Thursday 5 February 2015

ಫೆ.9 ರಂದು ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಪೈಲೆಟ್್ ಸರ್ವೆ

ಮೈಸೂರು,ಫೆ.6-ಮೈಸೂರು ಜಿಲ್ಲೆಯಲ್ಲಿ    ಏಪ್ರಿಲ್ 11 ರಿಂದ 30 ರವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ. ಸಮೀಕ್ಷೆಯನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಿಂದ ಫೆಬ್ರವರಿ 9 ರಂದು ಸಿದ್ದರಾಮಯ್ಯನಹುಂಡಿ ಹಾಗೂ ಸರಸ್ವತಿಪುರಂನಲ್ಲಿರುವ ವಾರ್ಡ್ ನಂ 20 ರಲ್ಲಿ ಪೈಲೆಟ್ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳಲಾಗುವುದು ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಫೆಬ್ರವರಿ 9 ರಂದು  ನಡೆಯುವ ಮಾದರಿ ಸಮೀಕ್ಷೆಯಲ್ಲಿ ಯಾವುದೇ ತೊಂದರೆ ಇದ್ದಲ್ಲಿ ಅದನ್ನು ಸರಿಪಡಿಸಿ ಏಪ್ರಿಲ್ 11 ರಿಂದ ಸಮೀಕ್ಷೆ ಕೈಗೊಳ್ಳಲಾಗುವುದು ಎಂದರು.
ಜಾತಿ, ಉಪಜಾತಿ, ಆಧಾರ್‍ಕಾರ್ಡ್, ವಿವಾಹ, ಧರ್ಮ ಇತ್ಯಾದಿ ವಿಷಯಗಳ ಬಗ್ಗೆ 55 ಪ್ರಶ್ನೆಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದು ಗಣತಿದಾರರು ನಮೂನೆ 3ನ್ನು ಭರ್ತಿ ಮಾಡಬೇಕಿರುತ್ತದೆ. ಈ ಪ್ರಶ್ನಾವಳಿಗಳಿಗೆ ಯಾವುದೇ ಗೊಂದಲ್ಲವಿಲ್ಲದೆ ಮಾಹಿತಿ ನೀಡುವ ರೀತಿ ಸಿದ್ದಪಡಿಸಲಾಗಿದೆ. ಗಣತಿದಾರರು ಅವರಿಗೆ ನೀಡುವ  ಕೈಪಿಡಿಯನ್ನು ಸಂಪೂರ್ಣವಾಗಿ ಓದಿಕೊಂಡರೆ   ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದರು.
ಹಿಂದುಳಿದ ವರ್ಗದ ಆಯೋಗದಿಂದ 1357 ಜಾತಿಗಳ ಪಟ್ಟಿ ಮಾಡಲಾಗಿದೆ ಈ ಪಟ್ಟಿ ಅಂತಿಮವಾದ ಅಥವಾ ಅಧಿಕೃತ ಪಟ್ಟಿಯಲ್ಲ.  ಸಂಪೂರ್ಣ ಸಮೀಕ್ಷೆಯ ನಂತರ  ಜಾತಿಯ ಪಟ್ಟಿಯಲ್ಲಿ ಏರಿಕೆ ಅಥವಾ ಇಳಿಕೆಯಾಗಬಹುದು. ಕೈಪಿಡಿಯಲ್ಲಿ ಜಾತಿಯ ಹೆಸರು ಮತ್ತು ಕೋಡ್ ಇಲ್ಲದಿದ್ದರೆ ಅದಕ್ಕೆ ಸಮೀಕ್ಷೆ ಮುಗಿದ ನಂತರ ಹೊಸ ಕೋಡ್ ನೀಡಲು ಅವಕಾಶ ಕಲ್ಪಿಸಲಾಗುವುದು ಎಂದರು.
ಗಣತಿದಾರರು ಪ್ರತಿ ಮನೆಗೆ ಭೇಟಿ ನೀಡಿ ಮನೆಯ ಅಧಿಕೃತ ವ್ಯಕ್ತಿಯಿಂದ ಮಾಹಿತಿ ಹಾಗೂ ಸಹಿ ಪಡೆಯಬೇಕು. ಬೇರೆಯವರಿಂದ ಮಾಹಿತಿ ಪಡೆಯುವುದು ಕಂಡುಬಂದರೆ ಗಣತಿದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಗಣತಿದಾರರು ಸಮೀಕ್ಷೆ ನಡೆಸುವಾಗ ಮನೆಯ ಅಧಿಕೃತ ವ್ಯಕ್ತಿಯೊಂದಿಗೆ ಅಕ್ಕ ಪಕ್ಕದ ಮನೆಯವರನ್ನು ಸೇರಿಸಿಕೊಂಡರೆ ಸಮೀಕ್ಷೆಯ ಮಾಹಿತಿಯನ್ನು ಸರಿಯಾಗಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಗುಂಪು ಮಾಡಿಕೊಂಡು ಮಾಹಿತಿ ಪಡೆಯಬಾರದು ಎಂದರು.
ಗಣತಿದಾರರು ಪ್ರಶ್ನಾವಳಿಗಳಿಗೆ ಸಾರ್ವಜನಿಕರಿಂದ ಕೋಡ್‍ನ ಮೂಲಕ ಉತ್ತರ ಪಡೆಯಬಾರದು. ಅವರಿಂದ ಮಾಹಿತಿ ಪಡೆದ ನಂತರ ಕೈಪಿಡಿಯಲ್ಲಿ ನೀಡಿರುವ ಕೋಡ್‍ಗಳನ್ನು ತಿಳಿದುಕೊಂಡು ನಮೂನೆ ಭರ್ತಿ ಮಾಡಬೇಕು ಎಂದರು.
ಚಾರ್ಚ್ ಅಧಿಕಾರಿಗಳಿಂದ ಅವರ ವ್ಯಾಪ್ತಿಗೆ ಸಂಬಂಧಿಸಿದಂತೆ ಗಣತಿದಾರರು ಹಾಗೂ ಮೇಲ್ವಿಚಾರಕರ ನೇಮಕಾತಿಯ ಬಗ್ಗೆ ಮಾಹಿತಿ ಪಡೆದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಿ. ಶಿಖಾ, ಅಪರ ಜಿಲ್ಲಾಧಿಕಾರಿ ಅರ್ಚನ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎ.ಗೋಪಾಲ್, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಸೋಮಶೇಖರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

No comments:

Post a Comment