Saturday 1 November 2014

ಮಂಡ್ಯ ಕನ್ನಡ ರಾಜ್ಯೋತ್ಸವ-ಮಂಡ್ಯದ ಮಣ್ಣಿನ ಮಕ್ಕಳ ಕೊಡುಗೆ ಮಹತ್ತರ : ಅಂಬಿ.

                  ಮಂಡ್ಯದ ಮಣ್ಣಿನ ಮಕ್ಕಳ ಕೊಡುಗೆ ಮಹತ್ತರ : ಅಂಬಿ

ಮಂಡ್ಯ,ನ.1- ಕರ್ನಾಟಕದ ಬೆಳವಣಿಗೆಯಲ್ಲಿ ಮಂಡ್ಯ ಮಣ್ಣಿನ ಮಕ್ಕಳ ಕೊಡುಗೆ ಮಹತ್ತರವಾದ ಪಾತ್ರವನ್ನು ವಹಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಮ್ಮೆಯಿಂದ ನುಡಿದರು.
ನಗರದ ಸರ್‍ಎಂವಿ ಕ್ರೀಡಾಂಗ ಣದಲ್ಲಿ 59ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, 1845 ರಲ್ಲಿ ಶ್ರೀರಂಗಪಟ್ಟಣದ ಬಳಿ ಅಷ್ಟಗ್ರಾಮ ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಿ ಜಗತ್ತಿಗೆ ಸಿಹಿ ಕೊಟ್ಟೆವು, 1900 ರಲ್ಲಿ ಶಿವನ ಸಮುದ್ರದಲ್ಲಿ ಜಲ ವಿದ್ಯುತ್ ಅನ್ನು ಉತ್ಪಾದಿಸಿ ನಾಡಿಗೆ ಶಕ್ತಿ ತುಂಬಿದ್ದೇವೆ ಎಂದು ಮಣ್ಣಿನ ಬಗ್ಗೆ ಮಾತನಾಡಿ ಬೀಗಿದರು.
ಶ್ರೀರಂಗಪಟ್ಟಣದ ಅಬ್ಬೆ ದುಬ್ಬಾಯಿ ಎಂಬ ಪಾದ್ರಿ 200 ವರ್ಷಗಳ ಹಿಂದೆ ಮೊಟ್ಟ ಮೊದಲಿಗೆ ರೋಗ ನಿರೋಧಕ ಚುಚ್ಚುಮದ್ದನ್ನು ಪ್ರಯೋಗಕ್ಕೆ ತಂದ. ಇತ್ತೀಚೆಗೆ ಜಗತ್ತಿನ ಬಾಹ್ಯಾಕಾಶ ಪ್ರಪಂಚದ ಮಂಗಳಯಾನದಲ್ಲಿ ದುಡಿದು ಜಾಗತಿಕ ದಾಖಲೆಯನ್ನು ನಿರ್ಮಿಸಿದ ಪ್ರಸಿದ್ಧ ವಿಜ್ಞಾನಿಗಳಲ್ಲಿ ಶ್ರೀರಂಗಪಟ್ಟಣದ ಇಸ್ರೋನ ಎಸ್.ಕೆ.ಶಿವಕುಮಾರ್ ಈ ನೆಲದ ಮಣ್ಣಿನ ಮಗ ಎಂದು ಹೆಮ್ಮೆ ಪಟ್ಟರು.
ಮೈಸೂರು ಹುಲಿ ಟಿಪ್ಪು ಸುಲ್ತಾನ್ 4ನೇ ಮೈಸೂರು ಯುದ್ಧದಲ್ಲಿ ಮೊಟ್ಟ ಮೊದಲಿಗೆ ಕ್ಷಿಪಣಿ ದಾಳಿಯನ್ನು ಮಾಡಿ ಬ್ರಿಟೀಷರ ಎದೆ ನಡುಗಿಸಿದ ವೀರ. ನಾಗಮಂಗಲ ತಾಲ್ಲೂಕು ಬಿಂಡಿಗನವಿಲೆಯ ಡಾ|| ರಾಜಾರಾಮಣ್ಣ ವಿಶ್ವ ವಿಖ್ಯಾತ ಅಣು ವಿಜ್ಞಾನಿಯಾಗಿ ಭಾರತದ ಕೀರ್ತಿಯನ್ನು ಜಗತ್ತಿನಾದ್ಯಂತ ಸಾರಿದರು ಎಂದರು.
ಹೀಗೆ ಮಂಡ್ಯ ಮಣ್ಣಿನಲ್ಲಿ ಹುಟ್ಟಿ ಸಾಧನೆಯನ್ನು ಗೈದ ಮಹನೀಯರು ಹೆಚ್ಚು, ಈ ಮಣ್ಣಿನಲ್ಲಿ ಹುಟ್ಟಿ ಜೀವನದಲ್ಲಿ ಒಮ್ಮೆಯಾದರೂ ಬಣ್ಣ ಹಚ್ಚಿ ರಂಗದ ಮೇಲೆ ಅಭಿನಯಿಸದೇ ಇರುವವರು ಯಾರೊಬ್ಬರೂ ಇಲ್ಲ ಎಂದರೆ ಅದು ಹೆಚ್ಚಲ್ಲ ಎಂದು ಹೇಳಿದರು.
ಈ ಮಣ್ಣಿನ ಮಕ್ಕಳು ಕೃಷಿಕರು ಮಂಡ್ಯದ ಬೆಲ್ಲ, ಬೆಣ್ಣೆ, ಮದ್ದೂರಿನ ಎಳನೀರು ಭಾರತದೆಲ್ಲೆಡೆ ರಫ್ತಾಗುತ್ತದೆ. ಮಂಡ್ಯ ಜಿಲ್ಲೆಯ ತುಂಬಾ ಹರಿದಾಡುವ ಕಾವೇರಿ, ಹೇಮಾವತಿ, ಶಿಂಷಾ, ಲೋಕಪಾವನಿ, ವೀರ ವೈಷ್ಣವಿ ನದಿಗಳು ಎತ್ತರೆತ್ತರ  ನಿಂತಿರುವ ಬೆಟ್ಟಗಳು, ಸಹಸ್ರಾರು ಪ್ರಾಚೀನ ದೇವಾಲಯಗಳು, ನದಿ ತಟಾಕುಗಳು ಕನ್ನಡ ನೆಲವನ್ನು ಸಮೃದ್ಧಿಗೊಳಿಸಿದೆ ಈ ಜಿಲ್ಲೆಯನ್ನು ಶ್ರೀಮಂತಗೊಳಿಸಿದೆ.
