Friday, 17 April 2015

ಲೋಕಸೇವಾ ಆಯೋಗ ಪೂರ್ವಭಾವಿ ಪರೀಕ್ಷೆ -ಜಿಲ್ಲಾಧಿಕಾರಿ ಸಿ.ಶಿಖಾ ಸೂಚನೆ

 ಲೋಕಸೇವಾ ಆಯೋಗ ಪೂರ್ವಭಾವಿ ಪರೀಕ್ಷೆ
         ಅಕ್ರಮ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ      
      ಮೈಸೂರು,ಏ.18 ಕರ್ನಾಟಕ ಲೋಕಸೇವಾ ಆಯೋಗ 2014 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಪೂರ್ವಭಾವಿ ಪರೀಕ್ಷೆ ಮೈಸೂರು ನಗರದ 105 ಉಪಕೇಂದ್ರಗಳಲ್ಲಿ ಏಪ್ರಿಲ್ 19 ರ ಭಾನುವಾರ ನಡೆಯುತ್ತಿದ್ದು ಪರೀಕ್ಷಾ ಸಮಯದಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಸಿ.ಶಿಖಾ ಇಂದು ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ವೀಕ್ಷಕರು, ಮಾರ್ಗಾಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳ ಸಭೆ ನಡೆಸಿದ ಅವರು ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ಹಾಗೂ ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ನಡೆಸಲು ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದರು.
ಏಪ್ರಿಲ್ 19 ರಂದು ಭಾನುವಾರ ಬೆಳಿಗ್ಗೆ 10 ರಿಂದ 12 ಘಂಟೆಯವರೆಗೆ ಹಾಗೂ ಮಧ್ಯಾಹ್ನ 2 ರಿಂದ  4 ಘಂಟೆಯವರೆಗೆ ಪರೀಕ್ಷೆ ನಡೆಯಲಿದೆ.
ಯಾವುದೇ ಅಭ್ಯರ್ಥಿ ಪರೀಕ್ಷಾ ಅಕ್ರಮದಲ್ಲಿ ತೊಡಗಿರುವುದು ಕಂಡು ಬಂದಲ್ಲಿ ತಕ್ಷಣವೇ ಅಂತಹ ಅಭ್ಯರ್ಥಿಯನ್ನು ಪರೀಕ್ಷಾ ಕೇಂದ್ರದಿಂದ ಹೊರಹಾಕಲಾಗುವುದು ಹಾಗೂ ಇಂತಹ ಅಭ್ಯರ್ಥಿ ಭವಿಷ್ಯದಲ್ಲಿ ಪುನ: ಪರೀಕ್ಷೆ ತೆಗೆದುಕೊಳ್ಳದಂತೆ ಲೋಕಸೇವಾ ಆಯೋಗವು ನಿಷೇದ ಹೇರಲಿದೆ.ಆದ್ದರಿಂದ ಅಭ್ಯರ್ಥಿಗಳು ಸಹ ಯಾವುದೇ ರೀತಿಯ ಪರೀಕ್ಷಾ ಅಕ್ರಮದಲ್ಲಿ ತೊಡಗಬಾರದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಮೊಬೈಲ್ ಪೋನ್‍ಗಳಿಗೆ ಅವಕಾಶ ಇಲ್ಲ : ಪರೀಕ್ಷಾ ಕೇಂದ್ರದ ಒಳಗೆ ಹಾಗೂ ಆವರಣದಲ್ಲಿ ಮೊಬೈಲ್ ಪೋನ್‍ಗಳಿಗೆ ಅವಕಾಶ ಇರುವುದಿಲ್ಲ . ಹಾಗೂ ಮೊಬೈಲ್ ಪೋನ್‍ಗಳನ್ನು ಇರಿಸುವ ವ್ಯವಸ್ಥೆಯು ಇರುವುದಿಲ್ಲ ಆದ್ದರಿಂದ ಆಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಆವರಣದೊಳಗೆ ಮೊಬೈಲ್ ಪೋನ್‍ಗಳನ್ನು ತರಬಾರದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
