Thursday, 2 April 2015

ಲೇಖನ.
ಬೃಂದ ಕೆ., ಅಂತಿಮ ಬಿಎಸ್ಸಿ.(ಕೃಷಿ) ವಿದ್ಯಾರ್ಥಿನಿ
ಕೃಷಿ ಮಹಾವಿದ್ಯಾಲಯ, ವಿ.ಸಿ.ಫಾರಂ, ಮಂಡ್ಯ.

ಎರೆ ಗೊಬ್ಬರ ಬಳಸಿ ಅಧಿಕ ಲಾಭ ಗಳಿಸಿ
ಎರೆ ಗೊಬ್ಬರ
ರೈತನ ಮಿತ್ರ ಎಂದು ಕರೆಯಲ್ಪಡುವ ಎರೆಹುಳು, ನಿಸರ್ಗದಲ್ಲಿ ನಿರಂತರವಾಗಿ ಮಣ್ಣನ್ನು ಉಳುವಂತಹ ಜೀವಿಯಾಗಿರುವುದರಿಂದ ಇದನ್ನು ಪ್ರಕೃತಿಯ ನೇಗಿಲು ಎನ್ನುವರು. ಮಣ್ಣಿನಲ್ಲಿರುವ ಸಾವಯವ ವಸ್ತುಗಳನ್ನು ತಿಂದು ಅವುಗಳನ್ನು ಜಠರದಲ್ಲಿ ವಿಭಜಿಸಿ ವಿವಿಧ ಪೋಷಕಾಂಶಗಳನ್ನು ಒಳಗೊಂಡ ಹಿಕ್ಕೆಯಾಗಿ ಪರಿವರ್ತಿಸುತ್ತವೆ. ಇದರ ಮೂಲಕ ಸಸ್ಯಗಳಿಗೆ ಸುಲಭವಾಗಿ ಲಭ್ಯವಾಗುವ ಪೋಷಕಾಂಶಗಳನ್ನು ಒದಗಿಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡುತ್ತವೆ. ಆದ್ದರಿಂದ ಇದನ್ನು ಭೂಮಿಯ ಕರುಳು ಎಂದು ಸಹ ಕರೆಯುತ್ತಾರೆ. ಎರೆಹುಳು ಗೊಬ್ಬರ ಬೆಳೆಗಳಿಗೆ ಬೇಕಾಗುವ ಹಲವಾರು ಪೋಷಕಾಂಶಗಳನ್ನು ಹೊಂದಿರುತ್ತದೆ. ಇವುಗಳಲ್ಲಿ ಮುಖ್ಯ ಪೋಷಕಾಂಶಗಳಾದ ಸಾರಜನಕ (1.10%), ರಂಜಕ (0.86%), ಪೊಟ್ಯಾಷ್(0.98%) ಮತ್ತು ಲಘು ಪೋಷಕಾಂಶಗಳಾದ ಕಬ್ಬಿಣ (930 ಪಿ.ಪಿ.ಎಂ.) ಸತು (187 ಪಿ.ಪಿ.ಎಂ.) ಹಾಗೂ ತಾಮ್ರ (53 ಪಿ.ಪಿ.ಎಂ.)ಗಳಿರುತ್ತವೆ.
ಎರೆ ಗೊಬ್ಬರ ಬಳಕೆಯಿಂದ ಮಣ್ಣಿನ ಭೌತಿಕ ಗುಣಧರ್ಮಗಳು ವೃದ್ಧಿಯಾಗಿ, ನೀರು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯ ಮತ್ತು ಗಾಲೀಯಾಡುವಿಕೆ ಉತ್ತಮಗೊಳ್ಳುತ್ತದೆ. ಸತತ ಬಳಕೆಯಿಂದ ಮಣ್ಣಿನಲ್ಲಿರುವ ಹಾನಿಕಾಕ ಲವಣಗಳ ಪ್ರಮಾಣ ಕಡಿಮೆಯಾಗಿ ಬೆಳೆಗಳಿಗೆ ಸಸ್ಯ ಪೋಷಕಾಂಶಗಳು ಚೆನ್ನಾಗಿ ದೊರೆಯುತ್ತವೆ.
