Tuesday 1 September 2015

ಮೈಸೂರು-ಆಗಸ್ಟ್.,31ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಅನುಸರಿಸುತ್ತಿರುವ ಬ್ಯಾಕ್‍ಲಾಕ್ ನೀತಿಯನ್ನು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ವರ್ಗದ ಅಭ್ಯರ್ಥಿಗಳಿಗೂ ಅನುಸರಿಸಲು ರಾಜ್ಯ ಸರಕಾರ ಒಪ್ಪಿಗೆ ನೀಡಿದೆ.
ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷ ತನ್ವೀರ್ ಸೇಠ್ ನೇತೃತ್ವದಲ್ಲಿ ಸಿದ್ಧಪಡಿಸಿ ಐದು ಶಿಫಾರಸ್ಸುಗಳೊಂದಿಗೆ ಸಲ್ಲಿಸಿದ್ದ ವರದಿಯನ್ನು ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ಮೂಲಕ ಮೀಸಲಾತಿ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ಕರ್ನಾಟಕ ರಾಜ್ಯ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಸಮಿತಿಯ ಐದು ಶಿಫಾರಸ್ಸುಗಳನ್ನು ಯಾವುದೇ ಬದಲಾವಣೆ ಇಲ್ಲದೆ ಒಪ್ಪಿದ ರಾಜ್ಯ ಸರಕಾರಕ್ಕೆ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಮಿತಿ ಕೃತಜ್ಞನೆ ಸಲ್ಲಿಸುತ್ತಿದೆ ಎಂದು ಸಮಿತಿ ಅಧ್ಯಕ್ಷ ಹಾಗೂ ಶಾಸಕ ತನ್ವೀರ್ ಸೇಠರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನೇಮಕಾತಿ ಸಂದರ್ಭದಲ್ಲಿ ಪ.ಜಾತಿ, ಪ.ಪಂಗಡ ಅಭ್ಯರ್ಥಿಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಾಗ ಆ ಹುದ್ದೆಗಳನ್ನು ಬ್ಯಾಕ್‍ಲಾಗ್ ಹುದ್ದೆಗಳೆಂದು ಕಾಯ್ದಿರಿಸಲಾಗುತ್ತಿದೆ. ಆದರೆ ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು ಅಲಭ್ಯರಿದ್ದಾಗ ಆ ಹುದ್ದೆಗಳನ್ನು ಸಾಮಾನ್ಯ ಅಭ್ಯರ್ಥಿಗಳಿಗೆ ಪರಿವರ್ತಿಸಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ ಈ ಆದೇಶವನ್ನು ಮಾರ್ಪಡಿಸಿ, ಪ.ಜಾತಿ ಮತ್ತು ಪ.ಪಂಗಡಗಳ ಬ್ಯಾಕ್‍ಲಾಗ್ ಹುದ್ದೆಗಳ ನೇಮಕಾತಿಯಲ್ಲಿ ಅನುಸರಿಸುವ ಮಾದರಿಯಲ್ಲಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೂ ಹುದ್ದೆ ಮೀಸಲಿಡಬೇಕು ಎಂದು ಶಿಫಾರಸ್ಸಿನಲ್ಲಿ ತಿಳಿಸಲಾಗಿದೆ.
ಒಂದು ವೇಳೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ವರ್ಗದ ಅಭ್ಯರ್ಥಿಗಳು ಲಭ್ಯರಿಲ್ಲದ ಸಂದರ್ಭದಲ್ಲಿ ಕನಿಷ್ಟ ಪಕ್ಷ 6 ತಿಂಗಳಿಗೊಮ್ಮೆಯಾದರೂ ನೇಮಕಾತಿ ಪ್ರಕ್ರಿಯೆನಡೆಸಬೇಕು, ಎಲ್ಲಾ ಇಲಾಖೆಗಳಲ್ಲೂ ರೋಸ್ಟರ್ ರಿಜಿಸ್ಟರ್‍ನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು, ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಹಿಂದುಳಿದ ವರ್ಗಗಳಿಗೆ ನೀಡಿರುವ ಮೀಸಲಾತಿ ಪಾಲನೆಯನ್ನು ತಪಾಸಣೆ ಮಾಡಲು ಇಲಾಖೆಯಲ್ಲಿ ಹಾಲಿ ಇರುವ ಮಾರ್ಗದರ್ಶನ ಶಾಖೆಯನ್ನು ಮೀಸಲಾತಿ ತನಿಖಾ ಘಟಕ ಎಂದು ಮಾರ್ಪಡಿಸಬೇಕು, ವಿಶ್ವ ವಿದ್ಯಾನಿಲಯಗಳಲ್ಲಿ ನೇರ ನೇಮಕಾತಿ ಮಾಡಿಕೊಳ್ಳುವ ಬದಲಿಗೆ ಸರಕಾರದ ವತಿಯಿಂದಲೇ ಕೇಂದ್ರೀಕೃತ ನೇಮಕಾತಿ ಘಟಕ ಸ್ಥಾಪಿಸಿ ಈ ಮೂಲಕ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ವಿವಿಗಳಿಗೆ ಸಿಬ್ಬಂದಿಗಳನ್ನು ನಿಯೋಜಿಸುವ ಪದ್ಧತಿಯನ್ನು ಜಾರಿಗೆ ತರಬೇಕೆಂಬ ಶಿಫಾರಸ್ಸುಗಳನ್ನು ಮಾಡಿ ಸರಕಾರಕ್ಕೆ ಸಲ್ಲಿಸಲಾಗಿತ್ತು ಎಂದು ಮಾಹಿತಿ ನೀಡಿದರು.
ಈ ಶಿಫಾರಸ್ಸುಗಳನ್ನು ಮುಖ್ಯಮಂತ್ರಿ ನೇತೃತ್ವದ ರಾಜ್ಯ ಸರಕಾರ ಒಪ್ಪಿಗೆ ನೀಡಿ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ಈ ಮೀಸಲಾತಿ ಅನ್ವಯಿಸಲಿದೆ. ಸಧ್ಯ ಜಾರಿಯಲ್ಲಿರುವ ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಎಂ.ಕೆ.ಸೋಮಶೇಖರ್, ಸಮಿತಿ ಸದಸ್ಯ ಅನ್ವರ್ ಪಾಷ, ಬ್ಲಾಕ್ ಅಧ್ಯಕ್ಷ ಮಂಜುನಾಥ್, ಉದ್ಯಮಿ ಬಿಳಿಗಿರಿ ರಂಗನಾಥ್, ಡಾ.ಅನಿಲ್ ಥಾಮಸ್ ಸೇರಿದಂತೆ ಮತ್ತಿತರರು ಹಾಜರಿದ್ದರು.
------------

