Sunday 16 August 2015

 ಯಾವುದೇ ರೈತರು ಏನೇ ಸಮಸ್ಯೆಗಳು ಇದ್ದರೂ ಆತ್ಮಹತ್ಯೆಗೆ ಶರಣಾಗಬಾರದೆಂದು ಸಚಿವ ಅಂಬರೀಶ್ ಮನವಿ ಮಾಡಿದರು ೬೯ ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿಸಿ ಅವರು
  ಭಾರತದ ಸ್ವಾತಂತ್ರ್ಯದ 69ನೇ ವರ್ಷದ ಆಚರಣೆಗಾಗಿ ಸೇರಿರುವ ತಮಗೆಲ್ಲರಿಗೂ ಸ್ವಾತಂತ್ರೋತ್ಸವದ ಶುಭಾಶಯಗಳು.
ಸುಮಾರು 200 ವರ್ಷಗಳ ಕಾಲ ಬ್ರಿಟೀಷರ ದಾಸ್ಯಕ್ಕೆ ಒಳಗಾದದ್ದು, ಭಾರತದ ಇತಿಹಾಸದ ಕರಾಳ ಅಧ್ಯಾಯವಾಗಿದೆ.
ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಬ್ರಿಟೀಷರು ಇಲ್ಲಿನ ಸನ್ನಿವೇಶದ ಲಾಭ ಪಡೆದು, ಆಡಳಿತವನ್ನು ಕೈವಶ ಮಾಡಿಕೊಂಡು ತಮ್ಮ ಅಧಿಪತ್ಯ ಸ್ಥಾಪಿಸಿದರು.
200 ವರ್ಷಗಳ ಪರಕೀಯರ ಆಳ್ವಿಕೆಯಿಂದ ಮುಕ್ತರಾಗಲು ಭಾರತದಲ್ಲಿ ದೊಡ್ಡ ಹೋರಾಟವೇ ನಡೆಯಬೇಕಾಯಿತು.
ಮಹಾತ್ಮಗಾಂಧಿಯವರ ನೇತೃತ್ವದಲ್ಲಿ ಸಾವಿರಾರು ದೇಶಭಕ್ತ ನಾಯಕರು ಸ್ವಾತಂತ್ರ್ಯದ ಮಹತ್ವವನ್ನು ಜನರಿಗೆ ಮನವರಿಕೆ ಮಾಡಿ ಅಖಂಡ ಭಾರತ ಒಟ್ಟಾಗಿ ಹೋರಾಟಕ್ಕೆ ಇಳಿಯಿತು.
ಯಾವುದೇ ಮದ್ದುಗುಂಡುಗಳಿಲ್ಲದೆ, ರಕ್ತಪಾತವಿಲ್ಲದೆ ಸತ್ಯ ಅಹಿಂಸೆಗಳ ಮೂಲಕ ಸ್ವಾತಂತ್ರ್ಯ ಗಳಿಸಿದ್ದು, ಜಗತ್ತಿನ ಇತಿಹಾಸದಲ್ಲಿಯೇ ಬಹುದೊಡ್ಡ ಘಟನೆಯಾಗಿದೆ.
ಈ ಸ್ವಾತಂತ್ರ್ಯದ ಹೋರಾಟದಲ್ಲಿ ನಮ್ಮ ಜಿಲ್ಲೆಯಲ್ಲಿನ ಅನೇಕ ವೀರಸೇನಾನಿಗಳು ಹೋರಾಟ ನಡೆಸಿದ್ದಾರೆ.
ಮದ್ದೂರಿನ ಶಿವಪುರದಲ್ಲಿನ ಧ್ವಜ ಸತ್ಯಾಗ್ರಹ ಸ್ವಾತಂತ್ರ್ಯ ಹೋರಾಟದಲ್ಲಿಯೇ ಒಂದು ಅವಿಸ್ಮರಣೀಯ ಘಟನೆಯಾಗಿದೆ.
ಇಂತಹ ದೇಶ ಪ್ರೇಮಿಗಳ ನೇತೃತ್ವದಲ್ಲಿ ನಡೆದ ಹೋರಾಟ ಹಳ್ಳಿಹಳ್ಳಿಗಳಿಗೂ ಹಬ್ಬಿ ಎಲ್ಲಾ ಜನತೆಯ ಹೋರಾಟವಾಯಿತು.
