Friday 19 May 2017

‘ಅಂತರರಾಷ್ಟ್ರೀಯ ಗಮನ ಸೆಳೆಯಲು 50 ಸಾವಿರಕ್ಕೂ ಹೆಚ್ಚು ಜನರಿಂದ ಯೋಗಾಸನ’

‘ಅಂತರರಾಷ್ಟ್ರೀಯ ಗಮನ ಸೆಳೆಯಲು 50 ಸಾವಿರಕ್ಕೂ ಹೆಚ್ಚು ಜನರಿಂದ ಯೋಗಾಸನ’
     ಮೈಸೂರು.ಮೇ.19. ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗಾ ದಿನಾಚರಣೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತೆ ಹಾಗೂ ಯೋಗಾ ರಾಜಧಾನಿಯಾಗಿ ಮೈಸೂರನ್ನು ಬಿಂಬಿಸುವ ರೀತಿಯಲ್ಲಿ ಆಚರಿಸಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ರಂದೀಪ್ ಡಿ. ಅವರು ತಿಳಿಸಿದರು.
    ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಯೋಗಾ ದಿನಾಚರಣೆ ಆಚರಿಸುವ ಸಂಬಂಧ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಯೋಗಾಸಾನ ತರಬೇತಿ ನೀಡುವ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಸಿ 50 ಸಾವಿರಕ್ಕೂ ಹೆಚ್ಚು ಜನ ಏಕಕಾಲದಲ್ಲಿ ಯೋಗಾ ದಿನಾಚರಣೆಯ ಯೋಗಾಭ್ಯಾಸದಲ್ಲಿ ಭಾಗವಹಿಸುವಂತೆ ಸಂಘಟಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಮೈಸೂರಿನಲ್ಲಿ ಯೋಗಾ ತರಬೇತಿ ನಡೆಸುವ ಹಲವಾರು ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಸಭೆಯಲ್ಲಿ ಭಾಗವಹಿಸಿ ಈ ಬೃಹತ್ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಭರವಸೆ ನೀಡಿದವು. ಪ್ರವಾಸೋದ್ಯಮ ಇಲಾಖೆ, ಆಯುಷ್ ಇಲಾಖೆ, ನೆಹರೂ ಯುವಕೇಂದ್ರ, ಯೋಗಾ ಮತ್ತು ಪ್ರಕೃತಿ ಚಿಕಿತ್ಸೆ ಮಹಾವಿದ್ಯಾಲಯ ಮುಂತಾದ ಸಂಸ್ಥೆಗಳು ಜಿಲ್ಲಾಡಳಿತದ ಜೊತೆ ಕೈಜೋಡಿಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
    ಯೋಗಾ ದಿನಾಚರಣೆಗೆ ಅರಮನೆ ಆವರಣವನ್ನು ಕೇಂದ್ರವಾಗಿಟ್ಟುಕೊಂಡು  ಸಂಘಟಿಸಲಾಗುತ್ತಿದ್ದು ಇಲ್ಲಿ ಸುಮಾರು 10 ಸಾವಿರ ಜನ  ಯೋಗಾಸಾನ ಮಾಡಬಹುದಾಗಿದೆ. ಉಳಿದವರಿಗೆ ಅರಮನೆ ಆಸು-ಪಾಸಿನ ಸಾರ್ವಜನಿಕ ಸ್ಥಳಗಳಲ್ಲಿ ಕೋಟೆ ಆಂಜನೇಸ್ವಾಮಿ ದೇವಸ್ಥಾನದ ಮುಂಭಾಗ, ರಾಜಪಥ ರಸ್ತೆ, ದೇವರಾಜ ಅರಸು ರಸ್ತೆ ಮುಂತಾದ ಸ್ಥಳಗಳಲ್ಲಿ ಸ್ಥಳಾವಕಾಶ ಕಲ್ಪಿಸಲಾಗುತ್ತದೆ. ಧ್ವನಿವರ್ಧಕ ವ್ಯವಸ್ಥೆ ಮಾಡಲಾಗಿದ್ದು, ಮಾರ್ಗದರ್ಶಕರು ನೀಡುವ ಸೂಚನೆಗಳು ಎಲ್ಲಾ ಸ್ಥಳಗಳಲ್ಲೂ ಧ್ವನಿಸಲಿದೆ ಎಂದರು.
