Thursday 11 February 2016

ಮಂಡ್ಯ: ಪ್ರತಿಯೊಬ್ಬರೂ ಜೀವನದಲ್ಲಿ ಸೇವಾ ಮನೋಭಾವ ಬೆಳೆಸಿಕೊಂಡರೆ ದೇಶ ಸುಭೀಕ್ಷವಾಗಿರುತ್ತದೆ ಎಂದು ಮಾಜಿ ಸಚಿವ, ಭಾರತ್ ಸ್ಕೌಟ್ ಅಂಡ್ ಗೈಡ್ಸ್‍ನ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯಾ ಅವರು ತಿಳಿಸಿದರು.
ನಗರದ ಮಾಂಡವ್ಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಶಿಕ್ಷಕಿಯರಾಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕಿಯರಿಗೆ 7 ದಿನಗಳ ಕಾಲ ಹಮ್ಮಿಕೊಂಡಿದ್ದ ಗೈಡ್, ಬುಲ್‍ಬುಲ್ ಮತ್ತ ರೋವರ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸೇವೆ ಮಾಡುವುದರಿಂದ ನಮಗೇನು ಲಾಭ ಎಂದು ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಮನುಷ್ಯ ತೊಡಗಿರುವುದರಿಂದ ಪ್ರಸ್ತುತ ಸೇವಾ ಮನೋಭಾವ ಎನ್ನುವುದು ಕಡಿಮೆಯಾಗಿದೆ. ಆದ್ದರಿಂದ ಶಿಕ್ಷಕರು ವಿದ್ಯಾರ್ಥಿಗಳಿಗೆ ಜ್ಞಾನದ ಜತೆಗೆ ಬದುಕುವ ಬಗ್ಗೆ ಹಾಗೂ ಸೇವಾ ಮನೋಭಾವವನ್ನು ತಿಳಿಸಬೇಕೆಂದು ಕರೆ ನೀಡಿದರು.
ಶಿಕ್ಷಣ ಮತ್ತು ಜ್ಞಾನ ಇದ್ದರೆ ಅಧಿಕಾರ, ಹಣ ಪಡೆಯಲು ಸಾಧ್ಯ. ನಡತೆ ಮತ್ತು ಜ್ಞಾನ ಹೃದಯದ ಎರಡು ಕಣ್ಣುಗಳಿದ್ದಂತೆ. ಅದೇ ರೀತಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಬಾಂಧವ್ಯ ಇರಬೇಕು ಎಂದು ತಿಳಿಸಿದರು.
ಮಕ್ಕಳಿಗೆ ಒಳ್ಳೆಯ ವಿಚಾರಧಾರೆಗಳನ್ನು ಶಿಕ್ಷಕರು ಕಲಿಸಬೇಕು. ಮನೆ ಮತ್ತು ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ದೇಶವೂ ಸ್ವಚ್ಛವಾಗಿರುತ್ತದೆ. ಅದೇ ರೀತಿ ಮನುಷ್ಯನ ಮನಸ್ಸೂ ಸ್ವಚ್ಛವಾಗಿದ್ದರೆ ಎಲ್ಲವೂ ಶಾಂತವಾಗಿರುತ್ತದೆ ಎಂದರು.
ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಶಿಕ್ಷಕಿಯರು ತರಬೇತಿಯಲ್ಲಿ ಪಡೆದ ಒಳ್ಳೆಯ ಅನುಭವಗಳನ್ನು ವಿದ್ಯಾರ್ಥಿಗಳಿಗೂ ತಿಳಿಸಿ ಅವರನ್ನು ಭವ್ಯ ಭಾರತದ ಪ್ರಜೆಗಳನ್ನಾಗಿ ರೂಪಿಸಬೇಕೆಂದು ತಿಳಿ ಹೇಳಿದರು.
ಭಾರತ್ ಸ್ಕೌಟ್ ಅಂಡ್ ಗೈಡ್ಸ್‍ನ ಜಿಲ್ಲಾ ಮುಖ್ಯ ಆಯುಕ್ತರಾದ ಮೀರಾ ಶಿವಲಿಂಗಯ್ಯ ಅವರು ಮಾತನಾಡಿ, ನಮ್ಮಲ್ಲಿರುವ ಒಳ್ಳೆಯ ಗುಣಗಳನ್ನು ತೋರಿಸಲು ಈ ತರಬೇತಿ ಉತ್ತಮ ವೇದಿಕೆ. ನಮ್ಮಲ್ಲಿನ ಒಳಗಿನ ಹಾಗೂ ಹೊರಗಿನ ಭಾವನೆಗಳನ್ನು ತೋರಿಸುತ್ತದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಗೈಡ್‍ನ ಆಯುಕ್ತೆ ಕೆ.ಸಿ.ನಾಗಮ್ಮ, ಭಾರತ್ ಸ್ಕೌಟ್ ಅಂಡ್ ಗೈಡ್ಸ್‍ನ ಜಿಲ್ಲಾ ಕಾರ್ಯದರ್ಶಿ ಶಿವರಾಮೇಗೌಡ, ಜಿಲ್ಲಾ ತರಬೇತಿ ಅಧಿಕಾರಿ ಸ್ಯಾಮುಯಲ್ ಸತ್ಯಕುಮಾರ್, ಕೃಷ್ಣಮೂರ್ತಿ ಉಪಸ್ಥಿತರಿದ್ದರು.

No comments:

Post a Comment