Wednesday 26 August 2015

ಮೈಸೂರು, ಆ. 26- ಯಾವುದೇ ರಾಷ್ಟ್ರದಲ್ಲಿ ರಫ್ತು ವಹಿವಾಟು ಹೆಚ್ಚಿನ ಪ್ರಮಾಣದಲ್ಲಿದ್ದರೆ ಆ ದೇಶದ ಹಣದ ಅಪಮೌಲ್ಯ ಕಾಣುವುದಿಲ್ಲ ಎಂದು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಎ. ಎಸ್. ಸತೀಶ್ ತಿಳಿಸಿದರು.
ಅವರು ಇಂದು ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ಇಂಜಿನಿಯರ್ಸ್ ಸಂಸ್ಥೆಯಲ್ಲಿ ವಿಟಿಪಿಸಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮೈಸೂರು ಹಾಗೂ ಮೈಸೂರು ಕೈಗಾರಿಕೆಗಳ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೈಗಾರಿಕೋದ್ಯಮಿಗಳು ಮತ್ತು ವಾಣಿಜೊದ್ಯಮಿಗಳಿಗಾಗಿ ಆಯೋಜಿಸಿದ್ದ ರಫ್ತು ಜಾಗೃತಿ ಶಿಬಿರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕೈಗಾರಿಕೊದ್ಯಮಿಗಳು ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಸಿದ್ಧಪಡಿಸುವತ್ತ ಹೆಚ್ಚು ಗಮನ ಹರಿಸಬೇಕು. ಪದಾರ್ಥಗಳ ಗುಣಮಟ್ಟ ಉತ್ತಮವಾಗಿದ್ದರೆ ಅವುಗಳಿಗೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇದ್ದೇ ಇರುತ್ತದೆ. ಪದಾರ್ಥಗಳ ಗುಣಮಟ್ಟ ಚೆನ್ನಾಗಿದ್ದಲ್ಲಿ ದೇಶದ ರಫ್ತು ವಹಿವಾಟು ಹೆಚ್ಚುವುದರೊಂದಿಗೆ ಕೈಗಾರಿಕೆಗಳ ಪ್ರಗತಿಯೂ ಆಗಲಿದೆ ಎಂದರು.
ಮೈಸೂರು ಜಿಲ್ಲೆಯಿಂದ ವಿದೇಶಗಳಿಗೆ ಸುಮಾರು 7.5 ಕೋಟಿ ರೂಗಳ ಮೌಲ್ಯದ ವಿವಿಧ ವಸ್ತುಗಳು ರಫ್ತಾಗುತ್ತಿವೆ. ಈ ಮೊತ್ತವನು 20 ಸಾವಿರ ಕೋಟಿಗಳಿಗೆ ಹೆಚ್ಚಿಸುವಂತಾಗಬೇಕೆಂಬ ಗುರಿಯನ್ನು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಇಟ್ಟುಕೊಂಡಿದ್ದು ಈ ಗುರಿಯನ್ನು ಸಾಧಿಸಲು ಇಂದಿನಿಂದಲೇ ಕೈಗಾರಿಕೋದ್ಯಮಿಗಳು ಮುಂದಾಗುವಂತೆ ಅವರು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ಪಿ. ವಿಶ್ವನಾಥ್ ಮಾತನಾಡಿ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನಷ್ಟು ವಿಸ್ತೀರ್ಣಯುಳ್ಳ ಜಪಾನ್ ದೇಶವು ಅದರಂತೆ ಚೈನಾದೇಶವೂ ರಫ್ತು ವಹಿವಾಟಿನಲ್ಲಿ ನಮ್ಮ ದೇಶಕ್ಕಿಂತ ಮುಂದಿದೆ. ಇದಕ್ಕೆ ಕಾರಣ ಅಲ್ಲಿ ತಯಾರಾಗುವ ಉತ್ತಮ ಗುಣ ಮಟ್ಟದ ಪದಾರ್ಥಗಳೇ ಆಗಿವೆ. ಅದಾಗ್ಯೂ ನಮ್ಮ ದೇಶದಿಂದ ಸಾಂಬಾರ ಪದಾರ್ಥಗಳು, ದ್ವಿಚಕ್ರವಾಹನಗಳು, ಕ್ರೀಡಾ ಸಾಮಗ್ರಿಗಳು, ರಬ್ಬರ್ ಉತ್ಪನ್ನಗಳಾದ ಟಯರ್‍ಗಳು, ಟ್ಯೂಬ್‍ಗಳು ಸಿದ್ಧಪಡಿಸಿದ ಉಡುಪುಗಳು, ಚಹಾ ಇತ್ಯಾದಿ ಪದಾರ್ಥಗಳು ಸೇರಿದಂತೆ ಇನ್ನೂ ಹಲವಾರೂ ಉತ್ಪನ್ನಗಳು ಹೊರ ದೇಶಗಳಿಗೆ ರಫ್ತಾಗುತ್ತವೆ. ಇದರಿಂದ ಸುಮಾರು 573 ಕೊಟಿ ರೂ. ಗಳ ವಾರ್ಷಿಕ ವಹಿವಾಟು ನಡೆಸಲಾಗುತ್ತಿದೆ ಎಂದು  ಹೇಳಿದ ವಿಶ್ವನಾಥ್ ನಮ್ಮ ಕೈಗಾರಿಕೋದ್ಯಮಿಗಳು ಉತ್ತಮ ಗುಣಮಟ್ಟದ ವಸ್ತುಗಳನ್ನು ಸಿದ್ಧಪಡಿಸುವತ್ತ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಂತೆ ತಿಳಿಸಿದರು. ರಫ್ತು ವಹಿವಾಟಿಗೆ ಸಂಘದ ವತಿಯಿಂದ ಎಲ್ಲ ರೀತಿಯ ನೆರವನ್ನು ನೀಡುವುದಾಗಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಂ. ಶಿವಂಕರ್, ಉಪ ನಿರ್ದೇಶಕ ಮಹಮದ್ ಅತೀಕುಲ್ಲಾ ಷರೀಫ್, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಾರ್ಯದರ್ಶಿ ಶ್ರೀಶೈಲರಾಮಣ್ಣನವರ್ ಹಾಗೂ 50ಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳು ಮತ್ತು ವಾಣಿಜ್ಯೋದ್ಯಮಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಎಫ್‍ಕೆಸಿಸಿಐನ ಅಧ್ಯಕ್ಷ ಸುಧಾಕರ ಎಸ್. ಶೆಟ್ಟಿ ವಹಿಸಿದ್ದರು.

No comments:

Post a Comment