Sunday 28 June 2015



ಮುಖ್ಯಮಂತ್ರಿಯವರಿಂದ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಣೆ
ಮೈಸೂರು, ಜೂನ್ 28. ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿರುವ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಿಗ್ಗೆ 10 ಗಂಟೆ 28 ನಿಮಿಷಕ್ಕೆ  ಬಾಗಿನ ಅರ್ಪಿಸಿದರು.
  ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಯವರು ಕಳೆದ 12 ವರ್ಷಗಳಲ್ಲಿ ಕಬಿನಿ ಜಲಾಶಯವು ಮೊಟ್ಟ ಮೊದಲ ಬಾರಿಗೆ ಜೂನ್ ತಿಂಗಳಿನಲ್ಲಿ ಭರ್ತಿಯಾಗಿದ್ದು, ಪ್ರಸಕ್ತ ವರ್ಷದಲ್ಲಿ ರಾಜ್ಯದಲ್ಲಿ ಭರ್ತಿಯಾದ ಮೊದಲ ಜಲಾಶಯ ಇದಾಗಿದೆ. ಪ್ರತಿ ದಿನ ಕಬಿನಿ ಜಲಾಶಯಕ್ಕೆ 35 ಸಾವಿರ ಕ್ಯೂಸೆಕ್ಸ್ ನೀರಿನ ಒಳಹರಿವು ಇದ್ದು, 19.5 ಟಿ.ಎಂ.ಸಿ ನೀರಿನ ಸಾರ್ಮಥ್ಯ ಜಲಾಶಯ ಹೊಂದಿದೆ. ಕೃಷ್ಣರಾಜ ಸಾಗರ ಜಲಾಶಯಕ್ಕೂ  ಉತ್ತಮ ಒಳಹರಿವು ಇದ್ದು, ನೀರಿನ ಮಟ್ಟ 101 ಅಡಿಗೆ ಏರಿದೆ ಎಂದು ಹೇಳಿದರು.
 ಕಬಿನಿ ಜಲಾಶಯದ ಅವರಣದಲ್ಲಿರುವ 254 ಎಕರೆ ಪ್ರದೇಶವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಕೃಷ್ಣರಾಜ ಸಾಗರ ಜಲಾಶಯದ ಪ್ರದೇಶದಲ್ಲಿರುವ ಬೃಂದಾವನ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗುವುದು. ಬಜೆಟ್‍ನಲ್ಲಿ ಇದ್ದಕ್ಕಾಗಿಯೇ 24 ಕೋಟಿ ರೂ. ಅನುದಾನವನ್ನು ಮೀಸಲಿರಿಸಲಾಗಿದೆ. ಕಬಿನಿ ಹಾಗೂ ಕಾವೇರಿ ಜಲಾನಯನದಲ್ಲಿರುವ ನಾಲೆಗಳ ಆಧುನೀಕರಣ ಕಾಮಗಾರಿಗಳು ಈಗಾಗಲೇ ಆರಂಭ ಗೊಂಡಿದ್ದು, ಮುಂದಿನ 2 ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಕಾಮಗಾರಿಗಳ ಗುಣಮಟ್ಟದಲ್ಲಿ ವೈಫಲ್ಯ ಕಂಡುಬಂದಲ್ಲಿ ನಿರ್ದಾಕ್ಷೀಣ್ಯ ಕ್ರಮವಹಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
  ಕಂದಾಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಶ್ರೀನಿವಾಸ್‍ಪ್ರಸಾದ್, ಸಹಕಾರ ಸಚಿವರಾದ ಹೆಚ್.ಎಸ್.ಮಹದೇವಪ್ರಸಾದ್, ಲೋಕಸಭಾ ಸದಸ್ಯರುಗಳಾದ ಪ್ರತಾಪ್‍ಸಿಂಹ, ಧ್ರುವನಾರಾಯಣ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಡಾ ಬಿ.ಪುಷ್ಪಾ ಅಮರನಾಥ್, ಶಾಸಕರುಗಳಾದ ಚಿಕ್ಕಮಾದು, ತನ್ವೀರ್ ಸೇಠ್, ಪುಟ್ಟರಂಗಶೆಟ್ಟಿ, ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಿ. ದಾಸೇಗೌಡ,  ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಮೂರ್ತಿ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ರೀಹಾನಬಾನು, ಜಿಲ್ಲಾಧಿಕಾರಿ ಸಿ.ಶಿಖಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಹಾಗೂ ಇತರೆ ಗಣ್ಯರು ಭಾಗವಹಿಸಿದರು.

No comments:

Post a Comment