Thursday 14 April 2016

ಉಪನ್ಯಾಸಕರ ಮೌಲ್ಯಮಾಪನ ಬಹಿಷ್ಕಾರ ಅರ್ಥಮಾಡಿಕೊಳ್ಳಿ -ಹೊಳಲು ಶ್ರೀಧರ್

ಉಪನ್ಯಾಸಕರ ಮೌಲ್ಯಮಾಪನ ಬಹಿಷ್ಕಾರ ಅರ್ಥಮಾಡಿಕೊಳ್ಳಿ
‘ಹಿರಿಯ ನಾನೆನಬೇಡ,ಗುರುವ ನಿಂದಿಸಬೇಡ,ಬರೆವವನ ಕೂಡ ಹಗೆ ಬೇಡ,ಬಂಗಾರದೆರವು ಬೇಡೆಂದ ಸರ್ವಜ್ಞ’ ಎಂಬುದು ಗುರುಗಳನ್ನು ನಿಂದಿಸುವವರಿಗೆ ಸರ್ವಜ್ಞ ಹೇಳಿರುವ ಮಾತುಗಳು.
  ಇಂದಿನ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧಿಸುತ್ತಾರೆ,ಪರೀಕ್ಷೆ ನಡೆಸುತ್ತಾರೆ,ಮೌಲ್ಯಮಾಪನ ನಡೆಸುತ್ತಾರೆ. ಶಿಕ್ಷಕರು ಪಾಠ ಮಾಡ್ತಾರೆ ಸಂಬಳ ತೆಗೆದುಕೊಳ್ತಾರೆ  ಎಂಬುದು ಸಾಮಾನ್ಯ ಅಭಿಪ್ರಾಯ. ಶಿಕ್ಷಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪ್ರಯತ್ನಿಸುತ್ತಾನೆ.ಗುರು ಶಿಷ್ಯರ ಸಂಬಂಧ ಹೇಗಿರುತ್ತದೆ ಎಂಬುದನ್ನು ಅನುಭವಿಸಿದವರಿಗೇ ಗೊತ್ತು. ವಿದ್ಯಾರ್ಥಿಗಳೊಂದಿಗೆ ಸರಿಸುಮಾರು 7-8 ಗಂಟೆ ಕಾಲ ಕಳೆಯುವ ನಾವು ಅವರ ಆಟ-ಪಾಠ,ನೋವು-ನಲಿವು,ಆಸಕ್ತಿ-ಅನಾಸಕ್ತಿ,ಆರೋಗ್ಯ-ಅನಾರೋಗ್ಯ,ಸೋಲು –ಗೆಲುವು ಹೀಗೆ  ಪ್ರÀತಿ ಹಂತದಲ್ಲಿಯೂ ಶಿಕ್ಷಕನಾಗಿಯಷ್ಟೇ ಅಲ್ಲ ಒಡನಾಡಿಗಳಂತೆಯೇ ಇರುತ್ತೇವೆ.ಪೋಷಕರಿಗೂ ಇಲ್ಲದ ಕಾಳಜಿಯನ್ನು ನಾವು ಹೊಂದಿರುತ್ತೇವೆ.ಅವೆಲ್ಲವನ್ನು ಇಲ್ಲಿ ವಿವರಿಸಲು ನಿಲುಕದಷ್ಟಿವೆ.
    ಈ ರೀತಿಯ ಗುರುತರ ಜವಾಬ್ದಾರಿ ಹೊತ್ತ ಶಿಕ್ಷಕನ ಸಾಮಾಜಿಕ,ಆರ್ಥಿಕ ಸ್ಥಿತಿಗತಿಗಳು ಉತ್ತಮವಾಗಿರಬೇಕಾದುದನ್ನು ಎಲ್ಲರೂ ಒಪ್ಪಬೇಕು.ಸಾಮಾಜಿಕ ಗೌರವವೇನೋ ಸಾಕಷ್ಟಿಲ್ಲದಿದ್ದರೂ ತೃಪ್ತಿಕರವಾಗಿದೆ.ಶಿಕ್ಷಕರೂ ಮನೆ, ಮಠ, ಮಡದಿ, ಮಕ್ಕಳು, ಸಂಸಾರ, ಕಷ್ಟ ಸುಖಗಳನ್ನು ಹೊಂದಿರುವ ಸಾಮಾನ್ಯ ಪ್ರಜೆಯೂ ಹೌದು.