ಈ ಎಲ್ಲಾ ಮಹನೀಯರ ಹೋರಾಟದ ಫಲವಾಗಿ ದೊರಕಿದ ಸ್ವಾತಂತ್ರ್ಯದ ನಂತರ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.
ಜನರಿಂದ ಜನರಿಗಾಗಿ ಜನರೇ ಆಡಳಿತ ನಡೆಸುವ ವಿನೂತನ ಪ್ರಜಾತಂತ್ರ ವ್ಯವಸ್ಥೆ ವಿಶ್ವದಲ್ಲಿಯೇ ಮಾದರಿಯಾಗಿದೆ.
ಸ್ವಾತಂತ್ರ್ಯಾ ನಂತರ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಆಶಯದಡಿಯಲ್ಲಿ ಬಡವ, ಬಲ್ಲಿದ ಎನ್ನದೆ ಸರ್ವರಿಗೂ ಸಮಾನತೆ ಕಲ್ಪಿಸುವ ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು.
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ|| ಬಿ.ಆರ್.ಅಂಬೇಡ್ಕರ್ ರವರ ಅಪಾರ ಜ್ಞಾನ ಮತ್ತು ದೂರದೃಷ್ಟಿಯ ಫಲವಾಗಿ ನಮ್ಮ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠ ಎಂಬ ಮಾನ್ಯತೆಗೆ ಒಳಗಾಯಿತು.ಇಂತಹ ವಿನೂತನ ಸಂವಿಧಾನದ ಅಡಿ ಅಸ್ತಿತ್ವಕ್ಕೆ ಬಂದ ಪ್ರಜಾತಂತ್ರ ಸರ್ಕಾರ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಅವಶ್ಯವಿರುವ ಯೋಜನೆಗಳನ್ನು ರೂಪಿಸಿತು.
ಬ್ರಿಟೀಷರು ಬಿಟ್ಟು ಹೋದ ಪ್ರಾರಂಭದಲ್ಲಿ ಅನಕ್ಷರತೆ, ನಿರುದ್ಯೋಗ, ಬಡತನ ಮುಂತಾದ ದೊಡ್ಡ ಸವಾಲುಗಳು ದೇಶದ ಮುಂದಿದ್ದವು.
ಕೃಷಿ, ಕೈಗಾರಿಕೆ, ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಧಿಸಬೇಕಾದ ಹಲವಾರು ವಿಚಾರಗಳಿದ್ದವು.
ಪಂಚವಾರ್ಷಿಕ ಯೋಜನೆಗಳ ಮೂಲಕ ಹಂತ ಹಂತವಾಗಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲಾಯಿತು.
ಕೃಷಿ, ಕೈಗಾರಿಕೆ, ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಗಣನೀಯವಾದ ಸಾಧನೆ ಮಾಡಲಾಯಿತು.
ಅನಕ್ಷರತೆ ಹೋಗಲಾಡಿಸಲು ಪ್ರತಿಯೊಬ್ಬ ವ್ಯಕ್ತಿಗೂ ಕಡ್ಡಾಯ ಶಿಕ್ಷಣ ಜಾರಿಗೊಳಿಸಲಾಯಿತು.
ಬಡತನ ನಿವಾರಣೆಗಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಯಿತು.
ಸ್ವಾತಂತ್ರ್ಯಾ ನಂತರ ಅಸ್ತಿತ್ವಕ್ಕೆ ಬಂದ ಎಲ್ಲಾ ಸರ್ಕಾರಗಳು ಈ ದಿಶೆಯಲ್ಲಿ ಗಣನೀಯ ಸಾಧನೆ ಮಾಡಿದವು.
ಜನರ ಆಶೀರ್ವಾದದಿಂದ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ನಮ್ಮ ಸರ್ಕಾರವು ಕಳೆದ ಎರಡೂವರೆ ವರ್ಷಗಳಿಂದ ಜನಪರವಾದ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ.
ಪ್ರತಿಯೊಬ್ಬ ನಾಗರೀಕರಿಗೂ ಆಹಾರ ಭದ್ರತೆ ಒದಗಿಸುವ ಮೂಲಕ ಹಸಿವು ಮುಕ್ತ ಕರ್ನಾಟಕ ರೂಪಿಸಲು ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದೆ.
ಪ್ರತಿಯೊಬ್ಬ ವ್ಯಕ್ತಿಯೂ ಗೌರವಯುತ ಜೀವನ ನಡೆಸುವಂತಾಗಲು ಗುಡಿಸಲು ಮುಕ್ತ ರಾಜ್ಯ ಸ್ಥಾಪಿಸಲು ನೂತನ ವಸತಿ ಯೋಜನೆ ಜಾರಿಗೊಳಿಸಿದೆ.
