Sunday 18 October 2015

ಭೂಮಿ-ಆಕಾಶದಲ್ಲಿ ಸೀರೆಗಳ ರಾಣಿ

ಭೂಮಿ-ಆಕಾಶದಲ್ಲಿ ಸೀರೆಗಳ ರಾಣಿ
ಮೈಸೂರ್ ಸಿಲ್ಕ್ ಸೀರೆ : ಡಿ. ಬಸವರಾಜ
ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು ತನ್ನ ಶ್ರೇಷ್ಟ ಉತ್ಪನ್ನವಾದ ಮೈಸೂರು ಶಿಲ್ಕ್ ಸೀರೆ ಹಾಗೂ ಉತ್ಪನ್ನಗಳನ್ನು 2014-15ನೇ ಸಾಲಿನಲ್ಲಿ ದಾಖಲೆಯ ಪ್ರಮಾಣದಲ್ಲಿ ಮಾರಾಟ ಮಾಡಿದ್ದು, 146.42 ಕೋಟಿ ರೂ. ವಹಿವಾಟು ನಡೆಸಿದ್ದು, 27 ಕೋಟಿ ರೂ. ಲಾಭವನ್ನು ಗಳಿಸಿದೆ. 75 ಸಾವಿರ ಸೀರೆಗಳನ್ನು ಮಾರಾಟ ಮಾಡಿರುವುದಲ್ಲದೇ, ಏರ್ ಇಂಡಿಯಾ ಸಂಸ್ಥೆಯ ಗಗನ ಸಖಿಯರಿಗೆ 10 ಸಾವಿರ ಸೀರೆಗಳನ್ನು ಮಾರಾಟ ಮಾಡಿ, ದಾಖಲೆಯನ್ನು ನಿರ್ಮಿಸಿದೆ. ಭೂಮಿ ಮತ್ತು ಆಕಾಶದಲ್ಲಿ ಸೀರೆಗಳ ರಾಣಿ, “ಮೈಸೂರು ಸಿಲ್ಕ್ ಸೀರೆ” ಎಂದು ಕೆ.ಎಸ್.ಐ.ಸಿ. ಅಧ್ಯಕ್ಷ ಡಿ. ಬಸವರಾಜ ಬಣ್ಣಿಸಿದರು.
ಅವರು ಇಂದು ದಾವಣಗೆರೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ವಿವರಣೆ ನೀಡಿದರು. ಅಪ್ಪಟ ರೇಷ್ಮೆ, ಅಪ್ಪಟ ಚಿನ್ನದಿಂದ ಉತ್ಪಾದಿಸಲಾಗುವ ಮೈಸೂರು ಶಿಲ್ಕ್ ಸೀರೆಗಳು ಹಾಗೂ ಅದರ ಉತ್ಪನ್ನಗಳು ಮೈಸೂರು ಸಿಲ್ಕ್ ಅಧಿಕೃತ ಮಳಿಗೆಗಳನ್ನು ಬಿಟ್ಟು ಬೇರೆ ಎಲ್ಲೂ ಮಾರಾಟ ಮಾಡಲಾಗುವುದಿಲ್ಲ. ಕೆಲವು ಬಟ್ಟೆ ಅಂಗಡಿಗಳಲ್ಲಿ ಮೈಸೂರು ಸಿಲ್ಕ್ ಎಂದು ಕಳಪೆ ಗುಣಮಟ್ಟದ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದು, ಗ್ರಾಹಕರು ಎಚ್ಚರದಿಂದ ಇರಬೇಕೆಂದು ವಿನಂತಿಸಿದರು.
ಮೈಸೂರು ಸಿಲ್ಕ್ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಸಂಸ್ಥೆಯಾಗಿದ್ದು, ಕರ್ನಾಟಕ ಸರ್ಕಾರದ ಸಾರ್ವಜನಿಕ ಉದ್ಯಮಗಳ ಪೈಕಿ, ಶತಮಾನ ಪೂರೈಸಿರುವ ಪ್ರಪ್ರಥಮ ಸಂಸ್ಥೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವಾಗಿದೆ. ಶತಮಾನ ಪೂರೈಸಿರುವ ಸವಿನೆನಪಿಗಾಗಿ ಭಾರತ ಸರ್ಕಾರದ ಅಂಚೆ ಇಲಾಖೆ ಮೈಸೂರು ಅರಮನೆ ಮತ್ತು ಮೈಸೂರು ಸಿಲ್ಕ್ ಚಿಹ್ನೆ ಹೊಂದಿರುವ ಅಂಚೆ ಚೀಟಿ ಹಾಗೂ ಕವರ್‍ಗಳನ್ನು ನಿನ್ನೆ ತಾನೇ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಕೌಶಿಕ್ ಮುಖರ್ಜಿ ಅವರು ಬಿಡುಗಡೆಗೊಳಿಸಿದರು. ಕೆ.ಎಸ್.ಐ.ಸಿ.ಗೆ ಇದು ಹೆಮ್ಮೆಯ ವಿಚಾರವಾಗಿದೆ.
ಮೊನ್ನೆ ತಾನೇ ವಿಂಟೇಜ್ ಸೀರೆಗಳ ಸ್ಪರ್ಧೆಗಳನ್ನು ಕೆ.ಎಸ್.ಐ.ಸಿ. ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 126 ಸ್ಪರ್ಧಿಗಳ ಪೈಕಿ 3 ಜನರಿಗೆ ತಲಾ 15 ಸಾವಿರ ರೂ., 25 ಜನರಿಗೆ ತಲಾ 1,500 ರೂ. ಬಹುಮಾನ ನೀಡಲಾಯಿತು. 60 ವರ್ಷಗಳಾದರೂ ಹೊಚ್ಚ ಹೊಸ ಸೀರೆಯಂತೆ ಗ್ರಾಹಕರು ಮೈಸೂರು ಸಿಲ್ಕ್ ಸೀರೆಗಳನ್ನು ಕಾಪಾಡಿಕೊಂಡು ಬಂದಿದ್ದರು. ಅಂತಹವರನ್ನು ಗುರುತಿಸಿ ಬಹುಮಾನ ನೀಡಲಾಯಿತು ಎಂದು          ಡಿ. ಬಸವರಾಜ ತಿಳಿಸಿದರು.

No comments:

Post a Comment