ಆತನ ಆರ್ಥಿಕ ಸ್ಥಿತಿಯು ಉತ್ತಮವಾಗಿದ್ದಾಗ ಮಾತ್ರ ಆತ ತರಗತಿಗಳಲ್ಲಿ ಉತ್ತಮವಾಗಿ ಸಂತೃಪ್ತಿಯಿಂದ ಕಾರ್ಯ ನಿರ್ವಹಿಸಬಲ್ಲ. ಶಿಕ್ಷಣ ಇಲಾಖೆ ‘ಅನುತ್ಪಾದಕ ಖಾತೆ’ ಎಂಬ ಧೋರಣೆ ಹೊಂದಿರುವ ಕೆಲವರು ಇತರ ಕೆಲವು ಇಲಾಖೆಗಳ ನೌಕರರಿಗೆ ಬೆಣ್ಣೆ,ಶಿಕ್ಷಕರಿಗೆ ಸುಣ್ಣ ಎಂಬ ನಿಲುವು ಹೊಂದಿವೆ.ಕಳೆದ ಹತ್ತು ಹದಿನೈದು ವರ್ಷಗಳ ಹಿಂದೆ ಒಂದೇ ವೇತನ ಪಡೆಯುತ್ತಿದ್ದ ನಮ್ಮ ಜೊತೆಗಿದ್ದ ತಹಶೀಲ್ದಾರ್,ಪಶುವೈದ್ಯರು,ಕಿರಿಯ ಇಂಜಿನಿಯರ್,ಸಬ್ ಇನ್‍ಸ್ಪೆಕ್ಟರ್ ಎಲ್ಲರ ವೇತನವೂ ಒಂದೇ ಆಗಿತ್ತು ನಂತರ ಈ ಗುಂಪಿನ ನೌಕರರು ಯಾವುದೇ ಮುಷ್ಕರಗಳಿಲ್ಲದೇ(!) ತಮ್ಮ ವೇತನ ಹೆಚ್ಚಿಸಿಕೊಂಡು ನಮಗಿಂತ ಸಾಕಷ್ಟು ಹೆಚ್ಚಿನ ವೇತನ ಪಡೆಯುತ್ತಿದ್ದಾರೆ. ಅವರಿಗೂ ನಮಗೂ ಇರುವ ವೇತನ ತಾರತಮ್ಯ ಸರಿಪಡಿಸಿ ಎಂಬುದಷ್ಟೇ ನಮ್ಮ ಬೇಡಿಕೆ.ಸಂಬಳ ಹೆಚ್ಚು ಮಾಡಿ ಎಂಬುದಲ್ಲ.ತಾರತಮ್ಯ ಸರಿಪಡಿಸಲು ಸರ್ಕಾರವೇ ನೇಮಿಸಿದ ಧಿಕಾರಿ ಕುಮಾರ್ ನಾಯಕ್ ಸಮಿತಿ ಸಾಕಷ್ಟು ಅಧ್ಯಯನ ನಡೆಸಿ ತಾರತಮ್ಯ ಒಪ್ಪಿಕೊಂಡು ಸರಿಪಡಿಸಲು ಶಿಫಾರಸು ವರದಿ ಮಾಡಿ ಐದಾರು ವರ್ಷಗಳೇ ಕಳೆದಿವೆ.ನಾಲ್ಕು ಇಕ್ರಿಮೆಂಟ್ ಗಳನ್ನು ಮೂಲವೇತನದಲ್ಲಿ ವಿಲೀನ ಮಾಡಲು ತಿಳಿಸಿದೆ.ಇದರ ಜೊತೆಗೆ ಬೇರೆ ಶಿಫಾರಸುಗಳೂ ಇವೆ.ಅದೆಲ್ಲವನ್ನೂ ಬಿಟ್ಟು ಕೇವಲ ವೇತನ ತಾರತಮ್ಯವನ್ನು ಯಥಾವತ್ ಜಾರಿಗೆ ತನ್ನಿ ಎಂಬುದಾಗಿತ್ತು.ಈ ಸಂಘರ್ಷದ ನಡುವೆ ಸಂಘ ಸ್ವಲ್ಪ ಹಿಂದೆ ಸರಿದು ಪೂರ್ತಿಯಲ್ಲದಿದ್ದರೂ ಅದನ್ನು ಸ್ವಲ್ಪವಾದರೂ ಸರಿಪಡಿಸುವಂತೆ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿ ಅನುಷ್ಟಾನಗೊಳಿಸಿ ಎಂದು ಒತ್ತಾಯಿಸುತ್ತಿದ್ದೇವೆ.ಒಟ್ಟಿನಲ್ಲಿ ನಮ್ಮ ಹೋರಾಟ ವೇತನ ತಾರತಮ್ಯಕ್ಕಾಗಿ ಕಳೆದ 20 ವರ್ಷಗಳಿಂದ ನಡೆದುಕೊಂಡು ಬರುತ್ತಿದೆ!
