಳು ಮುಂಬೈನಲ್ಲಿದ್ದರೂ ಕನ್ನಡಿಗರ ಸಮಸ್ಯೆಗಳ ಪರಿಹಾರಕ್ಕೆ ನಾವು ಅಲ್ಲಿ ಒಗ್ಗಟ್ಟಿನ ಹೋರಾಟ ನಡೆಸುತ್ತೇವೆ. ಇದರಿಂದಾಗಿಯೇ ಮುಂಬೈನಲ್ಲಿ ಕನ್ನಡಿಗರು ಬಲಿಷ್ಠರಾಗಿ ಉಳಿದಿದ್ದೇವೆ. ನಾಡು, ನುಡಿಯ ಪ್ರೇಮವನ್ನು ರಾಜ್ಯದ ಜನ ಮುಂಬೈ ಕನ್ನಡಿಗರಿಂದ ಕಲಿಯಬೇಕೆಂದ ನಾರಾಯಣಗೌಡ ನಮ್ಮ ನೆಲದಲ್ಲಿ ಆಂದ್ರದ ರೆಡ್ಡಿಗಳು, ತಮಿಳು ನಾಡಿನ ಬಿಲ್ಡರುಗಳು ಗುತ್ತಿಗೆ ಕಾಮಗಾರಿ ಮಾಡಿದರೆ ಅವರನ್ನು ನಾವು ಬೆಂಬಲಿಸುತ್ತೇವೆ. ಅದೇ ನಮ್ಮವರು ಇಂತಹ ಕೆಲಸ ಮಾಡಿದರೆ ಅವರಿಗೆ ನಾವು ಅನಗತ್ಯ ಕಿರುಕುಳ ನೀಡುತ್ತೇವೆ. ಕನ್ನಡಿಗರು ಕನ್ನಡಿಗರು ನಡೆಸುವ ಉದ್ದಿಮೆ ವ್ಯವಹಾರಗಳಿಗೆ ಪ್ರೋತ್ಸಾಹ ನೀಡಬೇಕು. ಕನ್ನಡಿಗರು ಉದ್ಯಮ ಶೀಲರಾದರೆ ನಾವು ಅನ್ಯ ಭಾಷಿಕರ ಅಡಿಯಾಳುಗುವುದು ತಪ್ಪುತ್ತದೆ ಎಂದರು.
ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಘಟಕದ ಅಧ್ಯಕ್ಷ ಎಸ್.ವಿ.ವಿನಯ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯ ಕರ್ನಾಟಕ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎಸ್. ನಾರಾಯಣ್, ಜಿಲ್ಲಾ ಘಟಕದ ಅಧ್ಯಕ್ಷ ಯೋಗಣ್ಣ, ಪುರಸಭಾಧ್ಯಕ್ಷ ಕೆ.ಗೌಸ್ ಖಾನ್, ಉಪಾಧ್ಯಕ್ಷ ಎಚ್.ಕೆ. ಅಶೋಕ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪುರುಷೋತ್ತಮ್, ತಾ.ಪಂ ಸದಸ್ಯ ಕೆ.ಆರ್.ರವೀಂದ್ರಬಾಬು, ಮಾಜಿ ಸದಸ್ಯ ಕೆ.ಶ್ರೀನಿವಾಸ್, ಮನ್‍ಮುಲ್ ನಿದೇರ್ಶಕ ಶೀಳನೆರೆ ಅಂಬರೀಷ್, ಕಿಮ್ಸ್ ವೈದ್ಯರಾದ ಡಾ. ರಮೇಶ್, ವಿಮ್ಸ್ ವೈದ್ಯೆ ಡಾ. ಮಾಲಾ, ಪುರಸಭೆ ಸದಸ್ಯರಾದ ಕೆ.ವಿನೋದ್‍ಕುಮಾರ್, ಎಚ್.ಆರ್.ಲೋಕೇಶ್, ನಂದೀಶ್, ಡಿ.ಪ್ರೇಂಕುಮಾರ್, ಕೆ.ಟಿ.ಚಕ್ರಪಾಣಿ, ವಕೀಲ ಎಂ.ಆರ್.ಪ್ರಸನ್ನಕುಮಾರ್ ಭಾಗವಹಿಸಿದ್ದರು.


No comments:

Post a Comment