ಆದಿಚುಂಚನಗಿರಿಯ ಕಾಲಭೈರವ, ಮಂಡ್ಯದ ಲಕ್ಷ್ಮೀಜನಾರ್ಧನ, ಮದ್ದೂರಿನ ಉಗ್ರನರಸಿಂಹ, ಶ್ರೀರಂಗಪಟ್ಟಣದ ರಂಗನಾಥ, ಮೇಲುಕೋಟೆಯ ಚೆಲುವನಾರಾಯಣ, ಪಾಂಡವಪುರದ ಉಕ್ಕಡದಮ್ಮ ಮೊದಲಾದ ದೇವಾನುದೇವತೆಗಳು ನಮಗೆ ಶ್ರೀರಕ್ಷೆಯಾಗಿದ್ದಾರೆ ಎಂದು ತಿಳಿಸಿದರು.
ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳು  ನಿರಂತರವಾಗಿ ಮುನ್ನಡೆದಿದೆ. ನಾವು ಸಾಕಷ್ಟು ಸಾಧನೆಯ ಶಿಖರಗಳನ್ನು ಏರಿದ್ದೇವೆ, ಕನ್ನಡಿಗರೆಲ್ಲರಿಗೆ ವಾಸಕ್ಕೊಂದು ಮನೆ ಕಟ್ಟಿಕೊಡುವ ವಸತಿ ಭಾಗ್ಯ ಯೋಜನೆ, ಬಡವರ ಒಡಲು ತುಂಬಲು ಅನ್ನಭಾಗ್ಯ, ಕೆರೆಗಳ ಅಭಿವೃದ್ಧಿಗಾಗಿ ಜಲಭಾಗ್ಯ, ಪ್ರವಾಸೋದ್ಯಮ ಅಭಿವೃದ್ಧಿ, ನಿರ್ಮಲ ನಗರ ನಿರ್ಮಾಣ, ಶಾಲಾ ಮಕ್ಕಳಿಗೆ ಉಚಿತ ಹಾಲು ವಿತರಣೆಯ ಕ್ಷೀರಭಾಗ್ಯ, ಜನಸಾಮಾನ್ಯರ ಆರೋಗ್ಯ ರಕ್ಷಣೆಯ ಯಶಸ್ವಿನಿ, ರೈತರ ಜಮೀನು ರಕ್ಷಣೆಯ ಪಹಣಿ ಯೋಜನೆ ಹೀಗೆ ನೂರಾರು ಯೋಜನೆಗಳನ್ನು ರೂಪಸಿ ನಮ್ಮ ಸರ್ಕಾರ ಅಭಿವೃದ್ಧಿಯತ್ತ ಮುನ್ನಡೆದಿದೆ ಎಂದು ಸಮರ್ಥಿಸಿಕೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅಜಯ್‍ನಾಗ ಭೂಷಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ.ಬೋರಸೆ, ಜಿ.ಪಂ.ಅಧ್ಯಕ್ಷೆ ಮಂಜುಳಾ ಪರಮೇಶ್, ನಗರಸಭಾಧ್ಯಕ್ಷ ಬಿ.ಸಿದ್ದರಾಜು ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
                            “ಗಾಂಧೀಜಿ ಕನಸು” ಚಿತ್ರಕ್ಕೆ ಅಂಬಿ ಚಾಲನೆ
ಮಂಡ್ಯ,ನ.1- ರಮೇಶ್ ನಟಿಸಿ ನಿರ್ದೇಶಿಸಿದಂತಹ “ಗಾಂಧೀಜಿ ಕನಸು” ಚಲನಚಿತ್ರಕ್ಕೆ ವಸತಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಗಾಂಧಿ ಚಕ್ರವನ್ನು ತಿರುಗಿಸಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶದಲ್ಲಿ ಹುಟ್ಟಿ, ಗ್ರಾಮ ಪಂಚಾಯತಿಯಿಂದ ಜಿಲ್ಲಾ ಪಂಚಾಯತಿಯವರೆಗೆ ಜನಪ್ರತಿನಿಧಿಯಾಗಿ ಕೆಲಸಮಾಡಿಕೊಂಡು ಗಾಂಧಿರವರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿರುವುದು ಉತ್ತಮವಾದ ಕೆಲಸ ಎಂದರು.