      ಮಾಧ್ಯಮ ಪ್ರತಿನಿಧಿಗಳಿಗೂ ಸಹ ಪರೀಕ್ಷಾ ಕೇಂದ್ರದ ಆವರಣದೊಳಗೆ ಪ್ರವೇಶದ ಅವಕಾಶ ಇರುವುದಿಲ್ಲ. ಪರೀಕ್ಷಾ ಕೇಂದ್ರಗಳಲ್ಲಿ ಛಾಯಾಚಿತ್ರ ಅಥವಾ ವಿಡಿಯೋ ತೆಗೆಯಲು ಮಾಧ್ಯಮ ಪ್ರತಿನಿಧಿಗಳಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ಈ ದಿಶೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಸಹಕರಿಸಬೇಕು ಎಂದು ಕೋರಿದರು.
     ವೀಕ್ಷಕರು, ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಪರೀಕ್ಷಾ ಸಿಬ್ಬಂದಿಗಳೂ ಸಹ ಪರೀಕ್ಷಾ ಕೇಂದ್ರದ ಒಳಗೆ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
5 ಪರೀಕ್ಷಾ ಉಪಕೇಂದ್ರಗಳಿಗೆ ಒಬ್ಬರಂತೆ ವೀಕ್ಷಕರು, 3 ರಿಂದ 5 ಉಪಕೇಂದ್ರಗಳಿಗೆ ಒಬ್ಬರಂತೆ ಫ್ಲೈಯಿಂಗ್ ಸ್ಕ್ವಾಡ್ 4 ರಿಂದ 5 ಉಪಕೇಂದ್ರಗಳಿಗೆ ಒಬ್ಬರಂತೆ ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ ಅಲ್ಲದೆ ಪ್ರತಿ ಉಪಕೇಂದ್ರಕ್ಕೂ ಶಸ್ರ್ತಸಜ್ಜಿತ ಆರಕ್ಷಕ ಸಿಬ್ಬಂದಿ ನಿಯೋಜಿಸಲಾಗಿದೆ. ಎಲ್ಲ ಹಂತದ ಅಧಿಕಾರಿ ಹಾಗೂ ಸಿಬ್ಬಂದಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸಿ ಲೋಪದೋಷಗಳಿಗೆ ಅವಕಾಶವಾಗದಂತೆ ಎಚ್ಚರಿಕೆ ವಹಿಸಬೇಕಂದು ಜಿಲ್ಲಾಧಿಕಾರಿ ಸಿ.ಶಿಖಾ ತಿಳಿಸಿದರು.
ವೀಕ್ಷಕರು, ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಹಿಂದಿನ ದಿನವೇ ತಮಗೆ ಹಂಚಿಕೆ ಮಾಡಲಾಗಿರುವ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಬೇಕು.ಪರೀಕ್ಷೆ ನಡೆಸಲು ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದೆಯೇ ಎಂದು ಪರಿಶೀಲಿಸಬೇಕು,ಪರೀಕ್ಷಾ ಉಪಕೆಂದ್ರಗಳ ಬಳಿ ಒರ್ವ ಮಹಿಳಾ ಆರಕ್ಷಕರನ್ನು ಒಳಗೊಂಡಂತೆ ನಾಲ್ವರು ಆರಕ್ಷಕರನ್ನು ನೇಮಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿ ಯಾವುದೇ ನ್ಯೂನತೆ ಇದ್ದಲ್ಲಿ ವರದಿ ಮಾಡಬೇಕು ಎಂದು ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಅರ್ಚನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎ.ಗೋಪಾಲ್, ಮುಡಾ ಆಯುಕ್ತ ಪಾಲಯ್ಯ, ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ ಗಾಯಿತ್ರಿ ಸೇರಿದಂತೆ ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ವಿವಿಧ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. 

No comments:

Post a Comment