Monday 7 March 2016

ವಿಶ್ವ ದಂತ ವೈದ್ಯರ ದಿನದ ಅಂಗವಾಗಿ ಸಾರ್ವಜನಿಕರಿಗೆ ಉಚಿತ ದಂತ ಆರೋಗ್ಯ ತಪಾಸಣೆ ಶಿಬಿರ

ಮಂಡ್ಯ: ಭಾರತ ದೇಶ ಅಭಿವೃದ್ಧಿಪಥದತ್ತ ಮುನ್ನುಗ್ಗುತ್ತಿದೆ. ಆದರೆ ಇಂದಿಗೂ ಬಡಜನರಿಗೆ ಸರಿಯಾದ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಮಿಮ್ಸ್‍ನ ದಂತ ವೈದ್ಯ ಡಾ.ಶಿವಕುಮಾರ್ ವಿಷಾದ ವ್ಯಕ್ತಪಡಿಸಿದರು.
ನಗರದ ಹಾಲಹಳ್ಳಿ ಸ್ಪಂ ಬೋರ್ಡ್ ಶಾಲೆ ಆವರಣದಲ್ಲಿ ಮಿಮ್ಸ್‍ನ ದಂತ ಚಿಕಿತ್ಸಾ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ನಡೆದ ವಿಶ್ವ ದಂತ ವೈದ್ಯರ ದಿನದ ಅಂಗವಾಗಿ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ದಂತ ಆರೋಗ್ಯ ತಪಾಸಣೆ ಶಿಬಿರ, ಉಪನ್ಯಾಸ ಹಾಗೂ ದಂತ ಶುಚಿತ್ವ ಪರಿಕರಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿಯೊಬ್ಬರೂ ದಂತಗಳ ಸಂರಕ್ಷಣೆ ಮಾಡಿಕೊಳ್ಳಬೇಕು. ಮೂರು ತಿಂಗಳಿಗೊಮ್ಮೆ ಚಿಕಿತ್ಸೆ ಪಡೆಯುವುದರಿಂದ ದಂತಗಳಲ್ಲಿ ಕಂಡು ಬರುವ ದೋಷಗಳನ್ನು ನಿವಾರಿಸಿಕೊಳ್ಳಬಹುದು. ದಂತಗಳ ಆರೋಗ್ಯ ರಕ್ಷಣೆಗೆ ಹೆಚ್ಚು ಮಹತ್ವ ನೀಡಬೇಕು ಎಂದು ಕರೆ ನೀಡಿದರು.
ದಂತ ಸ್ವಚ್ಛ ವಿಧಾನ ಕೇವಲ 2 ರಿಂದ 4 ನಿಮಿಷಗಳಲ್ಲಿ ಮುಗಿಸಬೇಕು. ಹೆಚ್ಚು ಹೊತ್ತು ಹಲ್ಲುಗಳನ್ನು ಉಜ್ಜುವುದರಿಂದ ಹೊಸಡುಗಳು ಸವೆದು ಹಲ್ಲಿನ ಆಯಸ್ಸು ಕ್ಷೀಣಿಸುತ್ತದೆ. ಇದರ ಬಗ್ಗೆ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಹೇಳಿದರು.
ದಂತಗಳಿಂದ ಮುಖದ ಸೌಂದರ್ಯವೂ ಹೆಚ್ಚುತ್ತದೆ. ಆದ್ದರಿಂದ ಹಲ್ಲುಗಳ ರಕ್ಷಣೆಗೆ ಒತ್ತು ನೀಡಬೇಕು ಎಂದು ಹೇಳಿದರು.
ಶಿಬಿರದಲ್ಲಿ 300ಕ್ಕೂ ಹೆಚ್ಚು ಜನರಿಗೆ ತಪಾಸಣೆ ಹಾಗೂ ಪರಿಕರಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಡಾ.ಶೋಭಾ, ಡಾ.ಸುಭಾಷ್, ಡಾ.ಶಶಿಧರ್, ಡಾ.ನಳಿನ, ಎಸ್.ಎಂ.ಸುರೇಶ್ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮಂಡ್ಯ: ಜಿಲ್ಲೆಯ ಬಹುತೇಕ ಟಿಎಪಿಸಿಎಂಎಸ್‍ಗಳಿಗೆ ಸರ್ಕಾರದಿಂದ ಬರಬೇಕಾದ ಸಬ್ಸಿಡಿ ಹಣ ಸಕಾಲಕ್ಕೆ ತಲುಪದೆ ನಷ್ಟವನ್ನು ಅನುಭವಿಸುವ ಪರಿಸ್ಥಿತಿ ಎದುರಾಗಿದೆ ಎಂದು ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿ.ಡಿ.ಹರೀಶ್ ಹೇಳಿದರು.
