Friday, 17 April 2015

ಮಂಡ್ಯ: ಬಯಲು ಮಲವಿಸರ್ಜನೆ ಸ್ಥಳಗಳಲ್ಲಿ ಸೀಟಿ ಹಾಕುವ ಮೂಲಕ ಬಯಲಲ್ಲಿ ಮಲ ವಿಸರ್ಜನೆ ಮಾಡುವುದನ್ನು ತಡೆಯಲು ಜಿಲ್ಲಾ ಪಂಚಾಯತ್ ಮುಂದಾಗಿದೆ. ಶುಕ್ರವಾರ (ಏ. 17) ಮುಂಜಾನೆ 5 ಗಂಟೆ ವೇಳೆಗೆ ಗ್ರಾಮ ಕಣ್ಗಾವಲು ಸಮಿತಿ ನೆರವಿನೊಂದಿಗೆ ಬಯಲಲ್ಲಿ ಸೀಟಿ ಹಾಕಲಿದ್ದಾರೆ.
ಇದಕ್ಕಾಗಿ ಒಟ್ಟು 15 ತಂಡಗಳನ್ನು ರಚಿಸಲಾಗಿದ್ದು, ಜಿಲ್ಲೆಯಾದ್ಯಂತ ಈ ತಂಡಗಳು ಸಂಚರಿಸಲಿವೆ. ಜಿಲ್ಲಾ ಪಂಚಾಯತ್ ಸಿಇಒ ರೋಹಿಣಿ ಸಿಂಧೂರಿ, ಉಪ ಕಾರ್ಯದರ್ಶಿ (ಆಡಳಿತ) ಎನ್.ಡಿ. ಪ್ರಕಾಶ್ ಸೇರಿದಂತೆ ಹಲವರ ನೇತೃತ್ವದಲ್ಲಿ ತಂಡಗಳು ಕಾರ್ಯ ನಿರ್ವಹಿಸಲಿವೆ.
ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಸಮಿತಿಯ ಸದಸ್ಯರು ಗ್ರಾಮದಲ್ಲಿ ಬಯಲು ಬಹಿದೆರ್ಸೆಗೆ ತೆರಳುವ ವ್ಯಕ್ತಿಗಳನ್ನು ಮನವೊಲಿಸಿ ಅವರನ್ನು ಶೌಚಾಲಯ ನಿರ್ಮಿಸಿಕೊಂಡು ಬಳಸುವಂತೆ ಒತ್ತಾಯಿಸಲಿದೆ.
ಸ್ವಚ್ಛ್ ಭಾರತ್ ಮಿಷನ್ (ಗ್ರಾಮೀಣ) ಅಡಿಯಲ್ಲಿ 2015ರ ಜುಲೈ ತಿಂಗಳಾಂತ್ಯಕ್ಕೆ ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿಸಲು ಮುಂದಾಗಿರುವ ಮಂಡ್ಯ ಜಿಲ್ಲಾ ಪಂಚಾಯತ್ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ.
‘ಸಕ್ಕರೆ ಜಿಲ್ಲೆ’ ಎನ್ನುವ ವಿಶೇಷಣ ಹೊಂದಿರುವ ಮಂಡ್ಯ ಜಿಲ್ಲೆ ‘ನಿರ್ಮಲ ಜಿಲ್ಲೆ’ ಎನ್ನುವ ಹೆಗ್ಗಳಿಕೆಗೂ ಪಾತ್ರ ಆಗಬೇಕು. ಅದು ಜಿಲ್ಲಾ ಪಂಚಾಯತ್ ಆಶಯವಾಗಿದ್ದು, ನಮ್ಮೊಂದಿಗೆ ಎಲ್ಲರೂ ಕೈಜೋಡಿಸಬೇಕು. ಸೀಟಿ ಹಾಕುವ ಮೂಲಕ ಯಾರಿಗೂ ಮುಜುಗರ ಮಾಡಬೇಕು ಎನ್ನುವುದು ಜಿಲ್ಲಾ ಪಂಚಾಯತ್ ಉದ್ದೇಶವಲ್ಲ ಎಂದು ಸಿಇಒ ರೋಹಿಣಿ ಸಿಂಧೂರಿ ಪ್ರತಿಕ್ರಿಯಿಸಿದ್ದಾರೆ.
ಸಿಇಒ ರೋಹಿಣಿ ಸಿಂಧೂರಿ ಅವರು , ಶುಕ್ರವಾರ (ಏ. 17) ಬೆಳಗಿನ ಜಾವಾ 6ಕ್ಕೆ ಮಂಡ್ಯ ತಾಲ್ಲೂಕಿನ ಹಳುವಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪುರ, ಹಳುವಾಡಿ, ತಗ್ಗಹಳ್ಳಿ ಗ್ರಾಮಗಳೂ ಸೇರಿದಂತೆ ಇನ್ನಿತರೆಡೆ ಸಂಚರಿಸಲಿದ್ದಾರೆ.

No comments:

Post a Comment