ಮೈಸೂರು
ಮೈಸೂರು ಕೆನೈನ್ ಕ್ಲಬ್ ವತಿಯಿಂದ ಸೆ.6 ರಂದು ಮೈಸೂರಿನ ಧನ್ವಂತ್ರಿ ರಸ್ತೆಯಲ್ಲಿರುವ ಪಶುವೈದ್ಯ ಆಸ್ಪತ್ರೆಯಲ್ಲಿ ಶ್ವಾನಗಳಿಗೆ ಮೈಕ್ರೋಚಿಪ್ ಅಳವಡಿಸುವ ಮತ್ತು ದಾಖಲೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ಕೆನೈನ್ ಕ್ಲಬ್ ಅಧ್ಯಕ್ಷ ಬಿ.ಪಿ.ಮಂಜುನಾಥ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಲಬ್‍ನಿಂದ ಅಳವಡಿಸಲಾಗುವ ಮೈಕ್ರೋಚಿಪ್‍ನಿಂದ ಶ್ವಾನಗಳ ಭದ್ರತೆ, ಗುರುತು ಮತ್ತು ಎಲ್ಲಾ ವಿಧದ ಶ್ವಾನ ಪ್ರದರ್ಶನಗಳಲ್ಲಿ ಭಾಗವಹಿಸಬಹುದಾಗಿದೆ. ಅಲ್ಲದೆ ಅಕ್ಟೋಬರ್ 25 ರಂದು ಮೈಸೂರಿನಲ್ಲಿ ನಡೆಯುವ 2ನೇ ಆಲ್ ಇಂಡಿಯಾ ಆಲ್ ಬ್ರೀಡ್ ಓಪನ್ ಡಾಗ್ ಶೋನಲ್ಲಿ ಭಾಗವಹಿಸಲು ಸ್ಥಳೀಯ ಸ್ಥಾನಗಳಿಗೆ ಇಂತಹ ಅವಕಾಶ ಒದಿಗಿಸಲಾಗಿದೆ ಎಂದು ತಿಳಿಸಿದರು.
ಅಲ್ಲದೆ ಶ್ವಾಣಗಳು ಕಾಣೆಯಾದಲ್ಲಿ ಮೈಕ್ರೋಚಿಪ್‍ನಿಂದ ಗುರುತಿಸಬಹುದು. ಒಮ್ಮೆ ಅಳವಡಿಸಿದರೆ ನಾಯಿಯ ಆಯಸ್ಸು ಮುಗಿಯುವರೆಗೂ ಮೈಕ್ರೋಚಿಪ್ ಕಾರ್ಯ ನಿರ್ವಹಿಸಲಿದೆ. ಇದರಿಂದ ನಾಯಿಗಳ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ. ಇದನ್ನು ಅಳವಡಿಸಲು ಒಂದು ಸಾವಿರ ರೂ. ಪಾವತಿಸಬೇಕಾಗಿರುತ್ತದೆ. ಮೈಕ್ರೋಚಿಪ್ ಅಳವಡಿಸಿಕೊಳ್ಳುವ ಶ್ವಾನಗಳಿಗೆ ಒಂದು ವರ್ಷ ತುಂಬಿರಬೇಕು. ಮೈಕ್ರೋಚಿಪ್ ಅಳವಡಿಸುವ ಮುನ್ನ ಈ ಶ್ವಾನಗಳನ್ನು ವೈದ್ಯಕೀತ ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕ್ಲಬ್ ಕಾರ್ಯದರ್ಶಿ ಡಾ.ಸಂಜೀವ್ ಮೂರ್ತಿ, ಜಂಟಿ ಕಾರ್ಯದರ್ಶಿ ಟಿ.ಶಶಿಕುಮಾರ್, ಎಂ.ಎಸ್.ತೇಜಸ್ವಿ, ಎನ್.ಸಿ.ವಿನೋದ್ ಕುಮಾರ್, ಎಲ್.ಎಸ್.ಸಂದೀಪ್, ಸಂಜಯ್ ಇದ್ದರು.


No comments:

Post a Comment