    ಖಾಸಗಿ ಹಾಗೂ ಸರ್ಕಾರಿ ಶಾಲಾ/ ಕಾಲೇಜು ವಿದ್ಯಾರ್ಥಿಗಳು, ಎನ್.ಎನ್.ಎಸ್., ಎನ್.ಸಿ.ಸಿ. ಕೆಡೆÀಟ್‍ಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರು ಸಹ ಭಾಗವಹಿಸಲು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
     ಭಾಗವಹಿಸುವವರು ಬಿಳಿವಸ್ತ್ರ ಧರಿಸಿದರೇ ಸೂಕ್ತ. ಯೋಗಾ ಶಾಲೆಗಳಲ್ಲಿ ಬೇರೆ ಬಣ್ಣದ ಸಮವಸ್ತ್ರವಿದ್ದರೆ ಅದಕ್ಕೂ ಅವಕಾಶ ಕಲ್ಪಿಸಲಾಗುವುದು. ಕಾರ್ಪೆಟ್ ವ್ಯವಸ್ಥೆ ಇರುತ್ತದೆ. ಭಾಗವಹಿಸುವವರು ಶಿಷ್ಟಾಚಾರದಂತೆ ಯೋಗಾಭ್ಯಾಸ ಮಾಡಬೇಕಾಗುವುದರಿಂದ ಅವರಿಗೆ ಮುಂಚಿತವಾಗಿ ಒಂದು ವಾರಗಳ ಕಾಲ ತರಬೇತಿ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದರು.
     ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಜರ್ನಾಧನ್, ಜಿಲ್ಲಾ ಆಯುಷ್ ಅಧಿಕಾರಿ ಡಾ||  ಸೀತಾಲಕ್ಷ್ಮಿ, ನೆಹರೂ ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ನಟರಾಜು, ಆಹಾರ ಇಲಾಖೆಯ ಹಿರಿಯ ಉಪನಿರ್ದೇಶಕ ಡಾ|| ಕಾ. ರಾಮೇಶ್ವರಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಹೆಚ್.ಆರ್. ಬಸಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ ಹಾಗೂ  ವಿವಿಧ ಇಲಾಖೆಯ ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳು, ಪ್ರತಿನಿಧಿಗಳು ಭಾಗವಹಿಸಿದ್ದರು.
(ಛಾಯಾಚಿತ್ರ ಲಗತ್ತಿಸಿದೆ).

ಪ್ರವಾಸ ಕಾರ್ಯಕ್ರಮ
     ಮೈಸೂರು.ಮೇ.19:- ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ|| ಹೆಚ್.ಸಿ. ಮಹದೇವಪ್ಪ ಅವರು ಮೇ  20 ಹಾಗೂ 21 ರಂದು ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
    ಮೇ 20 ರಂದು 11 ಗಂಟೆಗೆ ಸರ್ಕಾರಿ ಅತಿಥಿಗೃಹದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಜೊತೆ ಜನತಾ ದರ್ಶನ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮೈಸೂರು ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ನಡೆಯಲಿದೆ ಹಾಗೂ ಸಾರ್ವಜನಿಕರ ಭೇಟಿ ಕುಂದು ಕೊರತೆಗಳ ವಿಚಾರಣೆಯಲ್ಲಿ ಭಾಗವಹಿಸಿ ನಂತರ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
    ಮೇ 21 ರಂದು ಸಂಜೆ 4 ಗಂಟೆಗೆ ಜೆ.ಎಲ್.ಬಿ. ರಸ್ತೆಯಲ್ಲಿರುವ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಹಿಮಾ ಪ್ರಕಾಶನ ಇವರ ಸಹಯೋಗದೊಂದಿಗೆ ಬಿ. ಶ್ಯಾಮಸುಂದರ ಅವರ “ಸುದ್ದಿಗೆ ಬೆಳೆದ ಕೈ ಕಾಲುಗಳು”,  “ಶಂಕ್ರುಕಟ್ಟೆ” ಕಥಾ ಸಂಕಲನ ಮತ್ತು  “ಹೆಣ್ಣು ಬೇಕು ಹೆಣ್ಣು” ಪ್ರಬಂಧ ಸಂಕಲನದ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 6 ಗಂಟೆಗೆ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 7 ಗಂಟೆಗೆ ಮೈಸೂರಿನಿಂದ ಬೆಂಗಳೂರಿಗೆ ತೆರಳುವರು.