ಹಾಗೆಯೇ ಮಕ್ಕಳ ಪೌಷ್ಠಿಕತೆ ಹೆಚ್ಚಿಸಲು ಮಧ್ಯಾಹ್ನದ ಬಿಸಿಯೂಟದ ಜೊತೆ ಉಚಿತ ಹಾಲು ನೀಡುವ ಕ್ಷೀರಭಾಗ್ಯ ಯೋಜನೆ ಜಾರಿಗೊಳಿಸಿದೆ.
ಬಡವ ಬಲ್ಲಿದರೆನ್ನದೆ ಎಲ್ಲಾ ವರ್ಗದ ಜನರು ಗೌರವಯುತ ಜೀವನ ನಡೆಸುವಂತಾಗಲು ಅವಶ್ಯವಿರುವ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಿದೆ.
ರಸ್ತೆ, ವಿದ್ಯುತ್, ನೀರಾವರಿ, ಕೈಗಾರಿಕೆ ಮುಂತಾದ ಕ್ಷೇತ್ರಗಳಿಗೂ ಸಮಾನ ಆದ್ಯತೆ ನೀಡಿ, ಗಣನೀಯ ಸಾಧನೆ ಮಾಡಲಾಗಿದೆ.
ಆದರೆ ಇಷ್ಟರಿಂದ ಸಮಸ್ಯೆಗಳು ಸಂಪೂರ್ಣವಾಗಿ ಬಗೆಹರಿದಿರುವುದಿಲ್ಲ.
ಅಭಿವೃದ್ಧಿ ಎಂಬುದು ಒಂದು ನಿರಂತರ ಪ್ರಕ್ರಿಯೆ. ಜನರ ಜೀವನಮಟ್ಟ ಸುಧಾರಿಸಲು ಅವಶ್ಯವಿರುವ ಎಲ್ಲಾ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ.
ಈ ವರ್ಷ ತಮಗೆಲ್ಲರಿಗೂ ತಿಳಿದಿರುವಂತೆ ಸಂಕಷ್ಟದ ವರ್ಷ. ಇಡೀ ರಾಜ್ಯದಾದ್ಯಂತ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಬರಪರಿಸ್ಥಿತಿ ಆವರಿಸಿದೆ.
ಮಂಡ್ಯ ಜಿಲ್ಲೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ.
ಜಿಲ್ಲೆಯಲ್ಲಿ ಸಕಾಲದಲ್ಲಿ ಮಳೆಯಾಗದೆ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ.
ಬೆಳೆದು ನಿಂತ ಕಬ್ಬನ್ನು ಅರೆಯಲು ಕಾರ್ಖಾನೆಗಳು ಪ್ರಾರಂಭವಾಗಬೇಕಾಗಿದೆ.
ಕನ್ನಂಬಾಡಿ ಕಟ್ಟೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗದೆ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಸಂಕಷ್ಟಕ್ಕೆ ಒಳಗಾದ ರೈತ ಆತ್ಮಹತ್ಯೆಯ ಹಾದಿ ಹಿಡಿದಿದ್ದಾನೆ.
ಸರ್ಕಾರ ಈ ಪರಿಸ್ಥಿತಿ ನಿಭಾಯಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಜಿಲ್ಲೆಯ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭಿಸಲು ಪ್ರಯತ್ನ ನಡೆದಿದ್ದು,  ಮಂಡ್ಯ ಸಕ್ಕರೆ ಕಾರ್ಖಾನೆ ಹೊರತುಪಡಿಸಿ, ಈ ತಿಂಗಳ ಅಂತ್ಯದೊಳಗೆ ಇತರೆ ಎಲ್ಲಾ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗಲಿವೆ.
ಮಂಡ್ಯದ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಆದಷ್ಟು ಶೀಘ್ರ ದುರಸ್ಥಿಗೊಳಿಸಲು ಸರ್ವ ಪ್ರಯತ್ನ ಮಾಡಲಾಗುತ್ತಿದೆ.
ಮಂಡ್ಯದ ಮೈಷುಗರ್ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಈ ಸಾಲಿನ ಆಯವ್ಯಯದಲ್ಲಿ ಸರ್ಕಾರದ ವತಿಯಿಂದ 120 ಕೋಟಿ ರೂ.ಗಳನ್ನು ಒದಗಿಸಲಾಗಿದೆ.
