Thursday 16 April 2015


ಮಂಡ್ಯ:  ನಕಲಿ ಕ್ಲಿನಿಕ್‍ಗಳ ಮೇಲೆ ದಾಳಿ ಮಾಡಿ ಕಠಿಣ ಕಾನೂನು ಕ್ರಮಜರುಗಿಸುವಂತೆ ಆರೋಗ್ಯಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಸಿಇಒ ರೋಹಿಣಿ ಸಿಂಧೂರಿ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಸಭೆಯಲ್ಲಿ ಮಾತನಾಡಿದ ಅವರು, ನಕಲಿ ಕ್ಲಿನಿಕ್‍ಗಳ ಮೇಲೆ ತೀವ್ರ ನಿಗಾವಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಆಯುಷ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಕಾಯ್ದೆ -2007ರಡಿಯಲ್ಲಿ (ಕೆಪಿಎಂಇ –ಕಾಯ್ದೆ) ನೋಂದಣಿ ಮಾಡಿಸದೇ ಅನಧಿಕೃತ ಕ್ಲಿನಿಕ್ ನಡೆಸುತ್ತಿರುವ ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮಜರುಗಿಸಬೇಕು. ಅಲ್ಲದೆ, ಸ್ಥಳೀಯ ಪೊಲೀಸ್ ಠಾಣೆಯಲ್ಲೂ ದೂರು ದಾಖಲು ಮಾಡುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ, ಕೆಪಿಎಂಇ–ಕಾಯ್ದೆಯಡಿ ನೋಂದಣಿ ಆಗಿರುವ ಹಾಗೂ ಆಗದಿರುವ ಕ್ಲಿನಿಕ್‍ಗಳ ಪಟ್ಟಿಯನ್ನು ಕೂಡಲೇ ಸಲ್ಲಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ತಂಡ ರಚನೆ: ನಕಲಿ ಕ್ಲಿನಿಕ್‍ಗಳನ್ನು ಪತ್ತೆ ಹಚ್ಚಲು ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ ತಂಡ ರಚಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಆಯುಷ್ ಅಧಿಕಾರಿ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರನ್ನು ಒಳಗೊಂಡ ತಂಡ ರಚಿಸಲಾಗಿದೆ.
ಸಾರ್ವಜನಿಕರಿಗೆ ನಕಲಿ ಕ್ಲಿನಿಕ್‍ಗಳ ಬಗ್ಗೆ ಮಾಹಿತಿ ದೊರೆತಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳಿಗೆ ಮಾಹಿತಿ (ದೂ.ಸಂ. 08232-220417) ನೀಡುವಂತೆ ತಿಳಿಸಿದರು.
ಮೇಲ್ದರ್ಜೆಗೆ: ಕೆ.ಆರ್.ಎಸ್., ಬೀರುವಳ್ಳಿ, ಸಂತೇಬಾಚಹಳ್ಳಿ ಹಾಗೂ ಕ್ಯಾತನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 24*7 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೆ ಏರಿಸಲು ಅನುಮೋದಿಸಲಾಯಿತು. ಈವರೆವಿಗೂ 24*7 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಿವಳ್ಳಿ, ಕೀಲಾರ, ಬೂಕನಕೆರೆ ಮತ್ತು ಕಿರುಗಾವಲು ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಪಿ. ಮಂಚೇಗೌಡ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಸ್. ಸೀತಾಲಕ್ಷ್ಮಿ, ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿ ಡಾ.ಕೆ. ಮೋಹನ್, ಆರ್‍ಸಿಎಚ್‍ಒ ಡಾ. ಎಂ.ಎನ್. ಗೀತಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಪಿ. ಮಾರುತಿ, ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಎಸ್. ಕಕ್ಕಿಲಾಯ ಮತ್ತಿತರರು ಹಾಜರಿದ್ದರು.
I

No comments:

Post a Comment