ಎರೆಹುಳು ವಿಧಗಳು :
ವಿಶ್ವದಾದ್ಯಂತ ಐಸೀನಿಯಾ ಫೀಟಡಾ ಎಂಬ ಜಾತಿಗೆ ಸೇರಿದ ಎರೆ ಹುಳುಗಳನ್ನು ಉಪಯೋಗಿಸುತ್ತಿದ್ದಾರೆ. ಅದೇ ರೀತಿ ಯೂಡ್ರಿಲಸ್ ಯುಜೀನಿಯಾ, ಪೆರಿಯೋನಿಕ್ಸ್ ಎಕ್ಸ್‍ಕವೇಟಸ್ ಮತ್ತು ಪೆರೆಯೋನಿಕ್ಸ್ ಸಾಂಸಿಬಾರಿಕಸ್ ಎಂಬ ಎರೆ ಹುಳುಗಳನ್ನು ಐಸೀನಿಯಾ ಫೀಟಿಡಾದೊಡನೆ ಬಳಸಲಾಗುತ್ತಿದೆ. ನಮ್ಮಲ್ಲಿನ ಹವಾಗುಣಕ್ಕೆ ಈ ಎಲ್ಲಾ ವಿವಿಧ ಹುಳುಗಳು ಹೊಂದಿಕೊಂಡಿರುವಂತಹದ್ದಾಗಿದ್ದು ವರ್ಷವಿಡೀ ಯಾವ ತೊಂದರೆಗಳಿಲ್ಲದೆ ಎರೆಗೊಬ್ಬರದ ಉತ್ಪಾದನೆಗೆ ಬಳಸಬಹುದು.
ಎರೆ ಗೊಬ್ಬರ ಉತ್ಪಾದನೆಯಲ್ಲಿ ತ್ಯಾಜ್ಯ ಪದಾರ್ಥಗಳು:
ಎರೆ ಗೊಬ್ಬರ ಉತ್ಪಾದನೆಯಲ್ಲಿ ಯಾವುದೇ ತರಹದ ಸಾವಯವ ತ್ಯಾಜ್ಯ ಪದಾರ್ಥಗಳನ್ನು ಉಪಯೋಗಿಸಬಹುದು. ಅವುಗಳೆಂದರೆ; ಪ್ರಾಣಿಗಳ ಸಗಣಿ ಮತ್ತು ಹಿಕ್ಕೆ, ಕೃಷಿ ತ್ಯಾಜ್ಯಗಳು, ಕಳೆಗಳು, ಹುಲ್ಲುಗಳು, ಆಹಾರ ಸಂಸ್ಕರಣೆ ಘಟಕ ತ್ಯಾಜ್ಯಗಳು, ಬಯೋಗ್ಯಾಸ್ ಬಗ್ಗಡ, ಅಡಿಗೆ ಮನೆ ತ್ಯಾಜ್ಯ, ರೇಷ್ಮೆ ಕೃಷಿ ತ್ಯಾಜ್ಯ ಮತ್ತು ಮಾರುಕಟ್ಟೆ ಕಾಯಿಪಲ್ಯ, ಹಣ್ಣು ಹಂಪಲುಗಳ ತ್ಯಾಜ್ಯ ಮುಂತಾದವುಗಳು.
ಬೇಗನೆ ಕಳಿಯುವ ಪದಾರ್ಥಗಳನ್ನು ನೇರವಾಗಿ ಎರೆಹುಳು ಗೊಬ್ಬರ ತಯಾರಿಸುವ ಮಡಿಗಳಿಗೆ ಹಾಕಬಹುದು. ಆದರೆ ಗಟ್ಟಿಯಾದ, ಕಳಿಯಲು ಬಹಳ ದಿನ ಬೇಕಾಗುವ ಪದಾರ್ಥಗಳನ್ನು, ಮೊದಲೆ ಹದಗೊಳಿಸಿ ನಂತರ ಎರೆಹುಳು ಮಡಿಗಳಿಗೆ ಹಾಕಬೇಕು.
