Thursday 27 November 2014

              ಹೆಚ್.ಡಿ.ಕೋಟೆಯ 49 ಗ್ರಾಮ ಸೂಕ್ಷ್ಮ ಜೀವ-ವೈವಿಧ್ಯತಾ ಪ್ರದೇಶ: ಆರ್.ಕೆ.ಸಿಂಗ್
ಮೈಸೂರು, ನವೆಂಬರ್ 27 ಕಸ್ತೂರಿ ರಂಗನ್ ವರದಿಯಲ್ಲಿ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ 49 ಗ್ರಾಮಗಳನ್ನು ಸೂಕ್ಷ್ಮ ಜೀವ-ವೈವಿಧ್ಯತಾ ಪ್ರದೇಶವೆಂದು ಸೇರ್ಪಡೆಗೊಳಿಸಲಾಗಿದೆ ಎಂದು ರಾಜ್ಯ ಜೀವ ವೈವಿದ್ಯದ ಬೋರ್ಡ್‍ನ ಕಾರ್ಯದರ್ಶಿ ಆರ್.ಕೆ.ಸಿಂಗ್ ಹೇಳಿದರು.
 ಜಿಲ್ಲಾಧಿಕಾರಿಯವ ಕಚೇರಿ ಸಭಾಂಗಣದಲ್ಲಿ ಸೂಕ್ಷ್ಮ ಜೀವ-ವೈವಿಧ್ಯತಾ ಪ್ರದೇಶಕ್ಕೆ ಸಂಬಂಧ ಇಂದು ಕರೆಯಲಾದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
 ಹೆಚ್.ಡಿ.ಕೋಟೆ ತಾಲೂಕಿನ 49 ಗ್ರಾಮಗಳನ್ನು ಸೂಕ್ಷ್ಮ ಜೀವ-ವೈವಿಧ್ಯತಾ ಪ್ರದೇಶವೆಂದು ಸೇರ್ಪಡೆಗೊಳಿಸಲಾದ ಪೈಕಿ 45 ಗ್ರಾಮಗಳನ್ನು ಈಗಾಗಲೇ ಬಂಡೀಪುರ ಮತ್ತು ನಾಗರಹೊಳೆ ಹುಲಿ ಮೀಸಲು ಪ್ರದೇಶದ ಬಫರ್ ವಲಯ  ಎಂದು ಘೋಷಣೆ ಮಾಡಲಾಗಿರುತ್ತದೆ. ಆದ ಕಾರಣ ಈ ಪ್ರದೇಶಗಳಿಗೆ ಸಾರ್ವಜನಿಕ ಅಭಿಪ್ರಾಯ ಪಡೆಯುವ ಅವಶ್ಯಕತೆ ಇರುವುದಿಲ್ಲ ಎಂದ ಅವರು ಉಳಿದ ನಾಲ್ಕು ಗ್ರಾಮಗಳಾದ  ಹೊನ್ನೂರುಕುಪ್ಪೆ, ತೆನೆಕಲ್ಲು, ಚಿಕ್ಕಕುಂದೂರು ಮತ್ತು ಅಂಕುಪುರ ಗ್ರಾಮಗಳು ಹುಲಿ ಮೀಸಲು ಪ್ರದೇಶದ ವ್ಯಾಪ್ತಿಯಿಂದ ಹೊರಗಡೆ ಬರುವುದರಿಂದ ಕ್ಷೇತ್ರ ಪರಿಶೀಲನೆ ಹಾಗೂ ಸಾರ್ವಜನಿಕ ಅಭಿಪ್ರಾಯ ಪಡೆಯುವ ಅವಶ್ಯಕತೆ ಇತ್ತು ಎಂದು ಹೇಳಿದರು.
 ನಾಲ್ಕು ಗ್ರಾಮಗಳಲ್ಲಿ ಕ್ಷೇತ್ರ ಪರಿಶೀಲನೆ ಹಾಗೂ ಸಾರ್ವಜನಿಕ ಅಭಿಪ್ರಾಯ ಪಡೆಯುವ ಸಲುವಾಗಿ  ಗ್ರಾಮ ಪಂಚಾಯತ್ ಅಧ್ಯಕ್ಷರು, ಗ್ರಾಮ ಲೆಕ್ಕಿಗರು, ಕೃಷಿ ಇಲಾಖೆ ಅಧಿಕಾರಿ ಹಾಗೂ ಅರಣ್ಯ ರಕ್ಷಕರುಗಳನ್ನು ಒಳಗೊಂಡಂತೆ ಗ್ರಾಮ ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಗಳು ಸಾರ್ವಜನಿಕ ಅಭಿಪ್ರಾಯ ಪಡೆಯಲು ಗ್ರಾಮಗಳಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ಸಾರ್ವಜನಿಕರು ಸ್ವತಂತ್ರವಾಗಿ ಅವರ ಅಭಿಪ್ರಾಯವನ್ನು ಸಮಿತಿ ಸದಸ್ಯರಿಗೆ ಸಲ್ಲಿಸಲು ನವೆಂಬರ್ 27 ಕಡೆ ದಿನವಾಗಿತ್ತು. ಆದರೆ ಯಾವುದೇ ದೂರುಗಳು ಬಂದಿರುವುದಿಲ್ಲ ಎಂದರು.
ಜಿಲ್ಲಾಧಿಕಾರಿ ಸಿ.ಶಿಖಾ ಮಾತನಾಡಿ ಜಿಲ್ಲಾಧಿಕಾರಿ ಕಛೇರಿಯಲ್ಲಿ ಒಂದು ವಿಶೇಷ ಶಾಖೆಯನ್ನು ಈ ಸಂಬಂಧ ತೆರಯಲಾಗಿದ್ದು, ಸಾರ್ವಜನಿಕರಿಗೆ ನವೆಂಬರ್ 27 ಮಧ್ಯಾಹ್ನ 3 ಗಂಟೆಯವರೆಗೆ ಕಾಲವಕಾಶ ನೀಡಲಾಗಿತ್ತು. ಆದರೆ ಇಲ್ಲಿವೂ ಸಹ 4 ಗ್ರಾಮಗಳನ್ನು ಸೂಕ್ಷ್ಮ ಜೀವ-ವೈವಿಧ್ಯತಾ ಪ್ರದೇಶವೆಂದು ಸೇರ್ಪಡೆಗೊಳಿಸಬಾರದೆಂದು ಯಾರೂ ದೂರು ನೀಡಿರುವುದಿಲ್ಲ ಎಂದರು.
ಅರಣ್ಯ ಉಪ ಸಂರಕ್ಷಣಾಧಿಕಾರಿ ಡಾ. ಕರಿಕಳ್ಳಣ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಹೇಶ್ ಹಾಗೂ ವಿವಿದ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.  

No comments:

Post a Comment