Friday 21 August 2015

ಕ್ರೀಡೆಯಿಂದ ಸ್ನೇಹ, ಬಾಂಧವ್ಯ ವೃದ್ಧಿ: ಸಚಿವ ಅಂಬರೀಶ್


ಕ್ರೀಡೆಯಿಂದ ಸ್ನೇಹ, ಬಾಂಧವ್ಯ ವೃದ್ಧಿ: ಸಚಿವ ಅಂಬರೀಶ್
* ಮಿಮ್ಸ್‍ನಲ್ಲಿ ರಾಜ್ಯ ಮಟ್ಟದ ಅಂತರ ವೈದ್ಯಕೀಯ ಕಾಲೇಜುಗಳ ಕ್ರೀಡಾಕೂಟಕ್ಕೆ ವರ್ಣರಂಜಿತ ಚಾಲನೆ
ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ವತಿಯಿಂದ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಆಯೋಜಿಸಿರುವ ಮೂರು ದಿನಗಳ ರಾಜ್ಯ ಮಟ್ಟದ ಅಂತರ ವೈದ್ಯಕೀಯ ಕಾಲೇಜುಗಳ ಸಾಂಸ್ಕøತಿಕ ಮತ್ತು ಕ್ರೀಡಾಕೂಟ ‘ಮಿಡಿತ-2015’ಕ್ಕೆ ವರ್ಣರಂಜಿತ ಚಾಲನೆ ನೀಡಲಾಯಿತು.
ಮಿಮ್ಸ್‍ನ ಕ್ರೀಡಾಂಗಣದ ಆವರಣದಲ್ಲಿ ಆಯೋಜಿಸಿದ್ದ ವರ್ಣರಂಜಿತ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯದ ಎಲ್ಲ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳನ್ನು ಬೆಸೆಯಲು ಕ್ರೀಡಾಕೂಟ ಸಹಕಾರಿಯಾಗಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವುದರ ಜತೆಗೆ ಸ್ನೇಹ, ಬಾಂಧವ್ಯವನ್ನು ವೃದ್ಧಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಎಲ್ಲ ಕ್ಷೇತ್ರಗಳಿಗಿಂತ ವೈದ್ಯಕೀಯ ಕ್ಷೇತ್ರ ಹೆಚ್ಚಿನ ಮಹತ್ವ ಪಡೆದಿದೆ. ವೈದ್ಯರು ರೋಗಿಗಳೊಂದಿಗೆ ಉತ್ತಮವಾಗಿ ನಾಲ್ಕು ಮಾತನಾಡಿದರೆ ಅರ್ಧ ರೋಗ ಗುಣವಾದಂತಾಗುತ್ತದೆ. ಹಣಕ್ಕೆ ಹೆಚ್ಚಿನ ಮಹತ್ವ ನೀಡದೆ, ಮಾನವೀಯ ನೆಲೆಯಲ್ಲಿ ರೋಗಿಗಳಿಗೆ ಸ್ಪಂದಿಸುವ ಗುಣವನ್ನು ವೈದ್ಯರು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಂಡ್ಯದಲ್ಲಿ ವೈದ್ಯಕೀಯ ಶಿಕ್ಷಣ ಪಡೆದವರು ಎಲ್ಲಿಯಾದರೂ ಉತ್ತಮ ಸೇವೆ ಮಾಡುವಷ್ಟು ತರಬೇತಿ ಪಡೆಯಬಹುದು. ಕಾಲೇಜಿನಲ್ಲಿ ಉತ್ತಮ ಶಿಕ್ಷಣ ದೊರಕುವ ಜತೆಗೆ ಎಲ್ಲ ರೀತಿಯ ರೋಗಿಗಳಿಗೆ ಚಿಕಿತ್ಸೆ ನೀಡಿ, ಉತ್ತಮ ತರಬೇತಿ ಹೊಂದಿರುತ್ತಾರೆ. ಇದರಿಂದ ಮುಂದೆ ರೋಗಿಗಳಿಗೆ ನುರಿತ ಚಿಕಿತ್ಸೆ ನೀಡಬಹುದಾಗಿದೆ ಎಂದರು.
ಮಂಡ್ಯ ವೈದ್ಯಕೀಯ ಶಿಕ್ಷಣ ಸಂಸ್ಥೆ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದ್ದು, ನಿರ್ದೇಶಕಿ ಡಾ.ಪುಷ್ಪಾ ಸರ್ಕಾರ್ ಅವರ ಉತ್ತಮ ಆಡಳಿತ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು ರಾಷ್ಟ್ರ ಮಟ್ಟದಲ್ಲಿ ಕಾಲೇಜು ಕೀರ್ತಿ ಪಡೆಯಲಿ ಎಂದು ಹಾರೈಸಿದರು.
ಜಿಲ್ಲಾಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಂ.ಶಿವಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಇಂತಹ ಕ್ರೀಡಾಕೂಟಗಳು ಅತ್ಯಾವಶ್ಯಕವಾಗಿವೆ. ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ, ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಮಿಮ್ಸ್ ನಿರ್ದೇಶಕಿ ಡಾ.ಪುಷ್ಪಾ ಸರ್ಕಾರ್ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾಕೂಟ ಸಮಿತಿ ಅಧ್ಯಕ್ಷ ಡಾ.ಎಂ.ಎಸ್.ಶಿವಕುಮಾರಸ್ವಾಮಿ, ಡಾ.ಬಿ.ಆರ್.ಹರೀಶ್ ಇತರರು ಭಾಗವಹಿಸಿದ್ದರು.
ಲಗೋರಿ ಬ್ಯಾಂಡ್ ಶೋ ತಂಡ ಆಕರ್ಷಕ ಕಾರ್ಯಕ್ರಮ ಪ್ರದರ್ಶಿಸಿದರು. ವಿವಿಧ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ಪ್ರದರ್ಶನ ಮಾಡಿದರು. ರಾಜ್ಯದ 49 ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ.

No comments:

Post a Comment