ಆರಂಭಿಕವಾಗಿ ಹದಗೊಳಿಸುವಿಕೆ:
ತ್ಯಾಜ್ಯ ವಸ್ತುಗಳನ್ನು ಎರೆಗೊಬ್ಬರ ತಯಾರಿಸಲು ಬಳಸುವ ಮುನ್ನ ಅವುಗಳ ಸರಿಯಾದ ನಿರ್ವಹಣೆ ಮತ್ತು ಸಂಸ್ಕರಣೆ ಅಗತ್ಯ. ಸಂಗ್ರಹಿಸಿದ ತ್ಯಾಜ್ಯ ವಸ್ತುಗಳನ್ನು ನೆಲದ ಮೇಲೆ ರಾಶಿಯಾಗಿ ಅಥವಾ ಸಮತಟ್ಟಾಗಿ ಹರಡಬೇಕು.(ಆಗಾಗ್ಗೆ ತ್ಯಾಜ್ಯ ವಸ್ತುಗಳನ್ನು ಮಗುಚಲು ಅನುಕೂಲವಾಗುವಂತಿರಬೇಕು). ತ್ಯಾಜ್ಯ ವಸ್ತುಗಳ ಮೇಲೆ ಚೆನ್ನಾಗಿ ನೆನೆಯುವಂತೆ ನೀರನ್ನು ಚಿಮುಕಿಸಬೇಕು. ಆಗಾಗ್ಗೆ ಸಗಣಿ ಬಗ್ಗಡವನ್ನು ಯಥೇಚ್ಛವಾಗಿ ಸಿಂಪಡಣೆ ಮಾಡುವುದರಿಂದಲೂ ಸಹ ಸಾವಯವ ವಸ್ತುಗಳನ್ನು ಮಗುಚುತ್ತಿರಬೇಕು. ಇದರಿಂದ ವಸ್ತುಗಳು ಕಳಿಯುವಾಗ ಉಂಟಾಗುವ ಶಾಖ ವiತ್ತು ಅನಿಲಗಳನ್ನು ಹೊರ ಹಾಕಲು ಅನುಕೂಲವಾಗುತ್ತದೆ. ಒಂದೇ ರೀತಿಯ ತ್ಯಾಜ್ಯ ವಸ್ತುಗಳಿಗಿಂತ ಬೇರೆ ಬೇರೆ ಬಗೆಯ ತ್ಯಾಜ್ಯ ವಸ್ತುಗಳನ್ನು ಬಳಸುವುದರಿಂದ ಉತ್ತಮ ಗುಣಮಟ್ಟದ ಎರೆ ಗೊಬ್ಬರವನ್ನು ತಯಾರಿಸಲು ಸಾಧ್ಯವಾಗುತ್ತದೆ. ಒಂದು ತಿಂಗಳಿನಲ್ಲಿ 3 ರಿಂದ 4 ಸಾರಿ ಮಗುಚಿ ಆನಂತರ ಎರೆ ತೊಟ್ಟಿಗೆ ವರ್ಗಾಯಿಸಬೇಕು.
ಉತ್ಪಾದನೆ ವಿಧಾನಗಳು
* ಆಯಾತಾಕಾರದ ಗುಂಡಿ ಮಾದರಿಯ ಮಡಿಗಳು
* ಆಯಾತಾಕಾರದ ಮಣ್ಣಿನ ಅಥವಾ ಸಿಮೆಂಟ್ ಅಥವಾ ಇಟ್ಟಿಗೆ ಮಾದರಿ ಮಡಿಗಳು.
* ಗುಪ್ಪೆ ಮಾದರಿ ಮಡಿಗಳು.
ಗೊಬ್ಬರ ತಯಾರಿಸುವ ವಿಧಾನ:
* ನೆರಳಿರುವ ಜಾಗದಲ್ಲಿ (ಮರದ ಕೆಳಗೆ/ಕೊಟ್ಟಿಗೆಯಲ್ಲಿ) ರೈತರು ತಮ್ಮ ಅವಶ್ಯಕತೆಗೆ ತಕ್ಕಂತೆ ಮಡಿಗಳನ್ನು ಸಿದ್ದಪಡಿಸಿಕೊಳ್ಳಬೇಕು.
* ಸಾವಯವ ತ್ಯಾಜ್ಯ ಪದಾರ್ಥಗಳು ಉಪಯೋಗಿಸುವ (ತ್ಯಾಜ್ಯ ಪದಾರ್ಥಗಳು ಸುಮಾರು 40 ರಿಂದ 50% ತೇವಾಂಶ ಹೊಂದಿರಬೇಕು) ಮುನ್ನ ಸಾವಯವ ಪದಾರ್ಥಗಳನ್ನು ಹದ ಮಾಡಬೇಕು. ಇದನ್ನೆಲ್ಲ ಎರೆಹುಳು ಗೊಬ್ಬರದ ಮಡಿಗಳ ಸಮೀಪ ಮಾಡುವುದು ಒಳ್ಳೆಯದು.
