Wednesday 10 December 2014



ಕೃಷ್ಣರಾಜಪೇಟೆ. ಮಾನವರಾದ ನಾವು ಹುಟ್ಟಿನಿಂದ ಸಾಯುವವರೆಗೆ ಕಾನೂನಿನ ಮಧ್ಯದಲ್ಲಿಯೇ ಜೀವನ ನಡೆಸುವುದರಿಂದ ಕಾನೂನನ್ನು ಗೌರವಿಸಿ ಬದುಕು ನಡೆಸಬೇಕು. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂಬ ಸತ್ಯವನ್ನು ಅರಿಯಬೇಕು ಎಂದು ಪಟ್ಟಣದ ಜೆಎಂಎಫ್‍ಸಿ ಸಿವಿಲ್ ನ್ಯಾಯಾಲಯದ ಕಿರಿಯಶ್ರೇಣಿ ನ್ಯಾಯಾಧೀಶರಾದ ಎಸ್.ಕುಮಾರ್ ಮನವಿ ಮಾಡಿದರು.
ಅವರು ಇಂದು ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾನವ ಹಕ್ಕುಗಳ ದಿನದ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಸಂಘ ಜೀವಿಗಳಾಗಿ ಜೀವನ ನಡೆಸುವ ನಾವು ಸಂವಿಧಾನ ಬದ್ಧವಾಗಿ ನಮಗೆ ದೊರೆಯಬೇಕಾದ ಹಕ್ಕುಗಳನ್ನು ಪಡೆದುಕೊಳ್ಳಲು ಹೇಗೆ ಹೋರಾಟವನ್ನು ನಡೆಸುತ್ತೇವೆಯೋ ಹಾಗೆಯೇ ನಮ್ಮ ಪಾಲಿನ ಕರ್ತವ್ಯಗಳನ್ನು ಬದ್ಧತೆಯಿಂದ ಮಾಡಿ ಮುಗಿಸುವ ಮೂಲಕ ಇತರರಿಗೆ ಮಾದರಿಯಾಗಬೇಕು. ಜೀವನದಲ್ಲಿ ಯಶಸ್ವಿ ವ್ಯಕ್ತಿಗಳಾಗಿ ಹೊರಹೊಮ್ಮಲು ಸದಾ ಅಧ್ಯಯನಶೀಲರಾಗಿ ಹೊಸ-ಹೊಸ ವಿಚಾರಗಳ ಬಗ್ಗೆ ತಿಳಿದುಕೊಂಡು ಸಕಾರಾತ್ಮಕವಾಗಿ ಹೆಜ್ಜೆ ಹಾಕಬೇಕು. ವಿದ್ಯಾವಂತ ಯುವಜನರು ಸ್ವಾರ್ಥಿಗಳಾಗದೇ ವಿಧ್ಯೆಯ ಜ್ಞಾನದ ಬೆಳಕನ್ನು ಸಮಾಜದ ಉದ್ಧಾರಕ್ಕೆ ಬಳಕೆ ಮಾಡಬೇಕು. ನಮ್ಮ ದೇಶದ ಪ್ರತಿಭೆಗಳು ಹಣ ಸಂಪಾದನೆಯ ಆಸೆಯಿಂದ ವಿದೇಶಗಳ ಪಾಲಾಗದೇ ಹುಟ್ಟಿದ ಮಣ್ಣಿನ ಋಣವನ್ನು ತೀರಿಸುವ ಬದ್ಧತೆಯನ್ನು ಪ್ರದರ್ಶನ ಮಾಡಬೇಕು. ಹಕ್ಕುಗಳು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಾದ್ದರಿಂದ ಯುವಜನರು ಸೋಮಾರಿಗಳಾಗದೇ ಬದುಕಿಗೊಂದು ಆದರ್ಶ ಮತ್ತು ಸಮಾಜಮುಖಿ ಕಾಳಜಿಯನ್ನು ಬೆಳೆಸಿಕೊಂಡು ಸತ್ಯದ ಹಾದಿಯಲ್ಲಿಯೇ ಸಾಗಿ ಜೀವನದಲ್ಲಿ ಯಶಸ್ಸುಗಳಿಸಿ ಮುನ್ನಡೆಯಬೇಕು ಎಂದು ಕುಮಾರ್ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯಶ್ರೇಣಿ ನ್ಯಾಯಾಧೀಶರಾದ ಎಸ್.ಗೋಪಾಲಪ್ಪ ಮಾತನಾಡಿ ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ಕಡ್ಡಾಯವಾಗಿ ಶಿಕ್ಷಣದ ಜ್ಞಾನವನ್ನು ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡಿ ಮುನ್ನಡೆಯಬೇಕು. ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಗೆ ಸಾಮಾಜಿಕ ಅಸಮಾನತೆಗಳು ಹಾಗೂ ಜಾತಿಪದ್ಧತಿಯಂತಹ ಸಾಮಾಜಿಕ ಪಿಡುಗುಗಳನ್ನು ಅಳಿಸಿಹಾಕುವ ಶಕ್ತಿಯಿರುವುದರಿಂದ ಹೆಣ್ಣಾಗಲೀ ಅಥವಾ ಗಂಡಾಗಲೀ ಗ್ರಾಮೀಣ ಜನರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಸಮಾಜಕ್ಕೆ ಆಸ್ತಿಯನ್ನಾಗಿಸಿ ಕೊಡುಗೆ ನೀಡಬೇಕು. ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಕಂಕಣತೊಟ್ಟು ಹೋರಾಟ ನಡೆಸಬೇಕು. ಗುರಿ ಸಾಧನೆ ಮಾಡಿ ಮುನ್ನಡೆಯಲು ಕಷ್ಠವಾದರೂ ನ್ಯಾಯ, ನೀತಿ ಹಾಗೂ ಧರ್ಮಧ ಹಾದಿಯಲ್ಲಿಯೇ ಸಾಗಿ ಗುರಿಮುಟ್ಟಬೇಕು. ಕಾನೂನಿನ ಬಗ್ಗೆ ಜನಸಾಮಾನ್ಯರಲ್ಲಿ ಗೌರವ ಭಾವನೆಯಿದ್ದು ಬಡವ-ಶ್ರೀಮಂತ ಎಂಬ ಬೇಧ-ಭಾವನೆಯಿಲ್ಲದೇ ಎಲ್ಲರೂ ನ್ಯಾಯಾಲಯಕ್ಕೆ ಬಂದು ನ್ಯಾಯವನ್ನು ಪಡೆಯಬಹುದಾದರೂ ಸಣ್ಣ-ಪುಟ್ಟ ವಿಚಾರಗಳಿಗೆ ಕಿತ್ತಾಟ ಮಾಡಿಕೊಂಡು ನ್ಯಾಯಾಲಯದ ಮೆಟ್ಟಿಲನ್ನು ಏರಿ ತಮ್ಮ ಅಮೂಲ್ಯವಾದ ಸಮಯ ಹಾಗೂ ಹಣವನ್ನು ವ್ಯರ್ಥ ಮಾಡಿಕೊಳ್ಳದೇ ರಾಜೀ ಸಂಧಾನದ ಮೂಲಕ ತಮ್ಮ ಗ್ರಾಮಗಳಲ್ಲಿಯೇ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಗೋಪಾಲಪ್ಪ ಕರೆ ನೀಡಿದರು.
ಬಾಲಾಪರಾಧಿಗಳಾಗಬೇಡಿ. ವಿದ್ಯಾರ್ಥಿ ಜೀವನದಲ್ಲಿ ಯುವಜನರ ದೃಷ್ಠಿಯು ಅಕ್ಷರ ಜ್ಞಾನವನ್ನು ಸಂಪಾದನೆ ಮಾಡುವ ಕಡೆಗೆ ಮಾತ್ರವಿರಬೇಕು. ಕಾನೂನಿನ ಪ್ರಕಾರ ಸಣ್ಣವರಿರಲಿ ಅಥವಾ ದೊಡ್ಡವರಿರಲಿ ಶಿಕ್ಷೆಯ ಪ್ರಮಾಣವು ಕಡಿಮೆಯಾಗುವುದಿಲ್ಲ. ಆರೋಪವು ಆರೋಪವೇ ಆದ್ದರಂದ ಆವೇಶಕ್ಕೆ ಮನಸ್ಸನ್ನು ಕೊಟ್ಟು ಅಪರಾಧಿಗಳಾಗದೇ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಎದುರಿಸಿ ನಿಲ್ಲಬೇಕು. ವಿದ್ಯಾರ್ಥಿ ಜೀವನದಲ್ಲಿ ಯುವಜನರು ಶಿಸ್ತಿಗೆ, ಏಕಾಗ್ರತೆಗೆ ಗಮನ ಹರಿಸಿ ಶ್ರೇಷ್ಠ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ಅನಂತರಾಮಯ್ಯ, ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್, ಅಪರ ಸರ್ಕಾರಿ ಅಭಿಯೋಜಕ ಬಿ.ಸಿ.ರಾಜೇಶ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಕಾಳೇಗೌಡ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ವಕೀಲರಾದ ಎನ್.ಆರ್.ರವಿಶಂಕರ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಚಂದ್ರಶೇಖರ್, ಉಪಪ್ರಾಂಶುಪಾಲ ಡಿ.ರಾಜೇಗೌಡ ಭಾಗವಹಿಸಿದ್ದರು.