ಗಾಂಧೀಜಿರವರ ಕನಸನ್ನು ನನಸಾಗಿಸುವುದು ಸುಲಭದ ಮಾತಲ್ಲ, ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಈ ರೀತಿಯ ಪ್ರಯತ್ನಕ್ಕೆ ಕೈಹಾಕಿರುವ ರಮೇಶ್ ಯುವಕರಿಗೆ ಮಾದರಿ. ಗಾಂಧಿ ಮಾಡಿದ ನಿಷ್ಠೆಯ ಕೆಲಸ, ತ್ಯಾಗಗಳು ಬಹುದೊಡ್ಡವು, ಅದು ಸಮಾಜದಲ್ಲಿನ ಸುಧಾರಣೆಗೆ ಕಾರಣ ಎಂದು ಹೇಳಿದರು.
ರಮೇಶ್ ಇಂದು ಸಮಾಜಮುಖಿಯಾದ ಕೆಲಸವನ್ನು ಮಾಡಿದ್ದಾರೆ. ಇಂದಿನ ಯುವಕರು ಇದೇ ರೀತಿಯಲ್ಲಿ ಸಮಾಜವನ್ನು ಸರಿಯಾದ ದಾರಿಯಲ್ಲಿ ನಡೆಸಲು ಮುಂದಾಗಬೇಕೆಂದು ಕರೆ ನೀಡಿದರು.
ಸ್ಥಳದಲ್ಲಿ ಪೊಲೀಸ್ ವರಿಷ್ಢಾಧಿಕಾರಿ ಭೂಷಣ್ ಜಿ.ಬೋರಸೆ, ಜಿಲ್ಲಾಧಿಕಾರಿ ಅಜಯ್‍ನಾಗಭೂಷಣ್, ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯಾನಂದ ಉಪಸ್ಥಿತರಿದ್ದರು.
ಸಚಿವರಿಂದ ಮಹಿಳಾ ವಿಶೇಷ ಚಿಕಿತ್ಸಾ ಘಟಕ ಉದ್ಘಾಟನೆ
ಮಂಡ್ಯ,ನ.1-ದೌರ್ಜನಕ್ಕೆ ಒಳಗಾದ ಮಹಿಳೆಯರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ, ರಕ್ಷಣೆ, ಕಾನೂನು ನೆರವು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಇಂದು  ಮಂಡ್ಯ ನಗರದ ಜಿಲ್ಲಾ ಆಸ್ಪತ್ರೆಯ ಕೊಠಡಿ ಸಂಖ್ಯೆ 07 ಮತ್ತು 08 ರಲ್ಲಿ ಮಹಿಳಾ ವಿಶೇಷ ಚಿಕಿತ್ಸಾ ಘಟಕವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಹೆಚ್. ಅಂಬರೀಷ್ ಅವರು ಉದ್ಘಾಟಿಸಿದರು.
ಈ ಘಟಕವು ದಿನದ 24 ಘಂಟೆಯೂ ಕಾರ್ಯ ನಿರ್ವಹಿಸಲ್ಲಿದ್ದು ಇಬ್ಬರು ವೈದ್ಯಾಧಿಕಾರಿಗಳು, ಓರ್ವ ಮಹಿಳಾ ಪೊಲೀಸ್ ಅಧಿಕಾರಿ, ನಾಲ್ವರು ನರ್ಸ್‍ಗಳು, ಓರ್ವ ಆಪ್ತ ಸಮಾಲೋಚಕರು, ಇಬ್ಬರು ಕಾನೂನು ಸಲಹೆಗಾರರು, ಮೂವರು ಸಮಾಜ ಸೇವಾ ಕಾರ್ಯಕರ್ತರು ಹಾಗೂ ಇಬ್ಬರು ಸ್ವಚ್ಛತಗಾರರನ್ನು ಹೊಂದಿರುತ್ತದೆ.
ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ವೈದ್ಯಕೀಯ ಚಿಕಿತ್ಸೆ, ಪೊಲೀಸ್ ನೆರವು, ಕಾನೂನು ನೆರವು, ಸಮಾಲೋಚನೆ, ಮಹಿಳಾ ಸಹಾಯವಾಣಿ ಮುಂತಾದ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಈ ಘಟಕದ ಉದ್ದೇಶವಾಗಿರುತ್ತದೆ.
ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಡಾ.ಅಜಯ್ ನಾಗಭೂಷಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಭೂಷಣ ಜಿ. ಬೊರಸೆ, ಮಿಮ್ಸ್ ನಿರ್ದೇಶಕರಾದ ಡಾ. ಪುಷ್ಪ ಸರ್ಕಾರ್, ಜಿಲ್ಲಾ ಆರೋಗ್ಯ ಮತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಂಜೇಗೌಡ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.