ರೈತರ ಕಬ್ಬಿನ ಬಾಕಿ ಪಾವತಿಸಲು ಸರ್ಕಾರದಿಂದ 17.50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
ರೈತರ ಸಾಲ ವಸೂಲಿಗೆ ಒತ್ತಾಯಿಸದಂತೆ ಎಲ್ಲಾ ಬ್ಯಾಂಕುಗಳಿಗೆ ಸೂಚಿಸಲಾಗಿದೆ.
ರೈತರನ್ನು ಶೋಷಿಸುವ ಲೇವಾದೇವಿದಾರರು, ಮೀಟರ್ ಬಡ್ಡಿ ದಂಧೆಕೋರರ ವಿರುದ್ಧ ಕಾನೂನಿನ ಕ್ರಮ ಜರುಗಿಸಲಾಗುತ್ತಿದೆ.
ಆತ್ಮಹತ್ಯೆಗೆ ಒಳಗಾದ ರೈತರಿಗೆ ಸರ್ಕಾರದ ವತಿಯಿಂದ ತಲಾ ರೂ.2.00 ಲಕ್ಷ ಪರಿಹಾರ ನೀಡಲಾಗುತ್ತಿದೆ.
ಆತ್ಮಹತ್ಯೆಗೊಳಗಾದ ರೈತರ ಕುಟುಂಬಗಳಿಗೆ ಸ್ವತ: ಮುಖ್ಯಮಂತ್ರಿಗಳು ಭೇಟಿ ನೀಡಿ ಸಾಂತ್ವನ ಹೇಳಿರುತ್ತಾರೆ.
ರೈತರ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ಮಂಡ್ಯ ಜಿಲ್ಲೆಯ ರೈತರು ಸ್ವಾಭಿಮಾನಿಗಳು. ಬೆವರು ಸುರಿಸಿ ದುಡಿದು ಬದುಕುವವರು. ದಿಟ್ಟತನಕ್ಕೆ ಹೆಸರಾದ ಜಿಲ್ಲೆಯ ಜನತೆ ಸಮಸ್ಯೆಗಳಿಗೆ ಹೆದರಿ, ಆತ್ಮಹತ್ಯೆಗೆ ಶರಣಾಗುವುದು ಸರಿಯಾದ ಕ್ರಮವಲ್ಲ.

ಹುಲಿಕೆರೆ ಸುರಂಗವನ್ನು ದುರಸ್ಥಿಪಡಿಸಿ, ನಾಲೆಯಲ್ಲಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲೆಯ ನಾಲೆಗಳ ದುರಸ್ಥಿಗಾಗಿ ವಿಶೇಷ ಯೋಜನೆ ರೂಪಿಸಲಾಗಿದೆ.
ಸುಮಾರು 600 ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದ್ದು, 80 ಕೋಟಿ ರೂ. ವೆಚ್ಚದಲ್ಲಿ ವಿರಿಜಾ ನಾಲೆ ಆಧುನೀಕರಣ ನಡೆಸಲಾಗುತ್ತಿದೆ.
240 ಕೋಟಿ ರೂ.ಗಳ ವೆಚ್ಚದಲ್ಲಿ ಚಿಕ್ಕದೇವರಾಯ ನಾಲೆ ಆಧುನೀಕರಣ ಪ್ರಾರಂಭಿಸಲಾಗಿದೆ.
ವಿಶ್ವವಿಖ್ಯಾತ ಬೃಂದಾವನವನ್ನು ವಿಶ್ವದರ್ಜೆಗೆ ಉನ್ನತೀಕರಿಸಲು ಈ ಸಾಲಿನ ಆಯವ್ಯಯದಲ್ಲಿ ಅನುದಾನ ಒದಗಿಸಲಾಗಿದೆ.
ಜಿಲ್ಲೆಯ ರಸ್ತೆಗಳ ಸುಧಾರಣೆಗೆ ಹೆಚ್ಚಿನ ಪ್ರಮಾಣದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
ಬಹುದಿನಗಳಿಂದ ನೆನೆಗುದಿಗೆ ಬಿದಿದ್ದ ಮಂಡ್ಯ-ಕೆರಗೋಡು-ಕೌಡ್ಲೆ ರಸ್ತೆಗಳ ಕಾಮಗಾರಿಗಳನ್ನು ರೂ.168 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ.