ಅಧ್ಯಾಪಕರಾದ ವಿಠಲ್ ಪ್ರಾರ್ಥಿಸಿದರು, ಡಿ.ರಾಜೇಗೌಡ ಸ್ವಾಗತಿಸಿದರು, ಚಂದ್ರಶೇಖರ್ ವಂದಿಸಿದರು. ಕೆ.ವಿನೋದ್‍ಸಿಂಗ್ ಮತ್ತು ಚಾಶಿ ಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಮಂಡ್ಯ: ಮಕ್ಕಳ ಏಳಿಗೆಗೆ ಸರ್ಕಾರ ಅನೇಕ ಸೌಲಭ್ಯಗಳಾದ ಊಟ, ಮಾತ್ರೆ, ಪುಸ್ತಕ ಹಾಲು, ಸೈಕಲ್ಲುಗಳನ್ನು ವಿತರಣೆ ಮಾಡುತ್ತಿದೆ. ವಿದ್ಯಾರ್ಥಿಗಳು ಜವಾಬ್ದಾರಿಯುತವಾಗಿ ಸೈಕಲುಗಳನ್ನು ಉಪಯೋಗಿಸಿಕೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷ ಬಿ. ಸಿದ್ದರಾಜು ಕರೆ ನೀಡಿದರು.
ನಗರದ ಸಂತ ಜೋಸೆಫ್ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿಯರಿಗೆ ಉಚಿತ ಬೈಸಿಕಲ್ ವಿತರಿಸಿ ಮಾತನಾಡಿದ ಅವರು, ಜ್ಞಾನದ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳು ಓದಿ ಸತ್ಪ್ರಜೆಗಳಾಗಿ ಬದುಕಬೇಕು. ಓದಿನ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಶಕ್ತಿ ಮತ್ತು ಮನರಂಜನೆ ಸಿಗುತ್ತದೆ. ಸರ್ಕಾರ ನೀಡಿರುವ ಬೈಸಿಕಲ್ ನ್ನು ಜೋಪಾನವಾಗಿ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಧರ್ಮಗುರು ವಿಜೇತ ಮಾರ್ಟಿನ್, ಮುಖ್ಯ ಶಿಕ್ಷಕಿ ಶರಣ ಲತಾ, ಸಿಸ್ಟರ್ ಕ್ಲಮನ್‍ಸಿಯಾ, ದೈಹಿಕ ಶಿಕ್ಷಕ ಅನಿಲ್‍ಕುಮಾರ್ ಅವರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಮಂಡ್ಯ: ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳ ಕಾರ್ಯವೈಖರಿ, ನೀತಿ ನಿಬಂಧನೆಗಳಿಗೆ ಸಂಬಂಧಿಸಿದಂತೆ ಎಲ್ಲ ವಿಚಾರಗಳನ್ನು ತಿಳಿದು ಗೊಂದಲಕ್ಕೊಳಗಾಗದೆ ಅದನ್ನು ಕಾರ್ಯರೂಪಕ್ಕೆ ತರಬೇಕು ಎಂದು ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಎಸ್.ಪಿ. ಸತೀಶ್ ಕೃಷಿ ಪತ್ತಿನ ಸಹಕಾರ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಲಹೆ ನೀಡಿದರು.