ಪ್ರವಾಸ ಕಾರ್ಯಕ್ರಮ
     ಮೈಸೂರು.ಮೇ.19. ಕೇಂದ್ರ ನಗರಾಭಿವೃದ್ಧಿ, ವಸತಿ, ನಗರ ಬಡತನ ನಿರ್ಮೂಲನೆ ಹಾಗೂ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾದ ವೆಂಕಯ್ಯ ನಾಯ್ಡು ಅವರು ಮೇ 21 ರಂದು ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
      ಅಂದು ಮಧ್ಯಾಹ್ನ 3-45ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಸಂಜೆ 4 ಗಂಟೆಗೆ ಹೋಟೆಲ್ ಪ್ರೆಸಿಡೆಂಟ್ ನಲ್ಲಿ ಆಯೋಜಿಸಿರುವ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 5-15ಕ್ಕೆ ಶ್ರೀ  ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು.  ಸಂಜೆ 7-30 ಗಂಟೆಗೆ ಮೈಸೂರು ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ ತೆರಳುವರು.

ಮೇ 26 ರಿಂದ 29 ರವರೆಗೆ ಕೌನ್ಸಿಲಿಂಗ್
     ಮೈಸೂರು.ಮೇ.19.(ಕರ್ನಾಟಕ ವಾರ್ತೆ):- ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ/ ಏಕಲವ್ಯ ಮಾದರಿ/ ಡಾ|| ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ/ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಪ್ರವೇಶ ಪರೀಕ್ಷೆಯ ಫಲಿತಾಂಶವು ದಿನಾಂಕ 15-05-2017 ರಂದು ಪ್ರಕಟಗೊಂಡಿರುತ್ತದೆ.
     ಕೌನ್ಸಿಲಿಂಗ್‍ಗೆ ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ಸಹ ಪ್ರಕಟಿಸಲಾಗಿದೆ. ತಾಲ್ಲೂಕಿನ ಎಲ್ಲಾ ಬಿ.ಇ.ಒ ಕಚೇರಿ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರುಗಳ ಕಚೇರಿಗಳು ಹಾಗೂ ವಸತಿ ಶಾಲೆಗಳಲ್ಲಿ ಪ್ರಕಟಿಸಲಾಗಿದೆ.
     ಜಿಲ್ಲಾ ಮಟ್ಟದ ಕೌನ್ಸಿಲಿಂಗ್ ದಿನಾಂಕ 26-05-2017 ರಿಂದ 29-05-2017 ರವರೆಗೆ ನಡೆಯಲಿದ್ದು, ಮೆರಿಟ್ ಮತ್ತು ಪ್ರವರ್ಗವಾರು ನಡೆಯುವ ಕೌನ್ಸಿಲಿಂಗ್  ದಿನಾಂಕ ಈ ಕೆಳಕಂಡಂತೆ ಇರುತ್ತದೆ.