ಅದೇರೀತಿ ಮಳವಳ್ಳಿ-ಪಾವಗಡ ರಸ್ತೆಯನ್ನು ರೂ.570 ಕೋಟಿ ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗುತ್ತಿದೆ.
ನಗರೋತ್ಥಾನ ಯೋಜನೆಯಡಿ ಮಂಡ್ಯ ಸೇರಿದಂತೆ ಜಿಲ್ಲೆಯ ಎಲ್ಲಾ ನಗರ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ರೂ.50 ಕೋಟಿ ವೆಚ್ಚದಲ್ಲಿ ಕಾಮಗಾರಿಗಳು ನಡೆಯುತ್ತಿವೆ.
ಪಾರಂಪರಿಕ ನಗರ ಶ್ರೀರಂಗಪಟ್ಟಣ ಅಭಿವೃದ್ಧಿಗೆ ಆಯವ್ಯಯದಲ್ಲಿ ಹಣ ಒದಗಿಸಲಾಗಿದೆ.
ನಿರ್ಮಲ ಭಾರತ ಅಭಿಯಾನದಡಿ ಮಂಡ್ಯ ಜಿಲ್ಲೆಯ ಸಾಧನೆ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ.
ಕೇಂದ್ರ ಸಕಾರದ ಸ್ವಚ್ಛ ಭಾರತ ಮಿಷನ್ ಅಡಿ ಮಾಡಿರುವ ಸಮೀಕ್ಷೆ ಪ್ರಕಾರ ಮಂಡ್ಯ ನಗರವು 6ನೇ ಸ್ಥಾನ ಪಡೆದಿರುವುದು ಗಮನಾರ್ಹವಾದ ಸಂಗತಿಯಾಗಿದೆ.ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲೆಯ ಸಾಧನೆ ಉತ್ತಮವಾಗಿದೆ.
ಉನ್ನತ ಶಿಕ್ಷಣಕ್ಕೆ ಮಹಿಳಾ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ಮಂಡ್ಯದಲ್ಲಿ ಈಗಾಗಲೇ ಕಾರ್ಯಾರಂಭ ಮಾಡಿದೆ.
ಈ ವರ್ಷದಿಂದ ಜಾನಪದ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ಹಾಗೂ ಸಂಗೀತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ಮಂಡ್ಯದಲ್ಲಿ ಸ್ಥಾಪನೆಯಾಗಿರುವುದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿವೆ.
ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ಕೃಷಿ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ಹಿಂದಿನಿಂದಲೂ ಮಂಡ್ಯದಲ್ಲಿ ನಡೆಯುತ್ತಿವೆ.ಮಂಡ್ಯ ಜಿಲ್ಲೆ ಸ್ಥಾಪನೆಯಾಗಿ 75 ವರ್ಷಗಳು ತುಂಬಿದ ಸವಿನೆನಪಿಗಾಗಿ ಅಮೃತ ಮಹೋತ್ಸವವನ್ನು ಈ ವರ್ಷದ ಫೆಬ್ರವರಿ ಮಾಹೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗಿದೆ.
ಈ ಆಚರಣೆಯಲ್ಲಿ ಜಾತಿ, ಧರ್ಮ, ಪಕ್ಷಬೇಧ ಮೆರೆತು ಜಿಲ್ಲೆಯ ಸಮಸ್ತ ಜನರು ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಿರುತ್ತಾರೆ.
ಈ ಅಮೃತ ಮಹೋತ್ಸವದ ಸವಿನೆನಪಿಗಾಗಿ ಅಮೃತ ಮಹೋತ್ಸವ ಭವನ ನಿರ್ಮಿಸಲು ತೀರ್ಮಾನಿಸಲಾಗಿದೆ.
ಏನೇ ಸಮಸ್ಯೆಗಳು ಬಂದರೂ ಎದೆಗುಂದದೆ ನಾವೆಲ್ಲ ಸೇರಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸೋಣ ಎಂದು ಕೋರುತ್ತಾ ಮತ್ತೊಮ್ಮೆ ತಮಗೆಲ್ಲರಿಗೂ ಸ್ವಾತಂತ್ರೋತ್ಸವದ ಶುಭಾಶಯಗಳನ್ನು ತಿಳಿಸುತ್ತಾ ನನ್ನ ಮಾತುಗಳನ್ನ ಮುಗಿಸಿದರು.




No comments:

Post a Comment