ರಾಜ್ಯ ಸಹಕಾರ ಮಹಾ ಮಂಡಳ, ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ನಗರದ ಡಿಸಿಸಿ ಬ್ಯಾಂಕ್ ಸಿಲ್ವರ್ ಜ್ಯೂಬಿಲಿ ಹಾಲ್‍ನಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶೀಘ್ರ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳಿಗೆ ಚುನಾವಣೆಗಳು ಬರುವುದರಿಂದ ಅಧಿಕಾರಿಗಳು ಎಲ್ಲ ವಿಚಾರಗಳನ್ನು ತಿಳಿದುಕೊಂಡು ಕೆಲಸ ನಿರ್ವಹಿಸುಬೇಕೆಂದರು.
ಕೆಲವು ಸಂಘಗಳಲ್ಲಿ ಬೈಲಾಗದಲ್ಲೇ ಸಾಕಷ್ಟು ಗೊಂದಲಗಳಿವೆ. ಅವುಗಳ ಬಗ್ಗೆ ಸರಿಯಾದ ಮಾಹಿತಿ ಪಡೆಯಬೇಕು. ಚುನಾವಣೆ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಯಾವುದೇ ಗೊಂದಲವಿಲ್ಲದೆ ಯಶಸ್ವಿಯಾಗಿ ಚುನಾವಣೆ ನಡೆಸುವಂತೆ ಸಲಹೆ ನೀಡಿದರು.
ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಬಿ.ಸಿ. ಮಾಯಿಗಯ್ಯ, ರಾಜ್ಯ ಸಹಕಾರ ಮಹಾ ಮಂಡಳದ ನಿವೃತ್ತ ನಿರ್ದೇಶಕ ಗೋವಿಂದೇಗೌಡ, ಜೆ.ಕೆ. ಪ್ರಕಾಶ್, ಮರಿಸ್ವಾಮಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ. ಶಿವಕುಮಾರ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಲೋಪದೋಷವಾದರೆ ಗಮನಕ್ಕೆ ತನ್ನಿ:
ಜನತೆಗೆ ಎಂ. ನಾಗೇಂದ್ರ ಸ್ವಾಮಿ ಕರೆ

ಜನತೆಯ ಆಶೋತ್ತರಗಳ ಈಡೇರಿಕೆಗಾಗಿ ಭಾರತ ಸರ್ಕಾರ ರೂಪಿಸಿರುವ ಪ್ರಧಾನಮಂತ್ರಿ ಜನಧನ ಯೋಜನೆಯ ಅನುಷ್ಠಾನದಲ್ಲಿ ಬ್ಯಾಂಕ್ ಸಿಬ್ಬಂದಿಯಿಂದ ಲೋಪದೋಷವಾಗಿದೆಯೆಂದು ಗಮನಕ್ಕೆ ತಂದರೆ ಲೋಪವೆಸಗಿದವರ ಮೇಲೆ ಕಠಿಣಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಪ್ರಾದೇಶಿಕ ಸೆನ್ಸಾರ್ ಮಂಡಲಿ ಮುಖ್ಯಸ್ಥರೂ ಆಗಿರುವ ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ನಿರ್ದೇಶಕ ಎಂ. ನಾಗೇಂದ್ರ ಸ್ವಾಮಿ ಕರೆನೀಡಿದ್ದಾರೆ.
ಅವರು ಮಂಡ್ಯ ಜಿಲ್ಲೆ ಮಂಗಲ ಗ್ರಾಮದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಆಂದೋಲನ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸ್ವಚ್ಛತೆ ಎನ್ನುವುದು ನಮ್ಮ ದಿನನಿತ್ಯದ ಜೀವನಶೈಲಿಯಾಗಬೇಕೆ ಹೊರತು ಒಂದು ದಿನದ ಮಟ್ಟಿನ ಕಾರ್ಯಕ್ರಮವಾಗಬಾರದು. ಸ್ವಚ್ಛ ಭಾರತ ನಿರ್ಮಾಣ ನಮ್ಮ ಗುರಿಯಾಗಬೇಕು ಎಂದು ಸೂಚಿಸಿದರು.
