Wednesday 11 May 2016

ಶಾಲೆಗಳಲ್ಲಿ ಆರ್.ಟಿ.ಇ. ಪ್ರವೇಶ: ಹೆಚ್ಚುವರಿ ಶುಲ್ಕ ಪಡೆದರೆ ದೂರು ನೀಡಲು ಜಿಲ್ಲಾಧಿಕಾರಿ ಸೂಚನೆ


 ಶಾಲೆಗಳಲ್ಲಿ ಆರ್.ಟಿ.ಇ. ಪ್ರವೇಶ:
ಹೆಚ್ಚುವರಿ ಶುಲ್ಕ ಪಡೆದರೆ ದೂರು ನೀಡಲು ಜಿಲ್ಲಾಧಿಕಾರಿ ಸೂಚನೆ.
ಮಂಡ್ಯ, ಮೇ. 11. ಶಿಕ್ಷಣ ಹಕ್ಕು (ಆರ್.ಟಿ.ಇ.) ಕಾಯ್ದೆಯ ಅನ್ವಯ ಖಾಸಗಿ ಶಾಲೆಗಳು ಪ್ರವೇಶ ನೀಡಲು ನಿಗದಿಗಿಂತ ಹೆಚ್ಚು ಶುಲ್ಕ ಪಡೆದರೆ ದೂರು ನೀಡುವಂತೆ ಜಿಲ್ಲಾಧಿಕಾರಿ ಡಾ. ಅಜಯ್ ನಾಗಭೂಷಣ್ ಅವರು ಪೋಷಕರಿಗೆ ತಿಳಿಸಿದ್ದಾರೆ.
ಬುಧವಾರ ಜಿಲ್ಲಾಧಿಕಾರಿಗಳ ಗೃಹ ಕಚೇರಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು, ಆರ್‍ಟಿಇ ಪ್ರಕ್ರಿಯೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಪ್ರವೇಶಕ್ಕೆ ಸರ್ಕಾರ ನಿಗದಿಪಡಿಸಿದ ಶುಲ್ಕ ಮತ್ತಿತರ ವಿವರಗಳನ್ನು ಸೂಚನಾ ಫಲಕದಲ್ಲಿ ಪ್ರಕಟಿಸಲು ಎಲ್ಲಾ ಶಾಲೆಗಳಿಗೆ ಸೂಚನೆ ನೀಡುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು.
ರಸೀದಿ ಪಡೆಯದೇ ಪೋಷಕರು ಶುಲ್ಕ ಪಾವತಿಸಬಾರದು. ಹೆಚ್ಚುವರಿ ಶುಲ್ಕ ಪಾವತಿಯಾಗಿದ್ದಲ್ಲು ಹಣ ಹಿಂದಿರುಗಿಸಲು ಕ್ರಮವಹಿಸಲಾಗುವುದು ಎಂದು ಹೇಳಿದ ಅವರು ಶಾಲೆಗಳು ಸೂಕ್ತ ಪ್ರಾಧಿಕಾರದಿಂದ ಅನುಮತಿ ಪಡೆದಿರುವುದು, ಮಕ್ಕಳ ಸುರಕ್ಷತೆಗೆ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿರುವುದನ್ನು ಖಾತರಿ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಎಲ್ಲಾ ಶಾಲೆಗಳು ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸಬೇಕು. ಮಕ್ಕಳ ಪೋಷಕರ ಸಮಿತಿ ರಚಿಸಿರಬೇಕು. ಪರವಾನಿಗೆ ಪಡೆದ ಬೋಧನಾ ಮಾಧ್ಯಮ, ಪಠ್ಯ ಕ್ರಮ (ರಾಜ್ಯ ಅಥವಾ ಸಿ.ಬಿ.ಎಸ್.ಸಿ.)ದ ಬಗ್ಗೆ ಸೂಚನಾ ಫಲಕ ಪ್ರಕಟಿಸಬೇಕು. ವಿದ್ಯಾರ್ಥಿಗಳ ರಕ್ಷಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಪೋಷಕರು ತಿಳಿದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಿವಮಾದಪ್ಪ ಅವರು ಮಾತನಾಡಿ, ಜಿಲ್ಲೆಯಲ್ಲಿ 427 ಅನುದಾನ ರಹಿತ ಶಾಲೆಗಳು ಆರ್‍ಟಿಇ ವ್ಯಾಪ್ತಿಗೆ ಒಳಪಟ್ಟಿದ್ದು, ಒಟ್ಟು 2578 ಸ್ಥಾನಗಳ ಪ್ರವೇಶಾವಕಾಶ ಲಭ್ಯವಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆದಿದ್ದು, 3151 ಅರ್ಜಿಗಳು ಸಲ್ಲಿಕೆಯಾಗಿವೆ ಎಂದರು.
ಶಾಲಾ ವ್ಯಾಪ್ತಿಯ ಹಳ್ಳಿ ಹಾಗು ವಾರ್ಡ್‍ಗಳ ವಿದ್ಯಾರ್ಥಿಗಳು ಮಾತ್ರ ಈ ಕಾಯ್ದೆಯಡಿ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ. ವಿದ್ಯಾರ್ಥಿಗಳು ಆಯ್ಕೆಯಾಗಿದ್ದರೂ ಸಹ ಶಾಲೆ ಒಳಪಡುವ ಹಳ್ಳಿ ಅಥವಾ ವಾರ್ಡ್‍ಗಳಿಗೆ ಸೇರದಿದ್ದರೆ ಪ್ರವೇಶ ನಿರಾಕರಿಸಲಾಗುತ್ತದೆ ಎಂದು ಅವರು ಹೇಳಿದರು.