 ಶಿಕ್ಷಕರು ಪ್ರತಿ ವರ್ಷ ಮೌಲ್ಯಮಾಪನ ಬಹಿಷ್ಕಾರ ಮಾಡುತ್ತಾರೆ ಎಂಬುದರಲ್ಲಿಯೂ ಹುರುಳಿಲ್ಲ.ಹಿಂದಿನ ವರ್ಷಗಳಲ್ಲಿ ತರಗತಿ ಬಹಿಷ್ಕರಿಸಿದ್ದೇವೆ,ಧರಣಿ ಮಾಡಿದ್ದೇವೆ,ಉಪವಾಸ ಕುಳಿತಿದ್ದೇವೆ,ಕಪ್ಪುಪಟ್ಟಿ ಧರಿಸಿ ಪರೀಕ್ಷೆ ನಡೆಸಿದ್ದೇವೆ,ನೂರಾರು ಮನವಿ ಕೊಟ್ಟಿದ್ದೇವೆ.ಆ ಸಂದರ್ಭದಲ್ಲಿ ನಮ್ಮನ್ನು ಕೇಳುವವರೇ ಇರುವುದಿಲ್ಲ.ಆ ಕಾರಣಕ್ಕಾಗಿ ಮಧ್ಯೆ ಮಧ್ಯೆ ಮಾತ್ರ ಮೌಲ್ಯಮಾಪನ ಬಹಿಷ್ಕಾರ ನಡೆಸಿಯೂ ವಿಫಲರಾಗಿದ್ದೇವೆ!ಪ್ರತಿ ಸಂದರ್ಭದಲ್ಲಿಯೂ ಸರ್ಕಾರಗಳ ಭರವಸೆ ನಂಬಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಷ್ಕರ ಹಿಂಪಡೆದಿದ್ದೇವೆ.ಕಳೆದ ವರ್ಷ ಒಂದೇ ಒಂದು ದಿನ ಬಹಿಷ್ಕಾರ ನಡೆಸಿ ಮುಖ್ಯಮಂತ್ರಿಗಳ ಭರವಸೆ ನಂಬಿ ಹಿಂದೆ ಸರಿದಿದ್ದೇವೆ. ಅವುಗಳೆಲ್ಲವೂ ಜನರ ಮನಸ್ಸಿನಿಂದ ಮಾಸಿ ಹೋಗಿ ಆಯಾ ವರ್ಷಗಳ ಮೌಲ್ಯಮಾಪನ ಬಹಿಷ್ಕಾರ ಎಂದಾಗ ಮಾತ್ರ ಎಲ್ಲರ ಕೆಂಗಣ್ಣಿಗೆ ಗುರಿಯಾಗುವ ಸ್ಥಿತಿ ನಿರ್ಮಾಣವಾಗುತ್ತದೆ. ಹತ್ತಿಪ್ಪತ್ತು ವರ್ಷಗಳ ನ್ಯಾಯಯುತ ಹೋರಾಟ ಫಲ ನೀಡುತ್ತಿಲ್ಲ ಎಂದರೆ ಶಿಕ್ಷಕರ ಸಹನೆ ಸ್ಫೋಟಗೊಳ್ಳುವುದಿಲ್ಲವೇ?ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪೋಷಕರು ನಮ್ಮ ಬಗ್ಗೆ ಅನುಕಂಪ ಮಾತ್ರ ವ್ಯಕ್ತಪಡಿಸದೇ ಖಳನಾಯಕರನ್ನಾಗಿಯೇ ನೋಡುವುದೇಕೆ?ಆದರೆ ಈ ವರ್ಷ ಸಾರ್ವಜನಿಕರ ಬೆಂಬಲ,ಅನುಕಂಪದ ನುಡಿಗಳು ಕೇಳಿಬರುತ್ತಿವೆ.ಮಾಧ್ಯಮಗಳೂ ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ನಮ್ಮ ನ್ಯಾಯಯುತ ಬೇಡಿಕೆಗಳನ್ನು ನಾವಾಗಿಯೇ ಈಡೇರಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಈ ವರ್ಷದ ಬಹಿಷ್ಕಾರ ಹೆಚ್ಚು ದಿನ ಮುಂದುವರೆದುಕೊಂಡು ಬಂದು ತಾರ್ಕಿಕ ಅಂತ್ಯ ಕಾಣಿಸಬೇಕು ಎಂಬ ನಿಲುವು ನಾಯಕರುಗಳಲ್ಲಿ ಮತ್ತು ಶಿಕ್ಷಕ ವರ್ಗದಲ್ಲಿ ಅನಿವಾರ್ಯವಾಗಿ ಎಡೆಯೆತ್ತಿದೆ.ಇದಕ್ಕೆ ವ್ಯವಸ್ಥೆ ಕಾರಣವೇ ಹೊರತು ಶಿಕ್ಷಕರದಲ್ಲ ಎಂಬ ಅಂಶವನ್ನು ಎಲ್ಲರೂ ಮನಗಾಣಬೇಕಿದೆ.