ಹೆಣ್ಣು ಭ್ರೂಣ ಹತ್ಯೆ ತಡೆಯುವುದರ ಜೊತೆಗೆ ಸಮಾಜಿಕ ಪಾತಕಗಳಿಂದಲೂ ಹೆಣ್ಣು ಮಕ್ಕಳನ್ನು ರಕ್ಷಿಸಿಕೊಳ್ಳಬೇಕು ಎಂದು ಹೇಳಿದ ನಾಗೇಂದ್ರ ಸ್ವಾಮಿ, ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಸಮರ್ಥರನ್ನಾಗಿಸಬೇಕು ಎಂದು ಕರೆ ನೀಡಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ನಾಗರತ್ನಮ್ಮ ಈ ಸಂದರ್ಭದಲ್ಲಿ ಏರ್ಪಡಿಸಿದ್ದ ಬೃಹತ್ ಜಾಗೃತಿ ಜಾಥಾ ಉದ್ಘಾಟಿಸಿದರು.
ಹೆಣ್ಣು ಶಿಶು ರಕ್ಷಣೆ-ಶಿಕ್ಷಣ ಕುರಿತು ಚಿಂತಕಿ ಶಾಂತಾಕುಮಾರಿ, ಸ್ವಚ್ಛ ಭಾರತ ಅಭಿಯಾನ ಕುರಿತು ಮೀರಾ ಶಿವಲಿಂಗಯ್ಯ ಹಾಗೂ ಪಿಎಂಜೆಡಿವೈ ಕುರಿತು ಕೆ.ಆರ್. ಶ್ರೀನಿವಾಸನ್ ಉಪನ್ಯಾಸ ನೀಡಿದರು.
ಜಿಲ್ಲಾಧಿಕಾರಿ ಡಾ: ಅಜಯ್ ನಾಗಭೂಷಣ್, ಜಿಲ್ಲಾ ಪಂಚಾಯತ್ ಸಿಎಒ ರೋಹಿಣಿ ಸಿಂಧೂರಿ, ನಿವೃತ್ತ ಐಎಎಸ್ ಅಧಿಕಾರಿ ಟಿ. ತಿಮ್ಮೇಗೌಡ, ಗ್ರಾಮದ ಮುಖಂಡರಾದ ಜವರೇಗೌಡ, ಯೋಗೇಶ್, ಲಂಕೇಶ್, ಆನಂದ್ ಮೊದಲಾದವರು ಉಪಸ್ಥಿತರಿದ್ದರು.
ಈವರೆಗೂ, ಸ್ಥಳೀಯ ಪ್ರೌಢಶಾಲೆಯ ಶೇಕಡಾ 64ರಷ್ಟು ವಿದ್ಯಾರ್ಥಿಗಳು ಮಾತ್ರಾ ಖಾತೆ ಹೊಂದಿದ್ದರು. ಜಾಗೃತಿ ಕಾರ್ಯಕ್ರಮದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಖಾತೆ ನೋಂದಣಿ ಶೇಕಡಾ 100ರಷ್ಟು ಸಾಧಿತವಾಯಿತು.
ಎರಡು ದಿನಗಳ ಕಾಲ ನಡೆದ ಸ್ವಚ್ಛ ಭಾರತ ಅಭಿಯಾನ, ಪ್ರಧಾನಮಂತ್ರಿ ಜನಧನ ಯೋಜನೆ ಹಾಗೂ ಹೆಣ್ಣು ಶಿಶು ರಕ್ಷಿಸಿ - ಶಿಕ್ಷಣ ಕೊಡಿಸಿ ಕುರಿತಾದ ವಿಶೇಷ ವಿಸ್ತøತ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗಾಗಿ ರಸಪ್ರಶ್ನೆ, ಗುಂಪುಚರ್ಚೆ ಮೊದಲಾದ ಹಲವು ಸ್ಫರ್ಧಾ ಚಟುವಟಿಕೆಗಳನ್ನು ನಡೆಸಲಾಯಿತು. ಚಲನಚಿತ್ರ ಹಾಗೂ ಭಾವಚಿತ್ರ ಪ್ರದರ್ಶನ, ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕವೂ ಯೋಜನೆಗಳ ಸಂದೇಶ ರವಾನಿಸಲಾಯಿತು. ಅಧಿಕಸಂಖ್ಯೆಯಲ್ಲಿ ಸಾರ್ವಜನಿಕರು, ವಿಶೇಷವಾಗಿ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


 ಭಾರತ ಸರ್ಕಾರದ ಕಾರ್ಯಕ್ರಮಗಳ ಉದ್ದೇಶವನ್ನು ಮಂಗಲ ಗ್ರಾಮಸ್ಥರಿಗೆ ವಿವರಿಸುತ್ತಿರುವ ಬೆಂಗಳೂರು ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ನಿರ್ದೇಶಕ ಎಂ. ನಾಗೇಂದ್ರ ಸ್ವಾಮಿ. ಮಂಡ್ಯ ಜಿಲ್ಲಾಧಿಕಾರಿ ಡಾ: ಅಜಯ್ ನಾಗಭೂಷಣ್, ನಿವೃತ್ತ ಅಧಿಕಾರಿ ಟಿ.ತಿಮ್ಮೇಗೌಡ, ಚಿಂತಕಿ ಶಾಂತಾಕುಮಾರಿ ಚಿತ್ರದಲ್ಲಿದ್ದಾರೆ.