     ಜಂಟಿ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಡಾ|| ಬಾಬು ಜಗಜೀವನರಾಂ ಭವನದ ಕಟ್ಟಡ, ಆದಿಪಂಪ ರಸ್ತೆ, ನಾರಾಯಣಸ್ವಾಮಿ ಬ್ಲಾಕ್, ಪಡುವಾರಹಳ್ಳಿ ಪೂರ್ವ ಬಡಾವಣೆ, ಮೈಸೂರು ಇಲ್ಲಿ  ಮೇ 26 ರಂದು ಪರಿಶಿಷ್ಟ ಜಾತಿ ಬಾಲಕಿಯರು, ಮೇ 27 ರಂದು ಪರಿಶಿಷ್ಟ ಜಾತಿ  ಹಾಗೂ  ಪರಿಶಿಷ್ಟ ವರ್ಗದ ಬಾಲಕರು, ಮೇ 28 ರಂದು ಪರಿಶಿಷ್ಟ ವರ್ಗ ಬಾಲಕಿಯರು ಹಾಗೂ ಪ್ರವರ್ಗ-1, 2ಎ, 2ಬಿ ವರ್ಗದ ಬಾಲಕರು ಹಾಗೂ ಬಾಲಕಿಯರು ಹಾಗೂ ಮೇ 29 ರಂದು 3ಎ, 3ಬಿ ಹಾಗೂ ಕಾಯ್ದಿರಿಸಿದ ವಿದ್ಯಾರ್ಥಿಗಳು, ಬಾಲಕರು ಹಾಗೂ ಬಾಲಕಿಯರಿಗೆ ಕೌನ್ಸಿಲಿಂಗ್ ನಡೆಯಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಣ್ಣದ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್ ಬಳಸಿದರೇ ಕ್ರಿಮಿನಲ್ ಮೊಕದ್ದಮೆ
      ಮೈಸೂರು.ಮೇ.19. ಪರಿಸರ ಸ್ನೇಹಿ ಗೌರಿ ಗಣೇಶ ಹಬ್ಬ ಆಚರಣೆ ಸಂಬಂಧ  ಪ್ಲಾಸ್ಟರ್ ಆಫ್ ಪ್ಯಾರೀಸ್ ಹಾಗೂ ವಿಷಕಾರಿ ರಸಾಯನಿಕ ಬಣ್ಣ ಬಳಸಿ ತಯಾರಿಸಿರುವ ಗಣೇಶ ಮೂರ್ತಿಗಳನ್ನು  ಬಳಸದಂತೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಜಿ. ಜಗದೀಶ್ ಅವರು ಮನವಿ ಮಾಡಿದ್ದಾರೆ.
     ವಿಷಕಾರಿ ರಾಸಾಯನಿಕ, ಲೋಹ ಲೇಪದ, ಪ್ಲಾಸ್ಟರ್ ಆಫ್ ಪ್ಯಾರೀಸ್‍ನ ಗಣೇಶನ ಮೂರ್ತಿ ಬಳಕೆ ಮಾಡಬೇಡಿ. ಸಾದಾ ಜೇಡಿ ಮಣ್ಣಿನ ಮುದ್ದಾದ ಪುಟ್ಟ ಗಣೇಶ ವಿಗ್ರಹವನ್ನು ಸ್ಥಾಪಿಸಿ, ಎಲೆ, ಹೂವುಗಳಿಂದ ಮಾಡಿದ ನೈಸರ್ಗಿಕ ಬಣ್ಣ ಹಚ್ಚಿದ ಗಣಪನನ್ನೇ ಪೂಜಿಸಿ ಎಂದು ಅವರು ಮನವಿ ಮಾಡಿದ್ದಾರೆ.