* ಮಡಿಗಳ ತಳಭಾಗಕ್ಕೆ ಬೇಗನೆ ಕಳಿಯದಂತಹ ಮತ್ತು ಹೆಚ್ಚು ನೀರನ್ನು ಹಿಡಿದಿಟ್ಟುಕೊಳ್ಳುವಂತಹ ನಾರು, ತೆಂಗಿನ ಸಿಪ್ಪೆ ಬತ್ತದ ಹೊಟ್ಟು, ತೆಂಗಿನ ಗರಿ ಮುಂತಾದವುಗಳನ್ನು ಹರಡಬೇಕು. ಅದರ ಮೇಲೆ ಮೊದಲೇ ಭಾಗಶಃ ಕಳಿಸಿದ ತ್ಯಾಜ್ಯ ಪದಾರ್ಥಗಳನ್ನು ಹರಡಬೇಕು. ಇದರ ದಪ್ಪ ಸುಮಾರು 7 ರಿಂದ 8 ಅಂಗುಲಗಳಿರಬೇಕು. ಅದರ ಮೇಲೆ ಸುಮಾರು 2 ಅಂಗುಲದಷ್ಟು ದಪ್ಪ ಸಗಣಿಯನ್ನು ಹರಡಬೇಕು. ತಳಭಾಗದ ಪದರ ಹೊರತುಪಡಿಸಿ, ಪುನಃ ಮೇಲೆ ಹೇಳಿದ ರೀತಿ ಪುನರಾವರ್ತಿಸಬೇಕು.
* ತ್ಯಾಜ್ಯ ವಸ್ತುಗಳನ್ನು ತುಂಬಿದ ಮೇಲೆ ತ್ಯಾಜ್ಯಗಳು ಹಸಿಯಾಗುವಂತೆ ನೀರನ್ನು ಸಿಂಪರಣೆ ಮಾಡಬೇಕು.
* ಪ್ರತಿ ಚದರ ಮೀಟರ್ ಮಡಿಗೆ ಸುಮಾರು 100 ಎರೆಹುಳುಗಳನ್ನು ಬಿಡಬೇಕು. ಮಡಿಗಳ ಮೇಲೆ ಹುಲ್ಲು ಅಥವಾ ಗರಿಗಳಿಂದ ಹೊದಿಕೆ ಮಾಡಬೇಕು. ನೆರಳಿರುವ ಜಾಗದಲ್ಲಿ ಮಾಡಿದರೆ ಹುಲ್ಲಿನ ಹೊದಿಕೆಯ ಅವಶ್ಯಕತೆ ಇರುವುದಿಲ್ಲ ಮತ್ತು ಎರೆಹುಳುಗಳನ್ನು ಬಿಟ್ಟ ನಂತರ ಮಗುಚಬಾರದು.
* ಮಡಿಗಳಲ್ಲಿ ಶೇ.60 ರಿಂದ 70ರಷ್ಟು ತೇವಾಂಶವನ್ನು ಕಾಪಾಡಲು ನೀರಿನ ಸಿಂಪರಣೆ ಮಾಡುತ್ತಿರಬೇಕು. ಮಡಿಗಳ ಮೇಲ್ಭಾಗದಲ್ಲಿ ಹಿಕ್ಕೆಗಳ ಸಂಗ್ರಹ ಜಾಸ್ತಿಯಾದಾಗ ಹೆಚ್ಚಿನ ನೀರಿನ ಅವಶ್ಯಕತೆ ಇರುವುದಿಲ್ಲ. ಆದರೆ ಹುಲ್ಲಿನ ಹೊದಿಕೆ ನೆನೆಯುವಂತೆ ಮಾತ್ರ ನೀರನ್ನು ಹಾಕಬೇಕು.
* ಎರೆಹುಳುಗಳ ಹಿಕ್ಕೆಗಳು ಮೇಲ್ಭಾಗದಲ್ಲಿ ಸಂಗ್ರಹವಾದಂತೆ ಅವು ಕೆಳಗಿನ ಪದರಗಳತ್ತ ಸಾಗುತ್ತವೆ. ಎರೆ ಗೊಬ್ಬರವನ್ನು ವಾರಕ್ಕೊಮ್ಮೆ ಮೇಲ್ಭಾಗದಿಂದ ಸಂಗ್ರಹಿಸಬಹುದು.
* ಮಡಿಗಳಲ್ಲಿ ಪ್ಲಾಸ್ಟಿಕ್, ಕಬ್ಬಿಣದ ಚೂರು, ತಗಡು ಇತ್ಯಾದಿ ಸಾವಯವ ಪದಾರ್ಥಗಳಲ್ಲದೆ, ಕರಗದ ವಸ್ತುಗಳು ಮತ್ತು ಮುಳ್ಳಿನಿಂದ ಕೂಡಿದ ಸಾವಯವ ಪದಾರ್ಥಗಳನ್ನು ಹಾಕಬಾರದು.