ಕೃಷ್ಣರಾಜಪೇಟೆ. ರೈತರು ಬೆಳೆದಿರುವ ಕಬ್ಬಿಗೆ ರಾಜ್ಯ ಸಕಾರವು ಕನಿಷ್ಠ ಮೂರು ಸಾವಿರ ರೂ ನಿಗಧಿಗೊಳಿಸಬೇಕು. ವಿದ್ಯುತ್ ತೊಂದರೆಯಿಂದ ಬಳಲುತ್ತಿರುವ ಗ್ರಾಮೀಣ ಪ್ರದೇಶದ ರೈತರಿಗೆ ಬೇಸಾಯ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಗುಣಮಟ್ಟದ ವಿದ್ಯುತ್‍ಅನ್ನು ದಿನಕ್ಕೆ ಕನಿಷ್ಠ 5 ಗಂಟೆಗಳ ಕಾಲ ನೀಡಬೇಕು, ರೈತರ ಪ್ರತೀ ಟನ್ ಕಬ್ಬಿನ ಬಾಕಿ ಹಣ 100ರೂಗಳನ್ನು ತಕ್ಷಣವೇ ಕೊಡಿಸಬೇಕೆಂದು ಆಗ್ರಹಿಸಿ ರೈತ ಸಂಘವು ಹಮ್ಮಿಕೊಂಡಿದ್ದ ರಸ್ತೆತಡೆ ಪ್ರತಿಭಟನೆ ಕಾರ್ಯಕ್ರಮವು ಸಂಪೂರ್ಣವಾಗಿ ಯಶಸ್ವಿಯಾಯಿತು.
ಬೆಳಿಗ್ಗೆ 11ಗಂಟೆಗೆ ಆರಂಭಾವದ ರಸ್ತೆ ತಡೆ ಪ್ರತಿಭಟನೆಗೆ ತಮ್ಮ ಎತ್ತು ಗಾಡಿಗಳು ಹಾಗೂ ಸಾಕು ಪ್ರಾಣಿಗಳೊಂದಿಗೆ ಆಗಮಿಸಿ ಉಗ್ರವಾದ ಪ್ರತಿಭಟನೆ ನಡೆಸಿ ರಸ್ತೆಯ ಮಧ್ಯದಲ್ಲಿಯೇ ಅಡುಗೆ ಮಾಡಲು ಮುಂದಾದ ರೈತ ನಾಯಕರ ಪ್ರತಿಭಟನೆ ಯತ್ನವನ್ನು ವಾಪಸ್ ಪಡೆಯಲು ಪೋಲಿಸರು ಹಾಗೂ ಅಧಿಕಾರಿಗಳು ಮಾಡಿದ ಪ್ರಯತ್ನವು ವಿಫಲವಾಯಿತು. ಜಿಲ್ಲಾಧಿಕಾರಿಗಳು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಹಾಗೂ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಭರವಸೆಯ ಮೇರೆಗೆ ಮಧ್ಯಾಹ್ನ 2.30ಕ್ಕೆ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮುದುಗೆರೆ ರಾಜೇಗೌಡ ಹಾಗೂ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಆರ್.ಜಯರಾಂ ಅವರ ಮನವಿಯ ಮೇರೆಗೆ ರೈತ ಮುಖಂಡರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.
