Wednesday, 8 April 2015

ಮಂಡ್ಯ: ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ದುದ್ದ ಹೋಬಳಿಯ 5 ಪಂಚಾಯಿತಿಯ 39 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುರಿತಂತೆ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಯೋಜನೆಯ ರೂಪುರೇಷೆ ಸಿದ್ದಪಡಿಸಲು ಸೂಚನೆ ನೀಡಿದರು.
ತಾಲೂಕಿನ ದುದ್ದ ಗ್ರಾಮದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 85 ರಿಂದ 90 ಕೋಟಿ ರೂ. ವೆಚ್ಚದ ಯೋಜನೆಗೆ 15ದಿನದೊಳಗೆ ನಕಾಶೆ ತಯಾರಿಸಿ ವರದಿ ಸಿದ್ಧಪಡಿಸುವಂತೆ ತಿಳಿಸಿದರು.
ವರದಿ ಬಂದ ನಂತರ ಅಂದಾಜು ವೆಚ್ಚ ತಯಾರಿಸಿ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸುವಂತೆ ತಿಳಿಸಿದರಲ್ಲದೆ, ಶೀಘ್ರ ಈ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ವ್ಯಾಪ್ತಿಯ ಸುಮಾರು 19 ಕಿ.ಮೀ. ಪೈಪ್‍ಲೈನ್ ಮೂಲಕ 39 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದ್ದು, 2500 ಎಕರೆ ಪ್ರದೇಶಕ್ಕೆ ನೀರುಣಿಸಬಹುದಾಗಿದೆ. ಅಂತರ ಜಲ ಕುಸಿತದಿಂದಾಗಿ ಈ ಪ್ರದೇಶದ ಜನತೆ ನೀರಿಗಾಗಿ ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಈ ಯೋಜನೆಯಿಂದಾಗಿ ಅಂತರ್‍ಜಲ ರಕ್ಷಣೆಯ ಜೊತೆಗೆ ಪಂಪ್‍ಸೆಟ್ ಮೂಲಕ ಜನತೆ ನೀರು ತಮ್ಮ ಜಮೀನುಗಳಿಗೆ ಬಳಸಬಹುದಾಗಿದೆ ಎಂದು ಹೇಳಿದರು.
ಲಾಲ್‍ಬಹದ್ದೂರ್ ಶಾಸ್ತ್ರಿ ಪಿಕಪ್‍ನಿಂದ ಪಾಂಡವಪುರ-ಹುಲಿಕೆರೆ ಕೊಪ್ಪಲು-ಬೇವುಕಲ್ಲು ಮಾರ್ಗವಾಗಿ ದುದ್ದ ಹೋಬಳಿಗೆ ನೀರೊದಗಿಸಲು ಪೈಪ್‍ಲೈನ್ ಅಳವಡಿಸಲು ಚಿಂತನೆ ನಡೆಸಲಾಗಿದೆ. ಈ ಯೋಜನೆ ಅನುಷ್ಠಾನದಿಂದಾಗಿ ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ನೀಗಿಸಲು ಇದೊಂದು ಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.
ಮುದಗಂದೂರು, ಹುಲಿಕೆರೆಕೊಪ್ಪಲು, ದುದ್ದ, ಬಂಕನಹಳ್ಳಿ, ಜವನಹಳ್ಳಿ, ಬಂತಪ್ಪನಕೊಪ್ಪಲು, ಮಾದೇಶ್ವರ, ಬಿ.ಹಟ್ನ, ಮಾದೇಗೌಡನಕೊಪ್ಪಲು, ಮಾರಚಾಕನಹಳ್ಳಿ, ತಿಪ್ಪಾಪುರ ಸೇರಿದಂತೆ 39 ಕೆರೆಗಳಿಗೆ ನೀರು ತುಂಬಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟದರು.
ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಚಂದ್ರಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಚಿದಂಬರನಾಥ್, ಸಹಾಯಕ ಇಂಜಿನಿಯರ್ ರಫಿ, ಪುಟ್ಟಮಾಯಿಗೌಡ, ಸರ್ವೇಯರ್ ಧರ್ಮರಾಜು, ಮುಖಂಡರಾದ ಶಂಭೂನಹಳ್ಳಿ ಸುರೇಶ್, ಆತ್ಮಾನಂದ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಇದ್ದರು.

No comments:

Post a Comment