ನಗರದ ಜಿಲ್ಲಾ ಸಹಕಾರ ಒಕ್ಕೂಟದ ಸಭಾಂಗಹಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಸಹಕಾರ ಇಲಾಖೆ ವತಿಯಿಂದ ನಡೆದ ಮಂಡ್ಯ ಜಿಲ್ಲೆಯಲ್ಲಿ ಬರುವ ಎಲ್ಲ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರುಗಳಿಗೆ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲ ಟಿಎಪಿಸಿಎಂಎಸ್‍ಗಳಲಿ ಹಲವಾರು ನಿರ್ದೇಶಕರುಗಳು ಹೊಸದಾಗಿ ಆಯ್ಕೆಗೊಂಡಿದ್ದು, ಇದರಲ್ಲಿ ಹೆಚ್ಚಿನ ಜನ ನಿರ್ದೇಶಕರು ಮೊದಲ ಬಾರಿಗೆ ಸಹಕಾರಿ ರಂಗವನ್ನು ಪ್ರವೇಶಿಸಿದ್ದಾರೆ. ಆದ್ದರಿಂದ ಇಂತಹ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿರುವುದ ಸೂಕ್ತ ಎಂದರು.
ಸರ್ಕಾರದಿಂದ ಬರುವ ಸಬ್ಸಿಡಿ ಹಣ ಸರಿಯಾದ ಕಾಲಕ್ಕೆ ಬರದೆ ಇರುವುದರಿಂದ ಟಿಎಪಿಸಿಎಂಎಸ್‍ಗಳು ನಷ್ಟ ಅನುಭವಿಸುತ್ತಿದ್ದು, ಇದರಿಂದ ನೌಕರರಿಗೂ ಸಂಬಳ ಸಕಾಲಕ್ಕೆ ನೀಡಲಾಗುತ್ತಿಲ್ಲ ಎಂದು ಹೇಳಿದರು.
ಎಲ್ಲ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಇದರ ಬಗ್ಗೆ ಚರ್ಚೆ ನಡೆಸಿ ಮನವಿ ತಯಾರಿಸಿ ನಿಯೋಗದೊಂದಿಗೆ ಶಾಸಕರು, ಮಂತ್ರಿಗಳಿಗೆ ಮನವಿ ಸಲ್ಲಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು. ಕನಿಷ್ಠ 2 ತಿಂಗಳಿಗೊಮ್ಮೆ ಸಭೆ ಸೇರಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಟಿ.ನಾರಾಯಣ್, ಸಹಕಾರ ಸಂಘಗಳ ಉಪನಿಬಂಧಕರ ಬಿ.ಆರ್.ಕೃಷ್ಣಮೂರ್ತಿ, ಎಸ್.ನಾಗೇಂದ್ರ, ಶ್ರೀಧರ್, ಎಚ್.ಕೆ.ಕೃಷ್ಣೇಗೌಡ, ಶಂಕರೇಗೌಡ, ಎಂ.ಕೆ.ಸುಂದರಪ್ಪ, ಕೆ.ಎಲ್.ಶಿವರಾಜು, ಎ.ಎಂ.ಪ್ರಕಾಶ್, ಜಯಶೀಲಮ್ಮ ಉಪಸ್ಥಿತರಿದ್ದರು.

No comments:

Post a Comment