  ವರ್ಷಪೂರ್ತಿ ವಿದ್ಯಾರ್ಥಿಗಳ ಬಗೆಗಿನ ಎಲ್ಲಾ ಕಾಳಜಿಗಳನ್ನು ಹೊರುವ ನಾವು ಅವರನ್ನು ಮುಂದಿಟ್ಟುಕೊಂಡು ಚೆಲ್ಲಾಟವಾಡಲು ಹೊರಟಿಲ್ಲ.ಅವರಿದ್ದರೆ ನಾವು ಎಂಬ ಅರಿವಿದೆ.ಶಿಕ್ಷಕರಿಗೆ ವಿದ್ಯಾರ್ಥಿಗಳ  ಬಗ್ಗೆ ಕಾಳಜಿ ಇಲ್ಲ ಎಂಬುದರಲ್ಲಿ ಯಾವ ಹುರುಳೂ ಇಲ್ಲ.ಅದನ್ನು ಬೇರೆಯವರಿಂದ  ಹೇಳಿಸಿಕೊಳ್ಳುವಷ್ಟು ಬೌದ್ಧಿಕ ದಾರಿದ್ರ್ಯ ನಮಗೆ ಬಂದಿಲ್ಲ.ನಮ್ಮ ಜವಾಬ್ದಾರಿಯ ಅರಿವು ನಮಗೆ ಸ್ಪಷ್ಟವಾಗಿ ಇದೆ.ಆದರೂ ಮುಷ್ಕರದ ಅನಿವಾರ್ಯತೆ ಉಂಟಾಗಿದೆ.
   ಸಮಾನ ಕೆಲಸಕ್ಕೆ ಸಮಾನ ವೇತನ,ವೇತನ ತಾರತಮ್ಯ ನಿವಾರಣೆಯಾಗಲಿ ಎಂಬ ನಮ್ಮ ಪ್ರಯತ್ನದಲ್ಲಿ ತಪ್ಪು ಹುಡುಕುವುದು ಬೇಡ.ಈ ಬೇಡಿಕೆ ಈಗ ಈಡೇರದಿದ್ದರೆ ಮುಂದಿನ ವರ್ಷ ರಚನೆಯಾಗುವ ಏಳನೇ ವೇತನ ಆಯೋಗದಲ್ಲಿ ಈ ತಾರತಮ್ಯ ಮತ್ತಷ್ಟು ಹೆಚ್ಚಾಗುತ್ತದೆ ಎಂಬ ಮನೋಭಾವ ಬಂದಿರುವುದರಿಂದ ಹೋರಾಟ ತೀವ್ರವಾಗಿದೆ.ಇದು ನ್ಯಾಯಯುತ ಬೇಡಿಕೆ ಎಂಬುದು ಮುಖ್ಯಮಂತ್ರಿಗಳಿಗೆ,ಶಿಕ್ಷಣ ಸಚಿವರಿಗೆ,ನಮ್ಮನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳಿಗೆ ಮನವರಿಕೆಯಾಗಿದೆ, ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ.ಬೇಡಿಕೆ ಈಡೇರುವ ನಿರೀಕ್ಷೆ ಇದೆ.ನಿರ್ದಿಷ್ಟ ಸಮಯಕ್ಕೆ ಫಲಿತಾಂಶವೂಬರುತ್ತದೆ.ವಿದ್ಯಾರ್ಥಿಗಳು,ಸಾರ್ವಜನಿಕರು,ಮಾಧ್ಯಮಗಳು,ಸಂಘಸಂಸ್ಥೆಗಳು  ನಮ್ಮ ಬಗ್ಗೆ ತಪ್ಪು ತಿಳುವಳಿಕೆ ಹೊಂದುವುದು
 ಬೇಡ ಅರ್ಥಮಾಡಿಕೊಳ್ಳಿ ಎಂಬುದಷ್ಟೇ ಶಿಕ್ಷಕರ ಮನವಿ.


                                                                     -ಹೊಳಲು ಶ್ರೀಧರ್
                                                                   

 
 

     
   






 
 














No comments:

Post a Comment