ಅನಧಿಕೃತ ಶಾಲೆಗಳು ಹಾಗೂ ಅನಧಿಕೃತ ತರಗತಿಗಳನ್ನು ನಡೆಸುತ್ತಿರುವ ಶಾಲೆಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಅಂತಹ ಶಾಲೆಗಳಿಗೆ ಮಕ್ಕಳನ್ನು ಸೇರಿಸಬಾರದು ಎಂದು ಪ್ರಚಾರ ಮಾಡಲಾಗುವುದು ಎಂದು ಶಿವಮಾದಪ್ಪ ಅವರು ಹೇಳಿದರು.
ಸಭೆಯಲ್ಲಿ ಎಲ್ಲಾ ಬ್ಲಾಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.
ಒ.ಟಿ.ಸಿ ಸಮೀಕ್ಷೆ : ಒಂದೇ ದಿನದಲ್ಲಿ ಆದಾಯ ಮತ್ತು ಜಾತಿ ಪ್ರಮಾಣ ಪತ್ರ
ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ಒಂದೇ ದಿನದಲ್ಲಿ ಪಡೆಯುವ ಉದ್ದೇಶಕ್ಕಾಗಿ ಒ.ಟಿ.ಸಿ ಸಮೀಕ್ಷೆ ನಡೆಯುತ್ತಿದ್ದು ಈ ಸಮೀಕ್ಷೆಗೆ ಸಾರ್ವಜನಿಕರು ಅವರ ರೇಷನ್ ಕಾರ್ಡ್, ಮನೆಯ ಸದಸ್ಯರ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಜಾತಿ ಬಗ್ಗೆ ದಾಖಲೆ ಇವುಗಳನ್ನು ಸಂಬಂಧಪಟ್ಟ ಗ್ರಾಮಲೆಕ್ಕಿಗರಿಗೆ ದಿನಾಂಕ:20-05-2016 ರೊಳಗೆ ತಲುಪಿಸಿ ನಿಮ್ಮ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಶಿಲ್ಕು ರೂ.15/-ಗಳನ್ನು ಪಾವತಿಸಿ ಒಂದೇ ದಿನದಲ್ಲಿ ಪಡೆಯಬಹುದು ಆದ್ದರಿಂದ ಸಾರ್ವಜನಿಕರು ದಿನಾಂಕ:20-5-2016 ರೊಳಗೆ ತಮ್ಮ ಗ್ರಾಮ ವ್ಯಾಪ್ತಿಯ ಗ್ರಾಮ ಲೆಕ್ಕಿಗರನ್ನು ಸಂಪರ್ಕಿಸಬೇಕು ಎಂದು ಮಂಡ್ಯ ತಾಲ್ಲೂಕು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಹಿರಂಗ ಹರಾಜು ಪ್ರಕಟಣೆ
ಸಹಾಯಕ ಪ್ರಾದೇಶಿಕ ಅಧಿಕಾರಿಗಳ ಕಛೇರಿ ನಾಗಮಂಗಲ ಇವರ ವಾಹನ ಸಂಖ್ಯೆ: ಕೆಎ21-ಎ-3555 (ಹೆಚ್ಪಿವಿ-ಬಸ್ಸು) ವಾಹನವನ್ನು ದಿನಾಂಕ:26-05-2016 ರಂದು ಶನಿವಾರ ಬೆಳಿಗ್ಗೆ 11.00 ಗಂಟೆಗೆ ಬೆಳ್ಳೂರು ಪೊಲೀಸ್ ಠಾಣೆಯ ಆವರಣದಲ್ಲಿ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲು ನಿರ್ಧರಿಸಲಾಗಿದೆ. ಆಸಕ್ತ ಬಿಡ್ಡುದಾರರು ಹರಾಜಿಗೆ ನಿಗದಿಪಡಿಸಿರುವ ದಿನಾಂಕದಂದು ಬೆಳಿಗ್ಗೆ 10.30 ಗಂಟೆಗೆ ಹರಾಜು ಸ್ಥಳಕ್ಕೆ ಆಗಮಿಸಿ ರೂ.5,000/- ಇಒಆ ಮೊತ್ತ ಪಾವತಿಸಿ ಹರಾಜು ಟೋಕನ್ ಪಡೆಯಲು ತಿಳಿಸಲಾಗಿದೆ, ಹರಾಜಿನಲ್ಲಿ  ವಾಹನ ಖರೀದಿಸಿದ ಬಿಡ್ಡುದಾರರು ಸ್ಥಳದಲ್ಲೆ ಹರಾಜಿನ ಶೇ.25 ರಷ್ಟು ಹಣವನ್ನು ಪಾವತಿಸಬೇಕಾಗುತ್ತದೆ ಉಳಿದ ಮೊತ್ತವನ್ನು ಹರಾಜು ನಡೆದ ಮೂರು ದಿನಗಳ ಒಳಗಾಗಿ ಪಾವತಿಸಬೇಕಾಗುತ್ತದೆ. ವ್ಯಾಟ್ ಅನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗೆ ಸಹಾಯಕ ಪ್ರಾದೇಶಿಕ ಅಧಿಕಾರಿಗಳ ಕಛೇರಿ, ಕೆ.ಮಲ್ಲೇನಹಳ್ಳಿ, ಕೆ.ಆರ್.ಪೇಟೆ ರಸ್ತೆ ನಾಗಮಂಗಲ, ಮಂಡ್ಯ ಜಿಲ್ಲೆ, ದೂರವಾಣಿ ಸಂಖ್ಯೆ:08234-285598 ಅನ್ನು ಸಂಪರ್ಕಿ¸ಸಿ.

No comments:

Post a Comment