* ತೊಟ್ಟಿಗಳಲ್ಲಿ ಹಾಗೂ ಮಡಿಗಳಲ್ಲಿ ಇರುವೆ, ಗೆದ್ದಲು, ಇಲಿ, ಹೆಗ್ಗಣ, ಕೋಳಿ, ನಾಯಿ, ಬೆಕ್ಕು, ಸೇರದಂತೆ ಎಚ್ಚರ ವಹಿಸಬೇಕು. ತೊಟ್ಟಿಗಳ ಮೇಲೆ ಜಾಲರಿ ಅಥವಾ ಬಿದರಿನ ತಟ್ಟಿ ಮುಚ್ಚುವುದರಿಂದ ದೊಡ್ಡ ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಬಹುದು.
ಎರೆ ಹುಳುಗಳನ್ನು ಗೊಬ್ಬರದಿಂದ ಬೇರ್ಪಡಿಸುವ ವಿಧಾನ:
ಎರೆಗೊಬ್ಬರದ ಜೊತೆಗೆ ಹುಳುಗಳು, ಕೋಶ ಮತ್ತು ಮರಿಗಳು ಸಹ ಇರುತ್ತವೆ. ಎರೆಹುಳುಗಳನ್ನು ಗೊಬ್ಬರದಿಂದ ಸು¯ಭವಾಗಿ ಬೇರ್ಪಡಿಸಲು ನೆಲದ ಮೇಲೆ ತ್ಯಾಜ್ಯ ವಸ್ತುಗಳನ್ನು ಹರಡಿ ಅದರ ಮೇಲೆ ಎರೆ ಗೊಬ್ಬರವನ್ನು ನೆರಳಿನಲ್ಲಿ ರಾಶಿ ಮಾಡಬೇಕು. ರಾಶಿ ಮಾಡಿದ 6 ರಿಂದ 8 ಗಂಟೆಗಳು ಹಾಗೆ ಬಿಡಬೇಕು. ಎರೆ ಹುಳುಗಳು ತಳಭಾಗದ ತ್ಯಾಜ್ಯದ ಜೊತೆಗೆ ಪುನಃ ಮಡಿಗಳಿಗೆ ಹುಳುಗಳನ್ನು ಬಿಡಬಹುದು.
ಕೋಶ ಮತ್ತು ಮರಿಗಳನ್ನು ಎರೆ ಗೊಬ್ಬರದಿಂದ ಬೇರ್ಪಡಿಸಲು ಎರೆಗೊಬ್ಬರವನ್ನು ರಾಶಿ ಮಾಡಬೇಕು. ರಾಶಿಯಲ್ಲಿ ಹಸಿ ಸಗಣಿಯ ಉಂಡೆಗಳನ್ನಿಟ್ಟು ಸಣ್ಣ ಕಡ್ಡಿಗಳಿಂದ ಉಂಡೆಗಳಿರುವ ಜಾಗವನ್ನು ಗುರುತು ಮಾಡಿಟ್ಟುಕೊಳ್ಳಬೇಕು. ಅದಾದ 15 ದಿನಗಳ ನಂತರ ಸಗಣಿ ಉಂಡೆಗಳನ್ನು ತೆಗೆದು ನೋಡಿದಲ್ಲಿ ಕೋಶಗಳಿಂದ ಹೊರಬಂದ ಎಳೆ ಮರಿಗಳು ಗುಂಪುಗುಂಪಾಗಿ ಕಂಡಬರುತ್ತವೆ. ಅವುಗಳನ್ನು ಪುನಃ ತೊಟ್ಟಿಗಳಲ್ಲಿ ಬಇಡಬಹುದು ಅಥವಾ ತೋಟಗಾರಿಕಾ ಬೆಳೆಗಳಲ್ಲಿ ತೇವಾಂಶವನ್ನು ಕಾಪಾಡುವ ಗಿಡಗಳ ಸುತ್ತು ಹಾಕಿದರೆ ಅವು ಅಲ್ಲೆ ಗೊಬ್ಬರವನ್ನು ಉತ್ಪತಿ ಮಾಡುತ್ತವೆ. ಎರೆ ಗೊಬ್ಬರವನ್ನು ಸಂಗ್ರಹಿಸಿದ ಮೇಲೆ ವಾಣಿಜ್ಯವಾಗಿ ಉತ್ಪಾದಿಸುವಂತಿದ್ದರೆ ಜರಡಿ ಮಾಡಬೇಕು. ಎರೆ ಗೊಬ್ಬರ ಒಣಗಿದಾಗ ಶೇ.15 ರಿಂದ 20 ರಷ್ಟು ತೇವಾಂಶದಲ್ಲಿ ಪೋಷಕಾಂಶಗಳ ನಷ್ಟವಿಲ್ಲದೇ ಒಂದು ವರ್ಷದವರೆಗೆ ಸಂಗ್ರಹಿಸಿಡಬಹುದು.

No comments:

Post a Comment