Tuesday, 28 April 2015

 ಅಂಗಡಿಯಲ್ಲಿ ಸೀರೆ ಕದಿಯುತ್ತಿದ್ದ ಕಳ್ಳಿಯರ ಬಂಧನ
ಮೈಸೂರು, ಏ. 28-ಮೈಸೂರಿನ ಸೀರೆ ಮಳಿಗೆಯೊದರಲ್ಲಿ ವ್ಯಾಪಾರಕ್ಕೆ ಬಂದು ಸೀರೆಗಳನ್ನು ಕದಿಯುತ್ತಿದ್ದ ಇಬ್ಬರು ಕಳ್ಳಿಯರನ್ನು ನಜರ್‍ಬಾದ್ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.
 ನಗರದ ಮೃಗಾಲಯ ಬಳಿಯಿರುವ ಕರ್ನಾಟಕ ಸ್ಯಾರಿಸ್ ಸೆಂಟರ್ ಎಂಬ ಅಂಗಡಿಯಗೆ ಬಂದ ಕಳ್ಳಿಯರು ಸೀರೆಗಳನ್ನು ಕೊಳ್ಳುವವರಂತೆ ನಟಿಸಿ ಸ್ಯಾರಿಗಳನ್ನು ವೀಕ್ಷಿಸುತ್ತಿದ್ದರು, ವೀಕ್ಷಿಸುತ್ತಿದ್ದಂತೆ ಅಂಗಡಿಯ ನೌಕರರ ಗಮನವನ್ನು ಬೇರೆಡೆ ಸೆಳೆದು ತಾವು ತಂದಿದ್ದ ಬ್ಯಾಗ್‍ಗಳಿಗೆ ಬೆಲೆಬಾಳುವ  5 ಸ್ಯಾರಿಗಳನ್ನು ತುರುಕಿದ್ದರು ಇದು ಅಲ್ಲಿ ಅಳವಡಿಸಲಾಗಿದ್ದ  ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು.
 ಸೀರೆ ಕದಿಯಲು 5 ಮಂದಿ ಕಳ್ಳಿಯರು ಬಂದಿದ್ದು, ಅವರಲ್ಲಿ ಇಬ್ಬರುಮಾತ್ರ ಸಿಕ್ಕಿಹಾಕಿಕೊಂಡಿದ್ದಾರೆ, ಉಳಿದ ಮೂವರು ಪರಾರಿ ಯಾದರೆಂದು ಹೇಳಲಾಗಿದೆ. ಸಿಕ್ಕಿಕೊಂಡ ಇಬ್ಬರನ್ನು ನಜರ್‍ಬಾದ್ ಪೊಲೀಸರು ಮಾಲುಸಮೇತ ವಶಕ್ಕೆ ತೆಗೆದುಕೊಂಡು ವಿಚಾರಣೆಗಾಗಿ ಠಾಣೆಗೆ ಕರೆದೊಯ್ದಿದ್ದಾರೆ.
 ಅಂಗಡಿ ಮಾಲೀಕರು ಹೇಳುವ ಪ್ರಕಾರ ಇವರುಗಳು ಈ ಹಿಂದೆಯೇ ಇದೇ ಅಂಗಡಿಗೆ ಬಂದು ಸೀರೆಗಳನ್ನು ಕದ್ದಿದ್ದರು, ಆಗ ಸಿಕ್ಕಿಕೊಂಡಾಗ ಈ ಬ್ಯಾಗ್ ನಮ್ಮದಲ್ಲ ಎಂದು ಹೇಳಿ ತಪ್ಪಿಸಿಕೊಂಡರು. ಆಗ ಪೊಲೀಸರಿಗೆ ವಿಷಯತಿಳಿಸಿದ್ದೆವು ಅದರಂತೆ ಈ ಮಹಿಳೆಯರು ಇಂದು ಅಂಗಡಿಗೆ ಬಂದಾಗ ಪೊಲೀಸರಿಗೆ ಮಾಹಿತಿ ನೀಡಿದ್ದೆವು, ಅದರಂತೆ ಪೊಲೀಸರು ಚಾಮುಂಡಿ ಎಂಬ ಪಡೆಯನ್ನು ಮಪ್ತಿ ಉಡುಪಿನಲ್ಲಿ ಕಳುಹಿಸಿ ಇವರ ವ್ಯಾಪಾರದ ನಡವಳಿಕೆಯನ್ನು ಸಿಸಿ ಕ್ಯಾಮರಾ ಮೂಲಕ ವೀಕ್ಷಿಸುತ್ತಿದ್ದಾಗ ರೇಷ್ಮೆ ಸೀರೆಗಳನ್ನು ಬ್ಯಾಗ್‍ಗಳಿಗೆ ಸೇರಿಸುತ್ತಿದ್ದುದನ್ನು ಕಂಡು ತಕ್ಷಣ ಅವರನ್ನು ಮಾಲುಸಮೇತ ಹಿಡಿದಿದ್ದಾರೆ ಎನ್ನಲಾಗಿದೆ.
ಕಳ್ಳೀಯರು ಮೈಸೂರಿನ ಎಸ್.ಆರ್. ನಾಯ್ಡುನಗರ ವಾಸಿಗಳಾಗಿದ್ದು, ತಪ್ಪಿಸಿಕೊಂಡಿರುವ ಇತರ ಕಳ್ಳಿಯರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
 ಕಳ್ಳಿಯರನ್ನು ಬಂಧಿಸಿ ಶಿಕ್ಷೆ ಕೊಡಿಸುವ ಉದ್ದೇಶ ನಮಗಿಲ್ಲ ಆದರೆ ಇನ್ನು ಮುಂದೆ ಯರೂ, ಎಲ್ಲೂ ಈರೀತಿ ಕಳ್ಳತನಮಾಡದಿರಲಿ, ಬುದ್ಧಿ ಕಲಿಯಲಿ ಎಂದು  ಪೊಲೀಸರಿಗೆ  ತಿಳಿಸಿರುವುದಾಗಿ ಅಂಗಡಿ ಮಾಲೀಕರು ತಿಳಿಸಿದ್ದಾರೆ.
   

No comments:

Post a Comment