ಮಂಡ್ಯ: ಭಾರತೀಯರಿಗೆ ಯುಗಾದಿ ಹೊಸ ವರ್ಷದ ಆರಂಭ. ಹೀಗಾಗಿ ಯುಗಾದಿಯನ್ನು ಅತ್ಯಂತ ಸಂಭ್ರಮ, ಸಡಗರದಿಂದ ಸ್ವಾಗತಿಸುವ ಕಾರ್ಯ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ಈ ಸಂದರ್ಭದಲ್ಲಿ ಹೊಸ ಚಿಗುರು, ಹೊಸತನ ಬರುವುದೆಂಬ ನಂಬಿಕೆ ನಮ್ಮದಾಗಿದೆ ಎಂದು ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ ಹೇಳಿದರು.
ನಗರದ ಜಿಲ್ಲಾ ಗ್ರಂಥಾಲಯ ಆವರಣದಲ್ಲಿ ಸುಭಾಷ್ ಸಾಂಸ್ಕøತಿಕ ಕಲಾಬಳಗದ ವತಿಯಿಂದ ನಡೆದ ಯುಗಾದಿ ಸಂಭ್ರಮ, ಯುಗಾದಿ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮರಗಿಡಗಳು ಹೊಸ ಚಿಗುರು ಹೊಡೆಯುವ ಕಾಲದಲ್ಲಿ ಇಂತಹ ಸುಂದರ ಸಮಾರಂಭ ಆಯೋಜಿಸುವ ಮೂಲಕ ನೇತಾಜಿಯವರನ್ನೂ ಸ್ಮರಿಸುವುದು ಅತ್ಯಂತ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ನೇತಾಜಿ ಸುಭಾಷ್ ಚಂದ್ರಬೋಸ್ ಅವರು ಈ ನಾಡಿಗೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟವರು. ಇಂತಹ ಮಹನೀಯರ ಹೆಸರಿನಲ್ಲಿ ಸುಭಾಷ್‍ನಗರ ಬಡಾವಣೆ ಇರುವುದು ಅರ್ಥಪೂರ್ಣವಾಗಿದೆ. ಇವರ ಹೆಸರಿನಲ್ಲಿ ಕಾರ್ಯಕ್ರಮ ನಡೆಸುತ್ತಿರುವುದೂ ಇನ್ನೂ ವೈಶಿಷ್ಠ್ಯಪೂರ್ಣ ಎಂದು ಹೇಳಿದರು.
ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಸಚಿವರನ್ನು ಕೊಟ್ಟ ಈ ಬಡಾವಣೆ, ಹತ್ತು ಹಲವು ವೈಶಿಷ್ಟ್ಯಗಳಿಗೆ ಕಾರಣವಾಗಿದೆ. ಈ ಹಿಂದೆ ಸುಭಾಷ್‍ನಗರ ನಿವಾಸಿಗಳ ಸಂಘದ ವತಿಯಿಂದ ಹತ್ತು ಹಲವು ಕಾರ್ಯಕ್ರಮಗಳು ನಡೆಯುತ್ತಿತ್ತು. ಅದೇಕೋ ನಿಂತುಹೋಗಿತ್ತು. ಇದೀಗ ಸುಭಾಷ್ ಸಾಂಸ್ಕøತಿಕ ಬಳಗ ಈ ಕಾರ್ಯಕ್ರಮದ ಸಾರಥ್ಯ ವಹಿಸಿಕೊಂಡು ಸಮಾರಂಭ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಎಂದರು.
ಈ ಬಡಾವಣೆಯಲ್ಲಿ ಮಾಜಿ ಸಂಸದ ಎಂ.ಕೆ. ಶಿವನಂಜಪ್ಪ ಅವರ ಹೆಸರಿನಲ್ಲಿ ಸುಂದರ ಉದ್ಯಾನವನ ಇದೆ. ಕಳೆದ ಆರೇಳು ವರ್ಷಗಳಿಂದ ಈ ಉದ್ಯಾನವನ್ನು ನಮ್ಮ ಹಲವು ಸ್ನೇಹಿತರು ಜೊತೆಗೂಡಿ ದತ್ತುಪಡೆದು ನೂರಾರು ಗಿಡ ಮರಗಳನ್ನು ಬೆಳೆಸುವ ಕಾರ್ಯ ನಡೆಸಲಾಗುತ್ತಿದೆ. ಮುನುಷ್ಯನಿಗೆ ಅಗತ್ಯವಾದ ಆಮ್ಲಜನಕವನ್ನು ಪೂರೈಸಲು ಈ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.
ಹಲವಾರು ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯವನ್ನು ಮಾಡುತ್ತಿರುವ ವ್ಯವಸ್ಥಾಪಕರ ಕಾರ್ಯವನ್ನು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಎಂ. ಸೋಮಶೇಖರ್, ರಂಗಭೂಮಿ ಕ್ಷೇತ್ರದಿಂದ ಕಲಾವಿದ ಹೆಚ್.ವಿ. ಜಯರಾಂ, ಸಮಾಜ ಸೇವೆಯಿಂದ ಡಾ. ಶಂಕರೇಗೌಡ, ಆರ್.ಎಲ್. ವಾಸುದೇವರಾವ್, ಮಂಜುನಾಥ್, ಗೊರವಾಲೆ ಚಂದ್ರಶೇಖರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ಮಾಜಿ ಶಾಸಕ ಜಿ.ಬಿ. ಶಿವಕುಮಾರ್, ನಗರಸಭಾ ಸದಸ್ಯ ಮಹೇಶ್, ಮಾಜಿ ಸದಸ್ಯ ಎಂ.ಎಸ್. ರವಿಶಂಕರೇಗೌಡ, ಕರವೇ ರಾಜ್ಯ ಉಪಾಧ್ಯಕ್ಷ ಮಾ.ಸೋ. ಚಿದಂಬರ್, ಬಸ್ ಮಾಲೀಕರ ಸಂಘದ ಅಧ್ಯಕ್ಷ ಜಿ.ಪಿ. ಭಕ್ತವತ್ಸಲಾ, ಲೋಕಪಾವನಿ ಮಹಿಳಾ ಬ್ಯಾಂಕ್ ಅಧ್ಯಕ್ಷೆ ಶಾರದಾ ರಮೇಶರಾಜು, ಪತ್ರಕರ್ತ ಪಿ.ಜೆ. ಚೈತನ್ಯಕುಮಾರ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
No comments:
Post a Comment