27 ದಿನಗಳ ಟಾಸ್ಕ್‍ವರ್ಕರ್ಸ್ ಧರಣಿಗೆ ಸಚಿವರಿಂದ ತೆರೆ

ಮಂಡ್ಯ,ನ.1- ನಗರದ ಕಾವೇರಿ ನೀರಾವರಿ ನಿಗಮದ ಎದುರು ನಡೆಯುತ್ತಿದ್ದಂತಹ ಟಾಸ್ಕ್‍ವರ್ಕಸ್ ನೌಕರರ ಧರಣಿ ಜಿಲ್ಲಾ ಉಸ್ತುವಾರಿ ಸಚಿವರ ಮಧ್ಯಸ್ಥಿಕೆಯಿಂದ ತೆರೆಕಂಡಿದೆ.
ಧರಣಿ ಸ್ಥಳಕ್ಕೆ ಬೇಟಿ ನೀಡಿದ ಸಚಿವರು ಟಾಸ್ಕ್‍ವರ್ಕರ್ಸ್ ನೌಕರರ ಸಮಸ್ಯೆಯನ್ನು ಆಲಿಸಿ ಇನ್ನು 3 ತಿಂಗಳೊಳಗೆ ಅವರ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿ ನೌಕರರ ಮನವೊಲಿಸಿದರು.
ನೌಕರರ ನಾಲ್ಕು ಬೇಡಿಕೆಗಳಲ್ಲಿ ಮೂರನ್ನು ಬಗೆಹರಿಸಲಾಗಿದ್ದು, ಉಳಿದ ಒಂದು ಬೇಡಿಕೆಯನ್ನು ಶೀಘ್ರವಾಗಿ ಸಚಿವರುಗಳೊಂದಿಗೆ ಸಭೆ ಸೇರಿ ನಿವಾರಿಸುವುದಾಗಿ ತಿಳಿಸಿದರು.
ನೌಕರರು ಧರಣಿಯನ್ನು ಕೈಬಿಟ್ಟು ರೈತರಿಗೆ ನೀರು ಪೂರೈಸಿ,ರೈತರಿಗೆ ತೊಂದರೆಯಾಗದ ರೀತಿಯಲ್ಲಿ ಕೆಲಸ ಮಾಡುವಂತೆ ಮನವಿ ಮಾಡಿದರು.
ಇವರೊಂದಿಗೆ ಪಿಡಿಓ ಅಧಿಕಾರಿ ಅಪ್ಪಾಜಪ್ಪ, ರೈತ ಮುಖಂಡ ಶಂಭೂನಳ್ಳಿ ಸುರೇಶ್, ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರ ಶಂಕರೇಗೌಡ, ಕಾರ್ಯಪಾಲಕ ಅಭಿಯಂತರ ಬಸವರಾಜೇಗೌಡ, ಜಿಲ್ಲಾಧಿಕಾರಿ ಅಜಯ್ ನಾಗ ಭೂಷಣ್,  ಎಸ್ಪಿ ಭೂಷಣ್ ಜಿ.ಬೋರಸೆ ನಗರ ಸಭಾಧ್ಯಕ್ಷ ಬಿ.ಸಿದ್ದರಾಜು ಉಪಸ್ಥಿತರಿದ್ದರು.








No comments:

Post a Comment