Saturday 20 June 2015

ವಿಶ್ವ ಯೋಗ ದಿನಾಚರಣೆ

ಕೆ.ಆರ್.ಪೇಟೆ.ಜೂ.21- ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಪಟ್ಟಣದ ಸರ್ಕಾರಿ ಮಾಧ್ಯಮಿಕ ಶಾಲಾ ಮೈದಾನದಲ್ಲಿ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು  ಯೋಗಾಭ್ಯಾಸ ಮಾಡುವ ಮೂಲಕ ವಿಶ್ವ ಯೋಗ ದಿನವನ್ನು ಆಚರಣೆ  ಮಾಡಿದರು.
ತಾಲೂಕು ವಿಶ್ವ ಹಿಂದೂ ಪರಿಷತ್, ಆರ್.ಎಸ್.ಎಸ್, ಭಜರಂಗದಳ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ,  ತಾಲೂಕು ಕುವೆಂಪು ಸಾಂಸ್ಕøತಿಕ ಕಲಾ ಬಳಗ ಮತ್ತಿತರರ ಸಂಘಟನೆಗಳ ನೇತೃತ್ವದಲ್ಲಿ ಯೋಗ ದಿನ ನಡೆಯಿತು.
ಕಾರ್ಯಕ್ರಮಕ್ಕೆ ಮುನ್ನ  ಯೋಗದ ಮಹತ್ವವನ್ನು ತಿಳಿಸಿದ ತಾಲೂಕು ಆರ್.ಎಸ್.ಎಸ್. ಸಂಘಟನೆಯ ಮುಖಂಡ ಮುರುಗೇಶ್  ಅವರು ಯೋಗವು ಆಧ್ಯಾತ್ಮಿಕ ಪರಿಕಲ್ಪನೆಯಾಗಿರಬಹುದು ಆದರೆ ಅದರಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವು ಅಡಗಿದೆ. ಸಾವಿರಾರು ವರ್ಷಗಳ ಹಿಂದಿನಿಂದಲೂ ಯೋಗ ನಮ್ಮ ದೇಶದಲ್ಲಿ ಚಾಲ್ತಿಯಲ್ಲಿದೆ.  ಯೋಗದ ಮಹತ್ವವನ್ನು ಅರಿತ ವಿಶ್ವದ ಜನ ಯೋಗವನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವ ಆರೋಗ್ಯದ ದೃಷ್ಠಿಯಿಂದ ಒಳ್ಳೆಯ ಬೆಳೆವಣಿಗೆಯಾಗಿದೆ. ದೇಹದ ಸಬಲತೆಗೆ ಯೋಗ ತುಂಬು ಸಹಕಾರಿ.  ರಕ್ತದ ಒತ್ತಡ, ಮಧುಮೇಹ, ಅಸ್ತಮಾ ಮುಂತಾದ ಕಾಯಿಲೆಗಳಿಗೆ ಯೋಗದಲ್ಲಿ ಪರಿಹಾರವಿದೆ. ಧರ್ಮಕ್ಕೂ ಯೋಗಾಚರಣೆಗೂ ಯಾವುದೇ ಸಂಬಂಧವಿಲ್ಲ. ಎಲ್ಲ ಧರ್ಮಿಯರೂ ಮನುಷ್ಯರೇ ಆಗಿರುವುದರಿಂದ ಮನುಷ್ಯನ ಸರ್ವರೋಗ ನಿಯಂತ್ರಣಕ್ಕೆ ಎಲ್ಲರೂ ನಿತ್ಯ ಕನಿಷ್ಠ ಅರ್ಧ ಗಂಟೆಯ ಕಾಲ ಯೋಗಾಭ್ಯಾಸ ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಕಂದಾಸನ, ಬಕಾಸನ, ಪದ್ಮಾಸನ, ವಜ್ರಾಸನ, ಅರ್ಧಚಕ್ರಾಸನ, ಶಶಾಂಕಾಸನ, ಮಕರಾಸನ, ಶವಾಸನ, ತ್ರಿಕೋನಾಸನ, ತಾಡಾಸನ ಮುಂತಾದ ಯೋಗಸನಗಳನ್ನು ಮಾಡಿದರು. ಸೂರ್ಯ ನಮಸ್ಕಾರದೊಂದಿಗೆ ಯೋಗ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ವಿಶ್ವ ಹಿಂದೂ ಪರಿಷತ್ ಮತ್ತು ಆರ್.ಎಸ್.ಎಸ್. ತಾಲೂಕು ಕಾರ್ಯವಾಹ ಗಣೇಶ್, ಮುಖಂಡರಾದ ಮುರುಗೇಶ್, ಹೆಚ್.ಬಿ.ಮಂಜುನಾಥ್, ಪರಮೇಶ್,  ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಲವಕುಮಾರ್, ನಿಂಗಪ್ಪ ಅಗಸರ್, ಕೆ.ಎಸ್.ಆರ್.ಟಿ.ಸಿ. ನಾರಾಯಣ ಮತ್ತಿತರರು ಭಾಗವಹಿಸಿ ಯೋಗ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಉಪನ್ಯಾಸಕಿ ಗಾಯಿತ್ರಮ್ಮ ಅವರ ನೇತೃತ್ವದಲ್ಲಿ ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿನಿಯರು ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು.
ಯೋಗದಿಂದ ದೂರವುಳಿದ ತಾಲೂಕು ಆಡಳಿತ: ದೇಶದಾದ್ಯಂತ ಇಂದು ಯೋಗ ದಿನಾಚರಣೆ ನಡೆಯುತ್ತಿದ್ದರೆ ತಾಲೂಕು ಆಡಳಿತದ ವತಿಯಿಂದ ಯಾವುದೇ ಯೋಗ ಕಾರ್ಯಕ್ರಮ ನಡೆಯಲಿಲ್ಲ. ಖುದ್ದು ಜಿಲ್ಲಾಧಿಕಾರಿಗಳೆ ಯೋಗದಿನಾಚರಣೆ ಮಾಡಬೇಕು ಎಂದು ತಾಲೂಕು ಆಡಳಿತಗಳಿಗೆ ತಿಳಿಹೇಳಿದ್ದರೂ ಸಹ ತಾಲೂಕು ಆಡಳಿತದ ಯಾವುದೇ ಅಧಿಕಾರಿಗಳು ಯೋಗ ದಿನಾಚರಣೆಯಲ್ಲಿ ಭಾಗವಹಿಸದೇ ಇರುವುದು ಸಾರ್ವಜನಿಕರ ವ್ಯಾಪಕ ಟೀಕೆಗೆ ಗುರಿಯಾಯಿತು.

No comments:

Post a Comment