      ಸಾಮೂಹಿಕವಾಗಿ ನಡೆಸುವ ಗಣೇಶನ ಚಪ್ಪರಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಿ, ಎಲ್ಲೂ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡಬೇಡಿ, ಬಾವಿ, ಕೆರೆ, ಹೊಳೆಗಳಲ್ಲಿ ಗಣಪತಿ ವಿಸರ್ಜನೆ ಮಾಡಬೇಡಿ. ಹಾಗೆ ಮಾಡಿದರೆ ಅಂತರ್ಜಲ, ಕುಡಿಯುವ ನೀರಿನ ಸೆಲೆ-ಎಲ್ಲವೂ ಮಲಿನಗೊಳ್ಳುತ್ತವೆ. ಬದಲಿಗೆ ಬಕೆಟ್‍ನಲ್ಲಿ, ಸಂಚಾರಿ ವಿಸರ್ಜನಾ ವಾಹನದಲ್ಲಿ ವಿಸರ್ಜಿಸಿ, ಸೂಚಿತ ಕೆರೆಗಳಲ್ಲಿ ವಿಸರ್ಜಿಸುವ ಮುನ್ನ ಹೂವು, ವಸ್ತ್ರ, ಪ್ಲಾಸ್ಟಿಕ್ ಹಾರ ಎಲ್ಲವನ್ನೂ ತೆಗೆಯಿರಿ, ಗಣಪತಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸಬೇಡಿ. ಪಟಾಕಿಯ ಹೊಗೆ ವಿಷಪೂರಿತ; ಅಲ್ಲದೆ ರಸ್ತೆ ತುಂಬಾ ಕಸವಾಗುತ್ತದೆ. ಗಣೇಶ ಹಬ್ಬದಲ್ಲಿ ರಸ್ತೆ, ಚರಂಡಿಯಲ್ಲಿ ಹೂವಿನ ಹಾರ, ತಟ್ಟೆ, ಲೋಟ, ಎಲೆ ಎಸೆಯಬೇಡಿ. ಕಸದ ವಾಹನ ಬಳಸುವಂತೆ ಅವರು ತಿಳಿಸಿದ್ದಾರೆ.
        ಗಣೇಶ ಮತ್ತು ಗೌರಿ ಮೂರ್ತಿಗಳನ್ನು ಸಿದ್ದಪಡಿಸುವವರು / ತಯಾರಿಸುವವರು / ಮಾರಾಟ ಮಾಡುವವರು ವಿಷಪೂರಿತ, ರಾಸಾಯನಿಕವುಳ್ಳ ಬಣ್ಣ ಮತ್ತು ಪ್ಲಾಸ್ಟರ್ ಆಫ್ ಪ್ಯಾರೀಸ್ ಅನ್ನು ಮೂರ್ತಿಗಳ ತಯಾರಿಕೆಗೆ ಉಪಯೋಗಿಸಬಾರದು. ಒಂದು ವೇಳೆ ಈ ರೀತಿಯ ಮೂರ್ತಿಗಳನ್ನು ತಯಾರಿಸುವುದಾಗಲೀ / ಮಾರಾಟ ಮಾಡುವುದಾಗಲೀ / ಉಪಯೋಗಿಸುವುದಾಗಲೀ ಕಂಡು ಬಂದರೆ ಅಂತಹ ಮೂರ್ತಿಗಳನ್ನು ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಜಪ್ತಿ ಮಾಡಿ ದಂಡ ವಿಧಿಸಲಾಗುವುದು ಹಾಗೂ ಸಂಬಂಧಪಟ್ಟವರ ವಿರುದ್ದ ಕ್ರಿಮನಲ್ ಮೊಕದಮೆ ಹೂಡಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
     ನಗರದಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್‍ನಲ್ಲಿ ತಯಾರಿಸಿದ ಗೌರಿ, ಗಣೇಶ ಮೂರ್ತಿಗಳನ್ನು ಮಾರಾಟ ಮಾಡುವುದನ್ನು ತಡೆಗಟ್ಟುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರುತ್ತದೆ. ಇದರೊಂದಿಗೆ ನಗರವನ್ನು ಪರಿಸರ ಪ್ರೇಮಿನಗರ, ಸ್ವಚ್ಛನಗರ ಎಂಬ ಗರಿಮೆಯನ್ನು ಕಾಪಾಡಬೇಕಾಗಿರುತ್ತದೆ ಅವರು ಮನವಿ ಮಾಡಿದ್ದಾರೆ.

No comments:

Post a Comment