ಕೆ.ಆರ್.ಪೇಟೆ ಪಟ್ಟಣ, ತೆಂಡೇಕೆರೆ, ಕೃಷ್ಣಾಪುರ, ಅಕ್ಕಿಹೆಬ್ಬಾಳು ಮತ್ತು ಕಿಕ್ಕೇರಿಯಲ್ಲಿ ರಸ್ತೆಗೆ ಅಡ್ಡಲಾಗಿ ಎತ್ತಿನಗಾಡಿಗಳು ಹಾಗೂ ದನಕರುಗಳನ್ನು ಕಟ್ಟಿ ರೈತರು ಉಗ್ರವಾಗಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ರಸ್ತೆ ಸಂಚಾರವು ಸಂಪೂರ್ಣವಾಗಿ ಸ್ಥಬ್ಧಗೊಂಡಿತ್ತು. ಪೋಲಿಸರ ಎಚ್ಚರಿಕೆಯ ನಡುವೆಯೂ ಚಳವಳಿಯನ್ನು ಹಿಂದಕ್ಕೆ ಪಡೆಯದೇ ಕಾನೂನು ಉಲ್ಲಂಘಿಸಿ ರಸ್ತೆ ತಡೆ ನಡೆಸಿದ ರೈತ ಮುಖಂಡರನ್ನು ಪೋಲಿಸರು ಬಂಧಿಸಿ ಬಿಡುಗಡೆ ಮಾಡಿದರು.
ಕಬ್ಬಿಗೆ ಪ್ರತೀಟನ್‍ಗೆ ಕನಿಷ್ಠ 3ಸಾವಿರ ರೂಗಳನ್ನು ನಿಘದಿಪಡಿಸಬೇಕು, ಗ್ರಾಮೀನ ಪ್ರದೇಶದ ರೈತರು ಬೇಸಾಯ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುವಂತೆ ಕನಿಷ್ಠ 5ಗಂಟೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬೇಕು, ರಾಜ್ಯ ಸರ್ಕಾರವು ಆದೇಶ ನೀಡಿದ್ದರೂ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಪ್ರತೀ ಟನ್ ಕಬ್ಬಿನ ಬಾಕಿ ಹಣ 100ರೂಗಳನ್ನು ಸಕ್ಕರೆ ಕಾರ್ಖಾನೆಗಳು ಕೂಡಲೇ ವಿತರಿಸಲು ಮುಂದಾಗಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆಯ ವಿರುದ್ಧ ಧಿಕ್ಕಾರದ ಘೊಷಣೆಗಳನ್ನು ಕೂಗಿದ ರೈತ ಮುಖಂಡರು ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರವು ಸತ್ತುಹೋಗಿದೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮುದುಗೆರೆ ರಾಜೇಗೌಡ, ರಾಜ್ಯ ಉಪಾಧ್ಯಕ್ಷ ಕೆ.ಆರ್.ಜಯರಾಂ, ತಾಲೂಕು ಘಟಕದ ಅಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಮುಖಂಡರಾದ ಬೂಕನಕೆರೆ ನಾಗರಾಜು, ನೀತಿಮಂಗಲ ಮಹೇಶ್, ಮುರುಗೇಶ್, ಮುದ್ದುಕುಮಾರ್, ನಗರೂರು ಕುಮಾರ್, ಚೌಡೇನಹಳ್ಳಿ ಪುಟ್ಟೇಗೌಡ, ಕಾರಿಗನಹಳ್ಳಿ ಕುಮಾರ್, ನಾರಾಯಣಸ್ವಾಮಿ, ಎಲ್.ಬಿ.ಜಗಧೀಶ್, ನಂದಿನಿಜಯರಾಂ, ಜಿ.ಪಂ ಮಾಜಿ ಸದಸ್ಯ ಡಾ.ಎಸ್.ಕೃಷ್ಣಮೂರ್ತಿ ಮತ್ತಿತರರು ಭಾಗವಹಿಸಿದ್ದರು.
ಕೆ.ಆರ್.ಪೇಟೆ ಪಟ್ಟಣದ ಮೈಸೂರು-ಚೆನ್ನರಾಯಪಟ್ಟಣ ರಸ್ತೆಯ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಎತ್ತಿನಗಾಡಿಗಳೊಂದಿಗೆ ರಾಜ್ಯ ಸರ್ಕಾರದ ರೈತವಿರೋಧಿ ನಿಲುವನ್ನು ಖಂಡಿಸಿ ರಸ್ತೆ ತಡೆ ನಡೆಸಿದ ರೈತ ಮುಖಂಡರನ್ನು ಪೋಲಿಸರು ಬಂಧಿಸಿದರು.





No comments:

Post a Comment