Wednesday, 8 April 2015

ಸಲಹಾ ಸಮಿತಿ ಸಭೆ

ಪೆಟ್ರೋರಾಸಾಯನಿಕ ಹೂಡಿಕೆ ಪ್ರದೇಶಗಳು ಹಾಗೂ ಪ್ಲಾಸ್ಟಿಕ್ ಪಾರ್ಕ್‍ಗಳ ಕುರಿತು ಸಂಸದರೊಂದಿಗೆ ಶ್ರೀ. ಅನಂತ್ ಕುಮಾರ್ ಚರ್ಚೆ
ಏಪ್ರಿಲ್ 8, 2015

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಅನಂತ್ ಕುಮಾರ್ ನೇತೃತ್ವದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯಕ್ಕೆ ಸಂಬಂಧಿಸಿದ ಸಂಸದರ ಸಲಹಾ ಸಮಿತಿ ಸಭೆ ನಿನ್ನೆ ನವದೆಹಲಿಯಲ್ಲಿ ನಡೆಯಿತು. ‘ಪೆಟ್ರೋಲಿಯಂ, ರಾಸಾಯನಿಕ ಮತ್ತು ಪೆಟ್ರೋರಾಸಾಯನಿಕ ಹೂಡಿಕೆ ಪ್ರದೇಶಗಳು ಹಾಗೂ ಪ್ಲಾಸ್ಟಿಕ್ ಪಾರ್ಕ್‍ಗಳು’ ಎಂಬ ವಿಷಯದ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.  ನಿಗಧಿತ ಅವಧಿಯಲ್ಲಿ ಪೆಟ್ರೋರಾಸಾಯನಿಕ ಹೂಡಿಕೆ ಪ್ರದೇಶಗಳಲ್ಲಿ ರೂಪಾಯಿ 7,62,000 ಕೋಟಿ ಹೂಡಿಕೆಯನ್ನು ಗಳಿಸಿ ಸುಮಾರು 34 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವುದು ಮೋದಿ ಸರ್ಕಾರದ ಗುರಿ ಎಂದು ಸಚಿವರು ಸಭೆಯಲ್ಲಿ ತಿಳಿಸಿದರು.

 ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಪ್ಲಾಸ್ಟಿಕ್ ಪಾರ್ಕ್‍ಗಳ ಸಂಖ್ಯೆಯನ್ನು 4 ರಿಂದ 10ಕ್ಕೇರಿಸುವುದು ಮೋದಿ ಸರ್ಕಾರದ ಉಪಕ್ರಮಗಳಲ್ಲೊಂದು ಎಂದು ಸಚಿವರು ಸಲಹಾ ಸಮಿತಿ ಸದಸ್ಯರಿಗೆ ತಿಳಿಸಿದರು.  ಹೆಚ್ಚುವರಿ ಸಾಮಥ್ರ್ಯ ಸೃಷ್ಠಿಗಾಗಿ ಸಿಪೆಟ್ ( ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಇಂಜಿನಿಯರಿಂಗ್) ಗಳ ಸಂಖ್ಯೆಯನ್ನು 23 ರಿಂದ 100 ಕ್ಕೇರಿಸಲಾಗುವುದು ಎಂದು ಸಚಿವರು ತಿಳಿಸಿದರು.

 ಜೈವಿಕವಲ್ಲದ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸುವುದರ ಜತೆಗೆ  ಇತರ ಪಾಲಿಮರ್‍ಗಳ ಮರುಬಳಕೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಪ್ಲಾಸ್ಟಿಕ್ ಕೈಗಾರಿಕೆಯಲ್ಲಿ ಪರಿಸರ ಸ್ನೇಹಿ ಕ್ರಮಗಳನ್ನು ಪ್ರೋತ್ಸಾಹಿಸಲು ಪ್ಲಾಸ್ಟಿಕ್ ಪರಿಷ್ಕರಣೆಯಲ್ಲಿ ಹಸಿರು ತಂತ್ರಜ್ಞಾನ ಬಳಕೆಗೆ ಸರ್ಕಾರ ಪ್ರಶಸ್ತಿಗಳನ್ನು ನೀಡಲಿದೆ ಎಂದು ಸಚಿವ ಶ್ರೀ ಅನಂತ್ ಕುಮಾರ್ ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಸಚಿವರು ಸಂಸದರ ಹಲವು ಸಮಸ್ಯೆಗಳಿಗೆ ಸ್ಪಂದಿಸಿದರು. ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವ ಶ್ರೀ ಹನ್ಸ್‍ರಾಜ್ ಗಂಗಾರಾಮ್ ಅಹಿರ್ ಸಭೆಯಲ್ಲಿ ಉಪಸ್ಥಿತರಿದ್ದರು.  

No comments:

Post a Comment